ಬೆಂಗಳೂರು, ನವೆಂಬರ್ 19 (ಕರ್ನಾಟಕ ವಾರ್ತೆ): ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ದಾಖಲಾಗಿರುವ ಪ್ರಕರಣ ಸಂಖ್ಯೆ 28665/2025, 28668/2025 ಮತ್ತು 28675/2025ಕ್ಕೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯದ 2025ನೇ ಸೆಪ್ಟೆಂಬರ್ 25 ಆದೇಶದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಸಂಗ್ರಹಿಸಿದ ಮಾಹಿತಿ ಮತ್ತು ದತ್ತಾಂಶಗಳು ಸೋರಿಕೆಯಾಗದಂತೆ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಸೂಚಿಸಿದೆ.
ಆಯೋಗದಿಂದ ಮಾನ್ಯ ಉಚ್ಚ ನ್ಯಾಯಾಲಯಕ್ಕೆ ಅಫಿಡವಿಟ್‍ನ್ನು (Affidavit) ಸಲ್ಲಿಸಲಾಗಿರುತ್ತದೆ. ಸಮೀಕ್ಷೆಯ ಮಾಹಿತಿ ಹಾಗೂ ದತ್ತಾಂಶಗಳ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಮತ್ತು ಬದ್ಧತೆಯನ್ನು ಆಯೋಗ ಹೊಂದಿದ್ದು, ಈ ನಿಟ್ಟಿನಲ್ಲಿ ಅಗತ್ಯ ಕ್ರಮಕೈಗೊಳ್ಳಲಾಗಿದೆ.
2025ರ ಕರ್ನಾಟಕ ರಾಜ್ಯದ ಜಾತಿಗಣತಿ ವರದಿ ಎಂಬ ಶೀರ್ಷಿಕೆಯಡಿ ವಿವಿಧ ಜಾತಿಗಳ ಜನಸಂಖ್ಯೆಯ ತಪ್ಪು ಮಾಹಿತಿಯನ್ನು ವಾಟ್ಸಪ್ ನಲ್ಲಿ ಹಂಚಿಕೆ ಮಾಡಿರುವ ಮೊಬೈಲ್ ಸಂಖ್ಯೆ: 8618891657 ಮತ್ತು 9972508500 ರ ವ್ಯಕ್ತಿಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಈಗಾಗಲೇ ಕ್ರಮಕೈಗೊಳ್ಳಲಾಗಿದೆ.
ಸಮೀಕ್ಷಾ ದತ್ತಾಂಶಗಳ ಬಗ್ಗೆ ಸುಳ್ಳು ಮಾಹಿತಿಯನ್ನು ಸೃಜಿಸಿ, ಸಾಮಾಜಿಕ ಜಾಲತಾಣಗಳಾದ ವಾಟ್ಸಪ್, ಫೇಸ್‍ಬುಕ್, ಟ್ವಿಟ್ಟರ್, ಇನ್ಸ್ಟಾಗ್ರಾಂ ಇತ್ಯಾದಿಗಳಲ್ಲಿ ಹಂಚಿಕೊಂಡಲ್ಲಿ ಇದಕ್ಕೆ ಕಾರಣರಾಗಿರುವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಆದ್ದರಿಂದ ಈ ರೀತಿ ಯಾವುದೇ ಸುಳ್ಳು/ತಪ್ಪು ಮಾಹಿತಿಯನ್ನು ಸೃಜಿಸಿ, ಸಾರ್ವಜನಿಕರಲ್ಲಿ ಗೊಂದಲ ಮೂಡಿಸದಂತೆ ಹಾಗೂ ಬಂದಿರುವ ಮಾಹಿತಿಯನ್ನು ಫಾರ್‍ವರ್ಡ್ ಮಾಡದಂತೆ ಸಾರ್ವಜನಿಕರು ಎಚ್ಚರಿಕೆ ವಹಿಸುವಂತೆ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಆಯೋಗದ ಸದಸ್ಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.