ಬೆಳಗಾವಿ / ಬೆಂಗಳೂರು: ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿಯೂ ಡೇ ಕೇರ್ ಕೀಮೋಥೆರಪಿ ಕೇಂದ್ರಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿರುತ್ತದೆ ಎಂದು ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಸಚಿವರಾದ ಡಾ. ಶರಣಪ್ರಕಾಶ ಆರ್. ಪಾಟೀಲ ಅವರು ತಿಳಿಸಿದ್ದಾರೆ.ಅವರು ವಿಧಾನ ಪರಿಷತ್ ನಲ್ಲಿಂದು ಪರಿಷತ್ ಸದಸ್ಯರಾದ ಕುಶಾಲಪ್ಪ ಎಂ. ಪಿ. ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿದರು.ಕಿದ್ವಾಯಿ ಆಸ್ಪತ್ರೆಗೆ ಇತರೆ ಜಿಲ್ಲೆಗಳಿಂದ ರೋಗಿಗಳನ್ನು ಕರೆತರಲು ಕಷ್ಟವಾಗುತ್ತಿದ್ದು, ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆ, ಬೆಂಗಳೂರು ಸಹಯೋಗದೊಂದಿಗೆ ರಾಜ್ಯದ ಇನ್ನಿತರೆ ಜಿಲ್ಲೆಗಳಲ್ಲಿ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಕ್ರಮವಹಿಸಲಾಗುತ್ತಿದೆ.ಕಲ್ಬುರ್ಗಿಯಲ್ಲಿ ಪೆರಿಫೆರಲ್ ಕ್ಯಾನ್ಸರ್ ಕೇಂದ್ರವನ್ನು 1990ರಲ್ಲಿ ಸ್ಥಾಪಿಸಲಾಗಿದ್ದು, ಸದರಿ ಕೇಂದ್ರವನ್ನು ಮೇಲ್ದರ್ಜೆಗೇರಿಸಲು ಈಗಾಗಲೇ ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದ್ದು, ಸಿವಿಲ್ ಕಾಮಗಾರಿಯು ಪ್ರಗತಿಯಲ್ಲಿದೆ.
ಮೈಸೂರು, ತುಮಕೂರು, ಶಿವಮೊಗ್ಗ, ಬೆಳಗಾವಿ ಈ ಜಿಲ್ಲೆಗಳಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆ ನೀಡಿ ಆದೇಶಿಸಲಾಗಿದೆ.
ರಾಯಚೂರಿನ ಸೂಪರ್ ಸ್ಪೆμÁಲಿಟಿ ಆಸ್ಪತ್ರೆಯ ಆವರಣದಲ್ಲಿ ಹಾಗೂ ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ಪ್ರಾದೇಶಿಕ ಕ್ಯಾನ್ಸರ್ ಕೇಂದ್ರಗಳನ್ನು ಪ್ರಾರಂಭಿಸಲು ಆಡಳಿತಾತ್ಮಕ ಅನುಮೋದನೆಯನ್ನು ನೀಡಲಾಗಿದೆ.
ಹಾಸನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹಾಸನ, ಬಳ್ಳಾರಿ ವೈದ್ಯಕೀಯ ಮಹಾ ವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರ, ಬಳ್ಳಾರಿ, ಕರ್ನಾಟಕ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಹುಬ್ಬಳ್ಳಿ, ಈ ಸಂಸ್ಥೆಗಳಲ್ಲಿ ಕ್ಯಾನ್ಸರ್ ಚಿಕಿತ್ಸೆ ಸೌಲಭ್ಯವಿರುವ ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ.
ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಮಂಡ್ಯ, ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ, ಕಾರವಾರ ಇಲ್ಲಿ ಶೀಘ್ರದಲ್ಲೇ ಚಿಕಿತ್ಸೆ ಪ್ರಾರಂಭಿಸಲು ಕ್ರಮವಹಿಸಲಾಗುವುದು.
ಕಳೆದ ಮೂರು ವರ್ಷಗಳ ಅವಧಿಯಲ್ಲಿ ಒಟ್ಟು 41,512 ಕ್ಯಾನ್ಸರ್ ರೋಗಿಗಳು ಕಿದ್ವಾಯಿ ಸ್ಮಾರಕ -ಗ್ರಂಥಿ ಸಂಸ್ಥೆಯಲ್ಲಿ ವಿವಿಧ ರೀತಿಯ ಕ್ಯಾನ್ಸರ್ ಚಿಕಿತ್ಸೆಗಳನ್ನು ಪಡೆದಿದ್ದು, ಮುಖ್ಯವಾಗಿ ಶಸ್ತ್ರಚಿಕಿತ್ಸೆ, ವಿಕಿರಣ ಚಿಕಿತ್ಸೆ ಹಾಗೂ ಕಿಮೋಥೆರಪಿ ಅಥವಾ ಇವುಗಳ ಸಂಯೋಜಿತ ಚಿಕಿತ್ಸೆಯನ್ನು ಕ್ಯಾನ್ಸರ್ ವಿಧ ಅಥವಾ ಕ್ಯಾನ್ಸರ್ ಹಂತದ ಅನುಗುಣವಾಗಿ ನೀಡಲಾಗಿದೆ.
2022 ರಿಂದ 2024 ವರೆಗೆ 12781 ರೋಗಿಗಳು ಶಸ್ತ್ರ ಚಿಕಿತ್ಸೆಯನ್ನು, 14423 ರೋಗಿಗಳು ವಿಕಿರಣ ಚಿಕಿತ್ಸೆ ಹಾಗೂ 28370 ಕ್ಕೂ ಅಧಿಕ ರೋಗಿಗಳು ರಾಸಾಯನಿಕ (ಕಿಮೋಥೆರಪಿ) ಚಿಕಿತ್ಸೆಯನ್ನು ಪಡೆದಿರುತ್ತಾರೆ. ಅಲ್ಲದೆ 110 ಕ್ಕೂ ಅಧಿಕ ರೋಗಿಗಳಿಗೆ ದುಬಾರಿ ಚಿಕಿತ್ಸೆಯಾದ ಅಸ್ಥಿಮಜ್ಞೆ ಚಿಕಿತ್ಸೆಯನ್ನು ಉಚಿತವಾಗಿ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ 2022 ರಿಂದ 2024 ರವರೆಗೂ ನೀಡಲಾಗಿದೆ ಎಂದು ತಿಳಿಸಿದರು.