ಪುರಂದರ ದಾಸರಿಗೆ ಭಕ್ತಿಯ ನಮನ

varthajala
0

ಪುರಂದರದಾಸರಿಗೆ ಭಕ್ತಿಯ ನಮನ

ಪುರಂದರರ ಕೀರ್ತನೆಗಳ ಸಂಕೀರ್ತನ

ಪುರಂದರೋಪನಿಷತ್ತಿನ ಅರ್ಥಾನುಸಂಧಾನ

ನಾರದಾಂಶಸಂಭೂತರ ದಿವ್ಯ ದರ್ಶನ

ಮಾನವ ಜನ್ಮದ ಹಿರಿಮೆ ತೋರಿಸಿರುವರು

ಮನವ ನಿಯಂತ್ರಿಸು ಎಂದು ಬೋಧಿಸಿರುವರು

ಅನನ್ಯ ಭಕ್ತಿಯಿಂದ ಸ್ಮರಣೆ ಮಾಡೆಂದಿಹರು

ಮನದಲ್ಲಿ ಹರಿರೂಪವ ನಿಲಿಸೆಂದಿಹರು


ನವವಿಧಭಕ್ತಿಯ ತೋರಿ ನಲಿದಾಡಿಹರು

ಭವಬಂಧನ ಬಿಡಿಸುವ ದಾರಿ ತೋರಿಹರು

ಕಾವಕೊಲ್ಲುವ ಅವನೆ ಎಂದು ಸಾರಿರುವರು

ನೋವ ನಲಿವ ಸಮವಾಗಿ ನೋಡೆಂದಿಹರು


ಲಾಲಿ ಹಾಡಿ ಮುದ್ದು ಕೃಷ್ಣನ ಮಲಗಿಸುತಿಹರು

ಜೋಲಿಯೋಳಗೆ ಕೂರಿಸಿ ತೂಗುತ್ತಿಹರು

ಲೀಲೆಗಳ ವರ್ಣಿಸುತ ಕುಣಿಯುತ್ತಿಹರು

ನಲಿವ ಕೃಷ್ಣನ ಕಣ್ಣ ಮುಂದೆ ತಂದಿಟ್ಟಿಹರು


ಗುಪ್ತ ಭಾಷೆಲಿ ತತ್ವಗಳನು ಅಡಗಿಸಿರುವರು

ಆಪ್ತನೊಬ್ಬನೆ ಹರಿಯೆಂದು ಸಾರಿಹರು

ಸುಪ್ತ ಆಸೆಗಳನು ಬಿಡಿರಿ ಎಂದು ಹಾಡಿಹರು

ತೃಪ್ತರಾಗಿ ಬಾಳಿರೆಂದು ಕರೆ ನೀಡಿಹರು


ಪದಗಳೊಳಗೆ ಭಕ್ತಿರಸ ತುಂಬಿಕೊಟ್ಟಿಹರು

ಪಾದ ಭಜನೆ ಸುಖವ ಜಗಕೆ ತೋರಿರುವರು

ಹೃದಯದಿಂದ ನಮಗಾಗಿ ವಿವರಿಸಿರುವರು

ಮದನಪಿತನ ಗುಣಮಹಿಮೆ  ಕೊಂಡಾಡಿಹರು


ಹಾಡೋಣ ಬನ್ನಿ ನಾವು ಇವರ ಪದಗಳ

ಮಾಡೋಣ ಬನ್ನಿ ಹರಿಯ ಸಂಕೀರ್ತನೆಯ

ನೋಡೋಣ ಬನ್ನಿ ಒಳ ಅರ್ಥದ ಸವಿಯ

ಹಿಡಿಯೋಣ ಬನ್ನಿ ಇವರ ಪಾದಪದ್ಮವ

ಸಿರಿಹರಿ ಕಳಿಸಿದ ಶ್ರೇಷ್ಠ ಗುರುಗೆ ನಮಿಸುವ

ಪರಿಪರಿ ಅನುಮಾನ ಪರಿಹರಿಸಿ ಎನ್ನುವ

ಪರಿಪೂರ್ಣ ಜ್ಞಾನವನ್ನು ನೀಡಿ ಎನ್ನುವ

ಹರಿದಾಸರ ಚರಣದಲ್ಲಿ ಶರಣಾಗುವ

ಶ್ರೀ ಕೃಷ್ಣಾರ್ಪಣಮಸ್ತು

ರೂಪಶ್ರೀ ಶಶಿಕಾಂತ್

ಫೆಬ್ರವರಿ 1,  ಮಂಗಳವಾರ ಪುರಂದರದಾಸರ ಆರಾಧನೆಯ ಪ್ರಯುಕ್ತ ಈ ಕವನ

Post a Comment

0Comments

Post a Comment (0)