2024ರ ಮುಂಗಾರು ಮುನ್ಸೂಚನೆ ಹಾಗೂ ಕೃಷಿ ಸಿದ್ದತೆ

varthajala
0

 ಬೆಂಗಳೂರು, ಏಪ್ರಿಲ್ 22 (ಕರ್ನಾಟಕ ವಾರ್ತೆ):

 
ಭಾರತ ಹವಾಮಾನ ಇಲಾಖೆ 2024ರ ಹವಾಮಾನ ಮುನ್ಸೂಚನೆಯನ್ನು ಪ್ರಕಟಿಸಿದ್ದು, ಈ ಬಾರಿ ಉತ್ತಮ ಮುಂಗಾರಿನ ಸಂಭವನೀಯತೆಯನ್ನು ವಿವರಿಸಿದೆ. ಈ ಮುನ್ಸೂಚನೆಯಂತೆ ಭಾರತದಲ್ಲಿ ಈ ವರ್ಷದ ಮುಂಗಾರು ಅವಧಿಯಲ್ಲಿ ದೀರ್ಘಾವಧಿ (1971 ರಿಂದ 2020) ಸರಾಸರಿ ಮಳೆ (87 ಸೆಂ.ಮೀ.) ಅನುಸಾರ ಮಳೆ ಪ್ರಮಾಣದಲ್ಲಿ  ಶೇ.6 ರಷ್ಟು ಹೆಚ್ಚಳದೊಂದಿಗೆ ವಾಡಿಕೆಯ ಶೇ.106 ರಷ್ಟು ಮಳೆಯಾಗುವ ಸಾದ್ಯತೆಯಿದೆ. ನಮ್ಮ ರಾಜ್ಯದಲ್ಲಿ 2024ರ ಮುಂಗಾರು (ಜೂನ್-ಸೆಪ್ಟೆಂಬರ್), ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗುವ ಸೂಚನೆ ನೀಡಿದೆ.

ಈ ನಿಟ್ಟಿನಲ್ಲಿ, ಕೃಷಿ ಉತ್ಫಾದನೆ ಹಾಗೂ ರೈತರ ಆದಾಯ ಹೆಚ್ಚಳಕ್ಕೆ ಸಿದ್ಧತೆಗಳನ್ನು ಕೈಗೊಳ್ಳಬೇಕಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ, ಏಪ್ರಿಲ್ ಕೊನೆ ಹಾಗೂ ಮೇ ತಿಂಗಳಲ್ಲಿ ಮಳೆ ಮುನ್ಸೂಚನೆಯಿರುವುದರಿಂದ ಮಾಗಿ ಉಳುಮೆ ಕೈಗೊಂಡು ಮಣ್ಣು ಮತ್ತು ನೀರು ಸಂರಕ್ಷಣೆಗೆ ಒತ್ತು ನೀಡಬೇಕು. ಮಳೆನೀರಿನ ಸಂರಕ್ಷಣೆಗೆ ಬದು ಹಾಗೂ ಕೃಷಿ ಹೊಂಡಗಳನ್ನು ಸುಸ್ಥಿತಿಯಲ್ಲಿ ಕಾಪಾಡಿಕೊಳ್ಳಬೇಕು. ಎರಡನೆ ಅಥವಾ ಮೂರನೆ ಮಳೆ ನಂತರ, ಭೂಮಿ ಹದಗೊಳಿಸಿ ಹಸಿರೆಲೆ ಗೊಬ್ಬರಗಳಾದ ಅಪ್‍ಸೆಣಬು, ಚಂಬೆ, ಹುರುಳಿಯನ್ನು 45-60 ದಿನಗಳಲ್ಲಿ ಹಸಿರೆಲೆ ಗೊಬ್ಬರವಾಗಿ ಅಥವಾ ಹಸಿಕಾಯಿಗೆ ಸೂಕ್ತ ದ್ವಿದಳ ಬೆಳೆಗಳಾದ ಅವರೆ, ಅಲಸಂದೆಯನ್ನು ಬಿತ್ತಿ ಹಸಿಕಾಯಿ ಕಿತ್ತ ನಂತರ ಸೊಪ್ಪನ್ನು ಭೂಮಿಗೆ ಸೇರಿಸುವುದು. ಇದರಿಂದ ಮಣ್ಣಿನ ಫಲವತ್ತೆತೆ ಹೆಚ್ಚುವುದಲ್ಲದೆ, ಮಣ್ಣಿನಲ್ಲಿ ತೇವಾಂಶವನ್ನು ಹೆಚ್ಚಿನ ಕಾಲ ಸಂಗ್ರಹಿಸಲು ಸಾಧ್ಯವಾಗುತ್ತದೆ.
ಸಾವಯವ ಗೊಬ್ಬರಗಳು ಮಣ್ಣಿನ ಆರೋಗ್ಯ ಕಾಪಾಡುವಲ್ಲಿ ಹೆಚ್ಚಿನ ಪಾತ್ರ ನಿರ್ವಹಿಸುತ್ತವೆ. ಈ ನಿಟ್ಟಿನಲ್ಲಿ, ಮಣ್ಣಿಗೆ ಕನಿಷ್ಟ ಶಿಫಾರಿತ ಕೊಟ್ಟಿಗೆ ಗೊಬ್ಬರ / ಕಾಂಪೆÇೀಸ್ಟ್ ಸೇರಿಸಲು ಕ್ರಮಕೈಗೊಳ್ಳಬೇಕು. ಕೊಟ್ಟಿಗೆ ಗೊಬ್ಬರದ ಲಭ್ಯತೆ ಕಡಿಮೆಯಿದ್ದಲ್ಲಿ ಅಥವಾ ಹೆಚ್ಚಿನ ಸಾವಯವ ಅಂಶ ಸೇರಿಸುವ ನಿಟ್ಟಿನಲ್ಲಿ, ವಿವಿಧ ಮರಗಳ ಹಸಿರು ಸೊಪ್ಪನ್ನು ಅಥವಾ ರಸ್ತೆ ಬದಿಯಲ್ಲಿನ ಕಳೆಗಳನ್ನು ಹೂವಾಡುವ ಹಂತಕ್ಕಿಂತ ಮುಂಚಿತವಾಗಿ ಮಣ್ಣಿಗೆ ಸೇರಿಸಬಹುದು. ಕೆರೆಗೋಡನ್ನು ಮಣ್ಣಿಗೆ ಸೇರಿಸುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚಿಸಬಹುದು. ಕಳೆದ ಬಾರಿಯ ಮಳೆ ಕೊರತೆ ಹಾಗೂ ಕುಸಿದಿರುವ ಅಂತರ್ಜಲ ಮಟ್ಟದಿಂದ, ಈ ಬಾರಿ ಮಣ್ಣಿನಲ್ಲಿ ತೇವಾಂಶದ ಕೊರತೆಯಿದ್ದು ಕೆರೆಕಟ್ಟೆ ಹಾಗೂ ಅಣೆಕಟ್ಟುಗಳಿಗೆ ನೀರಿನ ಆಗಮನ ವಿಳಂಬವಾಗುವ ಸಾಧ್ಯತೆಯಿದ್ದು, ಈ ಪ್ರದೇಶದಲ್ಲಿ ಬೆಳೆಗಳ ಮಧ್ಯಮವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಗೆ ಅವಶ್ಯಕವಾದ ಬಿತ್ತನೆಬೀಜ ಸಿದ್ಧಪಡಿಸಿಕೊಳ್ಳಬೇಕು.
ಮಳೆಯಾಶ್ರಿತ ಪ್ರದೇಶದಲ್ಲಿ ವಿವಿಧ ಬೆಳೆಗಳ ಸುಧಾರಿತ ಮಧ್ಯಮಾವಧಿ ಹಾಗೂ ಅಲ್ಫಾವಧಿ ತಳಿಗಳ ಬಿತ್ತನೆಯನ್ನು ಸಂಗ್ರಹಿಸಿಕೊಳ್ಳಬೇಕು. ಏಪ್ರಿಲ್ ಕೊನೆಯ ಭಾಗದಲ್ಲಿ ಹತ್ತಿ ಬಿತ್ತಬಹುದು. ಮೇ ತಿಂಗಳಿನ ಬಿತ್ತನೆಗೆ ತೊಗರಿ, ಹರಳು (ಔಡಲ), ಎಳ್ಳು, ಹೆಸರು, ಅವರೆ, ಅಲಸಂದೆ, ಆಲೂಗಡ್ಡೆ ಉತ್ತಮ. ಜೂನ್ ತಿಂಗಳಿನ ಬಿತ್ತನೆಗೆ ಮುಸುಕಿನ ಜೋಳ, ನೆಲಗಡಲೆ, ತೊಗರಿ ಉತ್ತಮ. ಜುಲೈ ತಿಂಗಳಿನ ಬಿತ್ತನೆಗೆ ನೆಲಗಡಲೆ, ರಾಗಿ (ದೀರ್ಘಾವÀಧಿ), ಸಿರಿಧಾನ್ಯಗಳಾದ ನವಣೆ, ಹಾರಕ, ಊದಲು, ಕೊರಲೆ ಉತ್ತಮ. ಆಗಸ್ಟ್ ತಿಂಗಳಲ್ಲಿ ರಾಗಿ (ಮಧ್ಯಮಾವಧಿ / ಅಲ್ಫಾವಧಿ), ಸಿರಿಧಾನ್ಯಗಳಾದ ನವಣೆ, ಸಾಮೆ, ಹಾರಕ, ಬರಗು, ಕೊರಲೆ, ಅವರೆ, ಅಲಸಂದೆ, ಸೂರ್ಯಕಾಂತಿ, ಹುಚ್ಚೆಳ್ಳು ಉತ್ತಮ. ಸೆಪ್ಟೆಂಬರ್ ತಿಂಗಳಲ್ಲಿ ಸಿರಿಧಾನ್ಯಗಳಾದ ಬರಗು, ಸಾಮೆ, ಹುರುಳಿ, ಹೆಚ್ಚೆಳ್ಳು ಉತ್ತಮ.ಮೇವಿನ ಬೆಳೆಗಳಾದ ಮೇವಿನ ಮುಸುಕಿನ ಜೋಳ, ಮೇವಿನ ಜೋಳ, ಮೇವಿನ ಸಜ್ಜೆಯನ್ನು ಮೇವಿನ ಅವಶ್ಯಕತೆಗನುಗುಣವಾಗಿ ಮೇ ಯಿಂದ ಸೆಪ್ಟೆಂಬರ್ ವರೆಗೆಯಾವಾಗಲಾದರೂ ಬಿತ್ತಬಹುದು.

ಬಹುವಾರ್ಷಿಕ ಮೇವಿನ ಬೆಳೆಗಳಾದ ನೇಪಿಯರ್ ಹುಲ್ಲು ಅಥವಾ ಮರಗಳಾದ ಹೆಬ್ಬೇವು, ಡಾಲ್‍ಬರ್ಜಿಯಾ, ದಶರಥ ಹುಲ್ಲು, ಜಾಲಿ ಇತ್ಯಾದಿಗಳನ್ನು ಬದುಗಳ ಮೇಲೆ ಅಥವಾ ಹೊಲದ ಸುತ್ತ ಬೆಳೆಯುವುದರಿಂದ ಬರ ಪರಿಸ್ಥಿತಿಯಲ್ಲಿ ರಾಸುಗಳಿಗೆ ಮೇವು ಪಡೆಯಬಹುದು. ಮಳೆಯಾಶ್ರಿತ ಪ್ರದೇಶಗಳಲ್ಲಿ ವಿವಿಧ ಕೃಷಿ ಚಟುವಟಿಕೆಗಳಿಗೆ ದೊರೆಯುವ ಸಮಯ ಅತ್ಯಲ್ಪ. ಈ ನಿಟ್ಟಿನಲ್ಲಿ ನಿಧಾನಗತಿಯ ಬೇಸಾಯ ಕ್ರಮದಿಂದ ಸೂಕ್ತ ಹದ ದೊರೆಯದೆ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಆದ್ಧರಿಂದ ಕೃಷಿ ಚಟುವಟಿಕೆಗಳನ್ನು ಹದವರಿತು, ಕಡಿಮೆ ಸಮಯದಲ್ಲಿ ನಿರ್ವಹಿಸಬೇಕು. ಇದಕ್ಕಾಗಿ ಅನೇಕ ರಾಸು ಮತ್ತು ಟ್ರಾಕ್ಟರ್ ಚಾಲಿತ ಯಂತ್ರಗಳಾದ ಎಂ.ಬಿ ನೇಗಿಲು, ಕೂರಿಗೆ, ಬಹು ಸಾಲು ತೆಗೆಯುವ ಯಂತ್ರ, ಕಳೆ ತೆಗೆಯುವ ಸಾಧನಗಳು, ಬದು ನಿರ್ಮಾಪಕ, ರೋಟವೇಟರ್, ಗುಂಡಿ ತೆಗೆಯುವ ಯಂತ್ರ, ಇತ್ಯಾದಿಗಳನ್ನು ಸಿದ್ದಪಡಿಸಿಕೊಳ್ಳುವುದರಿಂದ ಕಡಿಮೆ ಸಮಯದಲ್ಲಿ ಕೃಷಿ ಚಟುವಟಿಕೆಗಳನ್ನು ಕೈಗೊಳ್ಳಬಹುದು. ಈ ಯಂತ್ರಗಳು ರೈತರಿಗೆ ಖರೀದಿಸಲು ಸಾಧ್ಯವಿಲ್ಲದಿದ್ದಲ್ಲಿ, ಬಾಡಿಗೆ ಕೇಂದ್ರಗಳಲ್ಲಿ ಅಥವಾ ಖಾಸಗಿಯವರಲ್ಲಿ ಬಾಡಿಗೆಗೆ ಪಡೆಯಬಹುದು.

Post a Comment

0Comments

Post a Comment (0)