ಕೊರೋನ : ನೆಗಡಿ, ಜಾಂಡೀಸ್, ಏಡ್ಸ್ ,ಪೊಲಿಯೋ, ಮುಂತಾದ ಕಾಯಿಲೆ ತರುವ ವೈರಸ್

varthajala
0

ಕೊರೋನ ಬಗ್ಗೆ ನಿಖರವಾದ ಮಾಹಿತಿ ತಿಳಿಯಲು ವೈದ್ಯರ ಈ ಲೇಖನ 

 ಡಾ.ಕಟ್ನವಾಡಿ 

 ಡಾII ನಟರಾಜ್ ಶ್ವಾಸಕೋಶ ತಜ್ಞರು ಸಾರ್ವಜನಿಕ ಆಸ್ಪತ್ರೆ ಹೊಳೆನರಸೀಪುರ. ಮೊ.ನಂ:9448323093

×××××××××××


ಜೀವಮಾನದಲ್ಲಿಯೇ ಕಂಡು ಕೇಳದಂತಹ ಆತಂಕ ತಂದೊಡ್ಡುತ್ತಿರುವ ಕೊರೋನ ಹೆಮ್ಮಾರಿ ಅಲ್ಲ ,ಇದು ಒಂದು ಸೂಕ್ಷ್ಮಾಣು ಜೀವಿ. ಗೊತ್ತಾಗದೆ 5 ದಿನ ,ಗೊತ್ತಾದ ನಂತರ 5 ದಿನಗಳಲ್ಲಿಯೇ, ಎಂತಹ ಭೀಮಕಾಯನನ್ನು ಮಕಾಡೇ ಮಲಗಿಸಿಬಿಡುತ್ತಿರುವ, ಕ್ಷುದ್ರ ಜೀವಿ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಏನೆಲ್ಲಾ ತಿಳಿದಿದ್ದರೂ, ನಮ್ಮ ರಕ್ಷಣೆಗಾಗಿ, ನಮ್ಮ ಕುಟುಂಬ ವರ್ಗದವರ ಪ್ರಾಣ ರಕ್ಷಣೆಗಾಗಿ ಕರೋನಾ ವೈರಸ್ ಬಗ್ಗೆ ತಿಳಿದುಕೊಳ್ಳುವುದು ಅತ್ಯವಶ್ಯಕ.

ಈ ಶತಮಾನದ ಆದಿಯಲ್ಲಿ ಸಿಡುಬು, ಪ್ಲೇಗ್ ರೋಗಗಳಿಗೆ ಲಕ್ಷಾಂತರ ಜನ ಬಲಿಯಾಗಿದ್ದು ಎಲ್ಲರಿಗೂ ತಿಳಿದೇ ಇದೆ. ಊರಿಗೇ ಊರೇ ಖಾಲಿಯಾಗುತ್ತಿತ್ತು.

 ಸರಳವಾಗಿ ಕರೋನಾ ಕಥೆ. ಅದು ಇವತ್ತಿನ ಜೀವಿಯಲ್ಲ. ಅದರ ಬಗ್ಗೆ 50 ವರ್ಷಗಳಿಂದಲೂ ಸಂಶೋಧನೆಗಳು ನಡೆಯುತ್ತಲೇ ಇವೆ. ಅದು ಕಾಲಕಾಲಕ್ಕೆ ರೂಪಾಂತರಗೊಳ್ಳುತ್ತಿದ್ದು ,ಈಗ ಉಗ್ರ ರೂಪ ಪಡೆದಿದೆ. 

ಅದೊಂದು ಪ್ರೋಟಿನ್ ನಿಂದ, ಆದ ಜೀವಿಯಂತಹ ಸೂಕ್ಷ್ಮಾಣುವಾಗಿದ್ದು.ನೆಗಡಿ, ಜಾಂಡೀಸ್, ಏಡ್ಸ್ ,ಪೊಲಿಯೋ, ಮುಂತಾದ ಕಾಯಿಲೆಗಳನ್ನು ತರವ ವೈರಸ್ ನಂತಹದು.

ಇದು ಇತರೆ ವೈರಾಣುಗಳಿಗಿಂತ ಸ್ವಲ್ಪ ಭಾರವಾದ, ಸ್ವಲ್ಪ ದೊಡ್ಡದಾದ ವೈರಸ್. ಇದು ಭಾರವಾಗಿ ಇಲ್ಲದಿದ್ದರೆ ಇನ್ನೂ ಮೂರು ಪಟ್ಟು ಜನ ಸಾಯುತ್ತಿದ್ದರು.

ಈ ವೈರಸ್ ಸುತ್ತಲೂ, ಕಿರೀಟದ ಮೇಲೆ ಮುಳ್ಳಿನಂತೆ ರಚನೆ ಇರುವುದರಿಂದ, ಇದಕ್ಕೆ ಕರೋನಾ ವೈರಸ್ ಎಂದು ಹೆಸರಿಟ್ಟಿದ್ದಾರೆ. ಕರೋನಾ ಅಂದರೆ ಕಿರೀಟ ಎಂದರ್ಥ. 

ಇದು 2003 ರಲ್ಲೊಮ್ಮೆ ದಾಳಿ ಇಟ್ಟು 20 ದೇಶಗಳಲ್ಲಿ ,ಸಾವಿರಾರು ಜನರು ಸಾವಿಗೀಡಾಗಿದ್ದರು. ಈಗ ಇದು ಉಗ್ರರೂಪಿಯಾಗಿ, ಈಗ ರಾಜ್ಯ -ದೇಶ-ಖಂಡಾಂತರಗಳನ್ನೂ ದಾಟಿ ಎಲ್ಲೆಡೆ ಹರಡಿದೆ. ಇದು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡಿ ,ವೃದ್ಧಿಗೊಳ್ಳುತ್ತಿರವುದೇ ಇದನ್ನು ತಡೆಯಲು ಸಾಧ್ಯವಾಗದೇ ಇರುವುದು. 

 ಕರೋನಾ ವೈರಸ್ ಹೇಗೆ ಹರುಡುತ್ತದೆ? 

ಒಬ್ಬರಿಂದ ಇನ್ನೊಬ್ಬರಿಗೆ ,ನೇರ ಸಂಪರ್ಕದಿಂದ, ಕೆಮ್ಮು ಸೀನಿದಾಗ ಸಿಡಿಯುವ ಕಫದ, ಅಥವಾ ಶ್ವಾಸದ್ರವದ ಸೂಕ್ಷ್ಮ ಹನಿಗಳಿಂದ, ರೋಗಿಯು ಮುಟ್ಟಿದ ವಸ್ತುಗಳನ್ನು ಮುಟ್ಟುವುದರಿಂದ, ಇದು ಸೀಮಿತವಾದ ಅವಧಿ ಮತ್ತು ವಾತಾವರಣದ ಉಷ್ಣತೆಯ ಮೇಲೆ ನಿರ್ಧಾರವಾಗುತ್ತದೆ.

 ಇದು ಮೂಗಿನ ಮೂಲಕ ಪ್ರವೇಶಿಸಿ, ಮೂಗಿನ ಹಿಂಭಾಗದಲ್ಲಿ, ಮನುಷ್ಯನ ಜೀವಕೋಶ ಪ್ರವೇಶಿಸಿ, ಜೀವಕೋಶದ ಪ್ರೋಟಿನನ್ನು ಉಪಯೋಗಿಸಿಕೊಂಡು,ಶರವೇಗದಲಿ ವೃದ್ಧಿಗೊಂಡು, ಶ್ವಾಸಕೋಶ ಪ್ರವೇಶಿಸಿ, ಮುಂದಿನ ದುರಂತಗಳಿಗೆ ಕಾರಣವಾಗುತ್ತದೆ.

 ಮುಂದೇನಾಗುತ್ತದೆ? 

ಮುಕ್ಕಾಲು ಪಾಲು ಜನರಿಗೆ ಇದು ಬಂದು ಹೋಗಿದ್ದು ಅರಿವೇ ಆಗುವುದಿಲ್ಲ, ಅವರ ದೇಹಸ್ಥಿತಿ ಅಷ್ಟು ಬಲವಾಗಿರುತ್ತದೆ. ಆದರೆ ಅವರಿಂದ ಬೇರೆಯವರಿಗೆ ಹರಡಿ ದುರಂತಗಳಿಗೆ ಕಾರಣವಾಗುತ್ತಿದೆ.

ಇಂತಹವರನ್ನೇ ಎಸಿಂಪ್ಟಾಮ್ಯಾಟಿಕ್ ಎಂದು ಕರೆಯುತ್ತೇವೆ.

ಇನ್ನು ಕೆಲವರಿಗೆ ಸಾಮಾನ್ಯ ಶೀತಲಕ್ಷಣಗಳಾದ, ನೆಗಡಿ, ಸೀನು, ಮೈಕೈನೋವು, ತಲೆನೋವು ಇರಬಹುದು. 

ಇನ್ನೂ ಕೆಲವರಿಗೆ ಭೇದಿ, ಒಣ ಕೆಮ್ಮು, ಬಿಕ್ಕಳಿಕೆ, ಹಸಿವಾಗದೇ ಇರಬಹುದು.

ಕರೋನಾದ ಇನ್ನೊಂದು ವಿಶೇಷತೆ ಎಂದರೆ ವಾಸನೆ -ರುಚಿ ಗೊತ್ತಾಗದೇ ಇರುವುದು. ಇದು ಪಕ್ಕಾ ಕರೋನಾ ಎಂದರ್ಥ, ಅದು RTPCR ರಿಪೊರ್ಟ್ ಗೆ ಸಮ.

ಸಾವು -ನೋವುಗಳಿಗೆ ಕಾರಣವೇನು.? 

ಶರೀರಕ್ಕೆ ಡಾಕ್ಟರ್, ಔಷಧಿಗಳ ಅವಶ್ಯಕತೆ ಕೇವಲ 10% ಗೂ ಕಡಿಮೆ. ನಮ್ಮ ಶರೀರದಲ್ಲೇ ಖಾಯಿಲೆಗಳನ್ನು ಓಡಿಸುವ ರಕ್ಷಣಾತ್ಮಕ ವ್ಯವಸ್ಥೆ ಇದೆ. ಉದಾಹರಣೆಗೆ ಮುಳ್ಳು ಚುಚ್ಚಿದರೆ, ರಕ್ತದ ಬಿಳಿ ರಕ್ತಕಣಗಳು ಅದರ ಮೇಲೆ ದಾಳಿ ನಡೆಸಿ, ಕೀವು ಉಂಟಾಗುವಂತೆ ಮಾಡಿ, ಆ ಜಾಗವೆಲ್ಲಾ ಮೆತ್ತಗಾಗಿ, ಮುಳ್ಳು ಬಿದ್ದು ಹೋಗುತ್ತದೆ. ಜ್ವರಬಂದು ಶರೀರ ಬಿಸಿಯಾಗುವುದೇ, ಬ್ಯಾಕ್ಟೀರಿಯಾ , ವೈರಸ್ ,ಇತರೆ ರೋಗಗಳನ್ನು ಹೊಡೆದೋಡಿಸಲು.

ಹಳಬರು ಜ್ವರ ಬಂದರೆ, ಖಾರದ ಸಾರು ಊಟ ಮಾಡಿ, ಮೂರು ದಿವಸ ಮಲಗಿಬಿಟ್ಟರೆ ಕಾಯಿಲೆ ಮಾಯವಾಗುತ್ತಿತ್ತು.

ಈ ನಮ್ಮ ಅದ್ಭುತ ರಕ್ಷಣ ವ್ಯವಸ್ಥೆಯೇ ಈಗ ನಮಗೆ ಕರೋನಾ  ವೈರಸ್ ದಾಳಿಯಲ್ಲಿ ಮುಳ್ಳಾಗಿ, ಸಾವು ನೋವುಗಳಿಗೆ ಕಾರಣವಾಗಿರುವುದು.

 ಯಾವ ರೀತಿ ಶ್ವಾಸಕೋಶ ಡ್ಯಾಮೇಜ್ ಆಗುತ್ತದೆ.? 

ಕರೋನಾ ವೈರಸ್ ಮೂಗಿನ ಮೂಲಕ ಪ್ರವೇಶಿಸಿದ ನಂತರ, ಮೂಗಿನ ಜೀವಕೋಶಗಳಿಂದ ವೃದ್ಧಿಗೊಂಡು ಶ್ವಾಸಕೋಶ ಪ್ರವೇಶಿಸಿ, ಇನ್ನೂ ವೃದ್ಧಿಗೊಳ್ಳತೊಡಗುತ್ತದೆ ,ಆಗ ಎಂಟ್ರಿ ಕೊಡವುದೇ ನಮ್ಮ ರಕ್ಷಣಾ ವ್ಯವಸ್ಥೆ. ಬಿಳಿರಕ್ತಕಣಗಳ ಒಂದು ಘಟಕ ಮ್ಯಾಕ್ರೋಪೆಜ್ ಗಳು, ಕರೋನಾ ವೈರಸ್ ವಿರುದ್ಧ ಹೋರಾಟ ಶುರು ಮಾಡುತ್ತವೆ. ಅವುಗಳಿಂದ ಸೈಟೋಕೈನ್ಸ್ ಎಂಬ ರಾಸಾಯನಿಕಗಳು ಬಿಡುಗಡೆಗೊಳ್ಳುತ್ತವೆ, ಇವುಗಳ ಉಗ್ರಪ್ರತಿರೋಧ, ನಮ್ಮ ಶರೀರದ ರಕ್ತ ಹೆಪ್ಪುಗಟ್ಟುವಿಕೆಯನ್ನು ಉದ್ದೀಪನಗೊಳಿಸುತ್ತದೆ .ಎಲ್ಲಾದರೂ ಸಣ್ಣಗಾಯವಾದಾಗ, ಸ್ವಲ್ಪ ಹೊತ್ತಿನಲ್ಲಿ,ರಕ್ತ ಹೆಪ್ಪುಗಟ್ಟಿ ರಕ್ತ ಸುರಿಯುವುದು ನಿಂತು ಹೋಗುತ್ತದೆ. ಅದೇ ರೀತಿ ಅದರಲ್ಲೂ ವಿಶೇಷವಾಗಿ, ಶ್ವಾಸಕೋಶಗಳ ತುಂಬಾ ಸಣ್ಣಸಣ್ಣ ರಕ್ತನಾಳಗಳಲ್ಲಿ, ರಕ್ತ ಹೆಪ್ಪು ಗಟ್ಟುವಿಕೆಯ ರಾಸಾಯನಿಕ ಕ್ರಿಯೆ ಶರವೇಗದಲ್ಲಿ ವೃದ್ದಿಗೊಳ್ಳುತ್ತಾ, ಶ್ವಾಶಕೋಶದ ಜೀವಕೋಶಗಳು ಸಾಯುವುದರ ಜೊತೆಗೆ, ಸುತ್ತಲೂ ಉರಿಯೂತ ಉಂಟಾಗುತ್ತದೆ, ಇದನ್ನೇ ನಾವು ವೈರಲ್ ನ್ಯುಮೋನಿಯಾ ಅಂತ ಕರೆಯುವುದು. ಆಗ ನಾವು ಉಸಿರಾಡುವ ಆಮ್ಲಜನಕ ,ಕಡಿಮೆ ಸಾಂದ್ರತೆಯಲ್ಲಿ ಸಾಮಾನ್ಯ ಗಾಳಿಯಲ್ಲಿರುವುದರಿಂದ, ಅದು ರಕ್ತ ಕ್ಕೆ ಸೇರದೆ, ಉಸಿರಾಟದ ತೊಂದರೆ ಉಂಟಾಗುತ್ತದೆ. ಆಗ ರೋಗಿಗೆ ಉಸಿರು ಕಟ್ಟಿದಂತಾಗಿ ನಡೆದಾಡಲೂ ಕಷ್ಟವಾಗುತ್ತದೆ. ರಕ್ತದಲ್ಲಿ ಆಕ್ಸಿಜನ್ ಕೊರತೆ ಉಂಟಾದಾಗ, ಶರೀರದ ಎಲ್ಲಾ ಅಂಗಾಂಗಗಳು ತೊಂದರೆ ಅನುಭವಿಸಲು ಶುರುವಾಗುತ್ತವೆ.

ಅದೇ ನಾವು ಬೆರಳಿಗೆ ಪಲ್ಸ್ ಆಕ್ಸೀಮೀಟರ್ ,ಹಾಕಿ ನೋಡಿಕೊಂಡಾಗ SpO2 ಪ್ರಮಾಣ ಕಡಿಮೆ ತೋರಿಸುತ್ತಾ ಹೋಗುತ್ತದೆ.

ಸಾಮಾನ್ಯವಾಗಿ SpO2. 97 to 99%. ಇರುತ್ತದೆ. 95% ವರೆಗೆ ಸಮಸ್ಯೆ ಇಲ್ಲ.

ಆದರೆ 94% ಗೆ ಬಂತೋ, ಸಮಸ್ಯೆ ಇದೆ ಎಂದರ್ಥ. ತಕ್ಷಣವೇ ಆಸ್ಪತ್ರೆಗೆ ಧಾವಿಸಬೇಕು. ರಕ್ತ ಪರೀಕ್ಷೆ, ಕ್ಷ ಕಿರಣ  ಇತ್ಯಾದಿ ಪರೀಕ್ಷೆ ಮಾಡಿಸಬೇಕು. X ರೇ ಪರೀಕ್ಷೆಯಲ್ಲಿ, ತೆಳು ಹತ್ತಿ ಹರಡಿದಂತೆ, ಗೋಚರಿಸುತ್ತವೆ. ಇದು ಮುಂದುವರಿದು C.T. ಸ್ಕ್ಯಾನ್ ಬೇಕಾಗುತ್ತದೆ.

C.T.ಸ್ಕ್ಯಾನ್ ರಿಪೋರ್ಟ್ ನಲ್ಲಿ. ಶ್ವಾಸಕೋಶದ, ವಿವಿಧ ಭಾಗಗಳ ಮೇಲೆ ಹರಡಿರುವ ಸೋಂಕಿನ ಪ್ರಮಾಣದ ಮೇಲೆ ಸ್ಕೋರ್ ಕೊಡ್ತಾ ಹೋಗ್ತಾರೆ.ಕೆಲವು ಸೆಂಟರ್ ಗಳು, 25 , ಇನ್ನು ಕೆಲವು 40 ನ್ನು, ಮಾನದಂಡವಾಗಿ, 1/25 ರಿಂದ 24 /25 ರವರೆಗೆ, ಸ್ಕೋರ್ ಕೊಡುತ್ತಾರೆ.

ನಮಗೆ ಎರಡು ಶ್ವಾಸಕೋಶಗಳು ಇದ್ದು, ಬಲಭಾಗ 3 , ಎಡಭಾಗ 2 ಭಾಗಗಳಿರುತ್ತವೆ,  ಇವುಗಳಿಗೆ ಒಂದಕ್ಕೊಂದು ಸಂಭಂದವಿರುವುದಿಲ್ಲ,ಪ್ರತಿಭಾಗಕ್ಕೂ 5 ಅಂಕಗಳನ್ನು ನೀಡುತ್ತಾರೆ,ಒಟ್ಡು ಇಪ್ಪತೈದು ಆಗುತ್ತದೆ.ಎಷ್ಟು ಭಾಗಗಳು ಸೋಂಕಿಗೆ ಒಳಗಾಗಿಯೆ ಎಂಬ ಆಧಾರದಲ್ಲಿ , ಅಂಕಗಳನ್ನು C.T. ಸ್ಕ್ಯಾನಿಂಗ್ ರಿಪೋರ್ಟ್ ನಲ್ಲಿ ನೀಡುತ್ತಾರೆ.1 ರಿಂದ 10ರವರೆಗೆ, ಸಾಮಾನ್ಯ,(mild). 10 ರಿಂದ 15 ಮಧ್ಯಮ , 15 ರಿಂದ, 20 ತೀವ್ರ ಮತ್ತು 20 ಕ್ಕೆ ಮೇಲ್ಪಟ್ಟು ಅತೀ ತೀವ್ರ ಎಂದು ವರದಿ ನೀಡುತ್ತಾರೆ.

ಅದೇ ರೀತಿ ಇನ್ನೂಂದು ಮಾದರಿಯಲ್ಲಿ 40 ಭಾಗಮಾಡಿ ವರದಿ ನೀಡುತ್ತಾರೆ.

ಆಗ ವೈದ್ಯರು ಅವರನ್ನು ಪರೀಕ್ಷೆಗೊಳಪಡಿಸಿ, SpO2 % ಮೇಲೆ, ವ್ಯಕ್ತಿಯ ವಯಸ್ಸು, ಅವರಿಗೆ  ಇರುವ ಇತರೆ ಖಾಯಿಲೆಗಳು, ರಕ್ತದ ವರದಿಗಳ ಆಧಾರದ ಮೇಲೆ, 

ನಾಲ್ಕು ರೀತಿಯಲ್ಲಿ ವಿಭಾಗಿಸುತ್ತಾರೆ.

1) Mild , ಸಾಮಾನ್ಯ.

2)Moderate ,ಮಧ್ಯಮ,3) Severe ,ತೀವ್ರ,

4) Critical ,ಅತೀ ತೀವ್ರ 

ಮನೆ ಪ್ರತ್ಯೇಕತೆ, ಕೋವಿಡ್ ಆರೈಕೆ ಕೇಂದ್ರ,(ಹಾಸ್ಟೆಲ್),(CCC, Corona Care Center)ಉಲ್ಲೇಖಿತ ಕೋವಿಡ್ ಚಿಕಿತ್ಸಾ ಕೇಂದ್ರ( DCHC, Designated Covid Health Center) ,ತಾಲ್ಲೂಕು ಮಟ್ಟ, ಅಥವಾ ಉಲ್ಲೇಖಿತ ಕೋವಿಡ್ ಆಸ್ಪತ್ರೆ( DCH ,Designated Covid Hospital ),ಜಿಲ್ಲಾ ಮಟ್ಟ, ಇವುಗಳಲ್ಲಿ ಯಾವುದಕ್ಕೆ ಹೋಗಬೇಕೆಂದು ನಿರ್ಧರಿಸುತ್ತಾರೆ.

ಇಲ್ಲಿಂದ ಮುಂದೆ ವ್ಯಕ್ತಿಯ ಮುಂದಿನ ಹಂತ ಗೋಚರಿಸತೊಡಗುತ್ತದೆ.

ಪ್ರತಿಶತ 90% ಜನ, ಮನೆ ಪ್ರತ್ಯೇಕತೆ ಅಥವಾ CCC ನಲ್ಲಿ ಇರಬೇಕಾಗುತ್ತದೆ, 5 to 8% DCHC ಯಲ್ಲಿ , ಇನ್ನೂ ಮಿಕ್ಕ2 to 3% ಜಿಲ್ಲಾ

 ಆಸ್ಪತ್ರೆಗೆ ,DCH ಗೆ ದಾಖಲಾಗಬೇಕಾಗುತ್ತದೆ, ತೀವ್ರತೆಯ ಆಧಾರದ ಮೇಲೆ.

CCC ಯಲ್ಲಿ ರೋಗ ಲಕ್ಷಣಗಳು ಬಂದ ದಿನದಿಂದ ಲೆಕ್ಕಹಾಕಿದಂತೆ ಹತ್ತು ದಿನ ಇರಬೇಕಾಗುತ್ತದೆ.

ಇಲ್ಲಿ ಯಾವುದೇ ತೊಂದರೆ ಇಲ್ಲದವರು ನೇರ ಮನೆಗೇ. ಏನಾದರೂ ತೊಂದರೆ ಆದಲ್ಲಿ, DCHC ಗೆ ಶಿಪ್ಟಾಗುತ್ತಾರೆ.ಅಲ್ಲಿಂದ ಮುಂದೆ ,ಚುಚ್ಚುಮದ್ದುಗಳ (Inj. Remdesivir, steroids, ಅಂಟಿಬಯ್ಯೊಟಿಕ್ಸ್,

, ಸತತವಾಗಿ 02 ಕೊಡುವುದರ ಮೂಲಕ, ಚಿಕಿತ್ಸೆ ಆರಂಬಿಸಲಾಗುತ್ತದೆ, ತೀವ್ರ ಉಸಿರಾಟದ ತೊಂದರೆ ಆದರೆ, ವೆಂಟಿಲೇಟರ್ ಗೆ ,ವರ್ಗಾಯಿಸುತ್ತಾರೆ. ಇನ್ನೂ ತೀವ್ರವಾದಲ್ಲಿ ಜಿಲ್ಲಾ ಮಟ್ಟಕ್ಕೆ (DCH )ಕಳುಹಿತ್ತಾರೆ.

ಈ ಹಂತದಲ್ಲಿ ಚಿಕಿತ್ಸೆಗೆ ರೋಗಿಯ ಸ್ಪಂದನೆಯೇ ಪ್ರಮುಖವಾಗಿದ್ದು, ಸ್ಪಂದಿಸದಿದ್ದರೆ, ಸಾವು ಖಚಿತ.


ಶೇಕಡ 95%, ಬರೀ ಪ್ಯಾರಸಿಟಮಾಲ್, ಸಿಟ್ರಿಜಿನ್, ಅಜಿತ್ರೋಮೈಸಿನ್  ಗೆ ಗುಣಪಟ್ಟರೆ,ಇನ್ನು 3%, ಇಂಜೆಕ್ಷನ್ ‌‌,ಆಕ್ಸಿಜನ್ ಮತ್ತು ಇತರೆ ಚಿಕಿತ್ಸೆಯಿಂಧ ಗುಣ ಹೊಂದುತ್ತಾರೆ

ಇನ್ನು ಮಿಕ್ಕ 2%, ಸಾವಿನಂಚಿಗೆ ಬಂದು ನಿಲ್ಲುತ್ತಾರೆ. ಅದೃಷ್ಟ ಇದ್ದವರು ಉಳಿಯುತ್ತಾರೆ ,ಇಲ್ಲವೇ ಮರಣಿಸುತ್ತಾರೆ. 

ಇಲ್ಲಿ ಕೊನೆಗೆ ರೋಗಿಯ ಅಳಿವು ಉಳಿವು, ನಿರ್ಧಾರವಾಗುವುದು ಅವರ ಶರೀರದ ತಾಕತ್ತಿನ ಮೇಲೆಯೇ

ತುರ್ತುಘಟಕದಲ್ಲಿ ,ವೆಂಟಿಲೇಟರ್ ನಿರ್ವಹಿಸಲು ತರಬೇತಿ ಪಡೆದ ಸೂಕ್ತ ಸಿಬ್ಬಂದಿ  ದಿನದ  24 ಗಂಟೆಯೂ ಇರಬೇಕಾಗುತ್ತದೆ. ಈಗ ಅದೇ ಸಮಸ್ಯೆ ಕಾಡುತ್ತಿರುವುದು.

ರೋಗಿಗಳ ಸಂಖ್ಯೆ ಹೆಚ್ಚಿದಂತೆಲ್ಲಾ, ಆಸ್ಪತ್ರೆ ಬೆಡ್ ಕೊರತೆ,  ಆಕ್ಸಿಜನ್ ಬೆಡ್ ಕೊರತೆ,  ಐ.ಸಿ.ಯು ಕೊರತೆ, ವೆಂಟಲೇಟರ್ ಕೊರತೆ, ಆಕ್ಸಿಜನ್ ಕೊರತೆ, ರೆಮ್ಡಸಿವಿರ್ ಕೊರತೆ, ಹೀಗೆ ನಾನಾ ಸಮಸ್ಯೆಗಳು ತಲೆದೊರುತ್ತೀವೆ.ಈಗ ಬ್ಲಾಕ್  ಫಂಗಸ್.

 ಈ ಕರೋನಾವನ್ಮು ತಡೆಯುವುದು ಹೇಗೆ? 

ತೀವ್ರತೆಯ ಸೂಕ್ಷ್ಮತೆ ಅರೆಯುವುದು ಹೇಗೆ?

ಹುಷಾರಾಗಿ ಬಂದ ನಂತರ ಹೇಗಿರಬೇಕು?

ಹೀಗೆ ನಾನಾ ಪ್ರಶ್ನೆಗಳು.

ಅದೇ ಯಥಾ ಪ್ರಕಾರ, ಮನೆಯಲ್ಲಿರಿ, ಮಾಸ್ಕ್ ಹಾಕ್ಕೊಳಿ, ಸ್ಯಾನಿಟೈಜ್ ಮಾಡ್ಕೋಳಿ ಸಾಮಾಜಿಕ ಹಂತರ ಕಾಪಾಡಿ,

ಇವುಗಳ ಜೊತೆಗೆ, ದುರಭ್ಯಾಸ ಕಡಿಮೆ ಮಾಡಿ,ಉಡಾಫೆ ನಿಲ್ಲಿಸಿ,ಯೋಗ -ಪ್ರಾಣಯಾಮ ಮಾಡಿ, ಪೌಷ್ಟಿಕ ಆಹಾರ ಸೇವಿಸಿ, 

ಬಿಸಿಯಾದ ಆಹಾರ ತಿಂದು ದೇಹವನ್ನು ಸದೃಢ ಮಾಡಿಕೊಳ್ಳಿ.

ರೋಗಲಕ್ಷಣಗಳು ಕಂಡ ನಂತರ ಐದು ದಿನಗಳ ವರೆಗೆ, ಯಾವುದೇ ಸಮಸ್ಯೆ ಇರಲ್ಲ.

ಐದನೇ ದಿನದಿಂದ ಹತ್ತನೆ ದಿನದವರೆಗೆ ಬಹು ಎಚ್ಚರಿಕೆಯಿಂದ ಇರಬೇಕು. ಸ್ವಲ್ಪ ಸುಸ್ತು,ಇದ್ದರೂ ,ವೈದ್ಯರ ಬಳಿ ಹೋಗಬೇಕು, ಸಂಪೂರ್ಣ ಪರೀಕ್ಷೆ ಮಾಡಿಸಬೇಕು.

ಕೆಮ್ಮು ವೆರಿ ವೆರಿ ವೆರಿ ಇಂಪಾರ್ಟೆಂಟು. ಸ್ವಲ್ಪವೇ ಕೆಮ್ಮು ಮುಂಬರುವ ಉಗ್ರ ಸುನಾಮಿಯ ಸೂಚಕವಾಗಬಹುದು. ತಕ್ಷಣವೇ ವೈದ್ಯರ ಬಳಿ ಧಾವಿಸಿ, X ರೇ, ಮಾಡಿಸಿ, C.T ಸ್ಕ್ಯಾನ್ ಮಾಡಿಸಿ, SpO2 % ,ಪರೀಕ್ಷಿಸಿಕೊಳ್ಳಿ, ತೊಂದರೆ  ಇದ್ದಲ್ಲಿ, ಆಸ್ಪತ್ರೆಗೆ ದಾಖಲಾಗಿ, ನಿಮ್ಮ ರೋಗ ತೀವ್ರತೆ ಮೇಲೆ, ವೈದ್ಯರು, ಒಳ್ಳೆಯ ಅಂಟಿಬಯೋಟಿಕ್ಸ್, ರೆಮ್ ಡಿಸಿವಿರ್, ಸ್ಟಿರಾಯ್ಡ್ಸ್, ನೆಬುಲೈಸೇಶನ್, ಆಕ್ಸಿಜನ್, ಗ್ಯಾಸ್ಟ್ರಿಕ್ ಮಾತ್ರೆಗಳು, ವಿಟಮಿನ್ ಸಿ ಮತ್ತು ಝಿಂಕ್ ಮಾತ್ರೆಗಳು, ಸಿಟ್ರಿಜಿನ್,ಪ್ಯಾರಾಸಿಟಮಾಲ್, ಅವಶ್ಯಕತೆ ಇದ್ದಲ್ಲಿ, ಹೆಚ್ಚುವರಿ ಔಷಧಿಗಳನ್ನು ಕೊಡಬಹುದು.

ಶೇಕಡ 95%, ಈ ಚಿಕಿತ್ಸೆಗಳೇ ಸ್ಪಂದಿಸಿ, ಹುಷಾರಾಗಿ ಮನೆಗೆ ಹೋಗುತ್ತಾರೆ. ಇನ್ನು 5%, ಖಾಯಿಲೆ ತೀವ್ರಗೊಂಡು, SpO2, 60% ಕ್ಕೂ ಕೆಳಗಿಳಿದು, ವೆಂಟಿಲೇಟರ್ ಗೆ, ಶಿಫ್ಟ್ ಆಗುತ್ತಾರೆ. ಇಲ್ಲಿ ತೀವ್ರನಿಗಾ.

ಈ ಸಂದರ್ಭದಲ್ಲಿ ಪ್ಲಾಸ್ಮಾ ಥೆರಪಿಯನ್ನು ಪ್ರಯತ್ನಿಸಬಹುದು.

ಪ್ಲಾಸ್ಮಾ ಅಂದರೆ, ರಕ್ತದಲ್ಲಿರುವ ತೆಳು ಹಳದಿ ಬಣ್ಣದ, ನೀರಿನಂತಹ ದ್ರವ, ಇದನ್ನು ಕರೋನಾದಿಂದ ವಾಸಿಯಾಗಿ, ಕಡೇ ಪಕ್ಷ 36 ದಿನಗಳು ಕಳೆದಿರುವ, ರೋಗಿಯ ರಕ್ತದಿಂದ ಪಡೆಯುತ್ತಾರೆ ಮತ್ತು ಇದನ್ನು ರೋಗ ಉಲ್ಬಣಗೊಂಡ ವ್ಯಕ್ತಿಯ ,ರಕ್ತಕ್ಕೆ ಸೇರಿಸುತ್ತಾರೆ. ಹುಷಾರಾದ ವ್ಯಕ್ತಿಯ ರಕ್ತದಲ್ಲಿರುವ ಆಂಟಿಬಾಡಿಗಳು (ಪ್ರತಿಕಾಯಗಳು), ಕರೋನಾ ವಿರುದ್ಧ ಹೋರಾಟ ಮಾಡುತ್ತವೆಂಬ ನಂಬಿಕೆ.

ಈ ಹಂತದಲ್ಲಿ IL-6 ಎಂಬ, ಶ್ವಾಸಕೋಶ ಡ್ಯಾಮೇಜ್ ಮಾಡುವ, ಪ್ರತಿಕಾಯವನ್ನು ನಿಯಂತ್ರಿಸಲು, ಟೊಸಿಲುಜ್ಯೂಮ್ಯಾಬ್(Tociluzumab), ಎಂಬ ಇಂಜೆಕ್ಷನ್ ಕೂಡಾ ಕೊಡಬಹುದು. ಇದರ ಬೆಲೆ 35 ರಿಂದ 45 ಸಾವಿರ. ಈ ಬಾರಿ ಕಾಳಸಂತೆಯಲ್ಲಿ ಎರಡು ಲಕ್ಷಕ್ಕೆ ಹೋಗಿದೆ.

ಇದರ ಮಧ್ಯ ವೆಂಟಿಲೇಟರ್ ಗೆ ಹೋದವರು ವಾಪಸ್ಸು ಬರುವುದು ಕೇವಲ 40% ಮಾತ್ರ, ಅಂಕಿ-ಅಂಶಗಳ ಪ್ರಕಾರ,  ಆದರೆ ಕರೋನಾದಲ್ಲಿ ಇನ್ನೂ ಕಡಿಮೆ. 

ಕೆಲವು ಬಾರಿ ಇತರೆ ತೊಂದರೆಗಳು, ಬ್ಯಾಕ್ಟಿರಿಯಾ ಸೊಂಕುಗಳು,ಕಿಡ್ನಿ ಫೈಲ್ಯೂರ್, ಲಿವರ್ ಫೈಲ್ಯೂರ್, ಹೃದಯಾಘಾತ, ಇತ್ಯಾದಿಯಿಂದಾಗಿ ಸಾವು ಸಂಭವಿಸುವಬಹುದು.

 ಕರೋನಾದಿಂದ ಗುಣಮುಖರಾದವರು ಹೇಗಿರಬೇಕು? 

ಕರೋನಾ ನಮ್ಮ ಶರೀರದೊಳಗೆ ಪ್ರವೇಶಿಸಿದ 10 ರಿಂದ 14 ದಿನಗಳ ನಂತರ ಸಾಯುತ್ತದೆ. ನಂತರ ಇನ್ನೊಬ್ಬರಿಗೆ ಹರಡುವುದಿಲ್ಲ. ಆದರೆ ಅದರಿಂದಾದ ಡ್ಯಾಮೇಜ್ ಮುಂದುವರಿಯುತ್ತದೆ. ಪ್ರಮುಖವಾಗಿ ,ಸುಸ್ತು ಮತ್ತು ಕೆಮ್ಮು. ಜ್ವರ ಬರಬಹುದು, ಬರದೇ ಇರಬಹುದು.

ಎಲ್ಲರಿಗೂ ಅಲ್ಲ. ಯಾರಿಗೆ ಈ ತೊಂದರೆ ಇರುತ್ತದೊ ಅವರು, ಉದಾಸೀನ ಮಾಡದೇ ತಕ್ಷಣ, ಕರೋನಾ ವೈದ್ಯರನ್ನು ಭೇಟಿ ಮಾಡಬೇಕು ಮತ್ತು ಅವರು ಹೇಳದ ಸಲಹೆ ಚಾಚೂ ತಪ್ಪದೇ ಅನುಸರಿಸಬೇಕು.

ಶ್ವಾಸಕೋಶ ಡ್ಯಾಮೇಜ್ ಆದವರು ,ಮತ್ತೆ ಯಥಾಸ್ಥಿತಿಗೆ ಬರಬೇಕಾದರೆ ಆರು ವಾರ ಬೇಕಾಗಬಹುದು. ಆದರೆ ಕೆಲವರು 3 ದಿನಕ್ಕೆ, ಶ್ವಾಸಕೋಶ ಸಾಮನ್ಯ ಸ್ಥಿತಿಗೆ ಮರಳಿದ ಉದಾಹರಣೆಗಳೂ ಕೂಡಾ ಇವೆ.

ಹಾಗಾಗಿ ಪ್ರಾಣಯಾಮ, ವಾಕಿಂಗ್, ಸ್ಟೀಮ್ ಎಳೆಯುವುದು, ಪೌಷ್ಠಿಕ ಆಹಾರ, ಹೆಚ್ಚು ನೀರು ಕುಡಿಯುವುದು, ಸ್ಪೈರೋಮೀಟರ್ ಎಳೆಯುವುದು, ಇತ್ಯಾದಿ.

 ಕೊನೆ ಮಾತು: 

1)ಕರೋನಾ ತಡೆಗಟ್ಟುವುದು ನಮ್ಮ ಕೈಯಲ್ಲಿದೆ. ಲಾಕ್ ಡೌನ್ ನಂತರವೂ ಒಂದುವರ್ಷದರೆಗೆ ,ಜನಸಂದಣಿಯಿಂದ ದೂರ ಇರಬೇಕು. ಕುಟುಂಬ ಬಿಟ್ಟರೆ ಯಾರ ಜೊತೆಯೂ ಬೆರೆಯಬೇಡಿ.

2) ಮಾಸ್ಕ್ ತಪ್ಪದೇ ಉಪಯೋಗಿಸಿ, ಕರೆಕ್ಟಾಗಿ ಉಪಯೋಗಿಸಿ, ದಿನಕ್ಕೂಂದು ಮಾಸ್ಕ್ ಉಪಯೋಗಿಸಿ, ಹಳೆಯದನ್ನು ತೊಳೆದು ಉಪಯೋಗಿಸಿ. ಇದರಿಂದ ಕರೋನಾ ಮಾತ್ರವಲ್ಲದೆ ಟಿ.ಬಿ, ನ್ಯುಮೋನಿಯಾ ಮತ್ತು ಶ್ವಾಸಕೋಶಗಳಿಂದ ಬರುವ ಇತರೆ ಕಾಯಿಲೆಗಳನ್ನೂ ತಡೆಗಟ್ಟಬಹುದು.

3) ಚಿಕ್ಕ ಸ್ಯಾನಿಟೈಜರ್ ಜೊತೆಯಲ್ಲಿರಲಿ, ಅನುಮಾನ ಬಂದೆಡೆ, ಮರೆಯದೆ ಎಲ್ಲಿದ್ದರೂ ಉಪಯೋಗಿಸಿ.

4) ಸೊಂಕಿನ ಚಿಹ್ನೆಗಳು ಗೋಚರಿಸಿದ ತಕ್ಷಣ, ಎಲ್ಲರಿಂದಲೂ ದೂರ ಇರಿ. ಕರೋನಾ ಖಚಿತವಾದರೆ , ಮನೆಯಲ್ಲಿದ್ದರೆ ರೂಂನಿಂದ ಹೊರಬರದ ವ್ಯವಸ್ಥೆಯಲ್ಲಿರಿ. ಇಲ್ಲದಿದ್ದರೆ ಇದಕ್ಕಾಗಿ ಇರುವ ಹಾಸ್ಟೆಲ್ ಅಥವಾ ಹೋಟೆಲ್ ನಲ್ಲಿರಿ. ಯಾವುದನ್ನೂ ಮುಚ್ಚಿಡಬೇಡಿ. ಈ ಗೋಪ್ಯತೆಯಿಂದಲೇ ಎಷ್ಟೋ ಜನರ ಪ್ರಾಣ ಹೋಗಿದೆ.

5)ದಯಮಾಡಿ ಹಣವಿದ್ದವರು , ಹಣ ಉಳಿಸುವುದಕ್ಕೋಸ್ಜರ  ,ಸರ್ಕಾರಿ ವ್ಯವಸ್ತೆಗೆ ದುಂಬಾಲು ಬೀಳಬೇಡಿ.

ಆ ಚಿಕಿತ್ಸೆ ದುಡ್ಡಿಲ್ಲದ ಬಡವನಿಗೆ ಅನುಕೂಲವಾಗಬಹುದು.

ನೀವು ಸಂಪಾದಿಸಿದ ಹಣ, ಈ ಸಮಯದಲ್ಲಿ ಧಾರಾಳವಾಗಿ ಅನವಶ್ಯಕ ಎನಿಸಿದರೂ ಖರ್ಚು ಮಾಡಿ.

6) ಎಲ್ಲೂ ವ್ಯವಸ್ಥೆಯನ್ನೂ ದೂರಬೇಡಿ. ಎಲ್ಲರೂ ಒತ್ತಡದಲ್ಲಿದ್ದಾರೆ, ಸ್ವಲ್ಪ ಏರುಪೇರಾಗಬಹುದು.

7) ಕರೋನಾ ವ್ಯಾಕ್ಸಿನ್ ಮರೆಯದೆ ತೆಗೆದುಕೊಳ್ಳಿ.

ಮಕ್ಕಳನ್ನು ತಾಯಿ ಬಿಟ್ಟರೆ ಇನ್ಯಾರು ಮುಟ್ಟಬಾರದು. ಆಡುವ ಮಕ್ಕಳಿಂದ ಆದಷ್ಟೂ ದೂರ ಇರಿ. ಮನೆಯಲ್ಲಿಯೂ ಮಾಸ್ಕ್ ಉಪಯೋಗಿಸಿ.

ಮನೆಗೆ ಬಂದಾಗ ಸ್ನಾನ ಮಾಡದೇ ಏನನ್ನೂ ಮುಟ್ಟಬೇಡಿ. ಕಳಚಿದ ಬಟ್ಟೆ ಮತ್ತು ಮಾಸ್ಕನ್ನು ಸೋಪು ನೀರಿನಲ್ಲಿ ಅದ್ದಿಬಿಡಿ.

ಮನೆಯ ಬಾಗಿಲಲ್ಲೇ ಎಲ್ಲರಿಗೂ ಕಾಣುವಂತೆ ಸ್ಯಾನಿಟೈಜರ್ ಇಡಿ, ಮೂಗುಜ್ಜುವುದು, ಕಣ್ಣು ಉಜ್ಜುವುದು, ಬೆರಳು ಉಗುರು ಕಡಿಯುವುದು, ಇತ್ಯಾದಿ ದುರಭ್ಯಾಸಗಳನ್ನು ನಿಲ್ಲಿಸಿ, ಆದಷ್ಟೂ ಪಬ್ಲಿಕ್ ಟಾಯ್ಲೆಟ್ಸ್ ಉಪಯೋಗ ಕಡಿಮೆ ಮಾಡಿ, ಜಾಸ್ತಿ ದಿನಗಳಿಗೆ ಆಗುವ ದಿನಸಿ ಖರೀದಿಸಿ, ಆದಷ್ಟೂ ಹಣ ವ್ಯವಹಾರಗಳನ್ನು ,

ಪೋನ್ ಮೂಲಕ ಮಾಡಿ. ವ್ಯಾಪಾರಸ್ತರು, ಕೈಗಸುಗಳನ್ನು  ಉಪಯೋಗಿಸಿ ಮತ್ತು ಆಗಿಂದಾಗ್ಗೆ ಸ್ಯಾನಿಟೈಸರ್ ಉಪಯೋಗಿಸಿ.ಬೈಕುಗಳಲ್ಲಿ ಒಬ್ಬಬ್ಬರೇ ಪ್ರಯಣಿಸಿ, ಕಾರುಗಳಲ್ಲಿ ಇಬ್ಬರೇ ಪ್ರಯಾಣಿಸಿ, ಇತ್ಯಾದಿ ಕ್ರಮಗಳನ್ನು ಆಚರಣೆಗೆ ತಂದರೆ, ಎರಡು-ಮೂರು, ಎಲ್ಲ ಕೊವಿಡ್ ಅಲೆಗಳನ್ನು ತಡೆಯಬಹುದು.

 ನಮ್ಮ ರಕ್ಷಣೆ ನಮ್ಮ ಎಚ್ಚರಿಕೆಯಲ್ಲಿ.


Post a Comment

0Comments

Post a Comment (0)