ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದಿಂದ ಬೃಹತ್‌ ಪ್ರತಿಭಟನೆ

varthajala
0

 ವಿಶೇಷ ಮಕ್ಕಳ ಶಾಲೆಗಳ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಜ. 28 ರಂದು 2ಸಾವಿರ ಕರ್ನಾಟಕ ರಾಜ್ಯ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದಿಂದ ಬೃಹತ್‌ ಪ್ರತಿಭಟನೆ


ಬೆಂಗಳೂರು,ಜ.25: ಕಳೆದ ಹಲವು ವರ್ಷಗಳಿಂದ ಮಾನಸಿಕ ತೊಂದರೆ, ಶ್ರವಣ ದೋಷ, ಸೆಲೆಬ್ರಲ್‌ ಪಾಲ್ಸಿ ಮತ್ತಿತರೆ ಸಮಸ್ಯೆಗಳು ಹಾಗೂ ದೃಷ್ಟಿ ವೈಕಲ್ಯ ಹೊಂದಿರುವ ಮಕ್ಕಳಿಗೆ ಬೋಧಿಸುತ್ತಿರುವ ಕರ್ನಾಟಕ ರಾಜ್ಯ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದ ಸದಸ್ಯರು ದಶಕಗಳಿಂದ ನೆನಗುದಿಗೆ ಬಿದ್ದಿರುವ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಈ ತಿಂಗಳ 28 ರಂದು ಸ್ವಾತಂತ್ರ್ಯ ಉದ್ಯಾನದಲ್ಲಿ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆ.ಎಸ್.ಎಸ್.ಎಸ್.ಎ ಕಾರ್ಯದರ್ಶಿ ವಸಂತಕುಮಾರ್ ಶೆಟ್ಟಿ, ವಿಶೇಷ ಶಿಕ್ಷಕರು ಮತ್ತು ಶಿಕ್ಷಕೇತರ ಸಂಘದ ಬೇಡಿಕೆಗಳನ್ನು ಈಡೇರಿಸಿಲ್ಲ. ಇದನ್ನು ಪ್ರತಿಭಟಿಸಿ, ಸಂಘದ ಸದಸ್ಯರಲ್ಲದೇ ವಿಶೇಷ ಚೇತನ ಮಕ್ಕಳು, ಪಾಲಕರೂ ಸಹ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿದ್ದಾರೆ. ಎಲ್ಲಾ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಕಳೆದ ವರ್ಷದ ಮಾರ್ಚ್ನಲ್ಲಿ ತಮ್ಮ ವೇತನ ಹಾಗೂ ಭತ್ಯೆಗಳನ್ನು ಶೇ 100ರಷ್ಟು ಹೆಚ್ಚಿಸಿಕೊಂಡಿದ್ದಾರೆ. ಆದರೆ ಅಂಗವಿಕಲರು ಹಾಗೂ ಹಿರಿಯ ನಾಗರಿಕರ ಕಲ್ಯಾಣ ಇಲಾಖೆಯು 2014–15ರಲ್ಲಿ ನಿಗದಿಪಡಿಸಿದ ಅನುದಾನ ಮೊತ್ತವನ್ನು ಹೆಚ್ಚಿಸುವ ಯಾವುದೇ ಕ್ರಮ ಕೈಗೊಂಡಿಲ್ಲ.

ಸರ್ಕಾರೇತರ ಸಂಸ್ಥೆಗಳು ನಿರ್ವಹಿಸುವ ವಿಶೇಷ ಶಾಲೆಗಳು ಪ್ರತಿ ವಿದ್ಯಾರ್ಥಿಗೆ ತಿಂಗಳಿಗೆ ರೂ.9,000 ಅನುದಾನಕ್ಕೆ ಅರ್ಹವಾಗಿವೆ. ಈ ಅನುದಾನವನ್ನು ವರ್ಷದಲ್ಲಿ ಕೇವಲ 10 ತಿಂಗಳುಗಳಷ್ಟೇ ನೀಡಲಾಗುತ್ತದೆ ಎಂದರು.

ಜೀವನ ವೆಚ್ಚ ದಿನೇದಿನೇ ಏರುತ್ತಿರುವ ಹಿನ್ನೆಲೆಯಲ್ಲಿ ಎನ್ಜಿಒಗಳಿಗೆ ವಿಶೇಷ ಶಾಲೆಗಳನ್ನು ನಿರ್ವಹಿಸುವುದು ಕಷ್ಟಕರವಾಗಿದೆ. ಸರ್ಕಾರದ ಅನುದಾನಿತ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರು ಹಾಗೂ ಎನ್ಜಿಒಗಳ ಮೂಲಕ ನಡೆಸಲಾಗುವ ವಿಶೇಷ ಶಾಲೆಗಳ ಶಿಕ್ಷಕರ ವೇತನದಲ್ಲಿ ಭಾರೀ ವ್ಯತ್ಯಾಸವಿರುವುದರಿಂದ ಹೆಚ್ಚಿನ ಶಿಕ್ಷಕರು ಈ ಶಾಲೆಗಳಿಗೆ ಸೇರ್ಪಡೆಯಾಗಲು ಆಸಕ್ತಿ ತೋರಿಸುತ್ತಿಲ್ಲ. ಸರ್ಕಾರದ ಅನುದಾನಿತ ವಿಶೇಷ ಶಾಲೆಯ ಶಿಕ್ಷಕರು ತಿಂಗಳಿಗೆ ರೂ.60,000 ರಿಂದ ರೂ.80,000ರವರೆಗೆ ವೇತನ ಪಡೆಯುತ್ತಿದ್ದರೆ, ಎನ್ಜಿಒ ನಡೆಸುತ್ತಿರುವ ವಿಶೇಷ ಶಾಲೆಗಳ ಶಿಕ್ಷಕರಿಗೆ ತಿಂಗಳಿಗೆ ಕೇವಲ ರೂ.20,250 ಗೌರವಧನ ಮಾತ್ರ ಲಭಿಸುತ್ತಿದೆ. ಸುಮಾರು ರೂ.40,000ರಷ್ಟು ವೇತನ ವ್ಯತ್ಯಾಸ ಇರುವ ಕಾರಣದಿಂದ ಎನ್ಜಿಒ ನಿರ್ವಹಿತ ವಿಶೇಷ ಶಾಲೆಗಳಿಗೆ ಹೆಚ್ಚಿನ ಶಿಕ್ಷಕರು ಸೇರುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

ಅನುದಾನ ಹೆಚ್ಚಿಸುವ ಅಗತ್ಯತೆ ಕುರಿತು ಅಧಿಕಾರಿಗಳಿಗೆ ಮನವರಿಕೆ ಮಾಡಲು ನಡೆಸಿದ ಪ್ರಯತ್ನಗಳು ಸಫಲವಾಗಿಲ್. “ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಅವರು ಅನುದಾನವನ್ನು ಶೇ.40ರಷ್ಟು ಹೆಚ್ಚಿಸುವುದಾಗಿ ನಮಗೆ ಈ ಹಿಂದೆ ಭರವಸೆ ನೀಡಿದ್ದರು. ಕಳೆದ ವರ್ಷ ನಾವು ಅವರನ್ನು ಭೇಟಿ ಮಾಡಿದ್ದೆವು. ಆ ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರೂ ಉಪಸ್ಥಿತರಿದ್ದರು. ಒಂದು ವರ್ಷಕ್ಕೂ ಹೆಚ್ಚು ಕಾಲ ಒಳ್ಳೆಯ ಸುದ್ದಿ ನಿರೀಕ್ಷಿಸಿದ್ದೆವು, ಆದರೆ ಫಲ ದೊರೆತಿಲ್ಲ. ಬೇರೆ ಆಯ್ಕೆ ಇಲ್ಲದೇ ನಮ್ಮ ದೀರ್ಘಕಾಲದ ಬೇಡಿಕೆಗಳ ಪರವಾಗಿ ಪ್ರತಿಭಟನೆ ನಡೆಸಬೇಕಾಗಿದೆ,” ಎಂದು ವಸಂತಕುಮಾರ್ ಶೆಟ್ಟಿ ಹೇಳಿದರು.

ಇದೇ ವೇಳೆ, ಬೆಂಗಳೂರಿನಲ್ಲಿ ಮಾನಸಿಕವಾಗಿ ಹಿಂದುಳಿದವರಿಗಾಗಿ ಸದ್ಭಾವನಾ ಪ್ರತಿಷ್ಠಾನದ ವಿಶೇಷ ಶಾಲೆ ನಡೆಸುತ್ತಿರುವ ಸಂಜಯ್ ಸಬರಾದ್ ಮಾತನಾಡಿ, 2016–17ರಲ್ಲಿ ‘ಸಿಂಬಯೋಸಿಸ್ ಆಫ್ ಟೆಕ್ನಾಲಜಿ, ಎನ್ವಿರಾನ್ಮೆಂಟ್ ಅಂಡ್ ಮ್ಯಾನೇಜ್ಮೆಂಟ್’ ಸಂಸ್ಥೆಯು ಸಮೀಕ್ಷೆ ನಡೆಸಿದ್ದು, ಎನ್ಜಿಒಗಳು ನಿರ್ವಹಿಸುವ ವಿಶೇಷ ಶಾಲೆಗಳು ಅನುದಾನಿತ ಶಾಲೆಗಳಿಗಿಂತ ಉತ್ತಮವಾಗಿವೆ ಎಂಬ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದೆ. “ಎನ್ಜಿಒಗಳು ನಡೆಸುತ್ತಿರುವ ವಿಶೇಷ ಶಾಲೆಗಳಲ್ಲಿ ಕಾರ್ಯನಿರ್ವಹಿಸುವ ಶಿಕ್ಷಕರಿಗೂ ಅನುದಾನಿತ ಶಾಲೆಗಳ ಶಿಕ್ಷಕರಿಗೆ ನೀಡುವಂತೆ ಸಮಾನ ವೇತನವನ್ನು ಸರ್ಕಾರ ನೀಡಬೇಕು ಎಂಬುದೇ ನಮ್ಮ ಪ್ರಮುಖ ಬೇಡಿಕೆ,” ಎಂದು ಹೇಳಿದರು.

ರಾಜ್ಯದಲ್ಲಿ ಸುಮಾರು 250 ವಿಶೇಷ ಶಾಲೆಗಳಿದ್ದು, ಅವುಗಳಲ್ಲಿ ಕೇವಲ 180 ಎನ್ಜಿಒಗಳ ಮೂಲಕ ನಿರ್ವಹಿಸಲ್ಪಡುವ ಶಾಲೆಗಳು ಮಾತ್ರ ಸರ್ಕಾರದಿಂದ ಅನುದಾನ ಪಡೆಯುತ್ತಿವೆ. ಉಳಿದ ಸುಮಾರು 70 ವಿಶೇಷ ಶಾಲೆಗಳು ರಾಜ್ಯ ಸರ್ಕಾರದಿಂದ ಯಾವುದೇ ಅನುದಾನವನ್ನು ಪಡೆಯುತ್ತಿಲ್ಲ ಎಂದರು.




Post a Comment

0Comments

Post a Comment (0)