ಬೆಳಗಾವಿ / ಬೆಂಗಳೂರು: ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಪುನಶ್ಚೇತನಗೊಳಿಸಲು ಕ್ರಮ ವಹಿಸಲಾಗುತ್ತಿದೆ. ಪುನಶ್ಚೇತನ ಯೋಜನೆಯಡಿ ಕೆಎಚ್ ಡಿಸಿ ನಿಗಮಕ್ಕೆ ವಾಸ್ತವಿಕವಾಗಿ ಬಿಡುಗಡೆಯಾದ ಸಾಲ ಮತ್ತು ಅದರ ಮೇಲಿನ ಬಡ್ಡಿಯನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ಸರ್ಕಾರವು ಈ ಹಿಂದೆ ಕೆಲ ಆದೇಶಗಳ ಮೂಲಕ ಅನುಮೋದನೆ ನೀಡಿದೆ. ಆ ಆದೇಶಗಳನ್ವಯ ಸಾಲವನ್ನು ಷೇರು ಬಂಡವಾಳವಾಗಿ ಪರಿವರ್ತಿಸಲು ಕೆ.ಎಚ್.ಡಿ.ಸಿ ನಿಗಮದ ಅಧೀಕೃತ ಷೇರು ಬಂಡವಾಳವನ್ನು 95 ಕೋಟಿ ಯಿಂದ 125 ಕೋಟಿಗೆ ಹೆಚ್ಚಿಸುವ ಪ್ರಸ್ತಾವನೆಯು ಸರ್ಕಾರದ ಪರಿಶೀಲನೆ ಹಂತದಲ್ಲಿರುತ್ತದೆ ಎಂದು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ಹಾಗು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಪಾಟೀಲ್ ಅವರು ತಿಳಿಸಿದರು.
ವಿಧಾನ ಪರಿಷತ್ತಿನಲ್ಲಿ ಪ್ರಶ್ನೋತ್ತರ ವೇಳೆ ಸದಸ್ಯರಾದ ಡಾ.ತಳವಾರ ಸಾಬಣ್ಣ ಅವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಸಾರ್ವಜನಿಕ ಉದ್ದಿಮೆಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಉದ್ದೇಶದಿಂದ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಕರ್ನಾಟಕ ಜವಳಿ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಜೊತೆಗೆ ವಿಲೀನಗೊಳಿಸಲು ನಿರ್ಣಯಿಸಲಾಗಿದೆ. ಈ ವಿಲೀನ ಪ್ರಕ್ರಿಯೆ ಪ್ರಾರಂಭಿಕ ಹಂತದಲ್ಲಿದ್ದು, ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮವನ್ನು ಕರ್ನಾಟಕ ರಾಜ್ಯ ಜವಳಿ ಮೂಲ ಸೌಕರ್ಯಗಳ ಅಭಿವೃದ್ಧಿ ನಿಗಮದ ಜೊತೆಗೆ ವಿಲೀನಗೊಳಿಸುವ ಸಂದರ್ಭದಲ್ಲಿ ಕೈಮಗ್ಗ ನೇಕಾರರ ಹಿತವನ್ನು ಕಾಯ್ದುಕೊಳ್ಳಲು ನಾನಾ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದ್ದು, ವಿಲೀನ ಪ್ರಕ್ರಿಯೆ ಆದ ನಂತರವು ಮುಂದುವರೆಸಲಾಗುತ್ತದೆ.
ಕೆ.ಹೆಚ್.ಡಿ.ಸಿ. ನಿಗಮದ ನೇಕಾರರಿಗೆ ನಿರಂತರ ನೂಲು ಪೂರೈಕೆ ಮಾಡಿ ಉದ್ಯೋಗ ಒದಗಿಸುವುದು, ಕೆ.ಹೆಚ್.ಡಿ.ಸಿ. ನಿಗಮದ ನೇಕಾರರಿಗೆ ಪರಿವರ್ತನಾ ಶುಲ್ಕ ಪಾವತಿಸುವುದು, ಕೈಮಗ್ಗ ಉತ್ಪನ್ನಗಳನ್ನು ಮಾರಾಟ ಮಾಡಲು ಇ-ಕಾಮರ್ಸ್ ವೇದಿಕೆ ಕಲ್ಪಿಸುವುದು ಮತ್ತು ಬೆಂಗಳೂರು ಅಂತರಾಷ್ಟ್ರೀಯ ನಿಲ್ದಾಣದ ಆವರಣದಲ್ಲಿ ಕೈಮಗ್ಗ ಮಾರಾಟ ಮಳಿಗೆಯ ಕಲಾಲೋಕ ಸ್ಥಾಪನೆ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.