ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ): ಪರಿಸರವಾದಿ ಸಾಲು ಮರದ ದಿವಂಗತ ತಿಮ್ಮಕ್ಕ ಅವರ ಹೆಸರಿನಲ್ಲಿ 1 ಕೋಟಿ ರೂ. ದತ್ತಿನಿಧಿ ಸ್ಥಾಪಿಸಿ, ಸರ್ಕಾರದ ಅನುದಾನದೊಂದಿಗೆ ತಿಮ್ಮಕ್ಕ ಅವರ ಹೆಸರಿನಲ್ಲಿ ಪ್ರತಿ ವರ್ಷ 5 ಜನ ಪರಿಸರವಾದಿಗಳಿಗೆ ಪರಿಸರ ಪ್ರಶಸ್ತಿ ವಿತರಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಇಂದು ಅರಮನೆ ಮೈದಾನದ ಕೃಷ್ಣ ವಿಹಾರದಲ್ಲಿ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ-2025ರ ಕಾರ್ಯಕ್ರಮಕ್ಕೆ ಸಸಿಗಳಿಗೆ ನೀರು ಹಾಕುವ ಮೂಲಕ ಪರಿಸರ ಸ್ನೇಹಿಯಾಗಿ ಕಾರ್ಯಕ್ರಮ ಉದ್ಘಾಟಿಸಿದರು. ನಂತರ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರ ಜನ್ಮ ದಿನವಾದ ಇಂದು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಹಾಗೂ ಇತ್ತೀಚೆಗೆ ನಿಧನರಾದ ದಿವಂಗತ ಸಾಲು ಮರದ ತಿಮ್ಮಕ್ಕ ಅವರಿಗೆ ಒಂದು ನಿಮಿಷ ಮೌನಾಚರಣೆ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿಗಳು, ಇಡೀ ದೇಶದಾದ್ಯಂತ ಇಂದು ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ಜಯಂತೋತ್ಸವನ್ನು ಆಚರಿಸಲಾಗುತ್ತಿದೆ. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1974 ರಲ್ಲಿ ಮಾಲಿನ್ಯ ನಿಯಂತ್ರಣ ಕಾಯ್ದೆ ಜಾರಿಗೆ ತಂದಿದ್ದು, ಇಲಾಖೆ ಪ್ರಾರಂಭವಾಗಿ 50 ವರ್ಷ ಪೂರ್ಣಗೊಳಿಸಿರುವ ಹಿನ್ನೆಲೆಯಲ್ಲಿ ಅವರ ಜನ್ಮ ದಿನದಂದು ಸುವರ್ಣ ಮಹೋತ್ಸವವನ್ನು ಆಚರಿಸಲಾಗುತ್ತಿದೆ ಎಂದರು.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪ್ರತಿ ವರ್ಷ ಸಾರ್ವಜನಿಕರಲ್ಲಿ ಮಾಲಿನ್ಯ ನಿಯಂತ್ರಣದ ಬಗ್ಗೆ ಅರಿವು ಮೂಡಿಸಬೇಕು. ಮಾಲಿನ್ಯ ನಿಯಂತ್ರಣ ಸರ್ಕಾರದಿಂದ ಮಾತ್ರ ಸಾಧ್ಯವಾಗುವುದಿಲ್ಲ ಸಾರ್ವಜನಿಕರು ಸಹ ಕೈಜೋಡಿಸಿದಾಗÀ ಮಾಲಿನ್ಯ ನಿಯಂತ್ರಣ ಸಾಧ್ಯ. ಪರಿಸರವಾದಿ ತಿಮ್ಮಕ್ಕ ಅವರು ಮರ-ಗಿಡಗಳನ್ನು ನೆಟ್ಟು, ಮಕ್ಕಳಂತೆ ಪೋಷಿಸುತ್ತಿದ್ದರು. ಪ್ರತಿಯೊಬ್ಬರೂ ಅವರಂತೆ ಆಗಬೇಕು ಎಂದು ಕರೆ ನೀಡಿದರು.
ಭೂಮಿ ಮೇಲಿರುವ ಎಲ್ಲಾ ಪ್ರಾಣಿ, ಸಂಕುಲ, ಗಿಡ-ಮರಗಳಿಗೆ ಮಾಲಿನ್ಯ ಇಲ್ಲದ ಪರಿಸರ ಅತ್ಯವಶ್ಯಕವಾಗಿದ್ದು, ನಾವು ಬಳಸುವ ನೀರು, ಗಾಳಿ, ಪರಿಸರವನ್ನು ಸ್ವಚ್ಚವಾಗಿಟ್ಟುಕೊಳ್ಳುವುದು ಅತ್ಯವಶ್ಯಕ. ಕೇಂದ್ರ ಸರ್ಕಾರವು 131 ನಗರಗಳನ್ನು ಮಾಲಿನ್ಯದಿಂದ ಕೂಡಿದೆ ಎಂದು ಗುರುತಿಸಿದೆ. ಬೆಂಗಳೂರು ನಗರ ಒಂದರಲ್ಲೆ 900 ಟನ್ ಪ್ಲಾಸ್ಟಿಕ್ ಉತ್ಪಾದನೆಯಾಗುತ್ತಿದೆ. ನಾವು ಇದನ್ನು ಅರ್ಥ ಮಾಡಿಕೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ಬೆಂಗಳೂರು ನಗರದಲ್ಲಿ ವಾಸ ಮಾಡಲು ಸಾಧ್ಯವಾಗದಂತಹ ಅನಿವಾರ್ಯ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ ಎಂದರು.
ಕರ್ನಾಟಕ ರಾಜ್ಯವನ್ನು 2030ರೊಳಗೆ ಪ್ಲಾಸ್ಟಿಕ್ ಮುಕ್ತ ರಾಜ್ಯವನ್ನಾಗಿಸಲು ಎಲ್ಲರೂ ಪಣತೊಡೋಣ ಎಂದು ಕರೆ ನೀಡಿದರು. ಸಾರ್ವಜನಿಕರು ಮಾಲಿನ್ಯ ನಿಯಂತ್ರಣಕ್ಕೆ ಸರ್ಕಾರದ ಜೊತೆ ಕೈ ಜೋಡಿಸಿದರೆ ಮಾಲಿನ್ಯ ನಿಯಂತ್ರಣ ಸಾಧ್ಯ. ಸಾರ್ವಜನಿಕರ ಮನೆಗಳಲ್ಲಿ ಹಸಿ ಕಸ ಮತ್ತು ಒಣ ಕಸ ಬೇರ್ಪಡಿಸುವಂತೆ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಎಲ್ಲಾ ಗ್ರಾಮಪಂಚಾಯಿತಿಗಳಲ್ಲೂ ಈ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಕ್ರಮವಹಿಸಲಾಗಿದೆ. ಇನ್ನೂ ಹೆಚ್ಚಿನ ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲರೂ ಕ್ರಮವಹಿಸಬೇಕು ಎಂದು ತಿಳಿಸಿದರು.
ಕೈಗಾರಿಕೋದ್ಯಮಿಗಳು ಪರಿಸರ ಮಾಲಿನ್ಯ ಮಾಡದಂತೆ ನೋಡಿಕೊಳ್ಳುವುದು ಅತ್ಯಂತ ಅವಶ್ಯಕವಾಗಿದ್ದು, ಪರಿಸರ ಸಂರಕ್ಷಣೆ ಮಾಡಿ ಬೇರೆಯವರಿಗೆ ಮಾದರಿಯಾಗೋಣ. ಪ್ರತಿ ವರ್ಷ ಪರಿಸರ ದಿನವನ್ನು ಆಚರಿಸಿ ಜನರಲ್ಲಿ ಜಾಗೃತಿ ಮೂಡಿಸುವಂತೆ ಮಂಡಳಿಗೆ ಸೂಚಿಸಿದರು.
ಇದೇ ಸಂದರ್ಭದಲ್ಲಿ ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದವರಿಗೆ ರಾಜ್ಯ ಮಟ್ಟದ “ಇಂದಿರಾ ಪ್ರಿಯದರ್ಶಿನಿ” ಪರಿಸರ ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾತನಾಡಿ, ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ಇಡೀ ರಾಷ್ಟ್ರಕ್ಕೆ ಕೊಟ್ಟ ಕೊಡುಗೆಗಳಲ್ಲಿ ಮಾಲಿನ್ಯ ಇಲಾಖೆ ಸ್ಥಾಪನೆಯು ಒಂದು. ನಾವು ಬದುಕಿರುವುದು ಗಾಳಿ, ನೀರು, ಬೆಳಕು, ಪ್ರಕೃತಿಯಿಂದ. ಇಂತಹ ಪರಿಸರವನ್ನು ಸಂರಕ್ಷಣೆ ಮಾಡದಿದ್ದರೆ, ಮನುಷ್ಯರು ಜೀವಿಸುವುದು ಕಷ್ಟವಾಗುತ್ತದೆ. ದಕ್ಷಿಣ ಭಾರತದವರು ಉತ್ತಮ ಪರಿಸರವನ್ನು ಹೊಂದಿದ್ದು ನಾವೇ ಪುಣ್ಯವಂತರು ಎಂದರು.
ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಸಚಿವ ಈಶ್ವರ್ ಬಿ. ಖಂಡ್ರೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಕೃತಿ, ಪರಿಸರ, ಅರಣ್ಯ ಉಳಿಸುವಂತೆ ಮಂಡಳಿಯ ವತಿಯಿಂದ 31 ಜಿಲ್ಲೆಗಳಲ್ಲಿಯೂ ಸಾರ್ವಜನಿಕರಿಗೆ, ವಿದ್ಯಾರ್ಥಿಗಳಿಗೆ, ಕೈಗಾರಿಕೋದ್ಯಮಿಗಳಿಗೆ ಜಾಗೃತಿ ಮೂಡಿಸುವುದರ ಜೊತೆಗೆ ಪರಿಸರ ಸಂರಕ್ಷಣಾ ಕಾನೂನುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವಂತೆ ಸೂಚಿಸಲಾಗಿದೆ. ಕಾರ್ಯಕ್ರಮ ಯಶಸ್ವಿಯಾಗಿದ್ದು, ಇಂದು ಸಮಾರೋಪ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಉಕ್ಕಿನ ಮಹಿಳೆ ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರು ದೇಶಕ್ಕೆ ಅನೇಕ ಕೊಡುಗೆ ನೀಡಿದ್ದಾರೆ. ಅವರಿಗೆ ಪ್ರಕೃತಿ ಮತ್ತು ಪರಿಸರದ ಬಗ್ಗೆ ಕಾಳಜಿ ಇತ್ತು. ದೇಶದಲ್ಲಿ ಅರಣ್ಯ ಉಳಿದಿದೆ ಎಂದರೆ ಇಂದಿರಾ ಗಾಂಧಿಯವರು ಜಾರಿಗೆ ತಂದ ಹಸಿರು ಕ್ರಾಂತಿ, ವನ್ಯ ಜೀವಿ ಸಂರಕ್ಷಣೆ ಕಾಯ್ಧೆ, ಅರಣ್ಯ ಕಾಯ್ದೆಗಳು. ಮುಂದಿನ ಪೀಳಿಗೆಗೆ ಆರೋಗ್ಯಕರ ಭೂಮಿಯನ್ನು ಹಸ್ತಾಂತರ ಮಾಡುವುದು ನಮ್ಮ ಮೇಲಿದೆ. ಅಕ್ರಮವಾಗಿ ಮರ ಕಡಿಯುವುದನ್ನು ತಡೆಗಟ್ಟಬೇಕು. ಬೆಂಗಳೂರಿನ ರಸ್ತೆ ಬದಿಯಲ್ಲಿ, ಮನೆಗಳ ಮುಂಭಾಗದಲ್ಲಿ ಸಸಿಗಳನ್ನು ಬೆಳೆಸುವ ಮೂಲಕ ಪ್ರಕೃತಿಯನ್ನು ರಕ್ಷಿಸೋಣ. ಪ್ಲಾಸ್ಟಿಕ್ ಪರಿಸರಕ್ಕೆ ಮಾರಕವಾಗಿದ್ದು, ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ, ಹಿಂದಿನ ನಮ್ಮ ಹಿರಿಯರು ಬಳಸುತ್ತಿದ್ದ ಬಟ್ಟೆಯ ಚೀಲಗಳನ್ನು ಬಳಸಬೇಕು. ಮಾಲಿನ್ಯ ಮುಕ್ತ ಕರ್ನಾಟಕ ರಾಜ್ಯವನ್ನಾಗಿ ಮಾಡಲು ಪಣತೊಡೋಣ ಎಂದರು.
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಪಿ.ಎಂ.ನರೇಂದ್ರಸ್ವಾಮಿ ಅವರು ಪ್ರಾಸ್ತಾವಿಕ ಮಾತನಾಡಿ, ಇಡೀ ರಾಜ್ಯದ ಜನರ ಭವಿಷ್ಯತ್ತಿನ ಜವಾಬ್ದಾರಿ ಪರಿಸರ. ಅದರ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಅವಶ್ಯಕವಾಗಿದೆ. ರಾಜ್ಯಾದಾದ್ಯಂತ ಭವಿಷ್ಯತ್ತಿನ ಪೀಳಿಗೆಗೆ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಲಾಗಿದೆ. ಪರಿಸರ ಸಂರಕ್ಷಣೆಗೆ ಕೊಡುಗೆ ನೀಡಿದವರನ್ನು ಗುರುತಿಸಿ, ಪುರಸ್ಕರಿಸಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಸುರೇಶ ಬಿ.ಎಸ್., ಕೃಷಿ ಸಚಿವ ಎನ್.ಚಲುವರಾಯಸ್ವಾಮಿ, ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್, ಶಾಸಕರಾದ ಸಿ.ಎನ್.ಅಶ್ವಥ್ ನಾರಾಯಣ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ, ನೆಲಮಂಗಲ ಶಾಸಕ ಶ್ರೀನಿವಾಸ್, ಪುಲಕೇಶಿನಗರ ಶಾಸಕ ಎ.ಸಿ.ಶ್ರೀನಿವಾಸ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯರುಗಳಾದ ಮರಿಸ್ವಾಮಿಗೌಡ ಕೆ., ಡಾ.ಪ್ರದೀಪ್ ಸಿ., ಶರಣ್ ಕುಮಾರ್ ಎಂ, ಮೋದಿ, ಅರಣ್ಯ, ಜೀವಿಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಅಂಜುಮ್ ಪರ್ವೇಜ್, ಪ್ರಧಾನ ಕಾರ್ಯದರ್ಶಿ ಶ್ರೀನಿವಾಸಲು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು.