ಕೆ.ಎಸ್.ಆರ್.ಟಿ.ಸಿ ಗೆ ರಾಷ್ಟ್ರೀಯ ಪ್ರಶಸ್ತಿ

varthajala
0

ಹರಿಯಾಣ, ಬೆಂಗಳೂರು, ನವೆಂಬರ್ 10 (ಕರ್ನಾಟಕ ವಾರ್ತೆ): ಭಾರತ ಸರ್ಕಾರದ ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯವು  ನಗರ ಸಾರಿಗೆಯಲ್ಲಿನ ಶ್ರೇಷ್ಠ ಉಪಕ್ರಮಕ್ಕೆ ನೀಡುವ ರಾಷ್ಟ್ರೀಯ ಪ್ರಶಸ್ತಿಗೆ (Award of Excellence in Urban Transport) ಕೆ.ಎಸ್.ಆರ್.ಟಿ.ಸಿ ಭಾಜನವಾಗಿದೆ. ಈ ಪ್ರಶಸ್ತಿಯು ಮೈಸೂರು ನಗರ ಸಾರಿಗೆಯ ಧ್ವನಿ ಸ್ಪಂದನ ಉಪಕ್ರಮಕ್ಕೆ ಸಂದಿದೆ.


ಕೆ.ಎಸ್.ಆರ್.ಟಿ.ಸಿ.ಯ  ಮೈಸೂರು ನಗರ ಸಾರಿಗೆಯ 200 ಬಸ್ಸುಗಳಲ್ಲಿ ಧ್ವನಿ ಸ್ಪಂದನ – ಆನ್‍ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್ ಎಂಬ ದೇಶದ ಮೊದಲ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೆ ತರಲಾಗಿದ್ದು, ದೃಷ್ಟಿ ವಿಕಲಚೇತನ ಪ್ರಯಾಣಿಕರ ಪ್ರಯಾಣ ಅವಲಂಬನೆ ಗಣನೀಯವಾಗಿ ಕಡಿಮೆಯಾಗಿದ್ದು, ಅವರ ಆತ್ಮವಿಶ್ವಾಸ, ಭದ್ರತೆ ಮತ್ತು ಸಂಚಾರದ ಸ್ವಾತಂತ್ರ್ಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗೆ ಕಾರಣವಾಗಿದೆ.

ಈ ಪ್ರಶಸ್ತಿಯನ್ನು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ಸಚಿವರಾದ ಮನೋಹರ್ ಲಾಲ್ ಮತ್ತು ವಸತಿ ಮತ್ತು ನಗರಾಭಿವೃದ್ಧಿ ಸಚಿವಾಲಯದ ರಾಜ್ಯ ಸಚಿವರಾದ ತೋಕನ್ ಸಾಹು ಅವರಿಂದ ಕೆ.ಎಸ್.ಆರ್.ಟಿ.ಸಿ ವ್ಯವಸ್ಥಾಪಕ ನಿರ್ದೇಶಕರಾದ ಅಕ್ರಂ ಪಾಷ ಅವರು ಸ್ವೀಕರಿಸಿದ್ದಾರೆ.

ಧ್ವನಿ ಸ್ಪಂದನ – ಆನ್‍ಬೋರ್ಡ್ ಬಸ್ ಐಡೆಂಟಿಫಿಕೇಶನ್ ಮತ್ತು ನ್ಯಾವಿಗೇಶನ್ ಸಿಸ್ಟಮ್,  ಐಐಟಿ ದೆಹಲಿಯ ರೈಸ್ಡ್ ಲೈನ್ಸ್ ಫೌಂಡೇಶನ್ ಅಭಿವೃದ್ಧಿ ಪಡಿಸಿರುವ ತಂತ್ರಜ್ಞಾನವಾಗಿದ್ದು, ಜರ್ಮನಿಯ ಜಿಇಝಡ್ ಸಂಸ್ಥೆಯ ಸಹಕಾರದೊಂದಿಗೆ ದೃಷ್ಟಿ ವಿಕಲಚೇತನ ಬಸ್ ಬಳಕೆದಾರರಿಗೆ  ಬಸ್‍ಗಳನ್ನು ಗುರುತಿಸಲು ಹಾಗೂ ಧ್ವನಿ ಆಧಾರಿತ ಸೂಚನೆಗಳ ಮೂಲಕ ಬಸ್ ಪ್ರವೇಶದ ಸ್ಥಳವನ್ನು ಸುರಕ್ಷಿತವಾಗಿ ಕಂಡು ಹಿಡಿಯಲು ಸಹಾಯ ಮಾಡುತ್ತದೆ. 400 ಕ್ಕೂ ಹೆಚ್ಚು ದೃಷ್ಟಿ ವಿಕಲಚೇತನ ಬಳಕೆದಾರರಿಗೆ ಇದರ ಬಳಕೆಯ ಕುರಿತು ತರಬೇತಿ ನೀಡಲಾಗಿದೆ.

ಈ ಮಾದರಿಯು ಸರ್ಕಾರ, ಶಿಕ್ಷಣ ಸಂಸ್ಥೆ, ಸ್ವಯಂ ಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಜಾರಿಗೆ ತಂದಿರುವ ದೇಶದ ಮಾದರಿ ಉಪಕ್ರಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

Post a Comment

0Comments

Post a Comment (0)