ಶಾಲೆಗಳ ಆರಂಭಕ್ಕೆ ಸಕಾಲ: ಸಚಿವ ಬಿ.ಸಿ.ನಾಗೇಶ್

varthajala
0

ಬೆಂಗಳೂರು, ಆ 30; ರಾಜ್ಯದಲ್ಲಿ 1 ರಿಂದ 8 ತರಗತಿಗಳನ್ನು ಆರಂಭಿಸಲು ಸರ್ಕಾರ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಶಾಲೆಗಳನ್ನು ಆರಂಭಿಸಲು ಇದು ಸಕಾಲ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ``ಜಗನ್ನಾಥ ಭವನ''ಕ್ಕೆ ಭೇಟಿ ನೀಡಿ ಕಾರ್ಯಕರ್ತರು ಮತ್ತು ಸಾರ್ವಜನಿಕರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು, ಒಂದನೇ ತರಗತಿಯಿಂದ ಶಾಲೆಗಳನ್ನು ಆರಂಭಿಸಬೇಕೇ ಎಂಬ ಬಗ್ಗೆ ತಾಂತ್ರಿಕ ಶಿಕ್ಷಣ ಸಮಿತಿ ನಿರ್ಧಾರದಡಿ ನಿರ್ಣಯಿಸಬೇಕಾಗಿದೆ ಎಂದರು.

ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಸಂಪೂರ್ಣವಾಗಿ ಸಜ್ಜಾಗಿದೆ. ಶಿಕ್ಷಕರು ಸಹ ಶಾಲೆಗಳ ಆರಂಭಕ್ಕಾಗಿ ಉತ್ಸುಕರಾಗಿದ್ದಾರೆ. ಯಾಕೆ ಶಾಲೆಗಳನ್ನು ಆರಂಭಿಸುತ್ತಿಲ್ಲ ಎಂದು ಪೋಷಕರೂ ಶಾಲೆಗಳಿಗೆ ಬಂದು ಪ್ರಶ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಮುಖ್ಯಮಂತ್ರಿಗಳು ಮತ್ತು ಶಾಸಕರ ಇಚ್ಛಾಶಕ್ತಿಯ ಪರಿಣಾಮವಾಗಿ ರಾಜ್ಯದಲ್ಲಿ ದೊಡ್ಡ ತರಗತಿಗಳು ಆರಂಭಗೊAಡಿವೆ. ಮಕ್ಕಳ ಸಹಭಾಗಿತ್ವ ಮತ್ತು ಪೋಷಕರ ಸಹಕಾರ ಪೂರ್ಣವಾಗಿ ಲಭಿಸಿದೆ. ಬಹುತೇಕ ಶೇ 70ರಷ್ಟು ಮಕ್ಕಳು ಶಾಲೆಗಳಿಗೆ ಬರುತ್ತಿದ್ದಾರೆ ಎಂದು ವಿವರಿಸಿದರು.

ಮುಖ್ಯಮಂತ್ರಿಗಳು ಮಕ್ಕಳ ಜೊತೆ ಸಂವಾದ ನಡೆಸಿದಾಗ ಆನ್‌ಲೈನ್ ತರಗತಿಗಳಿಂದ ಹೆಚ್ಚಿನ ಪ್ರಯೋಜನ ಆಗುತ್ತಿಲ್ಲ ಎಂಬುದು ಗೊತ್ತಾಗಿದೆ. ಅನೇಕ ಮಕ್ಕಳು ಇಡೀ ದಿನ ಶಾಲಾ ತರಗತಿ ನಡೆಸಲು ಮತ್ತು ಕುಡಿಯುವ ನೀರು ಹಾಗೂ ಬುತ್ತಿ ತರಲು ಅವಕಾಶ ಕೊಡುವಂತೆ ಮುಖ್ಯಮಂತ್ರಿ ಅವರಲ್ಲಿ ಮನವಿ ಮಾಡಿದ್ದಾರೆ ಎಂದರು.

ಗ್ರಾಮೀಣ ಪ್ರದೇಶಗಳ ಶಾಲೆಗಳಲ್ಲಿ ಮೂಲಸೌಕರ್ಯ ಚೆನ್ನಾಗಿದ್ದು, ಕೋವಿಡ್ ಮಾರ್ಗಸೂಚಿ ಪಾಲನೆ ಕಷ್ಟವಾಗಲಾರದು. ಶಾಲೆಗಳ ಆರಂಭದ ಬಳಿಕ ಕೋವಿಡ್ ಸಂಖ್ಯೆಯಲ್ಲಿ ಹೆಚ್ಚಳ ಆಗಿಲ್ಲ ಎಂದೂ ಅವರು ಪ್ರಶ್ನೆಗೆ ಉತ್ತರ ನೀಡಿದರು.

ಜನಸಾಮಾನ್ಯರ ಕುಂದುಕೊರತೆ ಪರಿಹಾರಕ್ಕಾಗಿ ತಿಂಗಳಿಗೆ ಎರಡು ಬಾರಿ ಎಲ್ಲ ಸಚಿವರು ಪಕ್ಷದ ಕಾರ್ಯಾಲಯಕ್ಕೆ ಭೇಟಿ ಕೊಡಬೇಕೆಂಬ ಆಶಯಕ್ಕೆ ಅನುಗುಣವಾಗಿ ಇಲ್ಲಿಗೆ ಬಂದಿದ್ದೇನೆ. ಸಾಕಷ್ಟು ಜನ ಅಹವಾಲಯಗಳ ಜೊತೆ ಶಿಕ್ಷಣ ಕ್ಷೇತ್ರದ ಬಗ್ಗೆ ಒಂದಷ್ಟು ಒಳ್ಳೆಯ ವಿಚಾರಗಳನ್ನೂ ತಿಳಿಸಿದ್ದಾರೆ. ಕಾರ್ಯಕರ್ತರ ಭೇಟಿಗೂ ಇದು ಸದವಕಾಶ ಎಂದರು.


Tags

Post a Comment

0Comments

Post a Comment (0)