ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿ ನೀಡಿ ಕೆಎಟಿ ಆದೇಶ

varthajala
0

 ಬೆಂಗಳೂರು: ಈಗಾಗಲೇ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡಿದ್ದರೆ, ಅದನ್ನು ರದ್ದುಪಡಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. ಇದರಿಂದ ರಾಜ್ಯದಲ್ಲಿ ಈಗಾಗಲೇ ಬಡ್ತಿ ಪಡೆದಿರುವ ಅಂದಾಜು 7ರಿಂದ 8 ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಹಿಂಬಡ್ತಿಯಾಗಲಿದೆ.ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5ನೇ ತರಗತಿ) ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಆದೇಶಿಸಿದೆ. 

ರಾಜ್ಯದ 1.30 ಲಕ್ಷ ಪ್ರಾಥಮಿಕ ಶಾಲಾ ಶಿಕ್ಷಕರು 2018ರಿಂದ ತಮಗೆ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಪದೋನ್ನತಿ ನೀಡುವಂತೆ ಸರ್ಕಾರದ ಮೇಲೆ ಒತ್ತಡ ತಂದಿದ್ದರು. ಅದರಂತೆ 7ರಿಂದ 8 ಸಾವಿರ ಶಿಕ್ಷಕರು ಪದೋನ್ನತಿ ಪಡೆದುಕೊಂಡಿದ್ದಾರೆ. ಇದು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ (6ರಿಂದ 8ನೇ ತರಗತಿಗಳಿಗೆ ಬೋಧಿಸುವ) ಅಸಮಾಧಾನಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆಯಲ್ಲಿ ಕೆಎಟಿಗೆ ಅರ್ಜಿ ಸಲ್ಲಿಸಿದ್ದ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ನ್ಯಾಯಯುತವಾಗಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ 6ರಿಂದ 8ನೇ ತರಗತಿಗೆ ಬೋಧಿಸುವ ಪದವೀಧರ ಶಿಕ್ಷಕರು ಅರ್ಹರಾಗಿದ್ದು, ನಮ್ಮನ್ನು ಬಡ್ತಿಗೆ ಪರಿಗಣಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದರು.

ಅರ್ಜಿ ವಿಚಾರಣೆ ನಡೆಸಿದ ಕೆಎಟಿ ಹಂಗಾಮಿ ಅಧ್ಯಕ್ಷ ನ್ಯಾಯಮೂರ್ತಿ ಆರ್.ಬಿ.ಬೂದಿಹಾಳ್ ನೇತೃತ್ವದ ಪೀಠ, ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗೆ ಪದೋನ್ನತಿ ಪಡೆಯಲು ಪ್ರಾಥಮಿಕ ಶಾಲಾ ಶಿಕ್ಷಕರು ಅರ್ಹರಲ್ಲ. ಬದಲಿಗೆ, 6ರಿಂದ 8ನೇ ತರಗತಿಗಳಿಗೆ ಬೋಧಿಸುವ ಹಿರಿಯ ಪ್ರಾಥಮಿಕ ಶಿಕ್ಷಕರು ಮಾತ್ರ ಅರ್ಹರೆಂದು ಆದೇಶಿಸಿದೆ. ರಾಜ್ಯದಲ್ಲಿ 13 ಸಾವಿರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದು, ಇವರಿಗೆ ಕೆಎಟಿ ಆದೇಶ ಸಂತಸ ತಂದಿದೆ.

ಕೆಎಟಿ ಆದೇಶದ ಅಂಶಗಳು : ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನದಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗೆ ಬಡ್ತಿ ನೀಡಲು ಸಾಧ್ಯವಿಲ್ಲ. ಏಕೆಂದರೆ, ಈ ಹುದ್ದೆಗಳು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಶ್ರೇಣಿಯ ನಂತರದ ಶ್ರೇಣಿಯ ಹುದ್ದೆಗಳಲ್ಲ. ಹಾಗೆಯೇ, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ವಿಭಿನ್ನ ಶ್ರೇಣಿಗಳು.

  • ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡಿದ್ದಲ್ಲಿ ತಕ್ಷಣ ಅಂತಹ ಶಿಕ್ಷಕರಿಗೆ ನೋಟಿಸ್ ನೀಡಿ, ಬಡ್ತಿ ಹಿಂಪಡೆಯಬೇಕು.
  • ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪ್ರೌಢ ಶಾಲಾ ಸಹಶಿಕ್ಷಕ ಗ್ರೇಡ್ -2 ಶ್ರೇಣಿಗೆ 6ರಿಂದ 8ನೇ ತರಗತಿ ಬೋಧಿಸುವ ಪದವೀಧರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮಾತ್ರ ಅರ್ಹರು.
  • ಪ್ರೌಢ ಶಾಲಾ ಸಹಶಿಕ್ಷಕ ಗ್ರೇಡ್-2ಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನವನ್ನ ಪರಿಗಣಿಸಬೇಕು.
  • ಈ ಆದೇಶ ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕ ವರ್ಗಕ್ಕೆ ಮತ್ತು ಅವರ ಬಡ್ತಿಗೆ ಅನ್ವಯವಾಗಲಿದೆ.
  • ಅಜಿರ್ದಾರ ಶಿಕ್ಷಕರು ವೃಂದ ಮತ್ತು ನೇಮಕಾತಿ ನಿಯಮಗಳ ಅಡಿಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಿದ್ದಲ್ಲಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅವರನ್ನು ಪರಿಗಣಿಸಬೇಕು.
Tags

Post a Comment

0Comments

Post a Comment (0)