ಬೆಂಗಳೂರು : ಚಿಕ್ಕಬಳ್ಳಾಪುರದ ಜೋಳದ ವ್ಯಾಪಾರಿ ರಾಮಕೃಷ್ಣ ಅವರು ತಮ್ಮ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರ ಎಂದು ಅಕ್ಬರ್ ಪಾಷಾ ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ತನ್ನ ಪತ್ನಿ ಹಾಗೂ ಸಹೋದರಿಯರ ಜತೆ ಪತ್ರಿಕಾಗೋಷ್ಠಿ ನಡೆಸಿದ ಅವರು, ನಾನು ರಾಮಕೃಷ್ಣ ಜತೆ ಯಾವುದೇ ವ್ಯವಹಾರ ಮಾಡಿಲ್ಲ, ಬಾಕಿಯೂ ಇಲ್ಲ. ಆದರೂ ನನ್ನ ಮೇಲೆ ಪೊಲೀಸ್ ದೂರು ನೀಡಿ ಬಂಧನ ಮಾಡಿಸಿ ಹಿಂಸೆ ನೀಡಿದರು ಎಂದು ಹೇಳಿದರು.
ನಾನು ಸಹ ಜೋಳದ ವ್ಯಾಪಾರಿ. ನಾನು ಹಾಗೂ ನನ್ನ ಕುಟುಂಬ ಮೂಲತ: ಚಿಕ್ಕಬಳ್ಳಾಪುರ, ನಾನು ಹುಟ್ಟಿದ್ದು ಚಿಕ್ಕಬಳ್ಳಾಪುರದಲ್ಲೇ. ನನಗೆ ಹಾಗೂ ರಾಮಕೃಷ್ಣ ಸಹೋದರ ಲಕ್ಷ್ಮಿ ಪತಿ ಜತೆ ವ್ಯವಹಾರ ಇದೆ. ನನ್ನ ಸಹೋದರರಾದ ನಾಸಿರ್ ಹಾಗೂ ಸದ್ದಾಂ ಜತೆ ರಾಮಕೃಷ್ಣ ವ್ಯವಹಾರ ಮಾಡುತ್ತಿದ್ದರು.
ರಾಮಕೃಷ್ಣ ಅವರು ನೇಪಾಳದಿಂದ ತಂದ ಕಳಪೆ ಗುಣಮಟ್ಟದ ಹಾಗೂ ಕಳ್ಳ ಸಾಗಣೆ ಯಿಂದ ತರಿಸಿದ್ದ ಜೋಳ ಖರೀದಿಸಿ ತೆಲಂಗಾಣ ದಲ್ಲಿ ಮರುವಂತೆ ನನ್ನ ಹಾಗೂ ನನ್ನ ಸಹೋದರರ ಮೇಲೆ ಒತ್ತಡ ಹಾಕುತ್ತಿದ್ದರು. ಅದಕ್ಕೆ ನಾನು ಒಪ್ಪದ ಕಾರಣ ನನ್ನ ಮೇಲೆ ಪೊಲೀಸ್ ದೂರು ದಾಖಲಿಸಿ ಹಿಂಸೆ ನೀಡಿದರು. ಹೀಗಾಗಿ ನನ್ನ ಸಹೋದರಿಯರು ಸಚಿವ ಜಮೀರ್ ಅಹಮದ್ ಖಾನ್ ಬಳಿ ಸಹಾಯಕ್ಕೆ ಮನವಿ ಮಾಡಿದರು.
ಆದರೆ, ರಾಮಕೃಷ್ಣ ವಂಚನೆ ಮಾಡಿದವರ ಪರವಾಗಿ ಸಚಿವರು ಇದ್ದಾರೆ ಎಂದು ಸುಳ್ಳು ಹಬ್ಬಿಸಿದ್ದಾರೆ. ನಿಜವಾಗಿಯೂ ರೈತರಿಗೆ ಮೋಸ ಮಾಡಿರುವುದು ರಾಮಕೃಷ್ಣ. ಸ್ಥಳೀಯ ರೈತರ ಜೋಳದ ಬದಲು ನೇಪಾಳದ ಕಳಪೆ ಜೋಳ ತಂದು ಮಾರಾಟ ಮಾಡಿ ಮೋಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.
ಸಚಿವರು ನಮ್ಮ ಸಂಬಂಧಿ ಅಲ್ಲ. ಕಷ್ಟದಲ್ಲಿದ್ದ ನನಗೆ ಸಹಾಯ ಮಾಡಲು ಪೊಲೀಸ್ ಅಧಿಕಾರಿಗೆ ಮನವಿ ಮಾಡಿದ್ದಾರೆ. ಆದರೆ ಅವರ ಬಗ್ಗೆ ರಾಮಕೃಷ್ಣ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಇಡೀ ಪ್ರಕರಣ ತನಿಖೆ ಮಾಡಲು ನಾನೇ ಪೊಲೀಸರಿಗೆ ಮನವಿ ಮಾಡಿದ್ದೇನೆ. ನನ್ನ ತಪ್ಪು ಇದ್ದರೆ ಗಲ್ಲಿಗೇರಿಸಲಿ ಎಂದು ಹೇಳಿದರು.