"ಭಗವದ್ಗೀತೆ ಒಂದು ಚಿಂತನೆ" (ಡಿಸೆಂಬರ್ 3, ಶನಿವಾರ "ಗೀತಾ ಜಯಂತಿ" ಪ್ರಯುಕ್ತ ಈ ಲೇಖನ)

varthajala
0

"ಕರ್ಮಣ್ಯೇವಾಧಿಕಾರಸ್ತೇ ಮಾಫಲೇಷುಕದಾಚನ " ಎಂಬ ಶ್ಲೋಕ ತಿಳಿಯದವರೇ ಇಲ್ಲ.ಇದು ಭಗವದ್ಗೀತೆಯ ಏಳುನೂರು ಶ್ಲೋಕಗಳಲ್ಲಿ ಒಂದು ಶ್ಲೋಕ."ನಿನ್ನ ಕೆಲಸ ನೀನು ಮಾಡು ಫಲಾಫಲಗಳನ್ನು ನನಗೆ ಬಿಡು" ಎಂಬ ಅರ್ಥ ಕೊಡುವ ಶ್ಲೋಕ.ಇದರಂತೆ ಬಾಳಿದವನಿಗೆ ದುಃಖ ಇರುವುದಿಲ್ಲ.

ಏಳುನೂರು ಶ್ಲೋಕಗಳುಳ್ಳ ಈ ಭಗವಂತನ ವಾಣಿ, ಅರ್ಥಮಾಡಿಕೊಳ್ಳಲು ಹೋದರೆ ಎಷ್ಟೋ ಒಳ ಅರ್ಥಗಳನ್ನು ತೋರಿಸುತ್ತಾ, ತನ್ನ ದಳಗಳನ್ನು ಒಂದೊಂದೇ ಬಿಚ್ಚಿ ಅರಳುವ ಹೂವಿನಂತೆ ತೆರೆದುಕೊಳ್ಳುತ್ತದೆ.ಆಧ್ಯಾತ್ಮದ ಅಂತರಾಳಕ್ಕೆ ಕರೆದುಕೊಂಡು ಹೋಗಿ, ನಮ್ಮ ಸಂಶಯಗಳಿಗೆಲ್ಲಾ ಉತ್ತರ ನೀಡುತ್ತದೆ.

ಯಾವುದೇ ಪ್ರಾಣಿಗೂ ಅತ್ಯಂತ ಭಯಾನಕ ಆಗಿರುವುದು ಮೃತ್ಯು! ಎಲ್ಲಾ ಪ್ರಾಣಿಗಳೂ, ಪಕ್ಷಿಗಳೂ, ಜಲಚರಗಳಿಗೂ, ದೇವ ತನ್ನ ಪ್ರಾಣರಕ್ಷಣೆ ಮಾಡಿಕೊಳ್ಳುವ ವಿದ್ಯೆ ಅಥವಾ ಸೌಲಭ್ಯ ಕರುಣಿಸಿರುತ್ತಾನೆ.ಉದಾಹರಣೆಗೆ, ಆಮೆ ಮುಂತಾದ ನಿಧಾನವಾಗಿ ನಡೆಯುವ ಪ್ರಾಣಿಗಳಿಗೆ ತಮ್ಮ ‌ಮನೆ ಬೆನ್ನ ಮೇಲೆ ಹೊತ್ತು ಅಪಾಯ ಬಂದಾಗ ಆ ಕಲ್ಲಿನಂತಹ ಮನೆಯಲ್ಲಿ ಅಡಗಿ ಜೀವ ಉಳಿಸಿಕೊಳ್ಳುವ ಶಕ್ತಿ ಕೊಟ್ಟಿದ್ದಾನೆ, ಜಿಂಕೆಗೆ ಓಡುವ ಶಕ್ತಿ, ವಿಷ ಜಂತು ಗಳಿಗೆ ಕಚ್ಚಿ ಎಚ್ಚರಿಕೆ ತಪ್ಪಿಸುವ ಶಕ್ತಿ.ಇತ್ಯಾದಿ.

ಆದರೂ ಎಲ್ಲರಿಗೂ ಸಾವು ಭಯಾನಕವೇ!ಅದರಲ್ಲೂ ಯೋಚನೆ ಮಾಡುವ ಶಕ್ತಿ ಇರುವ ಮಾನವನಿಗೆ, ಸಾವು ಅರ್ಥವಾಗದ ಒಗಟು.ಸಾವಿನ ನಂತರ ಏನಾಗುತ್ತದೆ ಎಂಬುದೇ ಯಕ್ಷಪ್ರಶ್ನೆ.ಏಕೆಂದರೆ, ಸತ್ತವರು ಹಿಂದಿರುಗಿಲ್ಲ!ಅನುಭವ ಹಂಚಿಕೊಂಡಿಲ್ಲ!

ಆದರೆ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಇದನ್ನು ಸವಿಸ್ತಾರವಾಗಿ ತಿಳಿಸುತ್ತಾನೆ. ಗಾಳಿ ಸುವಾಸನೆ ಹೊತ್ತು ಹೋಗುವಂತೆ, ಆತ್ಮ ಒಂದು ಜರ್ಜರಿತ ವಾದ ವಾಸಯೋಗ್ಯವಲ್ಲದ ದೇಹದಿಂದ ಮನಸ್ಸು ಮತ್ತು ಇಂದ್ರಿಯಗಳ ಜೊತೆ ಹೊರಗೆ ಬಂದು, ಮತ್ತೊಂದು ದೇಹ ಪ್ರವೇಶಿಸುತ್ತದೆ.ಈ ರೀತಿ ನಾವು ದೇಹಕ್ಕೆ ಹಾಕಿದ ಬಟ್ಟೆ ಕೊಳೆ ಆದರೆ ಹರಿದರೆ ಹೇಗೆ ಬದಲಿಸುವೆವೋ ಹಾಗೆ ಆತ್ಮ ದೇಹವನ್ನು ಬದಲಾಯಿಸುತ್ತಾನೆ ಎಂದು ಶ್ರೀ ಕೃಷ್ಣ ತಿಳಿಸುತ್ತಾನೆ.

ಆದ್ದರಿಂದ ನಾಶವಾಗುವ ದೇಹದ ವ್ಯಾಮೋಹ ಬಿಡು.ಶಾಶ್ವತವಾದ ಆತ್ಮನಲ್ಲಿ ಮನಸ್ಸನ್ನು ನಿಲಿಸು.ಆತ್ಮೋದ್ಧಾರದ ಮಾರ್ಗದಲ್ಲಿ ಜೀವನ ನಡೆಸು ಎಂದು ಹೇಳುತ್ತಾನೆ.

ಆತ್ಮೋದ್ಧಾರಕ್ಕೆ ಇರುವ ಮಾರ್ಗಗಳನ್ನು ಒಂದೊಂದೇ ವಿವರಿಸುತ್ತಾ, ಜ್ಞಾನ ಮಾರ್ಗ ಅಥವಾ ಸಾಂಖ್ಯ ಯೋಗ, ಕರ್ಮ ಯೋಗ, ಧ್ಯಾನ ಯೋಗ,ಭಕ್ತಿಯೋಗ ಎಲ್ಲವನ್ನೂ ವಿವರಿಸುತ್ತಾನೆ.ಕರ್ಮಸನ್ಯಾಸಯೋಗ ಎಂದರೆ ಫಲಾಪೇಕ್ಷೆ ಇಲ್ಲದೆ ನಿಷ್ಕಾಮ ಕರ್ಮ ಮಾಡಿ ಪರಮಾತ್ಮನಿಗೆ ಸಮರ್ಪಿಸು ಎಂದು ಹೇಳುತ್ತಾನೆ.

ಭಗವಂತ ಶ್ರೀ ಕೃಷ್ಣ ಯಾವುದೇ ಮಾರ್ಗದಲ್ಲಿ ನೀನು ಬಂದರೂ ನನ್ನನ್ನೇ ತಲುಪುವೆ ಎಂದು ಹೇಳುವ ಮೂಲಕ ಎಲ್ಲಾ ಮಾನವರನ್ನೂ ಪ್ರೀತಿಸುವವನು ಎಂಬ ಸತ್ಯ ಅರ್ಥಮಾಡಿಸುತ್ತಾನೆ.

ಕೆಲವರಿಗೆ ಬುದ್ಧಿ ಶಕ್ತಿ ಬಹಳ ಅವರು ತಾತ್ವಿಕ ವಿಚಾರಗಳನ್ನು ಚರ್ಚೆ ಮಾಡುವ ಜ್ಞಾನ ಜಿಜ್ಞಾಸುಗಳು .ಸನ್ಯಾಸ ಸ್ವೀಕರಿಸಿ ಕೇವಲ ಪರಮಾತ್ಮನ ಚಿಂತನೆಯಲ್ಲೇ ಇರುವವರು ಇವರಿಗೆ ಯಾವ ಮೋಕ್ಷ ಸುಖ ಕೊಡುವೆನೋ ಅದೇ ಆನಂದವನ್ನು ನಿಷ್ಠೆಯಿಂದ ತಮ್ಮ ಧರ್ಮಕ್ಕನುಗುಣವಾದ ಕರ್ಮ ಆಚರಿಸುವವರಿಗೆ, ಫಲಾಪೇಕ್ಷೆ ತ್ಯಜಿಸಿದವರಿಗೆ ಕೊಡುವೆ ಎನ್ನುತ್ತಾ ಕರ್ಮಮಾರ್ಗದಲ್ಲಿ ಇರುವವರನ್ನೂ ಪ್ರೇರೇಪಿಸುತ್ತಾನೆ.

ಭಕ್ತಿ ಅತ್ಯಂತ ಸುಲಭ ಮಾರ್ಗ.ಎಲ್ಲರಿಗಿಂತ, ಎಲ್ಲದಕ್ಕಿಂತ ಹೆಚ್ಚಾಗಿ ಭಗವಂತನನ್ನು ಅವನ ಗುಣ ಮಹಿಮೆ‌ತಿಳಿದು ಯಾವುದೇ ಪ್ರತಿಫಲದ ಆಸೆಯಿಲ್ಲದೇ ಪ್ರೀತಿಸುವುದೇ ಭಕ್ತಿ. ಎಂದು ತಿಳಿಸಿ, ಜ್ಞಾನ ಭಕ್ತಿ ವೈರಾಗ್ಯ ಬೆಳೆಸಿಕೊಳ್ಳುವ ಸಂದೇಶ ನೀಡುತ್ತಾನೆ.

ಎಲ್ಲೆಲ್ಲೂ ತಾನು ಇರುವನೆಂದು ಸ್ಪಷ್ಟ ಪಡಿಸಿ ತಾನು ಪುರುಷೋತ್ತಮ.ಎಂಬುದನ್ನು ಜ್ಞಾಪಿಸುತ್ತಾನೆ

ಕ್ಷರ ಪುರುಷ ಎಂದರೆ ನಾಶವಾಗುವ ದೇಹ, ಅಕ್ಷರ ಪುರುಷ ಎಂದರೆ ನಾಶವಾಗದ ಆತ್ಮ ಅದೆರಡಕ್ಕಿಂತ ಹಿರಿಯನಾದ ಪುರುಷೋತ್ತಮ ತಾನು ಎಂದು ಹದಿನೈದನೆ ಅಧ್ಯಾಯದಲ್ಲಿ ತಿಳಿಸುತ್ತಾನೆ.

ನಮ್ಮ ಒಳಗೇ ಅಸುರೀಗುಣ ದೈವೀ ಗುಣ ಎರಡೂ ಇದೆ.ಈ ಗುಣಗಳಿಗೆ ಕಾರಣ ನಮ್ಮಲ್ಲಿರುವ ಸಾತ್ವಿಕ, ರಾಜಸ ಮತ್ತು ತಾಮಸಿಕ ಗುಣಗಳು.ನಾವು ಸಾತ್ವಿಕ ಆಹಾರ ಸ್ವೀಕರಿಸಿ, ಸಾತ್ವಿಕ ವಿಚಾರಗಳ ಚಿಂತನೆ ನಡೆಸಿದರೆ, ಸಾತ್ವಿಕ ಅಥವಾ ದೈವೀ ಗುಣಗಳು ಜಾಗೃತವಾಗುತ್ತವೆ.ತಾಮಸಿಕ ಆಹಾರ, ತಾಮಸ ಯೋಚನೆಗಳು ನಮ್ಮ ರಾಕ್ಷಸೀ ಗುಣಗಳಿಗೆ ಚೈತನ್ಯ ಕೊಡುತ್ತವೆ,ಎಂದು ತಿಳಿಸಿ ಸದಾ ಸತ್ಚಿಂತನೆ, ಭಗವಂತನ ಧ್ಯಾನ ಮಾಡಿ ಹೃದಯದ ಕಶ್ಮಲಗಳನ್ನು ಕಳೆದುಕೊಳ್ಳಬೇಕು ಎಂದು ವಿವರಿಸುತ್ತಾನೆ.

ಗೀತೆ ಹೇಳುವಾಗ, ಅರ್ಜುನನಿಗೆ ತನ್ನ ವಿಶ್ವರೂಪ ದರ್ಶನ ನೀಡುತ್ತಾನೆ.ಅದನ್ನು ನೋಡುವ ಕಣ್ಣು ಪ್ರದಾನಮಾಡುತ್ತಾನೆ.ಸೂಕ್ಷ್ಮಾಣುಗಳನ್ನು ನೋಡಲು ಸೂಕ್ಷ್ಮದರ್ಶಕ, ದೂರದಲ್ಲಿರುವ ತಾರೆಗಳನ್ನು ನೋಡಲು ದುರ್ಬೀನು ಹೇಗೆ ಸಹಾಯ ಮಾಡುತ್ತದೋ ಹಾಗೆ ಆ ಪರಮಾತ್ಮನ ವಿಚಾರ ತಿಳಿಯಲು ಆಧ್ಯಾತ್ಮದ ಅಥವಾ ಜ್ಞಾನದ ಕಣ್ಣು ಬೇಕು.ಅದನ್ನು ಶ್ರೀ ಕೃಷ್ಣನೇ ದಯಪಾಲಿಸಬೇಕು.ಕರುಣಾಸಮುದ್ರನಾದ ಅವನು ನಾವು ಒಂದು ಹೆಜ್ಜೆ ಅವನ ಬಳಿ ಹಾಕಿದರೆ ನಾಲ್ಕು ಹೆಜ್ಜೆ ನಮ್ಮ ಬಳಿಗೆ ಬರುವ.ತನ್ನ ಭಕ್ತನಾದ ಅರ್ಜುನ ಧರ್ಮಭ್ರಷ್ಟನಾಗಬಾರದು ಎಂಬ ಉದ್ದೇಶದಿಂದ ಅವನಿಗೆ ಜ್ಞಾನೋದಯವಾಗುವಂತೆ ತನ್ನ ವಿಶ್ವರೂಪ ತೋರಿ , ಅಲ್ಲಿ ಎರಡೂ ಸೇನೆಯ ಎಲ್ಲರನ್ನೂ ಅವನು ನುಂಗುತ್ತಿರುವುದನ್ನು ತೋರಿಸಿದ.ನಾನು ಎಲ್ಲಾ ಮಾಡುತ್ತಿರುವವ ನೀನು ಕೇವಲ ನಿಮಿತ್ತ ಮಾತ್ರ ಎಂಬ ಸತ್ಯ ತಿಳಿಸಿದ.ಅದರ ಜೊತೆ ನಮಗೂ ನಾವೆಲ್ಲ ಪಾತ್ರದ ಗೊಂಬೆಗಳು ಅಷ್ಟೇ.ಸೂತ್ರಧಾರ ಅವನೇ ಎಂದು ಅರಿವು ಮೂಡಿಸಲು ಪ್ರಯತ್ನಿಸಿದ್ದಾನೆ.

ಮತ್ತೆ ಮತ್ತೆ ಪ್ರಶ್ನೆ ಕೇಳುವ ಆರ್ಜುನನಿಗೆ ಸ್ವಲ್ಪವೂ ಬೇಸರವಿಲ್ಲದೆ ಉತ್ತರಿಸುವ ದೇವ, ಜಗದ್ಗುರು ಆಗಿದ್ದಾನೆ.ಸಮಾಧಾನದ ಗಣಿ ಆಗಿದ್ದಾನೆ.

ಸ್ಥಿತಪ್ರಜ್ಞ ಆಗು, ಸುಖ ದುಖಃ, ಲಾಭ ನಷ್ಟ, ಜಯ ಅಪಜಯ ಒಂದೇ ರೀತಿ ಕಾಣು.ನಿನ್ನ ಶ್ರೇಯಸ್ಸು ಯಾವುದರಲ್ಲಿದೆ ಅರಿತು ಧರ್ಮ ಮಾರ್ಗದಲ್ಲಿ ಬಾಳು.ಪ್ರತಿಯೊಬ್ಬರೊಳಗೂ ಇರುವ ನನ್ನನ್ನು ಕಾಣು.ಎಂದು ಹೇಳುವ ಮೂಲಕ ಮನಸ್ಸನ್ನು ಹತೋಟಿಯಲ್ಲಿಟ್ಟುಕೊಳ್ಳುವ, ಮನೋವೈದ್ಯನಾಗಿದ್ದಾನೆ.

ಧ್ಯಾನಯೋಗ ಸವಿಸ್ತಾರವಾಗಿ ವಿವರಿಸಿರುವ ಶ್ರೀಕೃಷ್ಣ, ತಾನು ಯೋಗಿಗಳಿಗೆ ಧ್ಯಾನದಲ್ಲಿ ಮಾತ್ರ ಕಾಣಿಸುವೆ ಎಂದು ತಿಳಿಸಿ ಧ್ಯಾನದ ಮಹತ್ವ ತಿಳಿಸುತ್ತಾನೆ.ಧ್ಯಾನ ಎಂದರೆ ಏಕಾಗ್ರತೆಯಿಂದ ನಮ್ಮ ಮನಸ್ಸನ್ನು ಒಂದೇ ಕಡೆ ಹರಿಸುವುದು.ಸೂರ್ಯನ ಕಿರಣಗಳನ್ನು ಕನ್ನಡಿಯಮೂಲಕ ಒಂದೆ ಕಡೆ ಹರಿಸಿ ಬೆಂಕಿ ಹಚ್ಚಬಹುದು, ಹಾಗೆ ಈ ಆತ್ಮ ಚೈತನ್ಯವನ್ನು ಸಂಪೂರ್ಣವಾಗಿ ಭಗವಂತನ ಕಡೆಗೆ ಹರಿಸಿದಾಗ ಆ ಪರಂಜ್ಯೋತಿಯ ದರ್ಶನ ಆಗುತ್ತದೆ.ಇದೇ ನಮ್ಮ ಜೀವನದ ಉದ್ದೇಶವಾಗಬೇಕಲ್ಲವೇ? ಹುಟ್ಟು ಸಾವುಗಳ ಚಕ್ರದಿಂದ ಪಾರಾಗ ಬೇಕಾದರೆ, ಸಂಸಾರದ ಕಷ್ಟಗಳಿಂದ ದೂರಾಗಬೇಕಾದರೆ ಇದು ಬಹಳ ಮುಖ್ಯ.

ಅಷ್ಟೇ ಅಲ್ಲದೆ ದುಃಖದ ಮೂಲ ಏನು ಎಂದೂ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ವಿವರಿಸುತ್ತಾನೆ.ಸುಂದರ ಪದಾರ್ಥ ನೋಡಿದಾಗ ಆಸೆ ಆಗುತ್ತದೆ, ಸಿಗದಾಗ ಕೋಪ, ಕೋಪದಿಂದ ಬುದ್ಧಿನಾಶ, ಬುದ್ಧಿನಾಶವಾದವನು ಸರ್ವನಾಶ ಆಗುತ್ತಾನೆ‌.ಅವನು ಜೀವನದಲ್ಲಿ ಸೋಲುತ್ತಾನೆ ಎಂದು ತಿಳಿಸಿ, ವಿಷಯ ಪದಾರ್ಥ ನೋಡಬೇಡ, ನೋಡಿದರೂ ಆಸೆಪಡಬೇಡ ಎಂದು ಉಪದೇಶ ನೀಡುತ್ತಾನೆ.

ಈಗಿನ ಪ್ರಪಂಚದಲ್ಲಿ ಪ್ರಾಪಂಚಿಕ ವಸ್ತುಗಳನ್ನು ಕೊಂಡು ಧರಿಸಿ ,ಅದು ಇಲ್ಲದ ಬೇರೆಯವರಿಗೆ ಹೊಟ್ಟೆ ಕಿಚ್ಚು ಬರಿಸುವುದು ಎಲ್ಲರಿಗೂ ಪ್ರಿಯ.ಈ ಹೊಟ್ಟೆ ಕಿಚ್ಚು , ದುರಾಸೆ ಎಷ್ಟೋ ಕಳ್ಳತನ ಕೊಲೆಗಳಿಗೂ ಕಾರಣ.ಬಿಟ್ಟು ಹೋಗುವ ಈ ಎಲ್ಲಾ ಪದಾರ್ಥ ಮಣ್ಣಿಗೆ ಸಮಾನ ಎಂದು ತಿಳಿದು ಬಾಳಿದಾಗ, ಹೊಟ್ಟೆ ಕಿಚ್ಚು, ಕಳ್ಳತನ, ಮೋಸ ಯಾವುದೂ ಇಲ್ಲದ ರಾಮರಾಜ್ಯ ಆಗುವುದರಲ್ಲಿ ಸಂಶಯವಿಲ್ಲ.

ಗೀತೆ ಎಂದಿಗೂ ಭೌತಿಕ‌ಸುಖ ಭೋಗಗಳಿಗೆ ಮಾನ್ಯತೆ ಕೊಡುವುದಿಲ್ಲ.ಎಷ್ಟೇ ಇದ್ದರೂ ಹೋಗುವಾಗ ಯಾವುದೂ ಜೊತೆಗೆ ಬರದು.ಕೇವಲ ನಾವು ಮಾಡಿದ ಪಾಪ ಪುಣ್ಯ ನಮಗಂಟಿಕೊಂಡು ಮುಂದಿನ ಜನ್ಮದ ಸುಖ ದುಃಖಗಳಿಗೆ ಕಾರಣವಾಗುವುದು.ಆದ್ಧರಿಂದ "ಧರ್ಮಮಾರ್ಗದಲ್ಲಿ ನಡೆ" ಎಂಬ ಬೋಧನೆ ನೀಡುತ್ತದೆ.

ಅಷ್ಟೇ ಅಲ್ಲದೆ ಶ್ರೀ ಕೃಷ್ಣ ತಾನು ಯಾವಾಗ ಧರ್ಮಕ್ಕೆ ಚ್ಯುತಿ ಬಂದರೂ ಧರೆಗಿಳಿದು ಬಂದು ಕಾಪಾಡುವ ಭರವಸೆ ನೀಡುತ್ತಾನೆ.

ಹೃದಯದ ದೌರ್ಬಲ್ಯ ಬಿಟ್ಟು ಎದ್ದೇಳು ಎಂದು ಅರ್ಜುನನಿಗೆ ಹೇಳುವ ಶ್ರೀಕೃಷ್ಣ ನಮಗೂ ಅದೇ ಉಪದೆಶ ನೀಡುತ್ತಿದ್ದಾನೆ.ಸ್ವಧರ್ಮಾಚರಣೆಯೊಂದೇ ಶ್ರೇಯಸ್ಸಿನ ಮಾರ್ಗ ಎಂದು ತಿಳಿಸಿ, ಧರ್ಮವನ್ನು ಎಂದೆಂದೂ ಬಿಡಬೇಡಿ ಎಂದು ತಿಳಿಸುತ್ತಾನೆ.

ಒಂದೇ ಇಂದ್ರಿಯದ ಚಪಲ ನಮ್ಮನ್ನು  ಸರ್ವನಾಶ ಮಾಡಲು ಶಕ್ತವಾಗಿದೆ.ಆದ್ಧರಿಂದ ಆಮೆ ಹೇಗೆ ಕೈಕಾಲುಗಳನ್ನು ವೈರಿ ಬಂದಾಗ ಸೆಳೆದುಕೊಳ್ಳುವುದೋ, ಹಾಗೆ ನಾವೂ ನಮ್ಮ  ಇಂದ್ರಿಯಗಳನ್ನು ಒಳಸೆಳೆಯಬೇಕು.ಇಂದ್ರಿಯಗಳ ಆಸೆ ತೃಪ್ತಿ ಪಡಿಸಲು ಸಾಧ್ಯವಿಲ್ಲ.ಎಷ್ಟು ಕೊಟ್ಟರೂ ಅಗ್ನಿಗೆ ತುಪ್ಪ ಹಾಕಿದಷ್ಟೂ ಜೋರಾಗಿ ಉರಿಯುವಂತೆ ಆಸೆ ಹೆಚ್ಚುತ್ತದೆ.

ಇಂದ್ರಿಯಗಳಿಗೆ ನಾವು ದಾಸರಾಗದೇ, ಇಂದ್ರಿಯಗಳನ್ನು ನಮ್ಮ ದಾಸರಾಗಿ ಮಾಡಿಕೊಂಡಾಗ ಉದ್ಧಾರವಾಗಲು ಸಾಧ್ಯ.ಎಂದು ಇಂದ್ರಿಯನಿಗ್ರಹದ ಮಹತ್ವ ತಿಳಿಸಿದ್ದಾನೆ.

ಹೀಗೆ ಭಗವದ್ಗೀತೆ ಉಪದೇಶ ಶ್ರೀ ಕೃಷ್ಣ, ಅರ್ಜುನನನ್ನು ಎಲ್ಲಾ ಮಾನವರ ಪ್ರತಿನಿಧಿಯಾಗಿಸಿ   ನೀಡಿದ್ದಾನೆ.ಇಂದು ಗೀತಾ ಜಯಂತಿ, ಗೀತೆಯ‌ಸಾರಾಂಶ ಚಿಂತನೆ ನಡೆಸಿ ಧನ್ಯರಾಗುವ ಎಂದು ಪ್ರಾರ್ಥಿಸುತ್ತೇನೆ. 

ಶ್ರೀ ಕೃಷ್ಣಾರ್ಪಣಮಸ್ತು

ಡಾ.ರೂಪಶ್ರೀ ಶಶಿಕಾಂತ್ 

ದಾವಣಗೆರೆ 

.

Post a Comment

0Comments

Post a Comment (0)