ಕರ್ನಾಟಕ ವಕೀಲರ ಪರಿಷತ್ ಅಧ್ಯಕ್ಷರಿಂದ ಕರ್ನಾಟಕ ಉಚ್ಚ ನ್ಯಾಯಾಲಯದ ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳಿಗೆ ಆತ್ಮೀಯ ಬೀಳ್ಕೊಡುಗೆ

varthajala
0

 ಬೆಂಗಳೂರು, ಜುಲೈ 19, (ಕರ್ನಾಟಕ ವಾರ್ತೆ): ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಒಂದು ವರ್ಷಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿ, ಹಲವಾರು ಮಹತ್ವದ ತೀರ್ಪುಗಳನ್ನು ನೀಡಿ ನ್ಯಾಯಾಲಯದ ಘನತೆಯನ್ನು ಎತ್ತಿ ಹಿಡಿದಿದ್ದ ಗೌರವಾನ್ವಿತ ನ್ಯಾಯಮೂರ್ತಿಗಳಾದ ವಿ. ಕಾಮೇಶ್ವರರಾವ್ ಅವರು ಇಂದು ದೆಹಲಿ ಹೈಕೋರ್ಟ್‍ನ ನ್ಯಾಯಾಧೀಶರಾಗಿ ವರ್ಗಾವಣೆಯಾಗಿರುವ ಹಿನ್ನೆಲೆಯಲ್ಲಿ ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರಾದ ಮಿಟ್ಟಲ ಕೋಡ್ ಅವರು ಆತ್ಮೀಯವಾಗಿ ಬೀಳ್ಕೊಟ್ಟರು.  

ಇಂದು ಕರ್ನಾಟಕ ಉಚ್ಚ ನ್ಯಾಯಾಲಯದ ಕೋರ್ಟ್ ಹಾಲ್ 1ರ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾದ ಸರಳ ಸಮಾರಂಭದಲ್ಲಿ ಮಾತನಾಡಿದ ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರು, ಗೌರವಾನ್ವಿತ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರಿಗೆ ಪ್ರೀತಿಯಿಂದ ಬೀಳ್ಕೊಡಲು ನಾವೆಲ್ಲರೂ ಇಲ್ಲಿ ಸೇರಿದ್ದೇವೆ. ಅವರ ಸೇವಾವಧಿಯಲ್ಲಿ ಅನೇಕ ತೀರ್ಪುಗಳನ್ನು ನೀಡಿ ನ್ಯಾಯಾಲಯದ ಘನತೆಯನ್ನು ಹೆಚ್ಚಿಸಿದ್ದಾರೆ. ಅವರ ಕಾರ್ಯ ವೈಖರಿ ಎಲ್ಲಾ ನ್ಯಾಯಾಧೀಶರಿಗೂ ಮಾದರಿಯಾಗಿದೆ. ಅವರ ಸೇವೆಯು ರಾಜ್ಯಕ್ಕೆ ಇನ್ನೂ ಹೆಚ್ಚಿನ ಕಾಲ ಬೇಕಾಗಿತ್ತು ಆದರೆ, ಅವರು ಇಂದು ಕರ್ನಾಟಕದಿಂದ ದೆಹಲಿಗೆ ವರ್ಗಾವಣಯಾಗಿರುವುದು ರಾಜ್ಯ ನ್ಯಾಯಾಂಗ ಸೇರಿದಂತೆ ಹೈಕೋರ್ಟ್‍ಗೆ ಇದು ತುಂಬಲಾರದ ನಷ್ಟ ಎಂದು ತಿಳಿಸಿದರು. 
ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರು 1965ನೇ ಆಗಸ್ಟ್ 7ರಂದು ಜನಿಸಿದ್ದು, ದೆಹಲಿ ವಿಶ್ವವಿದ್ಯಾಲಯದಿಂದ ಭೌಗೋಳಿಕ ವಿಷಯದಲ್ಲಿ ಬಿಎ (ಹಾನ್ರ್ಸ್) ಮತ್ತು ಎಲ್.ಎಲ್.ಬಿ ಪದವಿಗಳನ್ನು ಪಡೆದಿದ್ದಾರೆ. ಮಾರ್ಚ್ 1991 ರಲ್ಲಿ ದೆಹಲಿಯ ಬಾರ್ ಕೌನ್ಸಿಲ್‍ನಲ್ಲಿ ವಕೀಲರಾಗಿ ಸೇವೆಗೆ ಸೇರಿದ ಶ್ರೀಯುತರು, ಭಾರತದ ಸುಪ್ರೀಂ ಕೋರ್ಟ್, ದೆಹಲಿ ಹೈಕೋರ್ಟ್, ನವದೆಹಲಿಯ ಕೇಂದ್ರ ಆಡಳಿತ ನ್ಯಾಯಮಂಡಳಿ (ಪ್ರಧಾನ ಪೀಠ), ನವದೆಹಲಿಯಲ್ಲಿ ಅಭ್ಯಾಸ ಮಾಡಿದ್ದಾರೆ.
ಮದ್ರಾಸ್ ಹೈಕೋರ್ಟ್, ಪೋರ್ಟ್ ಬ್ಲೇರ್ (ಕಲ್ಕತ್ತಾ ಹೈಕೋರ್ಟ್‍ನ ಸಕ್ರ್ಯೂಟ್ ಪೀಠ) ನಂತಹ ಇತರ ಹೈಕೋರ್ಟ್‍ಗಳಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಸೇವಾ ಕಾನೂನು, ಕಾರ್ಮಿಕ ಕಾನೂನು, ಮಧ್ಯಸ್ಥಿಕೆ, ಸಂವಿಧಾನ ಮತ್ತು ಆಡಳಿತಾತ್ಮಕ ಕಾನೂನು ಮುಂತಾದ ಎಲ್ಲಾ ಕಾನೂನು ಕ್ಷೇತ್ರಗಳಲ್ಲಿ ಅಭ್ಯಾಸ ಮಾಡಿದ್ದು,  ವಿವಿಧ ಸಾರ್ವಜನಿಕ ವಲಯದ ಉದ್ಯಮಗಳು, ಬ್ಯಾಂಕುಗಳು ಮತ್ತು ಸ್ವಾಯತ್ತ ಸಂಸ್ಥೆಗಳಿಗೆ ಸೇವೆ ಸಲ್ಲಿಸಿದ್ದಾರೆ.
ನವದೆಹಲಿಯ ಕೇಂದ್ರ ಆಡಳಿತ ನ್ಯಾಯಮಂಡಳಿ ಬಾರ್ ಅಸೋಸಿಯೇಷನ್ (ಪ್ರಧಾನ ಪೀಠ) ದ ಕಾರ್ಯನಿರ್ವಾಹಕ ಸದಸ್ಯರಾಗಿ ನೇಮಕವಾಗಿ, ಜನವರಿ 2010 ರಲ್ಲಿ ದೆಹಲಿ ಹೈಕೋರ್ಟ್‍ನ ಹಿರಿಯ ವಕೀಲರನ್ನಾಗಿ ನೇಮಕ ಮಾಡಲಾಯಿತು.
ಶ್ರೀಯುತರ ಕಳಂಕಿತವಲ್ಲದ ಸೇವಾ ದಾಖಲೆಗಳು, ಕಠಿಣ ಪರಿಶ್ರಮ ಮತ್ತು ಜವಾಬ್ದಾರಿಗಳನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದ್ದರು. 2013 ರಲ್ಲಿ ದೆಹಲಿ ಹೈಕೋರ್ಟ್‍ನ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ಮತ್ತು 2015 ರಲ್ಲಿ ಶಾಶ್ವತ ನ್ಯಾಯಾಧೀಶರನ್ನಾಗಿ ನೇಮಕ ಮಾಡಲಾಯಿತು.
ಕರ್ನಾಟಕ ರಾಜ್ಯದಲ್ಲಿ ಹೈಕೋರ್ಟ್‍ನ ನ್ಯಾಯಾಧೀಶರಾಗಿ ಮತ್ತು ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ ಸಲ್ಲಿಸಿರುವ ಸೇವೆಯು ಎಂದೆಂದಿಗೂ ಮರೆಯಾಲಾಗದ ಸಂಗತಿಯಾಗಿದೆ. ತಮ್ಮ ಮಾರ್ಗದರ್ಶನ, ಹಾಗೂ ಸೇವೆ ಹಾಗೂ ತಾವು ಕರ್ನಾಟಕ ವಕೀಲರ ಪರಿಷತ್ತಿನೊಂದಿಗೆ ಇಟ್ಟಿಕೊಂಡಿದ್ದ ಅಪಾರ ಪ್ರೀತಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ತಿಳಿಸಿದರು.
ನಂತರ ಮಾತನಾಡಿದ ನ್ಯಾಯಮೂರ್ತಿ ವಿ. ಕಾಮೇಶ್ವರ ರಾವ್ ಅವರು ಬೆಂಗಳೂರಿನಲ್ಲಿ ಸೇವೆ ಸಲ್ಲಿಸಿರುವುದು ನನಗೆ ತೃಪ್ತಿ ತಂದಿದೆ. ನ್ಯಾಯಾದೀಶರು ಮತ್ತು ವಕೀಲರುಗಳು ಒಗ್ಗೂಡಿ ಜನರಿಗೆ ನ್ಯಾಯ ದೊರಕಿಸಲು ಶ್ರಮಿಸಬೇಕು. ನನ್ನ ಸೇವಾವಧಿಯಲ್ಲಿ ನನಗೆ ಸಹಕಾರ ನೀಡಿದ ಎಲ್ಲಾ ಹಿರಿಯ ಹಾಗೂ ಕಿರಿಯ ವಕೀಲರು ಮತ್ತು ಕರ್ನಾಟಕ ಬಾರ್ ಕೌನ್ಸಿಲ್‍ನ ಅಧ್ಯಕ್ಷರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯ ಮೂರ್ತಿಗಳಾದ ವಿಭು ಬಖ್ರು, ಸೇರಿದಂತೆ ಹಿರಿಯ ಮತ್ತು ಕಿರಿಯ ನ್ಯಾಯಾಧೀಶರುಗಳು, ವಕೀಲರುಗಳು ಉಪಸ್ಥಿತರಿದ್ದರು.

Post a Comment

0Comments

Post a Comment (0)