ಬೆಂಗಳೂರು, ಜೂನ್ 10 (ಕರ್ನಾಟಕ ವಾರ್ತೆ): ಕರ್ನಾಟಕದ ಮಲೆನಾಡ ಜೇನು ಸಾಕಾಣಿಕೆ ದೇಶದಲ್ಲಿಯೇ ವಿಶೇಷವಾದದ್ದು. ರಾಜ್ಯದ ವಾತಾವರಣ ಮತ್ತು ಸಸ್ಯ ಸಂಪತ್ತು ಜೇನು ಕೃಷಿಗೆ ಪೂರಕವಾಗಿದ್ದು 50,000 ಕ್ಕೂ ಹೆಚ್ಚು ಜೇನು ಕೃಷಿಕರನ್ನೊಳಗೊಂಡು ಲಕ್ಷಾಂತರ ತುಡುವೆ ಜೇನು ಕುಟುಂಬಗಳ ನಿರ್ವಹಣೆಯಿಂದ ವಾರ್ಷಿಕವಾಗಿ 1200 ಟನ್ ಗಳಷ್ಟು ಜೇನು ಉತ್ಪಾದನೆಯಾಗುತ್ತಿದೆ.
ಥೈಸ್ಯಾಕ್ ಬ್ರೂಡ್ ವೈರಾಣು ರೋಗ ಹಾವಳಿಯಿಂದ ಬಳಲಿರುವ ರಾಜ್ಯದ ಜೇನು ಸಾಕಾಣಿಕೆ ಉದ್ಯಮಕ್ಕೆ “ಸ್ಮಾಲ್ ಹೈವ್ ಬೀಟಲ್” ಎಂಬ ಹೊಸ ಕೀಟ ಮತ್ತೊಂದು ಹೊಸ ಸಮಸ್ಯೆಯಾಗಬಲ್ಲದು. ಇತ್ತೀಚೆಗೆ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಮೆಲ್ಲಿಪೆರಾ ಜಾತಿಯ ಜೇನು ಕುಟುಂಬಕ್ಕೆ ಸ್ಮಾಲ್ ಹೈವ್ ಬೀಟಲ್ ಕೀಟ ಕಂಡು ಬಂದಿದ್ದು 20,000 ಕ್ಕೂ ಹೆಚ್ಚು ಜೇನು ಕುಟುಂಬಗಳು ನಾಶವಾದ ವರದಿಗಳಿವೆ.
ಈ ಕೀಟದ ವ್ಯಾಪಕ ಹಾವಳಿಯ ಮುನ್ಸೂಚನೆ ತಿಳಿದು ಬೆಂಗಳೂರು ಕೃಷಿ ವಿಶ್ವವಿದ್ಯಾನಿಲಯದ ಜೇನು ಕೃಷಿ ವಿಜ್ಞಾನಿಗಳ ತಂಡವು ಒಂದು ವರ್ಷದ ಕಾಲ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ “ಸ್ಮಾಲ್ ಹೈವ್ ಬೀಟಲ್” ಕೀಟಗಳ ಬಗ್ಗೆ ಸಮೀಕ್ಷೆಯನ್ನು ನಡೆಸಲಾಯಿತು.
ಸ್ಮಾಲ್ ಹೈವ್ ಬೀಟಲ್ ಬಾಧೆಯು ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳಲ್ಲಿ ಮೆಲ್ಲಿಫೆರಾ ಮತ್ತು ತುಡುವೆ ಜೇನು ಕುಟುಂಬಗಳಲ್ಲಿ ಕಂಡು ಬಂದಿದೆ. ಮೈಸೂರು ಜಿಲ್ಲೆಯ 6 ಸ್ಥಳಗಳಲ್ಲಿ 480 ತುಡುವೆ ಜೇನು ಕುಟುಂಬಗಳನ್ನು ಪರೀಕ್ಷಿಸಿದಾಗ 58.33% ಕೀಟಬಾಧೆಯ ಪ್ರಮಾಣವಿದ್ದು 280 ಜೇನು ಕುಟುಂಬಗಳು ಗೂಡು ಬಿಟ್ಟು ಪಲಾಯನವಾಗಿವೆ. ಈ ಸ್ಮಾಲ್ ಹೈವ್ ಬೀಟಲ್‍ಕೀಟವು ಮರಿಹುಳುಗಳು ಜೇನುಕುಟುಂಬಕ್ಕೆ ಹೆಚ್ಚು ಹಾನಿ ಮಾಡುತ್ತದೆ. ಈ ಕೀಟವೂ ಜೇನುಗೂಡುಗಳಲ್ಲಿ ಪರಾಗ, ಜೇನುತುಪ್ಪ ಮತ್ತು ಸತ್ತ ಜೇನುನೊಣಗಳನ್ನು ತಿನ್ನುತ್ತಾ ಜೀವಿಸುವ ಸಣ್ಣ ಕಂದು-ಕಪ್ಪು ಬಣ್ಣದ ಜೀರುಂಡೆಯಾಗಿದೆ. ಮರಿಹುಳು ಹಂತವು ಎರಿಗಳಲ್ಲಿನ ಜೇನುತುಪ್ಪ ಮತ್ತು ಪರಾಗವನ್ನು ತಿನ್ನುವ ಮೂಲಕ ಸಕ್ರಿಯವಾಗಿ ಜೇನುಗೂಡುಗಳಿಗೆ ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ.
ಜೇನುಗೂಡಿನ ಎರಿಗಳಲ್ಲಿ ಮರಿ ಹುಳುಗಳು ಮಲವಿಸರ್ಜನೆ ಮಾಡುವುದರಿಂದ ಜೇನುತುಪ್ಪದ ಬಣ್ಣ ಕಂದು ಬಣ್ಣಕ್ಕೆ ತಿರುಗುತ್ತದೆ ಮತ್ತು ಹುಳಿಯಾಗುವಿಕೆಗೆ ಕಾರಣವಾಗುತ್ತವೆ. ಕೀಟದ ಬಾಧೆ ತಾಳಲಾಗದೆ ಜೇನುಹುಳುಗಳು ಗೂಡು ಬಿಟ್ಟು ಪರಾರಿಯಾಗುತ್ತವೆ. ಮೈಸೂರು ಜಿಲ್ಲೆಯೊಂದರಲ್ಲಿಯೇ ಒಂದು ತಿಂಗಳ ಅಂತರದಲ್ಲಿ 280 ಜೇನು ಕುಟುಂಬಗಳು ಪಲಾಯನವಾಗಿರುವುದು ಜೇನು ಕೃಷಿಗೆ ದೊಡ್ಡ ಪೆಟ್ಟು ಬಿಳುವು ಮುನ್ಸೂಚನೆಯಂತಿದೆ.
ರೈತರು ಜೇನುನೊಣಗಳ ಕುಟುಂಬಗಳಲ್ಲಿ ಸ್ಮಾಲ್ ಹೈವ್ ಬೀಟಲ್ ಬಾಧೆಯ ಕುರಿತು ನಿಯಮಿತವಾಗಿ ಪರಿಶೀಲನೆ ಮಾಡಿ ಕ್ವಾರಂಟೈನ್ ಕ್ರಮಗಳನ್ನು ಜಾರಿಗೊಳಿಸಿ ಸೋಂಕಿತ ಕುಟುಂಬಗಳ ವರ್ಗಾವಣೆಯನ್ನು ನಿರ್ಬಂಧಿಸಬೇಕು. ಪಕ್ಕದ ರಾಜ್ಯಗಳಿಂದ ಸೋಂಕಿತ ಜೇನುನೊಣಗಳ ಕುಟುಂಬಗಳನ್ನು (ವಿಶೇಷವಾಗಿ ಮೆಲ್ಲಿಪೆರಾ) ಖರೀದಿಯನ್ನು ನಿಲ್ಲಿಸಬೇಕು. ಎಲ್ಲಾ ಸೋಂಕಿತ ಜೇನುಗೂಡುಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸುವುದು. ಸೋಂಕಿತ ಖಾಲಿ ಏರಿಗಳನ್ನು ಸುಟ್ಟು ಹಾಕುವುದು ಅಥವಾ ಅಗತ್ಯ ಇದ್ದಲ್ಲಿ ಪರಿಸರ ಸ್ನೇಹಿಕೀಟ ನಾಶಕ ಸಿಂಪಡಣೆ ಮಾಡುವುದರ ಮೂಲಕ ಈ ಕೀಟವನ್ನು ಹತೋಟಿÉ ಮಾಡಬಹುದು ಎಂದು ಜೇನು ಕೃಷಿ ವಿಜ್ಞಾನಿಗಳು ತಿಳಿಸಿದ್ದಾರೆ.