ಬೆಂಗಳೂರು, ನವೆಂಬರ್ 07 (ಕರ್ನಾಟಕ ವಾರ್ತೆ): ವಾಣಿಜ್ಯ ತೆರಿಗೆ ಇಲಾಖೆಯ ದಕ್ಷಿಣ ವಲಯ, ಜಾರಿ ವಿಭಾಗವು ಬೆಂಗಳೂರಿನ ಪ್ರಮುಖ ವ್ಯಾಪಾರ ಸ್ಥಳಗಳಾದ ಕಲಾಸಿಪಾಳ್ಯ, ಜೆ.ಸಿ. ರಸ್ತೆ, ಎಸ್.ಪಿ. ರಸ್ತೆ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಇರುವ ವಾಹನ ಬಿಡಿ-ಭಾಗಗಳು ಮತ್ತು ಟೈರ್ಸ್ ವ್ಯಾಪಾರ ಸ್ಥಳಗಳಲ್ಲಿ ವ್ಯಾಪಕ ತವಾಸಣೆ ನಡೆಸಲಾಯಿತು.
ದೆಹಲಿಯಲ್ಲಿ ನಡೆದ 56 ನೇ ಜಿ.ಎಸ್.ಟಿ. ಮಂಡಳಿ ಸಭೆಯ ನಿರ್ಧಾರದಂತೆ ಜಿ.ಎಸ್.ಟಿ. ದರದಲ್ಲಿ ಉಂಟಾದ ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ಸರಿಯಾಗಿ ವರ್ಗಾಯಿಸಲಾಗಿದೆಯೇ ಎಂಬುದನ್ನು ಪರೀಕ್ಷಿಸುವ ಉದ್ದೇಶದಿಂದ ತಪಾಸಣೆಗಳನ್ನು ಕೈಗೊಳ್ಳಲಾಯಿತು.
ಬ್ರೇಕ್ ಪ್ಯಾಡ್‍ಗಳು, ಕ್ಲಚ್ ಅಸೆಂಬ್ಲಿಗಳು, ಗೇರ್‍ಬಾಕ್ಸ್‍ಗಳು, ಸಸ್ಪೆನ್ಸನ್ ಸಿಸ್ಟಮ್‍ಗಳು ಮತ್ತು ಅವುಗಳ ಭಾಗಗಳು (ಶಾಕ್ ಅಬ್ಸಾರ್ಬರ್‍ಗಳು ಸೇರಿದಂತೆ) ಬಾಡಿ ಪ್ಯಾನೆಲ್‍ಗಳು ಮತ್ತು ಪರಿಕರಗಳು, ಫಂಡರ್‍ಗಳು ಹುಡ್‍ಗಳು ಮತ್ತು ಹೆಡ್‍ಲೈಟ್‍ಗಳು ಇತ್ಯಾದಿ ವಾಹನ ಬಿಡಿ-ಭಾಗಗಳ ಮೇಲೆ ಶೇ.28 ಜಿ.ಎಸ್.ಟಿ. ದರ ಇತ್ತು 56 ನೇ ಜಿ.ಎಸ್.ಟಿ. ಮಂಡಳಿಯ ನಿರ್ಧಾರದಂತೆ ಏಕರೂಪವಾಗಿ ಶೇ.28 ರಿಂದ ಶೇ.18ಕ್ಕೆ ಇಳಿಸಲಾಗಿದೆ ಮತ್ತು ಟ್ರ್ಯಾಕ್ಟರ್ ಟೈರ್ ಮತ್ತು ಬಿಡಿ-ಭಾಗಗಳ ಮೇಲೆ ಜಿ.ಎಸ್.ಟಿ. ದರವನ್ನು ಶೇ.5 ಕ್ಕೆ ಇಳಿಸಲಾಗಿದೆ. ಈ ಬದಲಾವಣೆಯು ಸೆಪ್ಟಂಬರ್ 22,2025 ರಿಂದ ಜಾರಿಗೆ ಬಂದಿರುತ್ತದೆ.
ಒಟ್ಟು 50 ಕ್ಕೂ ಹೆಚ್ಚು ವ್ಯಾಪಾರ ಸ್ಥಳಗಳನ್ನು ಏಕಕಾಲದಲ್ಲಿ ಜಾರಿ ವಿಭಾಗದ ವಿವಿಧ ತಂಡಗಳು ತಪಾಸಣೆ ನಡೆಸಿದ್ದು, ಜಿ.ಎಸ್.ಟಿ. ಕಾನೂನನ್ನು ಉಲ್ಲಂಘಿಸಿ ವಹಿವಾಟನ್ನು ನಡೆಸುತ್ತಿರುವುದು ಪತ್ತೆಯಾಗಿದೆ. ಪ್ರಮುಖವಾಗಿ ಹುಟ್ಟುವಳಿ ತೆರಿಗೆಯನ್ನು ನಗದು ರೂಪದಲ್ಲಿ ಪಾವತಿಸದೆ ಅನರ್ಹ ಹೂಡುವಳಿ ತೆರಿಗೆಯ ಮೂಲಕ ಪಾವತಿಸುತ್ತಿರುವುದು, ಅನರ್ಹ ಹೂಡುವಳಿ ತೆರಿಗೆಯನ್ನು ಹಿಂಪಾವತಿ ಮಾಡದೇ ಇರುವುದು, ತೆರಿಗೆ ಇನ್ವಾಯ್ಸ್ ನೀಡದೆ ಮಾರಾಟ ಮಾಡುತ್ತಿರುವುದು, ವಾಸ್ತವಕ್ಕಿಂತಲೂ ಕಡಿಮೆ ಮೌಲ್ಯದ ತೆರಿಗೆ ಇನ್ವಾಯ್ಸ್ ಗಳನ್ನು ನೀಡುತ್ತಿರುವುದು ಅಲ್ಲದೆ ಪ್ರತಿಷ್ಠಿತ ಕಂಪನಿಗಳ ಮೂಲ ಬಿಡಿ-ಭಾಗಗಳನ್ನು ಹೋಲುವ ಪ್ರತಿರೂಪ ಬಿಡಿ-ಭಾಗಗಳನ್ನು ತೆರಿಗೆ ಇನ್ವಾಯ್ಸ್ ಇಲ್ಲದೆ ಖರೀದಿ ಮಾಡಿ ಸ್ಥಳೀಯ ಮಾರುಕಟ್ಟೆಯಲ್ಲಿ ತೆರಿಗೆ ಇನ್ವಾಯ್ಸ್ ನೀಡದೆ ಮಾರಾಟ ಮಾಡುತ್ತಿರುವುದು ಕಂಡುಬಂದಿರುತ್ತದೆ.
ಈ ಉಲ್ಲಂಘನೆಗಳಿಂದಾಗಿ ತೆರಿಗೆ ಸೋರಿಕೆಯಾಗುತ್ತಿರುವುದನ್ನು ಪತ್ತೆಹಚ್ಚುವ ಕಾರ್ಯವು ಮುಂದುವರೆಯುತ್ತಿದೆ. ಈ ರೀತಿಯ ತೆರಿಗೆ ಸೋರಿಕೆ ಪ್ರಕರಣಗಳಲ್ಲಿ ಸಂಬಂಧಿಸಿದ ವರ್ತಕರ ವಿರುದ್ಧ ಜಿ.ಎಸ್.ಟಿ. ಕಾಯ್ದೆಯನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ವಾಣಿಜ್ಯ ತೆರಿಗೆ ಇಲಾಖೆಯು ಸರ್ಕಾರದ ರಾಜಸ್ವವನ್ನು ವೃದ್ಧಿಸುವುದರ ಜೊತೆಗೆ ಜಿ.ಎಸ್.ಟಿ. ದರ ಇಳಿಕೆಯ ಲಾಭವನ್ನು ಗ್ರಾಹಕರಿಗೆ ತಲುಪಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಾ ಜಿ.ಎಸ್.ಟಿ. ಕಾಯ್ದೆಯ ಉಲ್ಲಂಘನೆಯಾದಲ್ಲಿ ಇಲಾಖೆಯ ಮೂಲಕ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಬೆಂಗಳೂರು ದಕ್ಷಿಣ ವಲಯದ ವಾಣಿಜ್ಯ ತೆರಿಗೆಗಳ ಅಪರ ಆಯುಕ್ತರು (ಜಾರಿ) ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.