ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಲಯದ ಕೌತುಕ ತಣಿಸಲು ವರ್ಚುವಲ್ ತಾರಾಲಯ” ಆಯೋಜನೆ

varthajala
0

 ಇಸ್ರೋ ಯಶಸ್ಸಿನ ನಂತರ ವಿದ್ಯಾರ್ಥಿಗಳಿಗೆ ಬಾಹ್ಯಾಕಾಶ ವಲಯದ ಕೌತುಕ ತಣಿಸಲು ಡಾನ್ ಬಾಸ್ಕೋ ಪಿಯು ಕಾಲೇಜಿನಲ್ಲಿ “ವರ್ಚುವಲ್ ತಾರಾಲಯ” ಆಯೋಜನೆ: 1000 ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ

 




ಬೆಂಗಳೂರುಸೆ, 28; ಚಂದ್ರಯಾನ ಯಶಸ್ಸಿನ ನಂತರ ಸೂರ್ಯನ ಅಧ್ಯಯನಕ್ಕೆ ಇಸ್ರೋ ಮುಂದಾಗಿರುವ ಹಿನ್ನೆಲೆಯಲ್ಲಿ  ವಿದ್ಯಾರ್ಥಿಗಳಲ್ಲಿನ ಬಾಹ್ಯಾಕಾಶ ಕುರಿತ ಕೌತುಕವನ್ನು ತಣಿಸಲು ಮೈಸೂರು ರಸ್ತೆಯ ಕುಂಬಳಗೋಡು  ಡಾನ್ ಬಾಸ್ಕೋ ಸ್ವತಂತ್ರ ಪದವಿ ಪೂರ್ವ ಕಾಲೇಜಿನಲ್ಲಿ “ವರ್ಚುವಲ್ ತಾರಾಲಯ” ಆಯೋಜಿಸಲಾಗಿತ್ತು.

ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿ ಮತ್ತು ನಭೋಮಂಡಲದ ಬಗ್ಗೆ ಸಮಗ್ರ ತಿಳಿವಳಿಕೆ ನೀಡಲು ವಿದ್ಯಾ ಸಂಸ್ಥೆಯ ಆವರಣದಲ್ಲಿ ತಾರಾಲಯದ ಬಗ್ಗೆ ವ್ಯಾಪಕ ಮಾಹಿತಿ ನೀಡಲಾಗಿದ್ದು, 1000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು. 

ಇಸ್ರೋ ಸಾಧನೆ ಜಗದ್ವಿಖ್ಯಾತಿ ಪಡೆದಿರುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಅಧ್ಯಯನಕ್ಕೆ ಇನ್ನಿಲ್ಲದ ಬೇಡಿಕೆ ಬಂದಿದೆ.  ಬೆಳೆಯುವ ಸಿರಿ ಮೊಳಕೆಯಲ್ಲಿಯೇ ಎಂಬಂತೆ ವಿದ್ಯಾರ್ಥಿಗಳಿಗೆ ಆರಂಭದಲ್ಲಿಯೇ ಬಾಹ್ಯಾಕಾಶದತ್ತ ಆಸಕ್ತಿ ತಳೆಯಲು ಈ ಕಾರ್ಯಕ್ರಮ ಪುಷ್ಟಿ ನೀಡಿತು.

ವರ್ನಾಸ್ ಟೆಕ್ನಾಲಜಿಯು ತಾರೆ ಝಮೀನ್ ಪರ್ ಸಂಸ್ಥೆಯ ಸಹಯೋಗದೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಿತ್ತು. ಪರಿಣಿತರು ಈ ಕುರಿತು ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಮಾಹಿತಿ ನೀಡಿದರು. ವಿದ್ಯಾರ್ಥಿಗಳು ಸಂತಸದಿಂದ ತಾರಾಲಯವನ್ನು ಕಣ್ತುಂಬಿಕೊಂಡರು. ಎಲ್ಲಾ ಗ್ರಹಗಳು ನಮ್ಮೊಡನೆ ಇವೆ ಎಂಬ ಸಂಭ್ರಮದಲ್ಲಿ ಮುಳುಗಿದರು.

ವೈನಮ್ಯಾಕ್ ಎಜುಕೇಷನ್ ಟ್ರಸ್ಟ್ ನ ಕಾರ್ಯದರ್ಶಿ ಶ್ರೀಯುತ ರಾಘವ್ ಭೈಲಪ್ಪ ರವರು ಮಾತನಾಡಿ ವಿದ್ಯಾರ್ಥಿಗಳ ಬೆಳವಣಿಗೆಯ ದೃಷ್ಠಿಯಿಂದ ಅದ್ಭುತವಾದ ಕೆಲಸವನ್ನು ಅಧ್ಯಾಪಕರು ಮಾಡಿದ್ದಾರೆ ಎಂದರು. “ವಿಜ್ಞಾನದ ಅಡಿಪಾಯ ಮಕ್ಕಳೇ” ಎಂಬ ಅಬ್ದುಲ್ ಕಲಾಂ ರವರ ಮಾತುಗಳನ್ನು ಸ್ಮರಿಸಿದರು. ವಿಜ್ಞಾನ ಕ್ಷೇತ್ರದ ಮೈಲಿಗಲ್ಲುಗಳು ವಿದ್ಯಾರ್ಥಿ ಜೀವನಕ್ಕೆ ಅತ್ಯಂತ ಮುಖ್ಯ ಎಂದು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಅನ್ವೇಷಣೆನಾವೀನ್ಯತೆಯ ಬಗ್ಗೆ ಒಲವು ಬೆಳೆಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಪಿ.ಯು ಕಾಲೇಜಿನ ಪ್ರಾಂಶುಪಾಲರಾದ  ಸುಧಾ ಎಂ ರವರು  ಮಾತನಾಡಿಎಸ್.ಎಸ್.ಎಲ್.ಸಿ ನಂತರದ ಓದಿನ ಬಗೆಗೆ ಬೆಳಕು ಚೆಲ್ಲುವ ಆಲೋಚನೆಯೊಂದಿಗೆ ಈ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ವಿಜ್ಞಾನ ಕ್ಷೇತ್ರ ಸದಾಕಾಲ ಹೊಸತನ್ನು ಅರಸುತ್ತದೆ. ಅಂತಹ ಶೋಧನೆಗೆ ಇಂತಹ ಅಡಿಪಾಯಗಳು ಮುಖ್ಯ ಎಂದು ತಿಳಿಸಿದರು.

 ಅಧ್ಯಾಪಕರು ಮತ್ತು ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಭಾಗವಹಿಸಿತ್ತು.


Post a Comment

0Comments

Post a Comment (0)