ಬೆಂಗಳೂರು / ಮುಂಬೈ, ಅಕ್ಟೋಬರ್ 31 (ಕರ್ನಾಟಕ ವಾರ್ತೆ): ಮುಂಬೈಯಲ್ಲಿ ಜರುಗಿದ ಇಂಡಿಯಾ ಮೇರಿಟೈಮ್ ವೀಕ್ (India Maritime Week - IMW) 2025 ರಲ್ಲಿ, ಕರ್ನಾಟಕ ಜಲಸಾರಿಗೆ ಮಂಡಳಿಯು ಸುಮಾರು ರೂ.4,500 ಕೋಟಿ ಮೌಲ್ಯದ ಪ್ರಮುಖ ಒಪ್ಪಂದ ಪತ್ರ (MoUs) ಗಳಿಗೆ ಸಹಿ ಮಾಡಿದೆ.
ಇಂಡಿಯಾ ಮೆರಿಟೈಮ್ ವೀಕ್ ದೇಶದ ಅಗ್ರಮಟ್ಟದ ಜಾಗತಿಕ ವೇದಿಕೆ ಆಗಿದ್ದು, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಮಂಕಾಳ ಎಸ್. ವೈದ್ಯ ಅವರು ರಾಜ್ಯ ಅಧಿವೇಶನದ ಅಧ್ಯಕ್ಷತೆಯನ್ನು ವಹಿಸಿದ್ದರು. ಇಂಡಿಯಾ ಮೇರಿಟೈಮ್ ವೀಕ್ -2025 ಭಾರತವನ್ನು ಜಾಗತಿಕ ಸಾಗರ ಜಲಸಾರಿಗೆಯ ಕೇಂದ್ರವಾಗಿ ಮತ್ತು ಬ್ಲೂ ಎಕಾನಮಿ ಕ್ಷೇತ್ರದಲ್ಲಿ ಮುಂಚೂಣಿಯ ರಾಷ್ಟ್ರವನ್ನಾಗಿ ರೂಪಿಸುವ ದಿಶೆಯಲ್ಲಿನ ಮುನ್ನೋಟವನ್ನು ಪ್ರದರ್ಶಿಸಿತು.
ಕರ್ನಾಟಕ ರಾಜ್ಯ ಅಧಿವೇಶನವು “Exploring PPP Synergies for a Sustainable Blue Economy”, ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿತ್ತು. ಈ ಅಧಿವೇಶನದಲ್ಲಿ ರಾಜ್ಯವು ಸುಮಾರು ರೂ.4,500 ಕೋಟಿ ಮೌಲ್ಯದ ಪ್ರಮುಖ ಒಪ್ಪಂದ ಪತ್ರಗಳನ್ನು ವಿನಿಮಯ ಮಾಡಿಕೊಂಡಿತು. ಈ ಒಪ್ಪಂದಗಳು ಸಂಪರ್ಕತೆ ವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ನವೀಕೃತ ಮಾನವ ಸಂಪನ್ಮೂಲ ನಿರ್ಮಾಣ ಮುಂತಾದ ಪ್ರಮುಖ ಅಂಶಗಳ ಮೇಲೆ ಕೇಂದ್ರೀಕೃತವಾಗಿದ್ದು, ಒಪ್ಪಂದಗಳು ಈ ಕೆಳಕಂಡಂತಿವೆ.
ಜೆಎಸ್‍ಡಬ್ಲ್ಯೂ ಇನ್ ಫ್ರಾಸ್ಟ್ರಕ್ಚರ್ ಲಿಮಿಟೆಡ್ ಕಂಪನಿಯೊಂದಿಗೆ, ಕೆನಿಯಲ್ಲಿ ಪಿಪಿಪಿ ಆಧಾರದ ಮೇಲೆ ನಿರ್ಮಿಸಲ್ಪಡುವ ಸರ್ವಋತು ಡೀಪ್ ವಾಟರ್ ಗ್ರೀನ್‍ಫೀಲ್ಡ್ ಬಂದರು ಅಭಿವೃದ್ಧಿಗೆ ಸಂಬಂಧಿಸಿದ ಕನ್ಸೆಶನ್ ಒಪ್ಪಂದ – ರೂ.4,118 ಕೋಟಿ ಮೌಲ್ಯ.
ಕೊಂಕಣ ರೈಲ್ವೆ ಕಾರ್ಪೊರೇಶನ್ ಲಿಮಿಟೆಡ್ (KRCL) ಸಂಸ್ಥೆಯೊಂದಿಗೆ ಅಮದಳ್ಳಿ ರೈಲು ಸೈಡಿಂಗ್ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದ - ರೂ 45.88 ಕೋಟಿ ಮೌಲ್ಯ.
ಭಾರತ ಆಂತರಿಕ ಜಲಮಾರ್ಗ ಪ್ರಾಧಿಕಾರ (IWAI) ಯೊಂದಿಗೆ ರಾಜ್ಯದ ರಾಷ್ಟ್ರೀಯ ಜಲಮಾರ್ಗಗಳ ಅಭಿವೃದ್ಧಿಗೆ ಸಂಬಂಧಿಸಿದ ಒಪ್ಪಂದ ಮೌಲ್ಯ. ಅಂದಾಜು ರೂ. 300 ಕೋಟಿ ಮೌಲ್ಯ.
ನ್ಯಾಷನಲ್ ಇನ್‍ಲ್ಯಾಂಡ್ ನ್ಯಾವಿಗೇಶನ್ ಇನ್ಸಿಟ್ಯೂಟ್ (NINI), ಪಾಟ್ನಾದೊಂದಿಗೆ ಮಂಗಳೂರು ನಗರದಲ್ಲಿ ಇನ್‍ಲ್ಯಾಂಡ್ ವಾಟರ್ ಟ್ರಾನ್ಸ್‍ಪೋರ್ಟ್ ಮತ್ತು ನ್ಯಾವಿಗೇಶನ್‍ನಲ್ಲಿ ಶ್ರೇಷ್ಠತೆ ಕೇಂದ್ರ (COE-IWTN) ಸ್ಥಾಪನೆಗೆ ಒಪ್ಪಂದ ಅಂದಾಜು ರೂ.50 ಕೋಟಿ ಮೌಲ್ಯ.
ಕರ್ನಾಟಕ ಸರ್ಕಾರದ ಮೀನುಗಾರಿಕೆ ಇಲಾಖೆಯೊಂದಿಗೆ ಬಳ್ಳಾರಿ ಜಿಲ್ಲೆಯಲ್ಲಿ ತಂಪು ಸಂಗ್ರಹಣೆ, ಸಂಸ್ಕರಣಾ ಘಟಕಗಳು ಮತ್ತು ಪರೀಕ್ಷಾ ಪ್ರಯೋಗಾಲಯ ಸ್ಥಾಪನೆ ಸೇರಿದಂತೆ ವಿವಿಧ ಯೋಜನೆಗಳಿಗಾಗಿ ಒಪ್ಪಂದ – ಅಂದಾಜು ರೂ.12 ಕೋಟಿ ಮೌಲ್ಯ.
ಕಾರ್ಯಕ್ರಮದಲ್ಲಿ ಕರ್ನಾಟಕ ಸರ್ಕಾರವು ಕರ್ನಾಟಕ ರಾಜ್ಯ ಸಮುದ್ರ ಮತ್ತು ಜಲಮಾರ್ಗ ಮಾಸ್ಟರ್ ಪ್ಲಾನ್ (KSMWMP) ಕುರಿತಾಗಿ ಚರ್ಚಿಸಲಾಯಿತು. ಈ ಯೋಜನೆ ಒಟ್ಟು ರೂ. 23,000 ಕೋಟಿ ಮೌಲ್ಯದ 126 ಯೋಜನೆಗಳನ್ನು ಒಳಗೊಂಡಿದ್ದು, ರಾಜ್ಯದ ಸಮುದ್ರ ಮತ್ತು ಜಲಮಾರ್ಗ ಅಭಿವೃದ್ಧಿಗೆ ಸಮಗ್ರ ದೃಷ್ಟಿಕೋನವನ್ನು ನೀಡುತ್ತದೆ. ಈ ಪೈಕಿ ರೂ.7,500 ಕೋಟಿಗೂ ಹೆಚ್ಚು ಮೌಲ್ಯದ 10 ಪ್ರಮುಖ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಯೋಜನೆಗಳು ತಕ್ಷಣದ ಪ್ರಾರಂಭಕ್ಕೆ ಸಿದ್ಧವಾಗಿವೆ. ಇವುಗಳಲ್ಲಿ ಮಂಗಳೂರು ವಾಟರ್ ಮೆಟ್ರೋ ಮತ್ತು ರಾಜ್ಯದ ಮೊದಲ ಸಮುದ್ರ ಸಂಗ್ರಹಾಲಯ (Maritime Museum) ಮಂಗಳೂರು ನಗರದಲ್ಲಿ ಸ್ಥಾಪನೆಯಾಗುತ್ತಿರುವುದು ಹೆಮ್ಮೆಯ ಸಂಗತಿ.
ಈ ಅಧಿವೇಶನದಲ್ಲಿ ಮೂಲಸೌಕರ್ಯ ಅಭಿವೃದ್ಧಿ, ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಕಾರ್ಯದರ್ಶಿಗಳಾದ ಡಾ. ಮಂಜುಳ ಎನ್., ನ್ಯೂ ಮಂಗಳೂರು ಪೆÇೀರ್ಟ್ ಅಥಾರಿಟಿ ಅಧ್ಯಕ್ಷರಾದ ಡಾ.ಎ.ವಿ.ರಮಣ, ಕರ್ನಾಟಕ ಜಲಸಾರಿಗೆ ಮಂಡಳಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಾಲಚಂದ್ರ ಹೆಚ್.ಸಿ., ಹಾಗೂ ನಿರ್ದೇಶಕರಾದ ದಿವಾಕರ್ ನಾಯಕ್ ಉಪಸ್ಥಿತರಿದ್ದರು.