ಬಿಐಇಸಿಯಲ್ಲಿ ಶಿಕ್ಷಣ ಹಾಗೂ ಕೌಶಲ್ಯ ಕುರಿತ ಏಷಿಯನ್ ಶೃಂಗಸಭೆಗೆ ಸಿಎಂ ಚಾಲನೆ - SHIKSHANA RATNA

Breaking

Post Top Ad

Responsive Ads Here

Wednesday, 21 September 2022

ಬಿಐಇಸಿಯಲ್ಲಿ ಶಿಕ್ಷಣ ಹಾಗೂ ಕೌಶಲ್ಯ ಕುರಿತ ಏಷಿಯನ್ ಶೃಂಗಸಭೆಗೆ ಸಿಎಂ ಚಾಲನೆ

 ಬಿಐಇಸಿಯಲ್ಲಿ ಶಿಕ್ಷಣ ಹಾಗೂ ಕೌಶಲ್ಯ ಕುರಿತ ಏಷಿಯನ್ ಶೃಂಗಸಭೆಗೆ ಸಿಎಂ ಚಾಲನೆ

ಶಿಕ್ಷಣದ ಕುರಿತು ಬೆಂಗಳೂರು ಘೋಷಣೆ - ವರದಿ ಸಲ್ಲಿಸಲು ಮುಖ್ಯಮಂತ್ರಿಗಳ ಸಲಹೆ


ಬೆಂಗಳೂರು, ಸೆಪ್ಟೆಂಬರ್ 21: ಮುಂದಿನ ಪೀಳಿಗೆಯ ಒಳಿತನ್ನು  ಡೈಡ್ಯಾಕ್ಟಿಕ್  ಶೃಂಗಸಭೆ ಒಳಗೊಂಡಿದ್ದು  ಪರಿಹಾರವನ್ನು ಒದಗಿಸುವ ವೇದಿಕೆಯಾಗಬೇಕು. ಕಾರ್ಯಾಗಾರಾದ ವರದಿಯನ್ನು ಶಿಕ್ಷಣದ ಕುರಿತ ಬೆಂಗಳೂರು ಘೋಷಣೆ ಎಂದು ಕರೆಯುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗಳು ಸಲಹೆ ನೀಡಿದರು. 

ಅವರು ಇಂದು ಇಂಡಿಯಾ ಡೈಡ್ಯಾಕ್ಟಿಕ್ ಅಸೋಸಿಯೇಷನ್ ಆಯೋಜಿಸಿದ್ದ ಶಿಕ್ಷಣ ಮತ್ತು ಕೌಶಲ್ಯ ಕುರಿತ ಏಷಿಯನ್ ಶೃಂಗ ಸಭೆಯನ್ನು  ಉದ್ಘಾಟಿಸಿ ಮಾತನಾಡಿದರು. 

ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯ ಹಾಗೂ  ಪರಿಹಾರಗಳನ್ನು ಅನುಷ್ಠಾನಕ್ಕೆ  ತರಲು ಸರ್ಕಾರ ಸಿದ್ದವಿದೆ ಎಂದರು. 

ಶೈಕ್ಷಣಿಕ ವ್ಯವಸ್ಥೆ ಸಹಜ ಕಲಿಕೆಗೆ ಪೂರಕವಾಗಿರಬೇಕು

ಶಿಕ್ಷಣ ನೀತಿ, ಕಲಿಸುವ ವಿಧಾನ ಬದಲಾಗಿದೆ. ಬದಲಾವಣೆ ಸರಿಯಾದ ದಿಕ್ಕಿನಲ್ಲಿರಬೇಕು ಹಾಗೂ ಉತ್ತಮ ಶಿಕ್ಷಣ ವ್ಯವಸ್ಥೆ ರೂಪಿಸುವಂತಿರಬೇಕು. ಶಿಕ್ಷಣ ಯಾವುದೇ ಪದವಿ ಪಡೆದಾಕ್ಷಣ ಮುಕ್ತಾಯವಾಗುವುದಿಲ್ಲ. ಅವೆಲ್ಲಾ ಕೆಲವು ಮೈಲಿಯುಗಳಷ್ಟೇ. ನಾವು ಜೀವನಪೂರ್ತಿ ವಿದ್ಯಾರ್ಥಿಗಳೇ.  ಮಕ್ಕಳಲ್ಲಿ ಅಗಾಧವಾದ ಕಲಿಕಾ ಸಾಮರ್ಥ್ಯವಿರುತ್ತದೆ. 

ಶೈಕ್ಷಣಿಕ ವ್ಯವಸ್ಥೆ ಸಹಜ ಕಲಿಕೆಗೆ ಪೂರಕವಾಗಿರಬೇಕು. ಯಾವಾಗ ಎಷ್ಟು ಕಲಿಸಬೇಕು ಎನ್ನುವ ಬಗ್ಗೆ ಸ್ಪಷ್ಟತೆ ಇರಬೇಕು. ನೂತನ ತಂತ್ರಜ್ಞಾನ ಹಾಗೂ ವಿಧಾನಗಳಿಂದ  ಎರಡು ಸಾಧ್ಯತೆಗಳಿವೆ. ವಿದ್ಯಾರ್ಥಿಗಳು ಬೇಗನೆ ಹೊಂದಿಕೊಂಡು ಕಲಿತುಕೊಳ್ಳಬಹುದು ಮತ್ತೊಂದು ವಿದ್ಯಾರ್ಥಿಗಳಿಗೆ ಈ ಪರಿಕಲ್ಪನೆಯನ್ನು ದೃಶ್ಯ ಮಾಧ್ಯಮ ಮುಖಾಂತರ ಕಲಿಯಬಹುದು. ಇದರಿಂದ  ವಿಶ್ಲೇಷಣಾ ಸಾಮರ್ಥ್ಯ ಕಡಿಮೆಯಾಗಬಹುದು. ಮಕ್ಕಳು ಸಹಜವಾಗಿ , ಸರಳವಾಗಿ ಕಲಿಯುವುದರ ಜೊತೆಗೆ ಅದನ್ನು ಖುಷಿಯಿಂದ ಕಲಿಯಬೇಕು. ಮಕ್ಕಳ ಮಟ್ಟದಲ್ಲಿ ಆಲೋಚಿಸಿ ನೀತಿ ನಿರೂಪಿಸಬೇಕು ಎಂದರು. 


ನೈಜ ಪರಿಹಾರ ನೀಡುವತ್ತ ಎಲ್ಲಾ ತಂತ್ರಜ್ಞಾನ ಒತ್ತು ನೀಡಬೇಕು

ಉನ್ನತ ಶಿಕ್ಷಣ ಇನ್ನಷ್ಟು ಸವಾಲುಗಳನ್ನು  ಎಸೆಯುತ್ತದೆ. ಯಾವುದೇ ವಿದ್ಯಾರ್ಥಿಗೆ ಇದು  ಬದಲಾವಣೆಯ ಘಟ್ಟ. ಈ ನಿಟ್ಟಿನಲ್ಲಿ ಉನ್ನತ ಶಿಕ್ಷಣದ ಜವಾಬ್ದಾರಿ ಹೆಚ್ಚಿದೆ. ವಿದ್ಯಾರ್ಥಿ ತನ್ನ ವೃತ್ತಿಯನ್ನು ಆಯ್ಕೆ ಮಾಡಿ ಅದರಲ್ಲಿ ಯಶಸ್ವಿಯಾಗಲು ಉನ್ನತ ಶಿಕ್ಷಣ ಸಹಕಾರಿಯಾಗಿದೆ. ಪರಿಹಾರಗಳು ನೈಜ ಪರಿಹಾರವನ್ನು ಒದಗಿಸಬೇಕು. ಪ್ರತಿ ದಿನ ಹೊಸ ಆಪ್ ಗಳು ಹೊರಬರುತ್ತಿದ್ದರೂ ಬಹಳ ಸ್ಥಳೀಯವಾಗಿ ಹಾಗೂ ಜಾಗತಿಕವಾಗಿ ಪರಿಣಾಮಕಾರಿಯಾಗಿಲ್ಲ. ನೈಜ ಪರಿಹಾರ ನೀಡುವತ್ತ ಎಲ್ಲಾ ತಂತ್ರಜ್ಞಾನ ಒತ್ತು ನೀಡಬೇಕು ಎಂದರು. 

ವಿದ್ಯಾರ್ಥಿ ಕೇಂದ್ರಿತ ಯೋಜನೆಗಳು

ಕರ್ನಾಟಕ ಶಿಕ್ಷಣದಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ಅತ್ಯುತ್ತಮ ಶಿಕ್ಷಣ ಸಂಸ್ಥೆಗಳು ನಮ್ಮಲ್ಲಿವೆ. ಮಹಾರಾಜರ ಕಾಲದಿಂದಲೂ ಪ್ರಾಥಮಿಕ, ಉನ್ನತ ಹಾಗು ಕಾಲೇಜು ಶಿಕ್ಷಣದಲ್ಲಿ ಅತ್ಯುತ್ತಮ ಸಂಸ್ಥೆಗಳು ನಮ್ಮ ರಾಜ್ಯದಲ್ಲಿವೆ. ಜ್ಞಾನ ಮತ್ತು ಧ್ಯಾನವನ್ನು ಶಿಕ್ಷಣದಲ್ಲಿ ನಮ್ಮ ಹಿರಿಯರು ಸೇರ್ಪಡೆ ಮಾಡಿದ್ದಾರೆ. ಧ್ಯಾನ ಉತ್ತಮ ಆಲೋಚನೆಗಳನ್ನು ಹಾಗೂ ಜ್ಞಾನ, ವಿಶ್ವವನ್ನು ಎದುರಿಸುವ  ಸಾಮರ್ಥ್ಯವನ್ನು ಒದಗಿಸುತ್ತದೆ ಎಂದರು. ತಂತ್ರಜ್ಞಾನ, ತಾಂತ್ರಿಕ ಶಿಕ್ಷಣದಲ್ಲಿ ರಾಜ್ಯ ಎಂದೂ ಹಿಂದುಳಿದಿಲ್ಲ. 400 ಆರ್.ಅಂಡ್ ಡಿ ಕೇಂದ್ರಗಳು ಬೆಂಗಳೂರಿನಲ್ಲಿವೆ. ಅದು ನಮ್ಮ ಜ್ಞಾನದ ಶಕ್ತಿ. ತಾಂತ್ರಿಕ ಶಿಕ್ಷಣ ದ ಖಾಸಗೀಕರಣ ಮೊದಲು ಆಗಿದ್ದು ಕರ್ನಾಟಕದಲ್ಲಿ.ನಮ್ಮ ಸರ್ಕಾರ ಹಲವು ಪ್ರಮುಖ ನಿರ್ಧಾರಗಳನ್ನು ಕೈಗೊಂಡಿದೆ. ಏಳು ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿ ಯಲ್ಲಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಮುಂದಿನ ವರ್ಷ ಐಐಟಿ ಮಾದರಿಯ ಕೆಐಟಿ ಸಂಸ್ಥೆಗಳು  ರಾಜ್ಯ ದಲ್ಲಿರಲಿವೆ. ಎಂಟು ವಿಶೇಷ ವಿಶ್ವವಿದ್ಯಾಲಯಗಳನ್ನು ಸ್ಥಾಪನೆ ಮಾಡಲಾಗುತ್ತಿದೆ.  ಈ ಎಲ್ಲಾ ಯೋಜನೆಗಳು ವಿದ್ಯಾರ್ಥಿ ಕೇಂದ್ರಿತವಾಗಿವೆ. ಶಿಕ್ಷಣ ಪದವಿಯೊಂದಿಗೆ ಮುಕ್ತಾಯವಾಗಬಾರದು. ಸಮಾಜದ ಸಂಸ್ಕೃತಿ ಹಾಗೂ ಉದ್ಯೋಗ ಪ್ರಪಂಚದೊಂದಿಗೆ ಸರಾಗವಾಗಿ ಬೆರೆಯುವಂತಿರಬೇಕು. ಸಮಾಜದಿಂದ ಬಂದಿದ್ದು, ಸಮಾಜಕ್ಕೆ ಹಿಂತಿರುಗಬೇಕು.ಶಿಕ್ಷಣ,  ಸುಸ್ಥಿರ, ನವೀಕರಿಸಬಹುದಾದ   ವ್ಯವಸ್ಥೆಯಾಗಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

No comments:

Post a Comment

Post Bottom Ad

Responsive Ads Here

Pages