ಕಡಬ(ದ.ಕನ್ನಡ): "ಧರ್ಮಸ್ಥಳದ ವಿಚಾರದಲ್ಲಿ ಗಂಭೀರ ಆರೋಪ ಎದುರಾಗಿದೆ. ಇಲ್ಲಿ ಎಸ್‌ಐಟಿಯವರು ಪಾರದರ್ಶಕವಾಗಿ ತನಿಖೆ ಮಾಡುತ್ತಾರೆ. ಇಲ್ಲವಾದರೆ, ಮುಂದೆ ನ್ಯಾಯಾಲಯದಲ್ಲಿ ಇದು ಪ್ರಶ್ನೆಯಾಗುತ್ತದೆ. ಆದ್ದರಿಂದ ಈ ವಿಚಾರದಲ್ಲಿ ಅನುಮಾನವೇ ಬೇಡ" ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಕಡಬ ಪಟ್ಟಣ ಪಂಚಾಯತ್ ಚುನಾವಣೆ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ಕಡಬ ಅನುಗ್ರಹ ಸಭಾಭವನದಲ್ಲಿ ನಡೆದ ಕಾಂಗ್ರೆಸ್ ಸಮಾವೇಶ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
"ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಕಡಬದ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಗದ್ದುಗೆಗೆ ಏರಿಸುವುದು ಮುಂದಿನ ತಾಲೂಕು, ಜಿಲ್ಲಾ ಪಂಚಾಯತ್ ಚುನಾವಣೆಗೆ ದಿಕ್ಸೂಚಿಯಾಗಲಿದೆ. ಆ ಮೂಲಕ ಜಿಲ್ಲೆಯಲ್ಲಿ ಕಾಂಗ್ರೆಸ್ ಬಾವುಟ ಹಾರಿಸಬೇಕು. ಕಾಂಗ್ರೆಸ್ಗೆ ದ.ಕ ಮತ್ತು ಉಡುಪಿ ಜಿಲ್ಲೆ ಸವಾಲಾಗಿದೆ. ಇಲ್ಲಿ ಜನರ ಮಧ್ಯೆ ಧರ್ಮದ ಕಂದಕವನ್ನು ಸೃಷ್ಟಿಸುತ್ತಾ, ಕೋಮು ಭಾವನೆಗಳನ್ನು ಕೆರಳಿಸಿ, ಮತ ಬ್ಯಾಂಕ್ ಮಾಡಿಕೊಂಡಿರುವ ಬಿಜೆಪಿ ಇಲ್ಲಿ ಗಟ್ಟಿನೆಲೆಯೂರಿದೆ. ಬಿಜೆಪಿಯ ಭದ್ರಕೋಟೆ ಎನಿಸಿಕೊಂಡಿದ್ದ ಮಡಿಕೇರಿಯನ್ನು ಕಾಂಗ್ರೆಸ್ ಛಿದ್ರಮಾಡಿದೆ. ಮುಂದೆ ಇಲ್ಲಿನ ಸರದಿಯಾಗಲಿದೆ" ಎಂದು ಹೇಳಿದ ಸಚಿವರು, "ರಾಜ್ಯ ಸರಕಾರದ ಜನಪರ ಗ್ಯಾರಂಟಿ ಯೋಜನೆಗಳನ್ನು ಕಡಬ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತಿಸಿ ಅಧಿಕಾರ ಪಡೆಯಬೇಕು" ಎಂದು ಕರೆ ನೀಡಿದರು.