ಸದ್ವಿಚಾರ : ನಿಮಗಿಷ್ಟದ ವ್ಯಕ್ತಿ, ವಸ್ತುಗಳನ್ನು ಅದರಲ್ಲಿ ಸೇರಿಸ್ತಾ ಹೋಗಿ...

varthajala
0

 #ಎಷ್ಟುದಿನಅಂತ_ದ್ವೇಷಿಸೋದು

-------------------------------------------------------------

ಒಂದು ಪ್ರಾಥಮಿಕ ಶಾಲೆಯಲ್ಲಿ ಅದೊಂದು ದಿನ ಶಿಕ್ಷಕರು, ಒಂದು ಪ್ಲ್ಯಾಸ್ಟಿಕ್ ಚೀಲದಲ್ಲಿ ಟೊಮೆಟೊ ಹಣ್ಣುಗಳನ್ನು ತರುವಂತೆ ಮಕ್ಕಳಿಗೆ ಹೇಳುತ್ತಾರೆ. "ನೀವು ತರುವ ಪ್ರತಿಯೊಂದು ಟೊಮೆಟೊ ಹಣ್ಣು ನೀವು ದ್ವೇಷ ಮಾಡೋ ಒಬ್ಬೊಬ್ಬ ವ್ಯಕ್ತಿಯ ಸಂಕೇತ. ನೀವು ಎಷ್ಟು ಜನರನ್ನು ಇಷ್ಟಪಡ್ತಿಲ್ವೋ, ದ್ವೇಷ ಮಾಡ್ತೀರೋ, ಅಷ್ಟು ಹಣ್ಣು ತಗೊಂಬನ್ನಿ".

ಮರುದಿನ ಮಕ್ಕಳು ಉತ್ಸಾಹದಿಂದ ಟೊಮೆಟೊ ಹಣ್ಣುಗಳನ್ನು ತರ್ತಾರೆ. ಒಂದು, ಎರಡು, ಮೂರು, ಐದರವರೆಗೆ ಹೀಗೆ ಒಬ್ಬೊಬ್ಬ ವಿದ್ಯಾರ್ಥಿಯ ಹತ್ತಿರ ಟೊಮೆಟೊ ಹಣ್ಣುಗಳಿದ್ವು. 

ಎಲ್ಲಾ ತಂದಾಯ್ತಲ್ಲ? ಅವನ್ನ ನಿಮ್ಮ ಚೀಲದಲ್ಲಿ ಇಟ್ಕೊಂಡಿರಿ. ಇವನ್ನೇ ದಿನಾ ತಗೊಂಬನ್ನಿ. ಅಷ್ಟೇ ಅಲ್ಲ, ನೀವು ಓಡಾಡುವಾಗ್ಲೂ ಇವು ನಿಮ್ಮ ಜೊತೆಗೇ ಇರಬೇಕು ಅಂತ ಹೇಳಿ ಪಾಠ ಮುಂದುವರಿಸಿದ್ರು ಟೀಚರ್.

ಮೊದಲ ದಿನ ಟೊಮೆಟೊ ಚೀಲ ಹಿಡ್ಕೊಂಡೇ ವಿದ್ಯಾರ್ಥಿಗಳು ಓಡಾಡಿದ್ರು. ಸಂಜೆ ಹೊತ್ತಿಗೆ ಅವನ್ನು ಹೊತ್ಕೊಂಡೇ ಮನೆಗೆ ಹೋದ್ರು.

ಮರುದಿನ ಶಾಲೆಗೆ ಬಂದಾಗ, ನಿನ್ನೆಯ ಉತ್ಸಾಹ ಮಕ್ಕಳಲ್ಲಿ ಇರಲಿಲ್ಲ. ಹೋದಲ್ಲೆಲ್ಲ ಟೊಮೆಟೊ ಹಿಡ್ಕೊಂಡು ಓಡಾಡೋದು ಬೇಸರ, ಕಷ್ಟ ಎಂದೆಲ್ಲಾ ತಮ್ಮ ತಮ್ಮಲ್ಲೇ ಮಾತಾಡಿಕೊಳ್ತಿದ್ರು. ಆದರೂ ಶಿಕ್ಷಕರ ಭಯದಿಂದ ಸುಮ್ಮನಿದ್ದರು. ಶಿಕ್ಷಕರು ಅದನ್ನು ನೋಡಿಯೂ ನೋಡದಂತೆ ಸುಮ್ನೇ ನಕ್ಕು ಪಾಠ ಶುರು ಮಾಡಿದ್ರು. 

ಮೂರನೇ ದಿನ ಮಕ್ಕಳ ದೂರುಗಳ ಪಟ್ಟಿ ದೊಡ್ಡದಾಗಿತ್ತು. ಟೊಮೆಟೊಗಳು ಒಡೆದಿವೆ, ವಾಸನೆ ಬರ್ತಿವೆ ಎಂದು ದೂರಿದರು. ಎಲ್ಲಾ ಮಕ್ಕಳು ತಮ್ಮ ಟೊಮೆಟೊ ಎಸೆದ್ರೆ ಸಾಕು ಅಂತಿದ್ರು. ಆದ್ರೆ, ಶಿಕ್ಷಕರ ಭಯ. 

ಕೊನೆಗೆ ಅಳುಕಿನಂದಲೇ ಕೇಳಿದ್ರು: "ಟೊಮೆಟೊಗಳೆಲ್ಲ ಕೊಳೆತು ಕೆಟ್ಟ ವಾಸನೆ ಬರ್ತಿವೆ ಟೀಚರ್. ಇವನ್ನು ಯಾಕೆ ತಗೊಂಡು ಓಡಾಡ್ಬೇಕು?"

ಶಿಕ್ಷಕರು ನಕ್ಕು ಹೇಳಿದರು:

'ಈ ಟೊಮೆಟೊ ನೀವು ದ್ವೇಷ ಮಾಡೋ ವ್ಯಕ್ತಿಗಳಿದ್ದಂತೆ ತಾನೆ? ಅಂದರೆ, ಇವು ನಿಮ್ಮ ಮನಸ್ಸಿನ ದ್ವೇಷ ಇದ್ದ ಹಾಗೆ. ನೀವು ಯಾರನ್ನಾದರೂ ದ್ವೇಷ ಮಾಡೋಕೆ ಶುರು ಮಾಡಿದ್ರೆ, ಕ್ರಮೇಣ ಆ ಭಾವನೆ ಆ ಕೊಳೆತ ಟೊಮೊಟೋ ಹಣ್ಣುಗಳ ಕೆಟ್ಟ ವಾಸನೆಯ ಹಾಗೆ ನಿಮ್ಮ ಮನಸ್ಸಿಗೆ ರೇಜಿಗೆ ಹುಟ್ಟಿಸುತ್ತೆ. ಹೇಗೆ ಕೊಳೆತ ಟೊಮೆಟೊ ವಾಸನೆ ಅಹಿತಕರ ಭಾವನೆ ತರುತ್ತೋ, ನಿಮ್ಮ ಮನಸ್ಸು ಕೂಡಾ ದ್ವೇಷದಿಂದ ರಾಡಿಯಾಗುತ್ತೆ. ಅಸಹನೆ, ಅಸಮಾಧಾನ ಹೆಚ್ಚಿಸುತ್ತೆ. ನಿಮ್ಮ ಮನಃ ಶಾಂತಿ ದೂರ ಮಾಡುತ್ತೆ.

'ಆದ್ದರಿಂದ, ಯಾರನ್ನೂ ದ್ವೇಷ ಮಾಡಬೇಡಿ. ಇದರಿಂದ ಮನಸ್ಸು ಕೆಟ್ಟುಹೋಗುತ್ತೆ. ಒಂದೆರಡು ದಿನ ಈ ಟೊಮೆಟೊ ಹೊತ್ಕೊಂಡು ಓಡಾಡಿದ್ಕೇ ಇಷ್ಟೊಂದು ಬೇಸರವಾಗಿದೆ ನಿಮಗೆ. ಇನ್ನು, ಇಡೀ ಜೀವನ ಅದ್ಹೇಗೆ ದ್ವೇಷ ಮನಸ್ಸಿನಲ್ಲಿ ಇಟ್ಕೊಂಡು ಓಡಾಡ್ತೀರಿ?

'ಎಷ್ಟು ಬೇಗ ಟೊಮೆಟೊ ಆಚೆಗೆ ಎಸೆಯುತ್ತೀರೋ, ಅಷ್ಟು ಬೇಗ ಆರಾಮ ಆಗ್ತೀರಿ. ಮನಸ್ಸನ್ನು ಸ್ವಚ್ಛವಾಗಿ ಇಟ್ಕೊಳ್ಳಿ. ನಿಮಗಿಷ್ಟದ ವ್ಯಕ್ತಿ, ವಸ್ತುಗಳನ್ನು ಅದರಲ್ಲಿ ಸೇರಿಸ್ತಾ ಹೋಗಿ. ಕೆಟ್ಟ ಭಾವನೆ ಉಂಟು ಮಾಡೋ ವಿಷಯಗಳನ್ನ ದೂರ ಇಡಿ. ಅವನ್ನು ಹೊತ್ಕೊಂಡು ಓಡಾಡ್ಬೇಡಿ. ಆಗ ಜೀವನಪೂರ್ತಿ ಆರಾಮವಾಗಿರ್ತೀರಿ.'

ಸದ್ವಿಚಾರ ಸಂಗ್ರಹ

Tags

Post a Comment

0Comments

Post a Comment (0)