ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ

varthajala
0

 🕉️ ಓಂ ಶ್ರೀ ಗುರುಭ್ಯೋ ನಮಃ 🕉️

*ಗುರು ಪೂರ್ಣಿಮಾ*

ಆಷಾಢ ಮಾಸದ ಹುಣ್ಣಿಮೆಯ ದಿನ ನಾವು ಆಚರಿಸುವ ಶ್ರೇಷ್ಠವಾದ ಹಬ್ಬವೆಂದರೆ “ಗುರು ಪೂರ್ಣಿಮೆ”. ಈ ದಿನ ನಾವು ನಮ್ಮ ಗುರುಗಳಿಗೆ ವಂದನೆ ಸಲ್ಲಿಸುವ ದಿನ. ಗುರುವಿನ ಮಹತ್ವವನ್ನು ಸಾರುವ ದಿನ. ಗುರು ನಮಗೆ ಜೀವನದಲ್ಲಿ ಸರಿಯಾದ ದಿಕ್ಕು ಸೂಚಿಸುವ, ನಮ್ಮ ಕೈ ಹಿಡಿದು ನಡೆಸುವ, ಪರಮಾತ್ಮನ ಅರಿವನ್ನು ತಿಳಿಯಲು ನಮ್ಮೊಳಗಿರುವ ನಮ್ಮ ಆತ್ಮವನ್ನು ಜಾಗೃತಿಗೊಳಿಸುವ ಮಹತ್ವದ ವ್ಯಕ್ತಿ. ಆಧ್ಯಾತ್ಮದ ಹಾದಿಯಲ್ಲಿ ನಮ್ಮನ್ನು ನಡೆಸಿ, ನಮ್ಮ ಗುರಿ ಮುಟ್ಟಲು ಸಹಾಯ ಮಾಡುವವನೇ “ಗುರು”. ಹುಡುಕಿದರೆ ಸಿಗುವವನಲ್ಲ ಗುರು, ನಮ್ಮನ್ನು ಹುಡುಕಿ, ನಾವು ಗುರುವನ್ನು ಕಾಣುವ ಮಟ್ಟಿಗೆ ಸಾಧನೆ ಮಾಡಿದ್ದರೆ ತಾನಾಗೇ ನಮ್ಮ ಬಳಿಗೆ ಬರುವವನು ಕಷ್ಟಸಾಧ್ಯ ಎನ್ನುತ್ತಾ ಗುರುವಿನ ಮಹತ್ವವನ್ನು ವಿವರಿಸುತ್ತಾರೆ.

ಆದಿ ಗುರು ಶ್ರೀ ಶಂಕರಾಚಾರ್ಯರು ಹಿಂದೂ ಧರ್ಮದಪುನರ್ಸ್ಥಾಪನೆ ಮತ್ತು ಪ್ರಚಾರ ಕಾರ್ಯಕ್ಕಾಗಿಯೇ ಬಂದವರು. ಅವರು ಅದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ನಂತರ ಬಂದವರು ಶ್ರೀ ರಾಮಾನುಜಾಚಾರ್ಯರು ಮತ್ತು ಇವರು ವಿಶಿಷ್ಟಾದ್ವೈತ ಸಿದ್ಧಾಂತವನ್ನು ಪ್ರತಿಪಾದಿಸಿದರು. ಇವರಿಬ್ಬರ ನಂತರ ಬಂದವರು ಶ್ರೀ ಮಧ್ವಾಚಾರ್ಯರು. ಆಚಾರ್ಯ ತ್ರಯರೆಂದೇ ಗುರುತಿಸಲ್ಪಡುವರು ನಮ್ಮ ಈ ಮೂವರು ಶ್ರೇಷ್ಠ ಗುರುಗಳು. ಅದ್ವೈತ, ವಿಶಿಷ್ಟಾದ್ವೈತ ಹಾಗೂ ದ್ವೈತ ಸಿದ್ಧಾಂತಗಳನ್ನು ಅನುಸರಿಸುವ ಗುರು ಪರಂಪರೆಯೇ ಬೆಳೆಯಿತು ಮತ್ತು ಈಗಲೂ ಅನೇಕ ಶಾಖೆಗಳಾಗಿ ವಿಭಜಿತವಾಗಿದ್ದರೂ, ಪರಂಪರೆ ಮುಂದುವರೆದಿದೆ. ಈ ಪರಂಪರೆಯಲ್ಲಿ ಈಗಿರುವ ಗುರುವಿನ ಗುರುವಿಗೆ ಪರಮಗುರು ಎಂದೂ, ಪರಮ ಗುರುವಿನ ಗುರುವನ್ನು ಪರಾಪರ ಗುರು ಎಂದೂ, ಪರಾಪರ ಗುರುವಿನ ಗುರುವನ್ನು ಪರಮೇಷ್ಠಿ ಗುರು ಎಂದೂ ಗುರುತಿಸಲ್ಪಡುತ್ತಾರೆ. “ಗುರು ಪೂರ್ಣಿಮೆ’ ಯಂದುಸಮಸ್ತ ಗುರು ಪರಂಪರೆಯೇ ಪೂಜಿಸಲ್ಪಡುತ್ತದೆ.

ವೇದದಲ್ಲಿನ ಬ್ರಹ್ಮ ತತ್ವವನ್ನು ಅರಿತಿದ್ದ ವಿಷ್ಣುವಿನ ಅವತಾರವೆಂದೇ ಕರೆಯಲ್ಪಡುವ ಶ್ರೀ ವೇದವ್ಯಾಸರನ್ನು ನಾವು ವಿಶೇಷವಾಗಿ ನಮ್ಮ ಗುರು ಪರಂಪರೆಯ ಜೊತೆಗೇ “ಗುರು ಪೂರ್ಣಿಮೆ” ಯಂದು ಪೂಜಿಸುತ್ತೇವೆ.ಲೋಕಗುರು ಪರಮಗುರು ಎಂದೇ ಪ್ರಖ್ಯಾತರಾಗಿದ್ದರು ಶ್ರೀ ವೇದವ್ಯಾಸರು. ವೇದಗಳನ್ನು ನಾಲ್ಕು ವಿಭಾಗಗಳಾಗಿ ವಿಂಗಡಿಸಿದ್ದರಿಂದ ಇವರನ್ನು ವೇದವ್ಯಾಸರೆಂದು ಕರೆದರು. ಇಡೀ ಮಾನವ ಕುಲಕ್ಕೇ ಒಳಿತಾಗಲೆಂದು ಮತ್ತು ವೇದಗಳ ರಹಸ್ಯ ಸಾಮಾನ್ಯರೂ ಅರಿಯುವಂತಾಗ ಬೇಕೆಂದು ಅವರು ನಮಗಾಗಿ “ಮಹಾಭಾರತ”ವೆಂಬ ಲಕ್ಷ್ಯ ಶ್ಲೋಕಗಳಿರುವ “ಪಂಚಮವೇದ”ವನ್ನು ರಚಿಸಿ ಕೊಟ್ಟರು. ಜೊತೆಗೇ ಭಾಗವತವನ್ನೂ ಮತ್ತು ಹದಿನೆಂಟು ಪುರಾಣಗಳನ್ನೂ ರಚಿಸಿಕೊಟ್ಟರು. ಇಂತಹ ಪುಣ್ಯಾತ್ಮರು ವೇದವ್ಯಾಸರು.ಆದ್ದರಿಂದಲೇ ಅವರನ್ನು ಲೋಕಗುರುವೆಂದು ಕರೆದು ಶ್ರದ್ಧೆ ಹಾಗೂ ಭಕ್ತಿಯಿಂದ ಗುರು ಪೂರ್ಣಿಮೆಯಂದು ಪೂಜಿಸುತ್ತೇವೆ.

“ಗುರು” ಎನ್ನುವುದು ಒಬ್ಬ ವ್ಯಕ್ತಿ ಎಂದು ನೋಡದೆ ನಾವು ಒಂದು ಶಕ್ತಿ ಎಂದು ಅರ್ಥೈಸಿ ಕೊಂಡರೆ ನಮಗೆ ಗುರುವಿನ ಮಹತ್ವ ಇನ್ನೂ ಹೆಚ್ಚು ಆಳವಾಗಿ ತಿಳಿಯುತ್ತದೆ. ಬೇರೆ ಬೇರೆ ಗುರುಗಳು ಭೌತಿಕ ಶರೀರದಿಂದ ಅಂದರೆ ಹೊರಗಿನಿಂದ ನೋಡಲು ವ್ಯತ್ಯಾಸವಾಗಿದ್ದರೂ ಅವರೆಲ್ಲರ ಒಳಗಿನ “ಗುರು ತತ್ವ” ಮಾತ್ರ ಒಂದೇ ಆಗಿರುತ್ತದೆ. ಅವೆರೆಲ್ಲರೂ ಹೊರ ಹೊಮ್ಮಿಸುವ, ಪಸರಿಸುವ ಲಹರಿಗಳು ತುಂಬಾ ಚೈತನ್ಯದಾಯಕವಾಗಿರುತ್ತದೆ. ಗುರುವಿಗೆ ಯಾವಾಗಲೂ ಶಿಷ್ಯನಉ ನ್ನತಿಯ, ಬೆಳವಣಿಗೆಯ ಚಿಂತನೆಯೇ ಆಗಿರುತ್ತದೆ.ಗುರು ತನ್ನ ಶಿಷ್ಯನನ್ನು ತಾನೇ ಹುಡುಕಿ ಕೊಳ್ಳುತ್ತಾನೆ. ಶಿಷ್ಯ ಸಿಕ್ಕಿದ ಕ್ಷಣವೇ ಗುರು ಶಿಷ್ಯನ ಏಳಿಗೆಯ “ಸಂಕಲ್ಪ” ಮಾಡಿಕೊಂಡು ಬಿಟ್ಟಿರುತ್ತಾನೆ.

ನಮ್ಮ ಉಪನಿಷತ್ತು, ಪುರಾಣಗಳು, ವೇದ, ಶಾಸ್ತ್ರಗಳೆಲ್ಲದರಲ್ಲೂ ಮತ್ತು ವಿಶೇಷವಾಗಿ ಭಕ್ತಿ ಮಾರ್ಗದಲ್ಲೂ ಗುರುವಿಗೆ ಅತ್ಯಂತ ಮಹತ್ವದ ಸ್ಥಾನವಿದೆ. ಭಗವದ್ಗೀತೆಯಲ್ಲಿ ಶ್ರೀಕೃಷ್ಣ – ಅರ್ಜುನರ ಸಂಬಂಧ ಮತ್ತು ರಾಮಾಯಣದಲ್ಲಿ ಶ್ರೀರಾಮ – ಹನುಮರ ಸಂಬಂಧಗಳು ಗುರು – ಶಿಷ್ಯರ ಸಂಬಂಧಕ್ಕೆ ಅತಿ ಸೂಕ್ತವಾದ ನಿದರ್ಶನಗಳು.

ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿರುವ ಶ್ರೀ ಯೋಗಿನಾರೇಯಣರ ಬ್ರಹ್ಮಾಂಡಪುರಿ ಶತಕದಲ್ಲಿ ಕೂಡ ತಾತಯ್ಯನವರು ಗುರುವಿನ ಮಹತ್ವವನ್ನು ಸಾರುವ ಮಾತುಗಳನ್ನು ಆಡಿದ್ದಾರೆ :

ಬ್ರಹ್ಮರುದ್ರುಲಕೈನ – ಭಾವಿಂಪ ಶಕ್ಯಮಾ

ಆಧ್ಯಾತ್ಮವಿದ್ಯ ಗುರುಕೀಲು ಮಹಿಮ

ಆಧ್ಯಾತ್ಮ ವಿದ್ಯೆಗೆ ಗುರುವಿನ ಮಾರ್ಗದರ್ಶನ ಬೇಕೇ ಬೇಕು ; ಗುರುವಿಲ್ಲದಿದ್ದರೆ ಬ್ರಹ್ಮರುದ್ರರಿಗೂ ಅವಶಕ್ಯ. ಆತ್ಮ ಸಾಕ್ಷಾತ್ಕಾರವಾಗಲು ಆಧ್ಯಾತ್ಮವಿದ್ಯ “ಗುರುಕೀಲು ಮಹಿಮೆ” – ಎಂಬುದು ಆಳವಾದ ತತ್ವಾರ್ಥ ಪದ. ಇದು ಮನಸ್ಸಿನ ಸಂಸ್ಕಾರಕ್ಕೆ ಹತ್ತಿರವಾದದ್ದು. ಭ್ರಮೆಗಳನ್ನು ಸ್ಪಷ್ಟವಾಗಿ ಹೇಳಿದ್ದಾರೆ. “ಗುರುಕೀಲು” ಎಂದರೆ ಗುರುದೇವನು ಕಲಿಸಿಕೊಟ್ಟ ಕೀಲಿಕೈನಂತಹ ಸಾಧನಸೂತ್ರವೆಂದು ಅರ್ಥವಾಗುತ್ತದೆ. ತಾತಯ್ಯನವರು ಗುರುವಿಗೆ ‘ಮಾತೃಸ್ಥಾನ’ ಕೊಟ್ಟಿದ್ದಾರೆ. ಯೋಗ್ಯ ಹಾಗೂ ಸದ್ಗುರುವಿನ ಪಾದಗಳಿಗೆ ಶರಣಾದರೆ ಆತ ಉಪದೇಶ ಕೊಟ್ಟು ಉದ್ಧರಿಸುತ್ತಾನೆ. ನೀನು ಹುಡುಕುತ್ತಿರುವ ಕುರಿಮರಿ ನಿನ್ನ ಕಂಕುಳಲ್ಲೇ ಇದೆ ಎಂದು ನಮ್ಮಲ್ಲೇ ಇರುವ ದೇವರನ್ನು ತೋರಿಸುತ್ತಾನೆ, ಸಾಧನಮಾರ್ಗ ಕಲಿಸುತ್ತಾನೆ. ಅದೇ ಗುರುಮಾರ್ಗ, ಅದು ಗುರುಸೂತ್ರ, ಅದೇ ಗುರುಕೀಲು. ಮನಸ್ಸನ್ನು ನಿಲ್ಲಿಸಲು ಜ್ಞಾನಬೋಧೆ ಮಾಡಿ ಗುರುವು ಸಾಧನಮಾರ್ಗ ತೋರಿಸುತ್ತಾನೆ. ಗುರು ಪರಂಪರೆ ಹಾಗೂ ಗುರು-ಶಿಷ್ಯರ ಅತ್ಯಂತ ನಿಕಟ ಸಂಬಂಧವು ಮುಂದುವರೆದು ನಮ್ಮ ದಾಸಸಾಹಿತ್ಯದಲ್ಲೂ ಗಾಢವಾಗಿ ಕಾಣಬಹುದಾಗಿದೆ.

🙏🙏🙏🙏🙏

ಕೃಷ್ಣಾರ್ಪಣಮಸ್ತು

ಸುವಿಚಾರ ಸಂಗ್ರಹ

Post a Comment

0Comments

Post a Comment (0)