ವಿದ್ಯಾರ್ಥಿಗಳ ಮೇಲೆ ಪೊಲೀಸ್ ಲಾಠಿಪ್ರಹಾರ ಖಂಡನೀಯ- ಸಿ.ಟಿ.ರವಿ

varthajala
0


ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟಿಸುತ್ತಿದ್ದ ಅಖಿಲ ಭಾರತ ವಿದ್ಯಾರ್ಥಿ ಪರಿಷತ್‍ನ ವಿದ್ಯಾರ್ಥಿಗಳ ಮೇಲೆ ಪೊಲೀಸರ ಲಾಠಿ ಪ್ರಹಾರ ಖಂಡನೀಯ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಮತ್ತು ಶಾಸಕರಾದ ಸಿ.ಟಿ. ರವಿ ಅವರು ತಿಳಿಸಿದ್ದಾರೆ.

ವಿದ್ಯಾರ್ಥಿಗಳು ಎಂದರೆ ಈ ದೇಶದ ಶಕ್ತಿ. ಅದರಲ್ಲೂ ಎಬಿವಿಪಿ ಸಂಘಟನೆಯು ವಿದ್ಯಾರ್ಥಿಗಳಿಗೆ ಅನ್ಯಾಯವಾದಾಗ ಅವರಿಗೆ ಸೂಕ್ತ ಪ್ರತಿನಿಧಿತ್ವ ಕೊಡುವಲ್ಲಿ ತನ್ನ ಸಂಘಟನಾ ಶಕ್ತಿಯನ್ನು ನ್ಯಾಯಯುತವಾಗಿ ತೋರಿಸುತ್ತಿದೆ. ಬೆಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಅಂಕಪಟ್ಟಿ , ಹಾಸ್ಟೆಲ್ ಸಮಸ್ಯೆ, ಪದವಿ ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ನೀಡುವಲ್ಲಿ ವಿಶ್ವ ವಿದ್ಯಾನಿಲಯ  ವಿಳಂಬ ಧೋರಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ ಮಾಡುವ ವೇಳೆ ಪೊಲೀಸರು  ಲಾಠಿ ಚಾರ್ಚ್ ಮಾಡಿದ್ದಾರೆ ಎಂಬ ಸುದ್ದಿ ತಿಳಿದು ನೋವಾಯಿತು ಎಂದು ತಿಳಿಸಿದ್ದಾರೆ.

ಎಬಿವಿಪಿ ವಿದ್ಯಾರ್ಥಿಗಳ ಪ್ರತಿಭಟನೆ ವೇಳೆ ವಿಶ್ವ ವಿದ್ಯಾನಿಲಯದ  ಪಟ್ಟಭದ್ರ ಹಿತಾಸಕ್ತಿಗಳ ಗುಂಪು ಏಕಾ ಏಕಿ ಮುಗಿಬಿದ್ದಾಗ ಪೊಲೀಸರು ಸಂಯಮ ಕಳೆದುಕೊಂಡು ವರ್ತಿಸಿದ್ದು ಈ ದೌರ್ಜನ್ಯ ನೋವಿನ ಸಂಗತಿ. ಎಲ್ಲಿ ಪೆನ್ನಿನ ಮಸಿ ಮೂಡಬೇಕಿತ್ತೊ ಅಲ್ಲಿ ರಕ್ತದ ಕಲೆಗಳು ಬಿದ್ದಿವೆ. ಇದು ನಮ್ಮ ಸಂಸ್ಕತಿ ಅಲ್ಲ.  ವಿದ್ಯಾರ್ಥಿಗಳು ತಮ್ಮ ನ್ಯಾಯಯುತವಾದ ಬೇಡಿಕೆಗಳನ್ನು ಕೇಳುವುದು ಅವರ ಹಕ್ಕು. ಅವರ ಬೇಡಿಕೆಗಳನ್ನು ಕೇಳುವುದು ವಿವಿಯ  ಆದ್ಯ ಕರ್ತವ್ಯ. ವಿಶ್ವವಿದ್ಯಾನಿಲಯದ ಆಡಳಿತ ವ್ಯವಸ್ಥೆ ಅದಕ್ಕೆ ಸ್ಪಂದಿಸುವುದು ಅದರ ಕಾರ್ಯ. ಪ್ರತಿಭಟನೆ ಮಾಡಲು ವಿದ್ಯಾರ್ಥಿಗಳು ಕಾನೂನು ಪ್ರಕಾರವೇ ಪೆಲೀಸ್ ಇಲಾಖೆಯಿಂದ ಒಪ್ಪಿಗೆ ಪಡೆದಿದ್ದರೂ ಪ್ರತಿಭಟನಾ ನಿರತ ಎಬಿವಿಪಿ ಸಂಘಟನೆಯ ವಿದ್ಯಾರ್ಥಿಗಳ ಮೇಲೆ ಅಮಾನವೀಯವಾಗಿ ರಕ್ತ ಬರುವಂತೆ ಹಲ್ಲೆ ಮಾಡಿರುವುದು ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾದುದು ಎಂದು ಅವರು ತಮ್ಮ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ವಿವಿಯ ಆವರಣದಲ್ಲಿದ್ದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಷಡ್ಯಂತ್ರ ಇದಕ್ಕೆಲ್ಲಾ ಕಾರಣ. ಆ ಪಟ್ಟಭದ್ರ ಹಿತಾಸಕ್ತಿಗಳ ಕುಮ್ಮಕ್ಕಿನಿಂದ ಎಬಿವಿಪಿ ವಿದ್ಯಾರ್ಥಿ ಸಂಘಟನೆ ಮೇಲೆ ಪೆಲೀಸರು ದೌರ್ಜನ್ಯ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿದ್ದು,  ವಿದ್ಯಾರ್ಥಿಗಳ ಮೇಲೆ ಅಪ್ರಚೋದನೀಯ ಲಾಠಿ ಪ್ರಹಾರ ಮಾಡಿದ ಪೊಲೀಸರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು. ಮಾನ್ಯ ಮುಖ್ಯಮಂತ್ರಿಗಳು ಹಾಗೂ ಮಾನ್ಯ ಗೃಹ ಸಚಿವರು ಈ ಘಟನೆ ಬಗ್ಗೆ ಕೂಲಂಕಷ ತನಿಖೆಗೆ ಒಳಪಡಿಸಬೇಕು. ಮತ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.

ಮಾನ್ಯ ಉನ್ನತ ಶಿಕ್ಷಣ ಸಚಿವರು ವಿದ್ಯಾರ್ಥಿಗಳು ಮಂಡಿಸಿದ ನ್ಯಾಯಯುತ ಬೇಡಿಕೆಗಳನ್ನು ಸ್ಪಂದಿಸುವ ಕಾರ್ಯಕ್ಕೆ  ಮುಂದಾಗಬೇಕು. ಇಲ್ಲವಾದರೆ ವಿಶ್ವವಿದ್ಯಾನಿಲಯದ ಘನತೆ ಗೌರವಗಳು ಮಣ್ಣು ಪಾಲಾಗುತ್ತವೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Post a Comment

0Comments

Post a Comment (0)