ಬೆಂಗಳೂರು; ಮೇ 5 ರಿಂದ 17 ರವರೆಗೆ ಪರಿಶಿಷ್ಟರ ಒಳಮೀಸಲಾತಿ ಕುರಿತಂತೆ ನಡೆಯಲಿರುವ ಸಮೀಕ್ಷೆ ಸಂದರ್ಭದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಪರಯ ಮಹಾಸಭಾ “ಪರಿಶಿಷ್ಟ ಜಾತಿ ಬಲಗೈ ಪರಯ ಸಮುದಾಯದ ಜಾತಿ ನೋಂದಣಿ ಜನ ಜಾಗೃತಿ ಅಭಿಯಾನ” ಆರಂಭಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ಪರಿಶಿಷ್ಟ ಜಾತಿ ಬಲಗೈ ಪರಯ ಮಹಾಸಭಾ ಅಧ್ಯಕ್ಷ ಎ. ಕೃಷ್ಣಪ್ಪ, ಒಳ ಮಿಸಲಾತಿ ಜಾತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಬಲಗೈ 'ಪರಯ' ಎಂದು ನೋಂದಾಯಿಸಬೇಕು. ಇದು ನಿರ್ಣಾಯಕ ಸಮಯವಾಗಿದ್ದು, ಎಲ್ಲರೂ ಜಾಗೃತರಾಗಿ ತಮ್ಮ ಜಾತಿಯನ್ನು ನಿಖರವಾಗಿ ಬರೆಸಬೇಕು. ನಮ್ಮ ಅಸ್ಥಿತ್ವ ಉಳಿಸಿಕೊಂಡು ಪರಯರ ಜಾತಿಯ ನೈಜ ಪಾಲು ಪಡೆಯಬೇಕಾಗಿದೆ ಎಂದರು.
ಪರಿಶಿಷ್ಟ ಜಾತಿಗಳಿಗೆ ಸಂವಿಧಾನಿಕವಾಗಿ ಒಳ ಮೀಸಲಾತಿ ವರ್ಗಿಕರಣ ಮಾಡುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿದೆ ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಇದೀಗ ನಡೆಯುತ್ತಿರುವ ಸಮೀಕ್ಷೆಗೆ ಸಂವಿಧಾನಿಕ ಮಾನ್ಯತೆ ಇದೆ. ಒಟ್ಟು 101 ಉಪ ಜಾತಿಗಳ ಪೈಕಿ ಬಲಗೈ ಪಂಗಡದ 32 ಉಪ ಜಾತಿಗಳಲ್ಲಿ ಪ್ರಮುಖವಾಗಿ "ಹೊಲಯ", "ಛಲವಾದಿ", "ಮಾಲ" ಮುಂತಾದವುಗಳು ಕೇಳಿಬರುತ್ತಿವೆ. ಇವುಗಳಲ್ಲಿ ನಮ್ಮ ಜನಾಂಗದವರು ಅಂದರೆ "ತಿಗಳ ಹೊಲಯ (ಚಿಕ್ಕತಾಳಿ) ರೇಣುಕಾ ಯಲ್ಲಮ್ಮ ಬಳಗದವರು, ತಮಿಳು ಮಿಶ್ರಿತ ಕನ್ನಡ ಭಾಷೆ, ನಮ್ಮಿ ಪೇಶಿ, ಅರವು ಭಾಷೆ ಮಾತನಾಡುವವರು ದಕ್ಷಿಣ ಕರ್ನಾಟಕ ಭಾಗಗಳಾದ ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿನ ಆನೇಕಲ್, ಹೊಸಕೋಟೆ, ದೇವನಹಳ್ಳಿ, ನೆಲಮಂಗಲ ತಾಲ್ಲೂಕುಗಳು, ಕೋಲಾರ ಜಿಲ್ಲೆಗಳಲ್ಲಿನ ಕೋಲಾರ ನಗರ, ಮಾಲೂರು, ಬಂಗಾರುಪೇಟೆ, ಕೆ. ಜಿ. ಎಫ್, ಮುಳಬಾಗಿಲು, ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿನ ಚಿಂತಾಮಣಿ, ಇತರೆ ತಾಲ್ಲೂಕುಗಳು, ರಾಮನಗರ ಜಿಲ್ಲೆ, ಚನ್ನಪಟ್ಟಣ ತಾಲ್ಲೂಕು ನೀಲಕಂಠನಹಳ್ಳಿ, ಕನಕಪುರ, ತುಮಕೂರು ಜಿಲ್ಲೆಯಲ್ಲಿನ ಕುಣಿಗಲ್ ತಾಲ್ಲೂಕು, ದೊಡ್ಡಬಳ್ಳಾಪುರದಲ್ಲಿನ ಇತರ ಪ್ರದೇಶಗಳಲ್ಲಿ ಅಂದಾಜು 15 ಲಕ್ಷಕ್ಕೂ ಮೇಲ್ಪಟ್ಟು ಜನರು ವಾಸಿಸುತ್ತಿದ್ದಾರೆ ಎಂದರು.
ನಮ್ಮ ಜನಾಂಗ ಜಾತಿ ಪ್ರಮಾಣ ಪತ್ರ ಪಡೆಯುವಾಗ ಪರಿಶಿಷ್ಟ ಜಾತಿ (ಆದಿ ಕರ್ನಾಟಕ)” ಎಂದು ಬರೆಸುತ್ತಿದ್ದಾರೆ. ಈಗ ಆದಿ ಕರ್ನಾಟಕ ಎಂಬುದನ್ನು ಪರಿಗಣಿಸದೆ ಮೂಲ ಉಪ ಜಾತಿಯ ಹೆಸರಿನಲ್ಲಿ ಜನಗಣತಿ ಮಾಡಲು ತೀರ್ಮಾನಿಸಲಾಗಿದೆ. ಆರವು ಬಾಷಿಕರು ಇತಿಹಾಸದ ಹಿನ್ನೆಲೆಯ ಬಗ್ಗೆ ಸುದೀರ್ಘವಾಗಿ ಚರ್ಚಿಸಿ 1977ರ ಸರ್ಕಾರ ಅಧಿಸೂಚನೆ ಕ್ರಮ ಸಂಖ್ಯೆ 90 ರಲ್ಲಿ "ಪರಯ" ಎಂಬುದಾಗಿ ಇರುವುದನ್ನು ಗುರುತಿಸಿಕೊಳ್ಳುವುದು ಸೂಕ್ತವೆಂದು ತೀರ್ಮಾನಿಸಲಾಗಿದೆ. ನಾವು ಮುಂದಿನ ದಿನಗಳಲ್ಲಿ ಜಾತಿ ಪ್ರಮಾಣ ಪತ್ರ ಪಡೆಯುವಾಗ ಪರಿಶಿಷ್ಟ ಜಾತಿ, ಉಪ ಜಾತಿ 'ಪರಯ' ಎಂದು ನಮೂದಿಸಿ ಒಳ ಮೀಸಲಾತಿಯ ಉಪಯೋಗ ಪಡೆದುಕೊಳ್ಳಬೇಕು ಎಂದು ಎ.ಕೃಷ್ಣಪ್ಪ ಹೇಳಿದರು.
ರಾಜ್ಯ ಸರ್ಕಾರ ಒಳ ಮಿಸಲಾತಿಯಲ್ಲಿ ಹೊಲಯರಿಗೆ ನಿಗದಿಪಡಿಸಿದ ಶೇ 6% ರಲ್ಲಿ ಪರಯ ಜಾತಿಗೆ ಶೇ. 1% ರಷ್ಟು ಪ್ರತ್ಯೇಕ ಮೀಸಲಾತಿಯನ್ನು ಪಡೆಯಲು ತಪ್ಪದೆ ಜನಗಣತಿಯಲ್ಲಿ "ಪರಯ" ಎಂಬುದಾಗಿ ಬರೆಸಲು ಮತ್ತು ನಮ್ಮ ಮೂಲ ಜನಾಂಗದ ಬಹುಸಂಖ್ಯಾತ ಜನಸಂಖ್ಯೆಯನ್ನು ಸರ್ಕಾರದ ಗಮನಕ್ಕೆ ತಂದು ನಮ್ಮ ನ್ಯಾಯಯುತವಾದ ಸೌಲತ್ತುಗಳನ್ನು ಪಡೆದುಕೊಳ್ಳಲು ಹಾಗೂ ಮುಂದಿನ ಪೀಳಿಗೆಯ ಅಸ್ಥಿತ್ವದ ಹಿತದೃಷ್ಟಿಯಿಂದ "ಪರಯ" ಎಂದು ನಮೂದಿಸಿ ಸಹಕರಿಸಲು ಕೋರಲಾಗಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶ್ರೀನಿವಾಸ್, ಸಂಘಟನಾ ಕಾರ್ಯದರ್ಶಿ ರವಿಕುಮಾರ್, ಪ್ರಧಾನ ಕಾರ್ಯದರ್ಶಿ ವೈ. ಗೋಪಾಲ್, ವಕೀಲರಾದ ಡಾ॥ ಕೆ. ಪಿ. ವೆಂಕಟೇಶ್, ಹೆಚ್. ಆರ್. ರಮೇಶ್ (ಹೆಬ್ಬಗೊಡಿ) ಮತ್ತಿತರರು ಉಪಸ್ಥಿತರಿದ್ದರು.