ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್ ಪ್ರತಿಭಟನೆ ಚಾಮರಾಜಪೇಟೆ ದೌರ್ಜನ್ಯ ಖಂಡನೆ, ಅಕ್ರಮ ಬಾಂಗ್ಲಾದೇಶಿ ನುಸುಳುಕೋರರ ಹೊರಹಾಕುವಂತೆ ಆಗ್ರಹ

varthajala
0

 ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ದಿನಾಂಕ 25 ಜನವರಿ 2026 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಚಾಮರಾಜಪೇಟೆಯಲ್ಲಿ ಜನವರಿ 4 ರಂದು ಓಂ ಶಕ್ತಿ ಮಾಲಾಧಾರಿಗಳ ಮೇಲೆ ಹಾಗೂ ಅಯ್ಯಪ್ಪ ಭಕ್ತರ ಮೇಲೆ ನಡೆದ ಮುಸ್ಲಿಂ ಯುವಕರ ಹಲ್ಲೆಯನ್ನು ತೀವ್ರವಾಗಿ ಖಂಡಿಸಿ, ಹಾಗೂ ರಾಜ್ಯದಿಂದ ಅಕ್ರಮ ಬಾಂಗ್ಲಾದೇಶಿ ನುಸುಳುಕೋರರನ್ನು ತಕ್ಷಣ ಹೊರಹಾಕಬೇಕು ಎಂಬ ಆಗ್ರಹದೊಂದಿಗೆ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಯಿತು. 

ಈ ಪ್ರತಿಭಟನೆಯಲ್ಲಿ ಶ್ರೀರಾಮ ಸೇನೆಯ ರಾಷ್ಟ್ರೀಯ ಅಧ್ಯಕ್ಷ ಶ್ರೀ.ಪ್ರಮೋದ್ ಮುತಾಲಿಕ್, ಅಯ್ಯಪ್ಪ ಸೇವಾ ಸಮಾಜಂ ಅಧ್ಯಕ್ಷ ಎನ್. ಜಯರಾಮ್, ಶಕ್ತಿ ಶ್ರೀ. ರಕ್ಷಿತ್ ಜೈ ಗಿರೀಶ್, ಜಂಟಿ ಕಾರ್ಯದರ್ಶಿ ರಾಜ್ಯ ಮೇಲ್ ಮರವತ್ತೂರ್ ಓಂ ಶಕ್ತಿ ಮಂಡಳಿ, ಶ್ರೀ. ಸುನಿಲ್ ಶೆಟ್ಟಿ, ಹಿಂದೂ ಜನಜಾಗೃತಿ ಸಮಿತಿಯ ಸೌ. ಭವ್ಯ ಗೌಡ, ಭಾಜಪ ಮುಖಂಡ ಶ್ರೀ. ಸಪ್ತಗಿರಿ ಗೌಡ, ಶ್ರೀರಾಮ ಸೇನೆ ಅಧ್ಯಕ್ಷ ಶ್ರೀ.ಸುಂದ್ರೇಶ್ ನರ್ಗಲ್, ಶ್ರೀ.ಮಂಜುನಾಥ, ವಕೀಲರಾದ ಶ್ರೀ.ಅಮೃತೇಶ್ ಎನ್ ಪಿ, ಸೇರಿದಂತೆ ಹಲವು ಹಿಂದೂ ಪರ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು. 

ಈ ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಪ್ರಮೋದ್ ಮುತಾಲಿಕ್ ಅವರು, 'ಜನವರಿ ಮೊದಲ ವಾರದಲ್ಲಿ ಚಾಮರಾಜಪೇಟೆಯಲ್ಲಿ ಓಂ ಶಕ್ತಿ ಮಾಲ ಧರಿಸಿದ್ದ ಹಿಂದೂ ಮಹಿಳಾ ಭಕ್ತರ ಮೇಲೆ ಕಲ್ಲು ತೂರಾಟ ನಡೆಯಿತು.ಇದು ಕೇವಲ ಒಂದು ಘಟನೆ ಅಲ್ಲ ಹಿಂದೂಗಳ ಮೇಲೆ ನಡೆಯುತ್ತಿರುವ ವ್ಯವಸ್ಥಿತ ದೌರ್ಜನ್ಯದ ಭಾಗ. ಇದರಲ್ಲೂ ಅತ್ಯಂತ ದುರಂತವೆಂದರೆ, ಈ ಕೃತ್ಯವನ್ನು 'ಅಪ್ರಾಪ್ತ ಬಾಲಕರು ಮಾಡಿದ್ದಾರೆ' ಎಂದು ಹೇಳಿ ಪ್ರಕರಣವನ್ನು ಮುಚ್ಚಿಹಾಕುವ ಪ್ರಯತ್ನ ನಡೆದಿದೆ. ಇದಕ್ಕೂ ಮೊದಲು ಇದೇ ಚಾಮರಾಜಪೇಟೆಯಲ್ಲಿ ಗೋಮಾತೆಯ ಕೆಚ್ಚಲನ್ನು ಕೊಯ್ದ ಕ್ರೂರ ಕೃತ್ಯ ನಡೆದಾಗ, ಅದನ್ನು ಖಂಡಿಸಿ ಹಿಂದೂಗಳು ಪ್ರತಿಭಟಿಸಿದರೆ, ಅದನ್ನೂ 'ಮಾನಸಿಕ ಅಸ್ವಸ್ಥನ ಕೃತ್ಯ' ಎಂದು ಹೇಳಿ ಮುಚ್ಚಿಹಾಕಲಾಯಿತು. ಇದು ಹಿಂದೂಗಳ ಮೇಲೆ ನಡೆದ ಪ್ರತಿಯೊಂದು ದೌರ್ಜನ್ಯವನ್ನೂ ಮುಚ್ಚಿಹಾಕುವ ನೀತಿವೇ? ಇದೇ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೂಗಳ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ, ಆದರೆ ಆಡಳಿತ ಸಂಪೂರ್ಣ ಮೌನವಾಗಿದೆ," ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ರಾಜ್ಯ ಮತ್ತು ರಾಷ್ಟ್ರ ಭದ್ರತೆಗೆ ಭಾರೀ ಅಪಾಯ : ಈ ಪ್ರತಿಭಟನೆಯಲ್ಲಿ ಮತ್ತೊಂದು ಗಂಭೀರ ವಿಷಯವನ್ನು ಮುಖಂಡರು ಪ್ರಸ್ತಾಪಿಸಿದರು. ಮಾಧ್ಯಮ ವರದಿಗಳ ಪ್ರಕಾರ ಕರ್ನಾಟಕದಲ್ಲಿ ೨೦ ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ನುಸುಳುಕೋರರು ವಾಸಿಸುತ್ತಿದ್ದಾರೆ. ಅವರಿಗೆ ಅಕ್ರಮವಾಗಿ ಆಧಾರ್ ಕಾರ್ಡ್, ಮತದಾರರ ಚೀಟಿ, ಪ್ಯಾನ್ ಕಾರ್ಡ್, ಬ್ಯಾಂಕ್ ಖಾತೆ ಹಾಗೂ ಸಾಲಗಳು, ಸರ್ಕಾರಿ ಸೌಲಭ್ಯಗಳು ದೊರೆಯುತ್ತಿರುವುದು ಕೇವಲ ಕಾನೂನು ಉಲ್ಲಂಘನೆ ಅಲ್ಲ, ಇದು ರಾಜ್ಯ ಮತ್ತು ರಾಷ್ಟ್ರದ ಭದ್ರತೆಗೆ ನೇರ ಅಪಾಯ ಎಂದು ಮುಖಂಡರು ಎಚ್ಚರಿಸಿದರು. ಸರ್ಕಾರಿ ಆಸ್ಪತ್ರೆಗಳಲ್ಲಿ ಜನಿಸಿದ ಮಕ್ಕಳಿಗೆ ಜನನ ಪ್ರಮಾಣ ಪತ್ರ ನೀಡಿ ಸೌಲಭ್ಯ ದುರುಪಯೋಗ, ಅವಧಿ ಮೀರಿದ LPG ಸಿಲಿಂಡರ್‌ಗಳನ್ನು ಮರುಬಳಕೆ ಮಾಡುವುದು, "ಭಾರತ ಮಾತಾ ಕೀ ಜೈ" ಹೇಳಲು ನಿರಾಕರಿಸಿ "ಜೈ ಬಾಂಗ್ಲಾ" ಘೋಷಣೆ ಕೂಗಿದ ಘಟನೆಗಳು ಎಲ್ಲವೂ ಗಂಭೀರ ಆತಂಕ ಹುಟ್ಟಿಸುವಂತಿವೆ ಎಂದು ತಿಳಿಸಲಾಯಿತು. ಅಕ್ರಮ ನುಸುಳುಕೋರರ ಜಾಲವನ್ನು ಬಹಿರಂಗಪಡಿಸಿದ ಪುನೀತ್ ಕೆರೆಹಳ್ಳಿ, ಸಂತೋಷ್ ಕರ್ತಾಳ್ ಹಾಗೂ ಸಹಚರರ ಮೇಲೆ ನಡೆದ ಬಂಧನ, ಕಿರುಕುಳವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು. ಅದೇ ರೀತಿ, ಆಕ್ರಮ ಬಾಂಗ್ಲಾದೇಶಿ ಜಾಲವನ್ನು ಪತ್ತೆಹಚ್ಚಿ ಪೊಲೀಸರಿಗೆ ಸಹಕರಿಸಿದ್ದ ಡಾ. ನಾಗೇಂದ್ರಪ್ಪ (MBBS) ಅವರಿಗೆ ನೀಡಲಾದ ಮಾನಸಿಕ ಕಿರುಕುಳದ ಪರಿಣಾಮವಾಗಿ ಅವರು ವಿಧಾನಸೌಧದ ಎದುರು ಆತ್ಮಹತ್ಯೆಗೆ ಪ್ರಯತ್ನಿಸಿದ ಘಟನೆ ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ ಜೀವಂತ ಸಾಕ್ಷಿ ಎಂದು ಆರೋಪಿಸಲಾಯಿತು. 

ಪ್ರತಿಭಟನೆಯ ಪ್ರಮುಖ ಬೇಡಿಕೆಗಳು ಹಿಂದೂ ರಾಷ್ಟ್ರ ಸಮನ್ವಯ ಸಮಿತಿಯ ಅಡಿಯಲ್ಲಿ ಶ್ರೀರಾಮ ಸೇನೆ, ಹಿಂದೂ ಜನಜಾಗೃತಿ ಸಮಿತಿ, ಓಂ ಶಕ್ತಿ ಸಂಘಟನೆ, ಅಯ್ಯಪ್ಪ ಸೇವಾ ಸಮಾಜಂ ಸೇರಿದಂತೆ ಎಲ್ಲಾ ಹಿಂದೂ ಪರಸಂಘಟನೆಗಳು ಒಟ್ಟಾಗಿ ಈ ಕೆಳಗಿನ ಬೇಡಿಕೆಗಳನ್ನು ಮುಂದಿಟ್ಟಿವೆ:

೧. ಅಕ್ರಮ ಬಾಂಗ್ಲಾ ದೇಶಿ ನುಸುಳುಕೋರರನ್ನು ರಾಜ್ಯದಿಂದ ತಕ್ಷಣ ಹೊರಹಾಕಬೇಕು

೨. ನಕಲಿ ಆಧಾ‌ರ್, ಮತದಾರರ ಚೀಟಿ, ಪ್ಯಾನ್ ಕಾರ್ಡ್ ಮಾಡಿಕೊಡುವ ಜಾಲವನ್ನು ಸಂಪೂರ್ಣವಾಗಿ ಧ್ವಂಸ ಮಾಡಬೇಕು

೩. ಇದಕ್ಕೆ ಸಹಕರಿಸಿದ ಅಧಿಕಾರಿಗಳು, ಮಧ್ಯವರ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು

೪. ಹಿಂದೂಗಳ ಮೇಲೆ ನಡೆಯುವ ದೌರ್ಜನ್ಯವನ್ನು ತಕ್ಷಣ ನಿಲ್ಲಿಸಬೇಕು

೫. ಅಕ್ರಮ ನುಸುಳುಕೋರರ ಜಾಲವನ್ನು ಬೇಧಿಸಿದ ಹಿಂದೂ ಕಾರ್ಯಕರ್ತರಿಗೆ ರಕ್ಷಣೆ ಒದಗಿಸಬೇಕು

ಈ ನ್ಯಾಯಯುತ ಬೇಡಿಕೆಗಳಿಗಾಗಿ ಇಂದು ಶಾಂತಿಯುತ ಆದರೆ ಗಟ್ಟಿಯಾದ ಸಂದೇಶದೊಂದಿಗೆ ಪ್ರತಿಭಟನೆ ನಡೆಸಲಾಗಿದೆ ಎಂದು ಸಂಘಟನೆ ತಿಳಿಸಿದೆ.

Post a Comment

0Comments

Post a Comment (0)