ಮಕ್ಕಳ ಪಾಲನಾ ಕೇಂದ್ರಗಳಲ್ಲಿ ವಾತ್ಸಲ್ಯ ತುಂಬಿದ ಆರೈಕೆ ಲಭ್ಯವಾಗಲಿ

varthajala
0

 ಮಕ್ಕಳ ಪಾಲನಾ ಕೇಂದ್ರಗಳು ಕೇವಲ ಅನ್ನ ಆಶ್ರಯ ನೀಡುವ ಕೇಂದ್ರವಾಗದೆ  ವಾತ್ಸಲ್ಯ ತುಂಬಿದ ಆರೈಕೆ ಲಭ್ಯವಾಗಬೇಕು. ಆಹಾರ, ಆಶ್ರಯ ಮತ್ತು ಮೂಲಭೂತ ಶಿಕ್ಷಣವನ್ನು ಒದಗಿಸುವುದು ಅತ್ಯಗತ್ಯವಾದರೂ, ಮಗುವಿನ ಆರೋಗ್ಯಕರ ಬೆಳವಣಿಗೆಗೆ ಇವು ಮಾತ್ರ ಸಾಕಾಗುವುದಿಲ್ಲ. ಮಕ್ಕಳು ಆತ್ಮವಿಶ್ವಾಸ ಮತ್ತು ಸಮರ್ಥ ವ್ಯಕ್ತಿಗಳಾಗಿ ಬೆಳೆಯಲು ವಾತ್ಸಲ್ಯ, ಭಾವನಾತ್ಮಕ ಭದ್ರತೆಯ ಅಗತ್ಯವಿದೆ. ಆದ್ದರಿಂದ, ಮಕ್ಕಳ ಪಾಲನಾ ಕೇಂದ್ರಗಳು ಕೇವಲ ಆಶ್ರಯ ಕೇಂದ್ರಗಳಾಗದೆ ಪ್ರೀತಿ ಮತ್ತು ಸಹಾನುಭೂತಿಯಿಂದ ತುಂಬಿದ ಕಾಳಜಿಯುಳ್ಳ ವಾತಾವರಣವನ್ನು ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ರವರು ಅಭಿಪ್ರಾಯಪಟ್ಟರು.


 ಅವರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಂಯುಕ್ತಾಶ್ರಯದಲ್ಲಿ ಇಂದು ತುಮಕೂರು ಜಿಲ್ಲೆಯ ಮಕ್ಕಳ ಪಾಲನಾ ಕೇಂದ್ರಗಳ ಅಧಿಕಾರಿಗಳು ಹಾಗೂ ಸಿಬ್ಬಂಧಿಗಳಿಗೆ ಏರ್ಪಡಿಸಿದ್ದ ಒಂದು ದಿನದ ಸಾಮರ್ಥ್ಯಾಭಿವೃದ್ಧಿ ತರಬೇತಿಯನ್ನು ಉದ್ಘಾಟಿಸಿ ಮಾತನಾಡಿದರು.  ಮಕ್ಕಳ ಆರೈಕೆ ಕೇಂದ್ರಗಳಲ್ಲಿ ವಾಸಿಸುವ ಹೆಚ್ಚಿನ ಮಕ್ಕಳು ಚಿಕ್ಕ ವಯಸ್ಸಿನಲ್ಲಿಯೇ ಪೋಷಕರ ಪ್ರೀತಿಯಿಂದ ವಂಚಿತರಾಗುತ್ತಾರೆ, ಇದು ಅವರ ಭಾವನಾತ್ಮಕ ಮತ್ತು ಮಾನಸಿಕ ಯೋಗಕ್ಷೇಮದ ಮೇಲೆ ಆಳವಾಗಿ ಪರಿಣಾಮ ಬೀರುತ್ತದೆ. 

ಅಂತಹ ಸಂದರ್ಭಗಳಲ್ಲಿ, ಆರೈಕೆದಾರರು, ಆಪ್ತಸಮಾಲೋಚಕರು ಮತ್ತು ಸಿಬ್ಬಂದಿಗಳ ಪಾತ್ರವು ಅತ್ಯಂತ ಮುಖ್ಯವಾಗುತ್ತದೆ. ಮಗುವಿನ ಸಂಪರ್ಕದಲ್ಲಿರುವ ಈ ಎಲ್ಲರೂ ತಾಳ್ಮೆ, ಸಂಯಮ ಮತ್ತು ಪ್ರೀತಿಯಿಂದ ನಡೆದುಕೊಳ್ಳಬೇಕು ಎಂದರು.ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರಾದ ಡಾ.ಸಿದ್ದರಾಮಣ್ಣ ಮಾತನಾಡಿ ಸಿಬ್ಬಂದಿ ಮಕ್ಕಳನ್ನು ಪ್ರೀತಿ ಮತ್ತು ಗೌರವದಿಂದ ನಡೆಸಿಕೊಂಡಾಗ, ಅದು ಮಕ್ಕಳ ವಿಶ್ವಾಸ ಮತ್ತು ಭಾವನಾತ್ಮಕ ಭದ್ರತೆಯನ್ನು ಹೆಚ್ಚಿಸುತ್ತದೆ. ಈ ರೀತಿಯ ಪ್ರೀತಿಯ ಆರೈಕೆಯು ಮಕ್ಕಳಲ್ಲಿನ ನಡವಳಿಕೆಯ ಸಮಸ್ಯೆಗಳು, ಆತಂಕ ಮತ್ತು ಪ್ರತ್ಯೇಕತೆಯ ಭಾವನೆಗಳನ್ನು ಕಡಿಮೆ ಮಾಡುತ್ತದೆ. ಇದು ಮಕ್ಕಳು ಸಹಾನುಭೂತಿ, ಸಹಕಾರ ಮತ್ತು ಗೌರವದಂತಹ ಸಕಾರಾತ್ಮಕ ಮೌಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತದೆ ಎಂದರು.   ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಡಾ. ಟಿವಿ ಕುಮಾರ್ ಮಾತನಾಡಿ ಮಕ್ಕಳ ಆರೈಕೆ ಕೇಂದ್ರಗಳು ದೈಹಿಕ ಅಗತ್ಯಗಳನ್ನು ಪೂರೈಸುವುದನ್ನು ಮೀರಿ ವಾತ್ಸಲ್ಯ ನೀಡಿ ಮತ್ತು ಭಾವನಾತ್ಮಕ ಆರೋಗ್ಯವನ್ನು  ಉತ್ತಮಪಡಿಸಬೇಕು. ಪ್ರೀತಿ ಮತ್ತು ಆರೈಕೆ ಕೊಡುಗೆಯಲ್ಲ, ಅವು ಪ್ರತಿ ಮಗುವಿನ ಮೂಲಭೂತ ಹಕ್ಕುಗಳಾಗಿವೆ ಎಂದರು.

  ಕಾರ್ಯಕ್ರಮದಲ್ಲಿ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷರಾದ ಶ್ರೀಮತಿ ಸೌಮ್ಯ, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶ್ರೀಮತಿ ಪವಿತ್ರ, ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ಶ್ರೀ ಲಕ್ಷ್ಮೀಶ್ ಸೇರಿದಂತೆ ಜಿಲ್ಲೆಯ ವಿವಿಧ ಮಕ್ಕಳಾ ಪಾಲನಾ ಕೇಂದ್ರಗಳ ಅಧಿಕಾರಿಗಳು ಮತ್ತು ಸಿಬ್ಬಂಧಿಗಳು ಭಾಗವಹಿಸಿದ್ದರು. 


Post a Comment

0Comments

Post a Comment (0)