ಕಾಲೇಜು ಪ್ರವೇಶಿಸಲು ನಮಗೆ ಅನುಮತಿ ನೀಡಿ, ಇಲ್ಲದಿದ್ದಲ್ಲಿ ಪ್ರತಿಭಟನೆ ನಡೆಸಲಾಗುವುದು

varthajala
0

 ಮಧುಗಿರಿ :  ಹಿಜಬ್ ಧರಿಸಿಕೊಂಡು ಕಾಲೇಜು ಪ್ರವೇಶಿಸಲು ನಮಗೆ ಅನುಮತಿ  ನೀಡಿ, ಇಲ್ಲದಿದ್ದಲ್ಲಿ ಗುರುವಾರ ಬೆಳಗ್ಗೆ ಯಾವುದೇ ವಿದ್ಯಾರ್ಥಿಗಳು ಕಾಲೇಜು ಪ್ರವೇಸಿದಂತೆ  ಬಾಗಿಲಿಲ್ಲೇ ಅಡ್ಡಗಟ್ಟಿ ಪ್ರತಿಭಟನೆ ನಡೆಸಲಾಗುವುದು ಎಂದು  15 ಕ್ಕೂ ಹೆಚ್ಚು ಮುಸ್ಲೀಂ ವಿದ್ಯಾರ್ಥಿನಿಯರು ಪಟ್ಟಣದ ಪದವಿ ಪೂರ್ವ ಕಾಲೇಜಿನ ಮುಂದೆ ಪ್ರತಿಭಟನೆ ನಡೆಸಿದ ಘಟನೆ ಬುಧವಾರ ನಡೆದಿದೆ.

ಪ್ರತಿಭಟನೆ ಯಲ್ಲಿ ಭಾಗವಹಿಸಿದ್ದ ಪ್ರಥಮ ಪಿಯು ವಿದ್ಯಾರ್ಥಿನಿ ಮುಸ್ಕಾನ್ ಮಾತನಾಡಿ ನಾವು ಮೊದಲಿನಿಂದಲು ಹಿಜಾಬ್ ಹಾಕಿಕೊಂಡು ಕಾಲೇಜಿಗೆ ಬರುತ್ತಿದ್ದು, ಆಗ ಇಲ್ಲದ ಅಭ್ಯಂತರ ಈಗೇಕೆ.   ಈಗಲೂ ನಮಗೆ ಅವಕಾಶ ನೀಡಬೇಕು. ಪಟ್ಟಣದ ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಈ ಹಿಂದಿನಿಂದಲೂ ಯಾವುದೇ  ಸಮವಸ್ತ್ರ ಜಾರಿಗೊಳಿಸಿಲ್ಲ.  ಆದರೂ ನಮಗೆ ಹಿಬಾಬ್ ಧರಿಸಿಕೊಂಡು ಕಾಲೇಜ್ ಪ್ರವೇಶಿಸಲು ಅನುಮತಿ ನೀಡುತ್ತಿಲ್ಲ.  ಬುಧವಾರ ಬೆಳಗ್ಗೆ ಎಂದಿನಂತೆ ನಾವು ಕಾಲೇಜಿಗೆ ಹಾಜರಾಗಿದ್ದೆವು.   ಕಾಲೇಜಿನಲ್ಲಿ ಪಾಠ ಕೇಳುತ್ತಿದ್ದ ನಮ್ಮನ್ನು ಪ್ರಾಧ್ಯಾಪಕರು ಬಲವಂತವಾಗಿ ಕಾಲೇಜಿನಿಂದ ಹೊರ ಹಾಕಿದ್ದಾರೆ.  ನಿಮಗೆ ಕಾಲೇಜು ಮುಖ್ಯವೋ,  ಧರ್ಮ ಮುಖ್ಯವೋ ಇವೆರಡರಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಿ ಎಂದು ಹೇಳುತ್ತಿದ್ದು,  ನಿಮಗೆ ಅಪ್ಪ  ಬೇಕೋ ಅಥವಾ ಅಮ್ಮ ಬೇಕೋ ಇಬ್ಬರಲ್ಲಿ ಒಬ್ಬರನ್ನು ಆಯ್ಕೆ ಮಾಡಿಕೊಳ್ಳಿ ಎಂದರೆ ಹೇಗೆ...?   ನಾವು ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕು.  ಇದೇ ಪರಿಸ್ಥಿತಿ ಈಗ ನಮಗೆ ಉಂಟಾಗಿದೆ. ನಮಗೆ ನಮ್ಮ ಧರ್ಮವೂ ಮುಖ್ಯ,  ಶಿಕ್ಷಣವೂ ಮುಖ್ಯ.  ಹಿಜಾಬ್ ಧರಿಸಿಕೊಂಡು ಕಾಲೇಜಿಗೆ ಪ್ರವೇಶ ನೀಡದಿದ್ದಲ್ಲಿ ಗುರುವಾರ ಬೆಳಗ್ಗೆ ಮುಸ್ಲೀಂ ವಿದ್ಯಾರ್ಥಿನಿಯರು ಕಾಲೇಜಿನ ಮುಂಭಾಗ ಅಡ್ಡ ಕೂತು ಯಾವುದೇ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡದೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಸಿದರು. 

ಮತ್ತೊಬ್ಬ ವಿದ್ಯಾರ್ಥಿನಿ ರಾಫಿಯಾ ಮಾತನಾಡಿ ಹಿಜಾಬ್ ವಿವಾದ ಆರಂಭವಾಗುವುದಕ್ಕೂ ಮುಂಚೆ ಕಾಲೇಜಿನಲ್ಲಿ ವಿದ್ಯಾರ್ಥಿನಿಯರೆಲ್ಲರೂ  ಅನ್ಯೋನ್ಯವಾಗಿದ್ದೆವು.  ಆದರೆ ಕೆಲವರು ತಮ್ಮ ಬೇಳೆ ಬೇಯಿಸಿಕೊಳ್ಳಲು ಹಿಜಾಬ್ ವಿವಾದವನ್ನು ಹುಟ್ಟು ಹಾಕಿದ್ದು, ಈಗ ಕಾಲೇಜಿನೊಳಗೆ ಹೋದರೆ ಕೆಲವರು ನಮ್ಮ ಮುಂದೆಯೇ  ಜೈಶ್ರೀರಾಮ್ ಎಂದು ಘೋಷಣೆ ಕೂಗುತ್ತಿದ್ದಾರೆ. ಈ ಹಿಂದೆ ಕಾಲೇಜಿನಲ್ಲಿ ಸರಸ್ವತಿ ಪೂಜೆ ಮಾಡಿದಾಗ ನಾವು ಸಹ ಭಾಗವಹಿಸಿದ್ದೇವೆ.  ನಮಗೆ ಯಾವುದೇ ಭೇದಭಾವವಿಲ್ಲ.  ಬೇಕಾದರೆ ಬುರ್ಖಾ ತೆಗೆದು ಕಾಲೇಜು ಪ್ರವೇಶಿಸುತ್ತೇವೆ. ಆದರೆ ಯಾವುದೇ ಕಾರಣಕ್ಕೂ ಹಿಜಾಬ್ ತೆಗೆಯುವುದಿಲ್ಲ. ಹಿಂದೂ ವಿದ್ಯಾರ್ಥಿನಿಯರಂತೆ ನಮ್ಮನ್ನೂ ಕಾಣಬೇಕು. ಅವರಿಗೆ ಕುಂಕುಮ ಇಡಲು ಅನುಮತಿ ನೀಡಿದಂತೆ ನಮಗೂ ಹಿಬಾಬ್ ಧರಿಸಲು ಅವಕಾಶ ನೀಡಿ.   ನಮಗೆ ಧರ್ಮವೂ ಬೇಕು,  ಶಿಕ್ಷಣವೂ ಬೇಕು. ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸದಂತೆ ಹೈಕೋರ್ಟ್ ತೀರ್ಪು ನೀಡಿದ್ದು, ಈ ತೀರ್ಪಿನಿಂದ ನಮಗೆ ನ್ಯಾಯ ಸಿಕ್ಕಿಲ್ಲ.  ಸುಪ್ರೀಂಕೋರ್ಟ್ ನಲ್ಲಿ ತೀರ್ಪು ಬರುವವರೆಗೂ ನಮಗೆ ಕಾಲೇಜು ಪ್ರವೇಶಿಸಲು ಅನುಮತಿ ನೀಡಿ ಇಲ್ಲದಿದ್ದಲ್ಲಿ ಪ್ರತಿಭಟನೆ ಮಾಡುತ್ತೇವೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

ವಿದ್ಯಾರ್ಥಿನಿಯರು ಆರೋಪಿಸಿದಂತೆ ಕಾಲೇಜಿನಲ್ಲಿ ಅಂತಹ ವಾತಾವರಣವಿಲ್ಲ.  ವಿದ್ಯಾರ್ಥಿಗಳೆಲ್ಲರೂ ಅನ್ಯೋನ್ಯವಾಗಿದ್ದು, ನಾವೂ ಸಹ ಹೈಕೊರ್ಟ್ ತೀರ್ಪನ್ನು ಗೌರವಿಸಬೇಕಿದ್ದು, ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸಲು ಅನುಮತಿಯಿಲ್ಲ. ಇಂತಹ ವಿಷಯಗಳಿಗೆ ವಿದ್ಯಾರ್ಥಿಗಳು ಹೆಚ್ಚಾಗಿ ಗಮನ ನೀಡದೇ ಶಿಕ್ಷಣಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು.  ಈಗಾಗಲೇ ಪೂರ್ವಭಾವಿ ಪರೀಕ್ಷೆಗಳು ನಡೆಯುತ್ತಿದ್ದು, ಇನ್ನೇನು ಕೆಲವೇ ದಿನಗಳಲ್ಲಿ ಮುಖ್ಯ ಪರೀಕ್ಷೆಗಳು ನಡೆಯಲಿದ್ದು,  ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲು ಸಜ್ಜಾಗಬೇಕು - ಅಶ್ವಥ್ ನಾರಾಯಣ್,  ಪ್ರಾಂಶುಪಾಲರು. 

ವರದಿ: ನಾಗೇಶ್ ಜೀವಾ ಮಧುಗಿರಿ.

Post a Comment

0Comments

Post a Comment (0)