2019 ರಾಜ್ಯ ಚಲನಚಿತ್ರ ಜೀವಮಾನ ಸಾಧನೆ, ಸಾಹಿತ್ಯ ಹಾಗೂ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪ್ರಕಟ ನವೆಂಬರ್ 3 ರಂದು ಮೈಸೂರಿನಲ್ಲಿ ಪ್ರಶಸ್ತಿ ಪ್ರದಾನ

varthajala
0

 ಬೆಂಗಳೂರು, ಅಕ್ಟೋಬರ್ 30 (ಕರ್ನಾಟಕ ವಾರ್ತೆ): ಚಲನಚಿತ್ರ ರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ.ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿ, ವಾರ್ಷಿಕ ಸಾಹಿತ್ಯ ಮತ್ತು ಕಿರುಚಿತ್ರ ಪ್ರಶಸ್ತಿಗಳಿಗೆ 2019 ನೇ ಸಾಲಿನ ಪುರಸ್ಕøತರನ್ನು ಆಯ್ಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.

ನವೆಂಬರ್ 3 ರಂದು ಮೈಸೂರಿನಲ್ಲಿ ಆಯೋಜಿಸಿರುವ 2018 ಹಾಗೂ 2019 ರ ಕ್ಯಾಲೆಂಡರ್ ವರ್ಷಗಳ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು.

ಕನ್ನಡ ಚಿತ್ರರಂಗದಲ್ಲಿನ ಜೀವಮಾನ ಸಾಧನೆಗೆ ನೀಡುವ ಡಾ.ರಾಜಕುಮಾರ್ ಪ್ರಶಸ್ತಿಗೆ ಸಿನಿಮಾ ಮತ್ತು ರಂಗಭೂಮಿಯ ಹಿರಿಯ ನಟಿ ಉಮಾಶ್ರೀ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಎನ್ ಆರ್ ನಂಜುಂಡೇಗೌಡ ಹಾಗೂ ಡಾ.ವಿಷ್ಣುವರ್ಧನ್ ಪ್ರಶಸ್ತಿಗೆ ರಿಚಾರ್ಡ್ ಕ್ಯಾಸ್ಟಲಿನೋ ಅವರು ಆಯ್ಕೆಯಾಗಿದ್ದಾರೆ. ಈ ಮೂರು ಪ್ರಶಸ್ತಿಗಳು ತಲಾ ಐದು ಲಕ್ಷ ರೂ.ನಗದು ಹಾಗೂ ಐವತ್ತು ಗ್ರಾಂ ಚಿನ್ನದ ಪದಕ ಒಳಗೊಂಡಿದೆ.

2019ರ ಅತ್ಯುತ್ತಮ ಚಲನಚಿತ್ರ ಸಾಹಿತ್ಯ ವಾರ್ಷಿಕ ಪ್ರಶಸ್ತಿಗೆ ಹಿರಿಯ ಪತ್ರಕರ್ತ ರಘುನಾಥ ಚ.ಹ.ಅವರು ಬರೆದಿರುವ "ಬೆಳ್ಳಿ ತೊರೆ" ಸಿನೆಮಾ ಪ್ರಬಂಧಗಳು ಕೃತಿ ಆಯ್ಕೆಯಾಗಿದೆ. ಅಂಕಿತ ಪುಸ್ತಕವು ಈ ಕೃತಿಯನ್ನು ಪ್ರಕಟಿಸಿದೆ. ಈ ಪ್ರಶಸ್ತಿಯು ಕೃತಿಕಾರರಿಗೆ ಹಾಗೂ ಪ್ರಕಾಶಕರಿಗೆ ತಲಾ 20 ಸಾವಿರ ರೂ.ನಗದು ಮತ್ತು 50 ಗ್ರಾಂ ಬೆಳ್ಳಿ ಪದಕ ಒಳಗೊಂಡಿದೆ.

2019 ರ ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿಗೆ ಶ್ರೀನಾಥ್ ಎಸ್ ಹಡಗಲಿ ನಿರ್ದೇಶನದ "ಗುಳೆ" ಕಿರುಚಿತ್ರವು ಆಯ್ಕೆಯಾಗಿದೆ. ಮನೋಹರ್ ಎಸ್ ಐಯ್ಯರ್ ನಿರ್ಮಿಸಿರುವ ಈ ಚಿತ್ರದ ನಿರ್ದೇಶಕರು ಮತ್ತು ನಿರ್ಮಾಪಕರಿಗೆ ತಲಾ 25 ಸಾವಿರ ರೂ. ನಗದು ಹಾಗೂ 50 ಗ್ರಾಂ ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Post a Comment

0Comments

Post a Comment (0)