ಮಕ್ಕಳ ಅಪೌಷ್ಟಿಕತೆಯನ್ನು ತೊಡೆದುಹಾಕಿ ಅವರ ಆರೋಗ್ಯ ಸುಧಾರಿಸುವ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಅನುಷ್ಠಾನ ಮಾಡುತ್ತಿರುವ ಬಿಸಿಯೂಟ ಯೋಜನೆಯನ್ನು ಪದವಿ ಪೂರ್ವ ಕಾಲೇಜು ಹಂತದ ವರೆಗೂ ವಿಸ್ತರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದ್ದು ಇದು ಅಭಿನಂದನೀಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಸ್ತಾವಿತ ಯೋಜನೆಯು ಮಕ್ಕಳ ಹಕ್ಕುಗಳ ರಕ್ಷಣೆಯ ಹಿತದೃಷ್ಟಿಯಿಂದ ಮಹತ್ವದಾಗಿದೆ. ಅದರಲ್ಲೂ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಸಬಲೀಕರಣದದಲ್ಲಿ, ಹಾಜರಾತಿ ಹೆಚ್ಚಿಸುವಲ್ಲಿ, ಅರೋಗ್ಯ ಸುಧಾರಣೆಯಲ್ಲಿ ನಿರ್ಣಾಯಕವಾಗಿದೆ. ಈ ಕ್ರಮವು ವಿದ್ಯಾರ್ಥಿಗಳ ದೈಹಿಕ ಆರೋಗ್ಯವನ್ನು ಸುಧಾರಿಸುವುದಲ್ಲದೆ, ಅವರ ಏಕಾಗ್ರತೆ, ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸುತ್ತದೆ.
ಸದರಿ ಯೋಜನೆ ಅನುಷ್ಠಾನಗೊಂಡರೆ ಸುಮಾರು 3 ಲಕ್ಷ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಸಾಮಾಜಿಕ ಕಾರ್ಯಕರ್ತರು, ಸಾಮಾಜಿಕ ಸಂಘಟನೆಗಳು ಬಿಸಿಯೂಟದ ಯೋಜನೆಯನ್ನು ಸ್ನಾತ್ತಕೋತ್ತರ ಪದವಿ ಹಂತದವರೆಗೂ ವಿಸ್ತರಿಸಬೇಕೆಂದು ಹಲವಾರು ವರ್ಷಗಳಿಂದ ಹೋರಾಟಮಾಡುತ್ತಲೇ ಬರುತ್ತಿದ್ದರು. ಸದ್ಯ ರಾಜ್ಯ ಸರ್ಕಾರವು ಪಿ.ಯು ಹಂತದವರೆಗೂ ವಿಸ್ತರಿಸುವ ಬಗ್ಗೆ ಚಿಂತಿಸಿರುವುದು ಆಶಾದಾಯಕ ಬೆಳವಣಿಗೆಯಾಗಿದೆ, ಇಂತಹ ಉಪಕ್ರಮಗಳು ಆರೋಗ್ಯಕರ ಮತ್ತು ಸುಶಿಕ್ಷಿತ ಸಮಾಜವನ್ನು ಕಟ್ಟುವ ಕಡೆಗೆ ನಮ್ಮ ಸಾಮೂಹಿಕ ಪ್ರಯತ್ನಗಳನ್ನು ಬಲಪಡಿಸುತ್ತವೆ ಎಂದಿದ್ದಾರೆ.
ರಾಜ್ಯ ಸರ್ಕಾರದ ಈ ದೂರದೃಷ್ಟಿಯ ಹಾಗೂ ಮಾನವೀಯ ಚಿಂತನೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹೃತ್ಪೂರ್ವಕವಾಗಿ ಅಭಿನಂದಿಸುತ್ತದೆ ಹಾಗೂ ಆದಷ್ಟು ಶೀಘ್ರವಾಗಿ ಜಾರಿಯಾಗಲೆಂದು ಆಶಿಸುತ್ತದೆ ಎಂದು ಡಾ.ತಿಪ್ಪೇಸ್ವಾಮಿ ಕೆ.ಟಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.