ರಾಜ್ಯದಲ್ಲಿ ಪ್ಲಾಸ್ಟರ್ ಆಫ್ ಪ್ಯಾರೀಸ್ (ಪಿಒಪಿ) ನಿಂದ ತಯಾರಿಸಿದ ಹಾಗೂ ಬಣ್ಣ ಲೇಪಿತ ಗಣಪತಿ ಮೂರ್ತಿಗಳನ್ನು ನೀರಿನ ಮೂಲಗಳಲ್ಲಿ ವಿಸರ್ಜನೆ ಮಾಡುವುದರಿಂದ ಉಂಟಾಗುವ ಜಲಮಾಲಿನ್ಯ ತಡೆಯಲು ರಾಜ್ಯ ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣಾ ಮಂಡಳಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಿದೆ.
ಪಿಒಪಿ ಗಣಪತಿ ಮೂರ್ತಿಗಳನ್ನು ನೀರಿನಲ್ಲಿ ವಿಸರ್ಜಿಸುವುದರಿಂದ ಜಲಮೂಲಗಳ ಮೇಲೆ ಅವಲಂಭಿತವಾದ ಪಶು, ಪಕ್ಷಿ, ಪ್ರಾಣಿ, ಇತರ ಜಲಚರ, ಪರಿಸರ ಹಾಗೂ ಸಾರ್ವಜನಿಕರ ಆರೋಗ್ಯಕ್ಕೆ ಸಹ ಹಾನಿ ಉಂಟಾಗುತ್ತದೆ. ಮಾಲಿನ್ಯ ನಿಯಮಂತ್ರಣ ಮಂಡಳಿ ಜುಲೈ 20, 2016ರಲ್ಲಿ ಹೊರಡಿಸಿರುವ ಅಧಿಸೂಚನೆಯಂತೆ ಸಂಬಂಧಪಟ್ಟ ಇಲಾಖೆಯ ಮುಖ್ಯಸ್ಥರು, ಜಿಲ್ಲಾಧಿಕಾರಿಗಳು, ಆಯುಕ್ತರು, ಮುಖ್ಯ ಅಧಿಕಾರಿಗಳು, ಕರ್ನಾಟದ ಎಲ್ಲಾ ಮಹಾನಗರ ಪಾಲಿಕೆ, ಪುರಸಭೆ, ತಾಲ್ಲೂಕು, ಪಟ್ಟಣ ಪಂಚಾಯಿತಿ ಇವರುಗಳಿಗೆ ಪಿಒಪಿ ಮೂರ್ತಿಗಳನ್ನು ನದಿಯ ಮೂಲದಲ್ಲಿ ವಿಸರ್ಜಿಸಲು ತಡೆಯಲು ಸೂಕ್ತ ನಿರ್ದೇಶನ ನೀಡಿದೆ.ಮಾನ್ಯ ಉಚ್ಛನ್ಯಾಯಾಲಯ ಸಹ ಜನವರಿ 31, 2017 ರಂದು ನೀಡಿರುವ ಆದೇಶದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಹೊರಡಿಸಿರುವ ಅಧಿಸೂಚನೆಯನ್ನು ಕ್ರಮಬದ್ಧಗೊಳಿಸಿದ್ದು, ಸದರಿ ಪ್ರತಿಯನ್ನು ಸಂಬಂಧಪಟ್ಟವರೆಲ್ಲಾ ಪಾಲಿಸುವಂತೆ ಸೂಚಿಸಲಾಗಿದೆ.
ಕರ್ನಾಟಕ ಸರ್ಕಾರ ಸೆಪ್ಟಂಬರ್ 15, 2023ರ ಆದೇಶದಂತೆ ರಾಜ್ಯದಲ್ಲಿ ಭಾರಲೋಹ ಮಿಶ್ರಿತ, ರಾಸಾಯನಿಕ ಬಣ್ಣದಿಂದ ಅಲಂಕೃತಗೊಂಡ ಯಾವುದೇ ರೀತಿಯ ಪಿಒಪಿಯಿಂದ ತಯಾರಿಸಿದ ವಿಗ್ರಹಗಳ ಉತ್ಪಾದನೆ, ಮಾರಾಟ ಹಾಗೂ ಅವುಗಳನ್ನು ನೀರಿನ ಮೂಲದಲ್ಲಿ ವಿಸರ್ಜಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ. ವಿಗ್ರಹಗಳನ್ನು ವೈಜ್ಞಾನಿಕವಾಗಿ ಹಾಗೂ ಗೌರವ ಪೂರ್ವಕವಾಗಿ ವಿಲೇವಾರಿ ಮಾಡಲು ಸೂಕ್ತ ಕ್ರಮ ವಹಿಸುವಂತೆ ಸಹ ನಿರ್ದೇಶಿಸಿದೆ. ಆದಾಗ್ಯೂ, ಸಂಬಂಧಪಟ್ಟ ಇಲಾಖೆಗಳು ಈ ಕುರಿತು ಸೂಕ್ತ ಕ್ರಮ ಕೈಗೊಂಡಿರುವುದಿಲ್ಲ.
ಪಿಒಪಿ ಮೂರ್ತಿಗಳ ತಯಾರಿಕೆ, ಮಾರಾಟ ಹಾಗೂ ಜಲಮೂಲಗಳಲ್ಲಿ ವಿಸರ್ಜಿಸುವ ಕುರಿತು ಮಾನ್ಯ ಉಚ್ಛನ್ಯಾಯಾಲಯ, ಸರ್ಕಾರ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ಇಲಾಖೆಗಳು ನೀಡಿರುವ ಆದೇಶ, ನಿರ್ದೇಶನಗಳನ್ನು ಸಂಬಂಧಪಟ್ಟ ಇಲಾಖೆಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಸೂಚಿಸಲಾಗಿದೆ.
