ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಖಾಯಂಗೆ ಆಗ್ರಹ

varthajala
0

ಬೆಂಗಳೂರು : ರಾಜ್ಯದ 436 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅನೇಕ ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆಗಳನ್ನು ಪೂರೈಸಲು ಒತ್ತಾಯಿಸಿ ಸೋಮವಾರದಂದು ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ರಾಜ್ಯಾಧ್ಯಕ್ಷರಾದ  ಡಾ. ನೂರ್ ಅಹಮ್ಮದ್  ಎಂ. ಬಿ. ರವರ ನೇತೃತ್ವದಲ್ಲಿ  ಪತ್ರಿಕಾ ಗೋಷ್ಠಿಯನ್ನು ಕರೆಯಲಾಗಿತ್ತು. 

ಈ ಸಂದರ್ಭದಲ್ಲಿ ಪತ್ರಕರ್ತರೊಡನೆ ರಾಜ್ಯಾಧ್ಯಕ್ಷರು ಮಾತನಾಡುತ್ತಾ, ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲರೂ, ಇದೇ ವೃತ್ತಿಯನ್ನು ಅವಲಂಬಿಸಿ ಜೀವನ ನಡೆಸುತ್ತಿದ್ದು, ಹಲವಾರು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದ್ದರೂ ಸಹ, ರಾಜ್ಯ ಸರ್ಕಾರದ ಇತರೆ ಇಲಾಖೆಯ ನೌಕರರಂತೆ, ತಮಗೆ ಸೇವಾ ಖಾಯಂ ಸಿಗದೆ, ನಿರಂತರವಾಗಿ ಬೇರೆ ಬೇರೆ ಸರ್ಕಾರಗಳಿಂದ ವಂಚನೆಗೆ ಒಳಗಾಗಿ ಶೋಷಣೆಯಿಂದ ಕೂಡಿದ ಉದ್ಯೋಗವನ್ನು ಮಾಡುವಂತಾಗಿದೆ ಎಂದು ತಮ್ಮ ಹಾಗೂ ತಮ್ಮ ಸಹೋದ್ಯೋಗಿಗಳ   ಅಸಹಾಯಕತೆಯನ್ನು ವ್ಯಕ್ತಪಡಿಸಿದರು.  ಇದರಿಂದ ಮುಕ್ತವಾಗಲು ಸೇವಾ ಖಾಯಂಗಾಗಿ ಅನಿರ್ದಿಷ್ಟ ಅವದಿ (ಹನ್ನೆರಡು ತಿಂಗಳ ವೇತನದೊಂದಿಗೆ ಖಾಯಂ ಮಾಡುವರೆಗೆ)ವರೆಗೆ ಸಾಮೂಹಿಕ ನಾಯಕತ್ವದಲ್ಲಿ ಅಹೋರಾತ್ರಿ ಧರಣಿ ಸತ್ಯಾಗ್ರಹದ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವುದಾಗಿ ಪತ್ರಿಕೆಗೋಷ್ಠಿಯಲ್ಲಿ ಪಾಲ್ಗೊಂಡಿದ್ದ    ಸಮಿತಿಯ ಮಾಧ್ಯಮ ವಕ್ತಾರ ಡಾ. ಮುನಿಯಪ್ಪ ತಿಳಿಸಿದರು.

ಈ ಹೋರಾಟವು ದಿನಾಂಕ:-05-09-2023 ರಂದು ಬೆಳಗ್ಗೆ 11-00 ಗಂಟೆಗೆ ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಸುಮಾರು 4000 ದಿಂದ 5000 ಜನ ಅನಿರ್ದಿಷ್ಟ ಅವಧಿ(ಖಾಯಂ ಮಾಡಿ ಹನ್ನೆರಡು ತಿಂಗಳ ವೇತನ ಕೊಡುವರೆಗೆ ವರೆಗೆ ಅಹೋರಾತ್ರಿ ಧರಣಿ ಸತ್ಯಗ್ರಹವನ್ನು ನಡೆಸಲು ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಹಕ್ಕುಗಳ ಹೋರಾಟ ರಾಜ್ಯ ಸಮಿತಿಯ ಸಭೆಯಲ್ಲಿ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ತೀರ್ಮಾನ ಕೈಗೊಂಡಿದ್ದಾರೆ. ಆದ್ದರಿಂದ ಅನಿರ್ದಿಷ್ಟ ಅವಧಿವರೆಗೆ ಅಹೋರಾತ್ರಿ ಧರಣಿ ನಡೆಸುವ ಮೂಲಕ ಕಾನೂನು ಪ್ರಕಾರ ತಮ್ಮ ಹಕ್ಕುಗಳನ್ನು ಪಡೆಯಲು, ಅತಿಥಿ ಎಂಬ ಜೀತ ಪದ್ಧತಿಯಿಂದ ವಿಮುಕ್ತಿ ಹೊಂದಲು ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಅತಿಥಿ ಉಪನ್ಯಾಸಕಿಯರು ಸಹ ಭಾಗದಹಿಸುತ್ತಿರುವುದಾಗಿ ಸಮಿತಿಯ ಮಹಿಳಾ ಅಧ್ಯಕ್ಷರು ಡಾ. ಶರಣಮ್ಮ ಪಾಟೀಲ್ ತಿಳಿಯಪಡಿಸಿದರು.

ಸಮಿತಿಯ ಕಾರ್ಯಾಧ್ಯಕ್ಷರಾದ ಆರ್. ಶಂಕ್ರಾನಾಯ್ಕ ನೆಲ್ಲಿಹಂಕಲು ಅವರು ಮಾತನಾಡುತ್ತಾ, ನಮ್ಮ ಈ ಕೆಳಕಂಡ ಬೇಡಿಕೆಯನ್ನು ಪೂರೈಸಲು ಸರಕಾರ ಮುಂದಾಗಬೇಕೆಂದು ಸಮಿತಿಯ ಬೇಡಿಕೆಗಳನ್ನು ತಿಳಿಯಪಡಿಸಿದರು.

ಬೇಡಿಕೆ ಗಳು

1. ಕಾಂಗ್ರೆಸ್ ಸರ್ಕಾರವು ತನ್ನ ಪ್ರಣಾಳಿಕೆಯಲ್ಲಿ ಹೇಳಿರುವಂತೆ ಅದು ಉಯತ್ಯಾಸಕರ ಸೇವೆಯನ್ನು ಖಾಯಂಗೊಳಿಸುವುದಕ್ಕೆ ತಕ್ಷಣವೇ  ಕ್ಯಾಬಿನೆಟ್ ನಲ್ಲಿ ನಿರ್ಣಯ ಮಾಡುವುದು ಹಾಗೂ ಖಾಯಂಗೊಳಿಸುವವರೆಗೆ ತಕ್ಷಣವೇ ಈ ಕೆಳಕಂಡ ಬೇಡಿಕೆಯನ್ನು ಈಡೇರಿಸುವುದು.

2. 12 ತಿಂಗಳ ವೇತನವನ್ನು ಕೊಡುವುದು ಮತ್ತು ತಿಂಗಳಿಗೆ ಒಂದು ರಜಾ ಸೌಲಭ್ಯವನ್ನು ಕಡ್ಡಾಯವಾಗಿ ಒದಗಿಸುವುದು.

3.  2002-23 ನೆಯ ಸಾಲಿನಲ್ಲಿ ಆಯ್ಕೆಗೊಂಡ ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸಕರಿಗೆ (ಅ‌ವೈಜ್ಞಾನಿಕವಾದ ವಿಶ್ವವಿದ್ಯಾಲಯಗಳ ಕ್ಯಾಲೆಂಡರ್ ಆಪ್ ಇವೆಂಟ್ ಪ್ರಕಾರ ಬಿಡುಗಡೆ ಮಾಡಿರುವುದನ್ನು ರದ್ದುಪಡಿಸಿ) ಜುಲೈ, ಆಗಸ್ಟ್, ಸೆಪ್ಟೆಂಬರ್ 2023 ನ್ನು ಸೇವಾ ಅವಧಿಯೆಂದು ಪರಿಗಣಿಸಿ, ರಾಜ್ಯದ ಎಲ್ಲಾ ಅತಿಥಿ ಉಪನ್ಯಾಸರಿಗೆ ಗೌರವಧನ ಕೊಡುವುದು.

4. ನೇಮಕಾತಿ ಆದೇಶದಲ್ಲಿ ಅತಿಥಿ ಉಪನ್ಯಾಸಕರ ಶೋಷಣೆಗೆ ಕಾರಣವಾಗಿರುವ ಷರತ್ತುಗಳನ್ನು ತೆಗೆದು ಹಾಕುವುದು. (ಉದಾಹರಣೆಗೆ :  ಪ್ರಾಂಶುಪಾಲರು ವಹಿಸುವ ಇತರೆ ಕಾರ್ಯವನ್ನು ಕಡ್ಡಾಯವಾಗಿ ನಿರ್ವಹಿಸುವುದು ಮತ್ತು ವಿಶ್ವವಿದ್ಯಾಲಯದ ಕ್ಯಾಲೆಂಡರ್ ಆನ್ ಇವೆಂಟ್ ಪ್ರಕಾರ ಬಿಡುಗಡೆಗೊಳಿಸುವುದು ಮೌಲ್ಯಮಾಪನ ಕಾರ್ಯ ಸಂದರ್ಭದ ವೇತನ ಕಡಿತ, ಇನ್ನು ಇತರೆ....).

5. ಕಾರ್ಯಭಾರ ಕೊರತೆ, ವರ್ಗಾವಣೆ, ನಿಯೋಜನಗಳಿಂದ ಅತಿಥಿ ಉಪನ್ಯಾಸಕರಿಗೆ ತೊಂದರೆ ಉಂಟಾದರೆ, ಕಾರ್ಯಬಾರ ಲಭ್ಯವಾಗುವರೆಗೆ ಬಿಡುಗಡೆ ಮಾಡದೆ, ಇತರೆ ಶೈಕ್ಷಣಿಕ ಚಟುವಟಿಕೆಗಳಿಗೆ ಬಳಸಿಕೊಂಡು ಸೇವೆಯಲ್ಲಿ ಮುಂದುವರಿಸುವುದು.

6. ಪ್ರತಿ ವರ್ಷ ಶೈಕ್ಷಣಿಕ ವರ್ಷ 5-6 ತಿಂಗಳಿಗೊಮ್ಮೆ ಕೌನ್ಸಲಿಂಗ್‌ ಮಾಡುವುದನ್ನು ಬಿಟ್ಟು, ಒಮ್ಮೆ ಮಾತ್ರ ವ್ಯವಸ್ಥಿತವಾಗಿ ಮಾಡುವುದು ಮತ್ತು ಪದೇ ಪದೇ ದಾಖಲೆಗಳನ್ನು ಪರಿಶೀಲಿಸುವುದನ್ನು ಬಿಟ್ಟು, ಶಾಶ್ವತವಾಗಿ ಒಮ್ಮೆಗೆ ಮಾತ್ರ ನೈಜತೆಯನ್ನು ಪರಿಶೀಲಿಸುವುದು  ಇತ್ಯಾದಿ ಬೇಡಿಕೆಗಳನ್ನು ಪೂರೈಸಲು ಸರ್ಕಾರ ಮುಂದಾಗ ಬೇಕೆಂದು ಪತ್ರಿಕಾಗೋಷ್ಠಿಯಲ್ಲಿ ಸಮಿತಿಯ ವತಿಯಿಂದ ತಮ್ಮ ಸದಸ್ಯರ ಅಳಲನ್ನು ತೋಡಿಕೊಂಡು, ಈ ಬಗ್ಗೆ ಸರ್ಕಾರ ಸೂಕ್ತ ಕ್ರಮವನ್ನು ಸರ್ಕಾರ  ಕೈಗೊಳ್ಳಬೇಕೆಂದು ಆಗ್ರಹಿಸಿದರು.

Post a Comment

0Comments

Post a Comment (0)