ಬೆಂಗಳೂರು: ರಾಜ್ಯ ಚುನಾವಣಾ ಆಯೋಗವು 2025 ರ ನವೆಂಬರ್ 26 ರ ಆದೇಶಗಳಲ್ಲಿ ಹೊಸದಾಗಿ ರಚನೆಯಾಗಿರುವ ನಗರ ಸ್ಥಳೀಯ ಸಂಸ್ಥೆಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ಹಾಗೂ ವಿವಿಧ ಕಾರಣಗಳಿಂದ ತೆರವಾಗಿರುವ ನಗರ ಸ್ಥಳೀಯ ಸಂಸ್ಥೆಗಳ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆಯನ್ನು ಹಾಗೂ ಅವಧಿ ಮುಕ್ತಾಯಗೊಳ್ಳಲಿರುವ ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನ ಸೀತರಾಮ ತಾಂಡ ಗ್ರಾಮ ಪಂಚಾಯತಿಯ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಚುನಾವಣಾ ವೇಳಾಪಟ್ಟಿಯನ್ನು ಘೋಷಿಸಿತ್ತು.ಸದರಿ ವೇಳಾಪಟ್ಟಿಯಂತೆ 2025 ರ ಡಿಸೆಂಬರ್ 21 ರಂದು ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳ ಚುನಾವಣೆಯು ಶಾಂತಿಯುತವಾಗಿ ನಡೆದು ಮುಕ್ತಾಯಗೊಂಡಿರುತ್ತದೆ. ಸಂಸ್ಥೆವಾರು/ಜಿಲ್ಲಾವಾರು ಮತದಾನದ ಅಂಕಿ-ಅಂಶಗಳನ್ನು ರಾಜ್ಯ ಚುನಾವಣಾ ಆಯೋಗದ ವೆಬ್‍ಸೈಟ್ https://karsec.gov.in/ ರಲ್ಲಿ ಪ್ರಕಟಿಸಲಾಗಿದೆ.
2025 ರ ಡಿಸೆಂಬರ್ 24 ರಂದು ಮತಗಳ ಎಣಿಕೆಯು ಆಯಾ ಸ್ಥಳೀಯ ಸಂಸ್ಥೆಗಳ ಕೇಂದ್ರಸ್ಥಾನ / ತಾಲ್ಲೂಕು ಕೇಂದ್ರಗಳಲ್ಲಿ ಬೆಳಿಗ್ಗೆ 08.00 ಗಂಟೆಯಿಂದ ನಡೆಯಲಿದೆ ಎಂದು ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾರ್ವತ್ರಿಕ ಚುನಾವಣೆ -2025: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ನಗರ ಸ್ಥಳೀಯ ಸಂಸ್ಥೆಗೆ ಪಟ್ಟಣ ಪಂಚಾಯಿತಿಯ ಒಟ್ಟು 19 ವಾರ್ಡುಗಳಲ್ಲಿ ಮತದಾನ ನಡೆದಿದ್ದು, ಶೇ. 81.34 ರಷ್ಟು ಮತದಾನವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಬಜಪೆ ನಗರ ಸ್ಥಳೀಯ ಸಂಸ್ಥೆಗೆ ಪಟ್ಟಣ ಪಂಚಾಯಿತಿಯ ಒಟ್ಟು 19 ವಾರ್ಡುಗಳಲ್ಲಿ ಮತದಾನ ನಡೆದಿದ್ದು, ಶೇ. 69.18 ರಷ್ಟು ಮತದಾನವಾಗಿದೆ. ಹಾಗೂ ಮುಲ್ಕಿ ತಾಲೂಕಿನ ಕಿನ್ನಿಗೋಳಿ ನಗರ ಸ್ಥಳೀಯ ಸಂಸ್ಥೆಗೆ ಪಟ್ಟಣ ಪಂಚಾಯಿತಿಯ ಒಟ್ಟು 18 ವಾರ್ಡುಗಳಲ್ಲಿ ಮತದಾನ ನಡೆದಿದ್ದು, ಶೇ. 68.89 ರಷ್ಟು ಮತದಾನವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಮಂಕಿ ನಗರ ಸ್ಥಳೀಯ ಸಂಸ್ಥೆಗೆ ಪಟ್ಟಣ ಪಂಚಾಯಿತಿಯ ಒಟ್ಟು 18 ವಾರ್ಡುಗಳಲ್ಲಿ ಮತದಾನ ನಡೆದಿದ್ದು, ಶೇ. 76.57 ರಷ್ಟು ಮತದಾನವಾಗಿದೆ.
ಉಪಚುನಾವಣೆ-2025: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಬಳ್ಳಾಪುರ್ಳ ನಗರ ಸ್ಥಳೀಯ ಸಂಸ್ಥೆಗೆ ನಗರಸಭೆಯ ಒಟ್ಟು 19 ವಾರ್ಡುಗಳಲ್ಲಿ ಮತದಾನ ನಡೆದಿದ್ದು, ಶೇ. 67.11 ರಷ್ಟು ಮತದಾನವಾಗಿದೆ.
ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ತುರ್ವಿಹಾಳ ಪಟ್ಟಣ ಪಂಚಾಯಿತಿಯ 04 ವಾರ್ಡ್‍ಗಳಲ್ಲಿ ಮತದಾನ ನಡೆದಿದ್ದು, ಶೇ. 79.98 ರಷ್ಟು ಮತದಾನವಾಗಿದೆ.
ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆ: ರಾಯಚೂರು ಜಿಲ್ಲೆಯ ಹೊಸಪೇಟೆ ತಾಲೂಕಿನ ಸೀತಾರಾಮ ತಂಡ ಗ್ರಾಮಪಂಚಾಯಿತಿಯ 8 ಸದಸ್ಯ ಸ್ಥಾನಗಳಿಗೆ ಮತದಾನ ನಡೆದಿದ್ದು, ಶೇ. 88.11 ರಷ್ಟು ಮತದಾನವಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.