ಶಿಡ್ಲಘಟ್ಟ : ಸರ್ಕಾರ ನೀಡುವ ಸೌಲಭ್ಯಗಳ ಜೊತೆಗೆ ದಾನಿಗಳು ನೀಡುವ ಎಲ್ಲಾ ಸೌಲಭ್ಯಗಳನ್ನು ಪಡೆದು ಶೈಕ್ಷಣಿಕ ಪ್ರಗತಿಯನ್ನು ಹೊಂದಿ ಸಮಾಜದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಮುಂದಿನ ಸತ್ಪ್ರಜೆಗಳಾಗಿ ರೂಪುಗೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದು ಗ್ರಾಮ ಪಂಚಾಯತಿ ಸದಸ್ಯ ಸಿ ವೆಂಕಟೇಶಪ್ಪ ಕರೆ ನೀಡಿದರು.
ತಾಲ್ಲೂಕಿನ ಚಿಕ್ಕತೇಕಹಳ್ಳಿ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್ ಹಾಗೂ ಲೇಖನ ಸಾಮಗ್ರಿ ವಿತರಿಸಿ ಅವರು ಮಾತನಾಡಿದರು.
ಮಕ್ಕಳು ವಿದ್ಯಾವಂತರಾದರೆ ಮಾತ್ರ ಈ ಸಮಾಜದಲ್ಲಿ ಬೆಲೆ ಸಿಗುತ್ತದೆ. ಪ್ರತಿನಿತ್ಯ ವಿದ್ಯಾರ್ಥಿಗಳು ಪಾಠ ಪ್ರವಚನಗಳಲ್ಲಿ ತೊಡಗಿಸಿಕೊಳ್ಳಬೇಕು. ಸರ್ಕಾರಿ ಶಾಲೆಗಳನ್ನು ಉತ್ತಮ ಪಡಿಸುವುದರಲ್ಲಿ ಪೋಷಕರ ಪಾತ್ರ ಬಹಳ ಪ್ರಮುಖವಾದದ್ದು, ಆದುದರಿಂದ ಪೋಷಕರು ತಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಕರಿಸಬೇಕೆಂದರು.
ಎಸ್ ಡಿಎಂಸಿ ಮಾಜಿ ಅಧ್ಯಕ್ಷ ಸಿ ಎಂ ಮಂಜುನಾಥ್ ಮಾತನಾಡಿ, ಸರ್ಕಾರಿ ಶಾಲೆಗಳು ಮುಚ್ಚುವ ಹಂತಕ್ಕೆ ಬಂದಿದೆ. ಸರ್ಕಾರಿ ಶಾಲಾ ಶಿಕ್ಷಕರು ಪ್ರಾಮಾಣಿಕರಾಗಿ ಸೇವೆ ಸಲ್ಲಿಸಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಳಕ್ಕೆ ಗಮನ ಹರಿಸಬೇಕು. ಶಾಲೆಯ ಅಭಿವೃದ್ಧಿ ಜೊತೆಗೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ. ಸರ್ಕಾರಿ ಶಾಲೆಗಳನ್ನು ಉಳಿಸುವುದು ಮತ್ತು ಅಭಿವೃದ್ಧಿಪಡಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ.
ಒಂದು ಸರ್ಕಾರಿ ಶಾಲೆಯನ್ನು ಉಳಿಸುವ ಜವಾಬ್ದಾರಿ ಇರುವುದು ಅಲ್ಲಿನ ಶಿಕ್ಷಕರಿಗೆ, ಪೋಷಕರಿಗೆ ಎಸ್ ಡಿ ಎಂ ಸಿ, ಹಳೆಯ ವಿದ್ಯಾರ್ಥಿಗಳಿಗೆ ಹಾಗೂ ಆ ಊರಿನ ಗ್ರಾಮಸ್ಥರಿಗೆ ಮಾತ್ರ. ಸರ್ಕಾರಿ ಶಾಲೆಗಳಿಗೆ ಹೆಚ್ಚು ಬಡ ಮಕ್ಕಳು ಸೇರುವುದರಿಂದ ಅವರಿಗೆ ಸರ್ಕಾರಿ ಶಾಲೆಯಲ್ಲಿ ಶಿಕ್ಷಣಕ್ಕೆ ಕೊರತೆಯಾಗದಂತೆ ಶಿಕ್ಷಕರು ನೆರವೇರಿಸಿಕೊಡಬೇಕು. ಮತ್ತು ಈ ಶಾಲೆಯ ಹಳೇ ವಿದ್ಯಾರ್ಥಿಗಳು ತಾವು ಕಲಿತ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಹೆಚ್ಚು ಶ್ರಮಿಸಬೇಕು ಎಂದರು.
ವಿದ್ಯಾರ್ಥಿಗಳಿಗೆಪ ಉಚಿತ ನೋಟ್‌ಬುಕ್, ಬ್ಯಾಗ್ ಸೇರಿ ಲೇಖನ ಸಾಮಗ್ರಿಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಲಾ ಮುಖ್ಯಶಿಕ್ಷಕರಾದ ನರಸಿಂಹಮೂರ್ತಿ, ಅತಿಥಿ ಶಿಕ್ಷಕಿ ಅರುಣಕುಮಾರಿ, ಗ್ರಾಮಸ್ಥರಾದ ನರಸಿಂಹಪ್ಪ, ಎನ್ ಮಂಜುನಾಥ್, ಟಿ ಎನ್ ಶ್ರೀನಿವಾಸ್, ಚಿಕ್ಕತೇಕಹಳ್ಳಿ ಡಿ ಶಿವಕುಮಾರ್, ಆಶಾ ಕಾರ್ಯಕರ್ತೆ ಮುನಿನಾರಾಯಣಮ್ಮ, ಕೃಷ್ಣ ಸೇರಿದಂತೆ ಮತ್ತಿತರರು ಇದ್ದರು.
ವರದಿ :ಚಿಕ್ಕತೇಕಹಳ್ಳಿ ಡಿ ಶಿವಕುಮಾರ್ ಶಿಡ್ಲಘಟ್ಟ