ಬೆಂಗಳೂರು: ಸಮಾಜ ಸುಧಾರಣೆಗೆ ಹರಿಕಥಾ ಕಲೆಯ ಪುನರುಜ್ಜೀವನ ಅಗತ್ಯ. ಒಂದು ಕಲೆ ಅಥವಾ ಸತ್ಕಾರ್ಯದ ಯಶಸ್ಸಿಗೆ ಪ್ರಮುಖವಾಗಿ ಒಳ್ಳೆಯ ಗುರುವಿನ ಆಶೀರ್ವಾದ ಮತ್ತು ಕುಟುಂಬದ ಬೆಂಬಲ ನಿರ್ಣಾಯಕವಾಗಿದೆ. ಗುರು ಕರುಣೆ ಅತ್ಯಂತ ದುರ್ಲಭ ಎಂದು ತಿಳಿಸಿದರು.ನಾಡೋಜ ಸಂತ ಭದ್ರಗಿರಿ ಅಚ್ಯುತದಾಸ ಮತ್ತು ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಅವರ ಸ್ಮರಣಾರ್ಥವಾಗಿ ಷಡ್ಜ ಕಲಾ ಕೇಂದ್ರ ಟ್ರಸ್ಟ್ ವತಿಯಿಂದ ಶನಿವಾರ ನಗರದ ಭಾರತೀಯ ವಿದ್ಯಾಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ *‘ಕಥಾಕೀರ್ತನ ವೈಭವ – 2025’* ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸಾಧಕರಿಗೆ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ, ಕಳೆದ ನಾಲ್ಕು ದಶಕಗಳಿಂದ ಹರಿಕಥಾ ಕ್ಷೇತ್ರದಲ್ಲಿ ಅವಿರತ ಸೇವೆ ಸಲ್ಲಿಸುತ್ತಿರುವ ಹಿರಿಯ ವಿದ್ವಾನ್ ಎಸ್.ಎಲ್. ಲೋಕೇಶದಾಸ ಅವರಿಗೆ ಈ ವರ್ಷದ ‘ಕೀರ್ತನ ಸೇವಾರತ್ನ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ, ಉದಯೋನ್ಮುಖ ಕಲಾವಿದೆ ಕುಮಾರಿ ಶಾಂಭವಿ ಶಂಕರ ಭಟ್ ಅವರಿಗೆ ‘ಶ್ರೀ ಲಕ್ಷ್ಮಣದಾಸ್ ವೇಲಣಕರ್ ಸ್ಮರಣಾರ್ಥ ಯುವ ಪುರಸ್ಕಾರ’ ನೀಡಿ ಪ್ರೋತ್ಸಾಹಿಸಲಾಯಿತು. ಕಾರ್ಯಕ್ರಮದಲ್ಲಿ ಗೌರವ ಅತಿಥಿಗಳಾಗಿ ಪಾಲ್ಗೊಂಡಿದ್ದ ಸಂಗೀತಜ್ಞರಾದ ವಿದುಷಿ ಡಾ. ಮೀರಾ ರಾಜಾರಾಂ ಪ್ರಾಣೇಶ್ ಮಾತನಾಡಿ, ತಂದೆಯ ರೂಪದಲ್ಲಿ ಗುರು ದೊರೆಯುವುದು ಅತ್ಯಂತ ಸೌಭಾಗ್ಯದ ವಿಷಯವಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯ ಪ್ರಸರಣ ಮತ್ತು ಪುನರುತ್ಥಾನಕ್ಕೆ ಹರಿಕಥೆ ಅತ್ಯಂತ ಪೂರಕವಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಖ್ಯಾತ ಹಿಂದೂಸ್ತಾನಿ ಗಾಯಕರಾದ ಪಂ. ವಿನಾಯಕ ತೊರವಿ ಮಾತನಾಡಿ, ಆಧ್ಯಾತ್ಮ ಮತ್ತು ಸಂಗೀತ, ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಈ ಸಂಕೀರ್ಣ ಯುಗದಲ್ಲಿ, ಕೀರ್ತನ ಕಲೆ ಬೆಳೆಯುವ ಅಗತ್ಯವಿದೆ. ಯುವ ಕಲಾವಿದರು ಹೆಚ್ಚು ಹರಿಕಥೆಯೆಡೆಗೆ ಒಲವು ತೋರಿಸಬೇಕು ಎಂದರು.
*ಸಾಂಸ್ಕೃತಿಕ ಕಾರ್ಯಕ್ರಮ: ಕಾರ್ಯಕ್ರಮವು ಅಮೆರಿಕಾದ ಶ್ರೀ ಅವಿನಾಶ್ ಶುಕ್ಲಾ ಅವರ ಕರ್ನಾಟಕ ಶಾಸ್ತ್ರೀಯ ಸಂಗೀತ ಪ್ರಸ್ತುತಿಯೊಂದಿಗೆ ಆರಂಭವಾಯಿತು. ಪ್ರಶಸ್ತಿ ಪ್ರದಾನದ ನಂತರ ವಿದ್ವಾನ್ ಡಾ. ಶಂಕರ ಭಟ್ ಉಂಚಳ್ಳಿ ಅವರು ತಮ್ಮ ಹರಿಕಥಾ ಪ್ರಸ್ತುತಿಯಲ್ಲಿ ಗೋವರ್ಧನ ಲೀಲಾ ಪ್ರಸಂಗವನ್ನು ಪ್ರಸ್ತುತಪಡಿಸಿದರು.
ಶ್ರೀ ಶ್ರೀಕರ ಭಟ್ ಉಡುಪಿ ಅವರು ಸಂತ ಭದ್ರಗಿರಿ ಅಚ್ಯುತದಾಸ ಮತ್ತು ಕೀರ್ತನಾಚಾರ್ಯ ಲಕ್ಷ್ಮಣದಾಸ ವೇಲಣಕರ್ ಅವರಿಗೆ ನುಡಿ ನಮನದ ಮೂಲಕ ಗೌರವ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯ ಕಲಾಭಿಮಾನಿಗಳು ಮತ್ತು ಗಣ್ಯರು ಉಪಸ್ಥಿತರಿದ್ದರು.