ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿಗೆ ಸೂಚನೆ ಬಿಬಿಎಂಪಿ ಅಧಿಕಾರಿಗಳು ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡು ಕರ್ತವ್ಯ ನಿರ್ವಹಿಸಲು ನಿರ್ದೇಶನ

varthajala
0
ಬೆಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಯನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದು ಹಾಗೂ ಕೆರೆಗಳ ಸಂರಕ್ಷಣೆ ಮತ್ತು ಅಭಿವೃದ್ಧಿಯನ್ನು ಖಾತ್ರಿ ಪಡಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ನಿಗಾವಹಿಸುವ ಉದ್ದೇಶದಿಂದ ಪಾಲಿಕೆಯ ಎಂಟು ವಲಯಗಳಿಗೆ ಸಂಬಂಧಿಸಿದಂತೆ ಪ್ರತ್ಯೇಕ ದೂರುಗಳನ್ನು ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡು, ತನಿಖೆ ಕೈಗೊಂಡು ಕಾಲಕಾಲಕ್ಕೆ ವರದಿಗಳನ್ನು ಪಡೆದು, ಅಧಿಕಾರಿ ವರ್ಗದವರಿಗೆ ಖುದ್ದು ಹಾಜರಾಗುವಂತೆ ತಿಳಿಸಿ, ನೊಟೀಸ್‍ಗಳನ್ನು ನೀಡಿ, ಪ್ರಕರಣದ ತನಿಖೆಯನ್ನು ಕೈಗೊಳ್ಳಲಾಗುತ್ತಿದೆ.

ಪ್ರಕರಣಗಳ ಪೈಕಿ ತನಿಖೆಯ ಭಾಗವಾಗಿ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಪೂರ್ವ, ದಕ್ಷಿಣ, ರಾಜರಾಜೇಶ್ವರಿ ನಗರ ಹಾಗೂ ದಾಸರಹಳ್ಳಿ ವಲಯಗಳಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು 2025ನೇ ಏಪ್ರಿಲ್ 28 ರಂದು ನಡೆಸಿದ್ದು, ಈ ದಿನದಂದು ವಲಯ ಆಯುಕ್ತರು, ಜಂಟಿ ಆಯುಕ್ತರು ಹಾಗೂ ಇತರೇ ಅಧಿಕಾರಿಗಳು ಹಾಜರಿರುವಂತೆ ತಿಳಿಸಲಾಗಿದ್ದ ಮೇರೆಗೆ ಸಂಬಂಧಿಸಿದ ವಲಯಗಳ ಅನೇಕ ಉನ್ನತ ಅಧಿಕಾರಿಗಳು ಹಾಗೂ ಅವರ ಅಧೀನದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ನೌಕರರುಗಳು ಹಾಜರಿದ್ದರು. ಪ್ರಕರಣವನ್ನು ಆಲಿಸುವ ಸಂದರ್ಭದಲ್ಲಿ ಹಲವು ನಿರ್ದೇಶನಗಳನ್ನು ನೀಡಲಾಯಿತು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮರ್ಪಕ ಕಸ ವಿಲೇವಾರಿಯನ್ನು ಖಾತರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ವರದಿ ಸಲ್ಲಿಸುವಂತೆ ಲೋಕಾಯುಕ್ತ ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೆÇಲೀಸ್ ಅಧಿಕಾರಿಗಳಿಗೆ ಗೌರವಾನ್ವಿತ ಲೋಕಾಯುಕ್ತರವರು ನಿರ್ದೇಶಿಸಿದ್ದ ಮೇರೆಗೆ ಅವರುಗಳು ಕಸವನ್ನು ಎಲ್ಲೆಂದರಲ್ಲಿ ಬಿಸಾಡಲಾಗಿದೆ. ಅದನ್ನು ಸಮರ್ಪಕವಾಗಿ ವಿಲೇವಾರಿ ಮಾಡುವುದರಲ್ಲಿ ಬಿಬಿಎಂಪಿ ಅಧಿಕಾರಿ ವರ್ಗದವರು ವಿಫಲರಾಗಿರುತ್ತಾರೆಂದು ಛಾಯಾಚಿತ್ರ ಸಹಿತ ವರದಿ ಸಲ್ಲಿಸಿದ್ದು. ಸದರಿ ವರದಿಯನ್ನು ಪರಿಶೀಲಿಸಿದ ಗೌರವಾನ್ವಿತ ಲೋಕಾಯುಕ್ತರವರು ವಿಚಾರಣೆಯಲ್ಲಿ ಹಾಜರಿದ್ದ ಅಧಿಕಾರಿ ವರ್ಗದವರಿಗೆ ವರದಿಯ ಸಾರಾಂಶವನ್ನು ತಿಳಿಸಿ, ಅವರುಗಳ ಕಾರ್ಯವೈಖರಿಗೆ ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದೆ ಅಧಿಕಾರಿಗಳು ತಮ್ಮ ಕಾರ್ಯಶೈಲಿಯನ್ನು ಬದಲಾಯಿಸಿಕೊಂಡು ಕರ್ತವ್ಯ ನಿರ್ವಹಿಸುವಂತೆ ಆದೇಶಿಸಿದರು.

ಈ ಸಂದರ್ಭದಲ್ಲಿ ಹಾಜರಿದ್ದ ಶ್ರೀಮತಿ ರಮಾಮಣಿ, ಮುಖ್ಯ ಕಾರ್ಯಾಚರಣೆ ಅಧಿಕಾರಿ, ಬಿಬಿಎಂಪಿರವರು ಇಂಜಿನಿಯರ್‍ಗಳ ಸಂಖ್ಯೆಯನ್ನು ಹೆಚ್ಚಿಸಲಾಗುವುದೆಂದು ತಿಳಿಸಿದರಲ್ಲದೇ, ಇನ್ನೂ ಹೆಚ್ಚುವರಿ ಕಸ ಸಾಗಾಣೆ ಮಾಡುವ ವಾಹನಗಳನ್ನು ಖರೀದಿಸಲು ಟೆಂಡರ್‍ನ್ನು ಆಹ್ವಾನಿಸಲಾಗಿದೆ ಎಂದು ತಿಳಿಸಿ, ತ್ಯಾಜ್ಯವನ್ನು ಸಮರ್ಪಕವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳುತ್ತಿದ್ದು, ನಾಲ್ಕು ತಿಂಗಳ ಸಮಯಾವಕಾಶ ನೀಡುವಂತೆ ವಿನಂತಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿ ಮನೆಯ ಕಂದಾಯ ಸ್ವೀಕರಿಸುವ ಸಂದರ್ಭದಲ್ಲಿ ಘನ ತ್ಯಾಜ್ಯ ವಿಲೇವಾರಿ ತೆರಿಗೆಯನ್ನು ಪ್ರತ್ಯೇಕವಾಗಿ ಸ್ವೀಕರಿಸಲಾಗುತ್ತಿದೆ. ಕಸ ವಿಲೇವಾರಿಗೆಂದು ತೆರಿಗೆ ಸ್ವೀಕರಿಸುತ್ತಿರುವ ಬಿಬಿಎಂಪಿರವರು ಸರ್ಮಪಕವಾಗಿ ಕಸ ವಿಲೇವಾರಿಯನ್ನು ಮಾಡುವುದು ಅವರ ಕರ್ತವ್ಯವಾಗುತ್ತದೆಂದು ಪ್ರತಿಪಾದಿಸಿದರು.

ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಡೆಸುತ್ತಿಲ್ಲವಾದ್ದರಿಂದ, ನಗರದಲ್ಲಿ ಎಲ್ಲೆಂದರಲ್ಲಿ ಬ್ಲಾಕ್ ಸ್ಪಾಟ್‍ಗಳು ರೂಪುಗೊಳ್ಳುತ್ತಿದ್ದು, ಇದರಿಂದ, ಜನ ಸಾಮಾನ್ಯರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿರುವುದಲ್ಲದೇ, ನಗರದ ಸೌಂದರ್ಯವೂ ಸಹಾ ಹಾಳಾಗುತ್ತಿರುವುದರ ಬಗ್ಗೆ ಪ್ರಸ್ತಾಪಿಸಿ, ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ಕೈಗೊಂಡು, ತ್ಯಾಜ್ಯ ವಿಲೇವಾರಿಯನ್ನು ಪರಿಣಾಮಕಾರಿಯಾಗಿ ನಿರ್ವಹಣೆ ಮಾಡಬೇಕೆಂದು ವಿಚಾರಣೆಯಲ್ಲಿ ಹಾಜರಿದ್ದ ಅಧಿಕಾರಿ ವರ್ಗದವರಿಗೆ ಗೌರವಾನ್ವಿತ ಲೋಕಾಯುಕ್ತರವರು ಆದೇಶಿಸಿದರು.
ಮುಂದಿನ ದಿನಾಂಕಗಳಲ್ಲಿ ನಡೆಸಲಾಗುವ ಅನಿರೀಕ್ಷಿತ ಭೇಟಿ ಸಂದರ್ಭದಲ್ಲಿ ಯಾವುದೇ ಬ್ಲಾಕ್ ಸ್ಪಾಟ್‍ಗಳು ಇಲ್ಲದ ರೀತಿಯಲ್ಲಿ ಕಸ ವಿಲೇವಾರಿಯನ್ನು ಮಾಡಬೇಕೆಂದು ಹಾಜರಿದ್ದ ಅಧಿಕಾರಿ ವರ್ಗದವರಿಗೆ ತಿಳಿಸಲಾಯಿತು.
ಬ್ಲಾಕ್ ಸ್ಪಾಟ್‍ಗಳೆಂದು ಗುರುತಿಸಿರುವ ಕಡೆ ಕಸ ಬಿಸಾಡುವುದನ್ನು ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಇದನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು, ಸಿ.ಸಿ. ಕ್ಯಾಮೆರಾಗಳನ್ನು (Sim based CC Camera) ಅಳವಡಿಸಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಯಿತು.

ಯಶವಂತಪುರ ಪ್ರದೇಶದಲ್ಲಿರುವ ರೈಲ್ವೇ ಟ್ರಾಕ್ ಬಳಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವುದು ಕಷ್ಟವಾಗುತ್ತಿದ್ದು, ಈ ಬಗ್ಗೆ ಕ್ರಮ ವಹಿಸುವಂತೆ ರೈಲ್ವೇ ಇಲಾಖೆಗೆ ಪತ್ರ ಮುಖೇನ ತಿಳಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಈ ಬಗ್ಗೆ ಗೌರವಾನ್ವಿತ ಲೋಕಾಯುಕ್ತರವರು, ರೈಲ್ವೇ ಇಲಾಖೆಗೆ ರವಾನಿಸಲಾಗಿರುವ ಪತ್ರದ ಪ್ರತಿಯನ್ನು ಹಾಜರುಪಡಿಸುವಂತೆ ತಿಳಿಸಿದರು. ರೈಲ್ವೇ ಇಲಾಖೆಯ ಸಹಯೋಗದೊಂದಿಗೆ ನಗರದಲ್ಲಿ ಹಾದು ಹೋಗುವ ಬಿಬಿಎಂಪಿ ವ್ಯಾಪ್ತಿಯ ರೈಲ್ವೇ ಟ್ರಾಕ್‍ಗಳ ಇಕ್ಕೆಲಗಳಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿ ಮಾಡಲು  ಕ್ರಮ ಕೈಗೊಳ್ಳುವಂತೆ ತಿಳಿಸಿದರು. ಈ ಬಗ್ಗೆ ವಿವರವಾದ ಟಿಪ್ಪಣಿ ಮಂಡಿಸುವಂತೆ ಲೋಕಾಯುಕ್ತ ಸಂಸ್ಥೆಯ ಪರಿಶೀಲನಾಧಿಕಾರಿಗಳಿಗೆ ಆದೇಶಿಸಲಾಯಿತು.

ನಗರದಲ್ಲಿ ಪೀಕ್ ಅವರ್ ಸಮಯದಲ್ಲಿ ಕಸ ಸಾಗಾಣೆ ಮಾಡುವ ವಾಹನಗಳು ನಗರದಲ್ಲಿ ಚಲಿಸುತ್ತಿರುವುದರಿಂದ ನಾಗರೀಕರಿಗೆ ತೊಂದರೆವುಂಟಾಗುತ್ತಿರುವುದನ್ನು ಕಟ್ಟುನಿಟ್ಟಾಗಿ ತಡೆಗಟ್ಟಲು ಕ್ರಮ ವಹಿಸುವಂತೆಯೂ ಸಹ ತಿಳಿಸಲಾಯಿತು.

Post a Comment

0Comments

Post a Comment (0)