ಬೆಂಗಳೂರು ನಗರ ವಿಶ್ವವಿದ್ಯಾನಿಲಯ ಸಾಮಾಜಿಕ ಬದಲಾವಣೆಗೆ ಕಾನೂನಿನ ಅರಿವು ಪರಿಣಾಮಕಾರಿ ಸಾಧನ

varthajala
0


 ಬೆಂಗಳೂರು, ಜುಲೈ 18, (ಕರ್ನಾಟಕ ವಾರ್ತೆ): ಸಮಾಜ ಕಾರ್ಯ ಕ್ಷೇತ್ರದಲ್ಲಿನ ವೃತ್ತಿಪರರಿಗೆ ಕಾನೂನಿನ ಅರಿವು ಅತ್ಯಗತ್ಯವೆಂದು ರಾಷ್ಟ್ರೀಯ ಕಾನೂನು ಶಾಲೆಯ ಪ್ರತಿನಿಧಿ ವಿಷ್ಣು ಸುಧೀಂದ್ರ ತಿಳಿಸಿದರು.

ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ವತಿಯಿಂದ ಏರ್ಪಡಿಸಲಾಗಿದ್ದ "ನ್ಯಾಯಕ್ಕೆ ಅರಿವು ತುಂಬಿದ ಹಾದಿ: ಸಾಮಾಜಿಕ ಬದಲಾವಣೆಗೆ ಕಾನೂನು ತಿಳುವಳಿಕೆ" ಎಂಬ ವಿಷಯದ ಕುರಿತ ವಿಶೇಷ ಉಪನ್ಯಾಸದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಮಹಿಳೆಯರು ಮತ್ತು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ, ಬಾಲ್ಯ ವಿವಾಹದ ಪದ್ಧತಿಯ ಅಪಾಯಗಳ ಬಗ್ಗೆ ಜಾಗೃತಿ, ಕೌಟುಂಬಿಕ ದೌರ್ಜನ್ಯ ತಡೆ ಮುಂತಾದ ಸವಾಲುಗಳನ್ನು ನಿಭಾಯಿಸಲು ಸಂಬಂಧಿಸಿದ ಕಾನೂನುಗಳ ತಿಳುವಳಿಕೆ ಬಹಳ ಉಪಯುಕ್ತವಾಗಬಲ್ಲದೆಂದು ಅವರು ವಿವರಿಸಿದರು.
ಮೂಲಭೂತ ಹಕ್ಕುಗಳ ಉಲ್ಲಂಘನೆ, ಬಾಲಕಾರ್ಮಿಕ ಪದ್ಧತಿಯ ನಿμÉೀಧ, ಬಾಲಾಪರಾಧಿ ಪ್ರಕರಣಗಳು, ಇತ್ಯಾದಿ ಸಂದರ್ಭಗಳಲ್ಲಿ ಯಾವುದೇ ಮಧ್ಯಪ್ರವೇಶಕ್ಕೆ ಆಯಾ ಕಾನೂನುಗಳ ಪರಿಣಾಮಕಾರಿ ಬಳಕೆಯ ಮಹತ್ವವನ್ನು ಅವರು ಒತ್ತಿ ಹೇಳಿದರು.
ಸರ್ಕಾರಿ ಮತ್ತು ಖಾಸಗಿ ಕಚೇರಿ, ಕಾರ್ಖಾನೆ ಅಥವಾ ಕಂಪನಿಗಳಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ತಡೆಗೆ ಸಮಿತಿಗಳ ರಚನೆ ಕಡ್ಡಾಯ ನಿಯಮವಾಗಿದೆ ಎಂದು ಅವರು ಉಲ್ಲೇಖಿಸಿದರು. ಜನಸಾಮಾನ್ಯರು ಉಚಿತ ಕಾನೂನು ಸೇವೆಯ ಸಂಪೂರ್ಣ ಪ್ರಯೋಜನ ಪಡೆಯುವ ನಿಟ್ಟಿನಲ್ಲಿ ಸ್ವಯಂಸೇವಾ ಸಂಸ್ಥೆಗಳು ಹೆಚ್ಚು ಕಾರ್ಯೋನ್ಮುಖರಾಗುವಂತೆ ಅವರು ಸಲಹೆ ನೀಡಿದರು.
ಬೆಂಗಳೂರು ನಗರ ವಿಶ್ವವಿದ್ಯಾನಿಲಯದ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ರಿತ್ತಿಕಾ ಸಿನ್ಹಾರವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಅಧ್ಯಾಪಕರಾದ ಡಾ. ಸಂಗಪ್ಪ ವಗ್ಗರ ಪ್ರಾಸ್ತಾವಿಕವಾಗಿ ಮಾತನಾಡಿ ನ್ಯಾಯದ ಲೋಕವನ್ನು ಸಮರ್ಪಕವಾಗಿ ಅರ್ಥಮಾಡಿಕೊಳ್ಳಲು ಕಾನೂನು ಸಾಕ್ಷರತೆ ಮತ್ತು ಜಾಗೃತಿ ಸಹಕಾರಿಯಾಗಲಿದೆ ಎಂದು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ವಿಭಾಗದ ಉಪನ್ಯಾಸಕರು ಉಪಸ್ಥಿತರಿದ್ದರು.

Post a Comment

0Comments

Post a Comment (0)