ಹೊಸಪೇಟೆ ಉಪಕಾರಾಗೃಹದಲ್ಲಿ ಬಂಧಿಗಳಿಗೆ ಸಾಕ್ಷರತಾ ಕಾರ್ಯಕ್ರಮ

varthajala
0

 ಹೊಸಪೇಟೆ ಉಪಕಾರಾಗೃಹದಲ್ಲಿ ಬಂಧಿಗಳಿಗೆ ಸಾಕ್ಷರತಾ ಕಾರ್ಯಕ್ರಮ

ಸಾಕ್ಷರತೆಯಿಂದ ಜೀವನದಲ್ಲಿ ಬದಲಾವಣೆ: ನ್ಯಾ.ಪದ್ಮಪ್ರಸಾದ್

 

ವಿಜಯನಗರ(ಹೊಸಪೇಟೆ)ನ.03: ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆ,ಹೊಸಪೇಟೆ ತಾಲ್ಲೂಕು ಉಪಕಾರಾಗೃಹ ಹಾಗೂ ಹೊಸಪೇಟೆ ತಾಲ್ಲೂಕು ಲೋಕ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಅನಕ್ಷರಸ್ಥ ಬಂಧಿಗಳಿಗೆ ಸಾಕ್ಷರತಾ ಕಾರ್ಯಕ್ರಮವನ್ನು ಹೊಸಪೇಟೆಯ ಉಪಕಾರಾಗೃಹ ಆವರಣದಲ್ಲಿ ಕಲಿಕೆಯಿಂದ ಬದಲಾವಣೆ ಎಂಬ ಹೆಸರಿನಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.

ಹೊಸಪೇಟೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಪದ್ಮಪ್ರಸಾದ್ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು ಯಾವುದೋ ಒಂದು ಕಾರಣದಿಂದ ತಮ್ಮ ಗಮನಕ್ಕೆ ತಿಳಿದೋ ತಿಳಿಯದೇ ಜೈಲು ಹಕ್ಕಿಗಳಾಗಿರುವ ಬಂಧಿಗಳು ಇಲ್ಲಿ ಸಿಗುವಂತಹ ಉಪಯುಕ್ತ ಸಮಯವನ್ನು ಶಿಕ್ಷಣ ಪಡೆಯುವುದರ ಮೂಲಕ, ಪುಸ್ತಕಗಳನ್ನು ಓದುವುದರ ಮೂಲಕ ಸಾಕ್ಷರರಾದಾಗ ಜೀವನದಲ್ಲಿ ಬದಲಾವಣೆ ಕಂಡುಕೊಳ್ಳಬಹುದಾಗಿದೆ ಎಂದರು.

ಜೈಲು ಬಂಧಿಗಳಾಗಿ ಪುಸ್ತಕಗಳನ್ನು ಬರೆಯುವುದರ ಮೂಲಕ ಪ್ರಸಿದ್ಧರಾದ ಅನೇಕ ಮಹಾತ್ಮರ ಉದಾಹರಣೆಗಳನ್ನು ನೀಡಿ ಅವರ ಪುಸ್ತಕಗಳು ಜನಮಾನಸದಲ್ಲಿ ಹೇಗೆ ತಲುಪಿದವು ಎಂಬುವುದನ್ನು ತಿಳಿಸುತ್ತಾ ಇಂತಹ ಸಂದರ್ಭದಲ್ಲಿ ಸರ್ಕಾರ ರಾಜ್ಯದ ಎಲ್ಲಾ ಕಾರಾಗೃಹಗಳಲ್ಲಿ ಅನಕ್ಷರಸ್ಥರಿಗೆ ಅಭ್ಯಾಸ ಕಲಿಸಲು ಮುಂದಾಗಿದ್ದು;ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಕರುಣಾಳು ಬಾ ಬೆಳಕೆ ಹಾಗೂ ಅಪ್ಪ ಅಂದ್ರೆ ಆಕಾಶ ಎಂಬ ಪುಸ್ತಕಗಳ ಮಹತ್ವವನ್ನು ಸಹ ನ್ಯಾಯಾಧೀಶರಾದ ಪದ್ಮಪ್ರಸಾದ್ ಅವರು ಬಂಧಿಗಳಿಗೆ ವಿವರಿಸಿದರು.

ಹೊಸಪೇಟೆಯ ತಾಲೂಕು ಶಿಕ್ಷಣಾಧಿಕಾರಿಗಳಾದ ಪಿ.ಸುನಂದಾ ಅವರು ಮಾತನಾಡಿ ಶಿಕ್ಷಣ ಮನುಷ್ಯನನ್ನು ಬದಲಾವಣೆಯತ್ತ ಕೊಂಡೊಯ್ಯುತ್ತದೆ. ತಾವೆಲ್ಲರೂ ಸಾಕ್ಷರರಾಗುವ ಮೂಲಕ ಸಮಾಜದಲ್ಲಿ ಒಳ್ಳೆಯ ವ್ಯಕ್ತಿಗಳಾಗಿ ಮತ್ತು ನೆಮ್ಮದಿಯಿಂದ ಜೀವನ ನಡೆಸಬೇಕು ಎಂದರು.

ಲೋಕ ಶಿಕ್ಷಣ ಸಂಯೋಜಕರಾದ ಮಧುಸೂದನ್ ಅವರು ಕಲಿಕೆಯಿಂದ ಬದಲಾವಣೆ, ಕಾರ್ಯಕ್ರಮದ ಉದ್ದೇಶಗಳು ಹಾಗೂ ಸಾಕ್ಷರತಾ ಕಾರ್ಯಕ್ರಮ ನಡೆಸುವಂತಹ ಕಾರ್ಯ ವಿಧಾನಗಳ ಬಗ್ಗೆ ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಕಾರಾಗೃಹದ ಅಧೀಕ್ಷಕರಾದ ಎಂ.ಹೆಚ್.ಕಲಾದಗಿ ಅವರು ಮಾತನಾಡಿ ಜೈಲಿನಲ್ಲಿರುವಂತಹ ಬಂಧಿಗಳ ಸಾಕ್ಷರತಾ ಪ್ರಮಾಣ ಹಾಗೂ ಸರ್ಕಾರದ ಆದೇಶದನ್ವಯ ಬಂಧಿಗಳಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸಾಕ್ಷರತಾ ಕಲಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಶಿಕ್ಷಣ ಸಂಯೋಜಕರಾದ ಗುರುರಾಜ್, ಸಹಾಯಕ ಜೈಲರ್ ಎಸ್.ಹೆಚ್.ಕಾಳಿ ಮತ್ತು ಜಯಶ್ರೀ ಪೋಳ್ ಹಾಗೂ ಜೈಲು ಸಿಬ್ಬಂದಿಗಳು ಮತ್ತು ಸಂತೋಷ ಸಂತಾಗೋಳ ಹಾಗೂ ಸಹ ಶಿಕ್ಷಕರಾದ ಪ್ರಕಾಶ್ ಹಾಗೂ ಇತರರು  ಇದ್ದರು.

Tags

Post a Comment

0Comments

Post a Comment (0)