ವೇದಿಕೆಯ ಮೇಲೆ ಝೇಂಕಾರ ಸೃಷ್ಟಿಸಿದ ‘ಕಲಾಂಗನ್’

varthajala
0



 ‘ನ್ರುತ್ಯಾಂಕುರ’- ನೃತ್ಯ ಸಂಸ್ಥೆಯ ರೂವಾರಿ, ನಾಟ್ಯಗುರು- ಕಲಾವಿದೆ ಪಾದರಸದ ವ್ಯಕ್ತಿತ್ವದ ಶ್ರೀಮತಿ ಅಮೃತಾ ರಮೇಶ್ ಬಹುಮುಖಿ ಪ್ರತಿಭೆ. ನೀಳ ನಿಲುವಿನ- ತೆಳುಕಾಯದ ಅಮೃತಾ, ತನ್ನ ದೇಹವನ್ನು ಹಾವಿನಂತೆ ಬಾಗಿ- ಬಳುಕಿಸಿ, ಕಾಲನ್ನು ಎತ್ತರಕ್ಕೆ ಆಕಾಶಚಾರಿಯಲ್ಲಿ ಮಿನುಗಿಸಿ, ಅರೆಮಂಡಿಯಲ್ಲಿ, ಮಂಡಿ ಅಡವುಗಳಲ್ಲಿ ವೇದಿಕೆಯ ತುಂಬಾ ಸಲೀಸಾಗಿ ಚಲಿಸುವ ಮೋಡಿಕಾರ್ತಿ. ತನ್ನ ನೀಳ ತೋಳು, ಕಾಲ್ಗಳು - ಸೊಂಟವನ್ನು ದ್ರವೀಕೃತ ಚಲನೆಗಳಿಂದ ತಿರುಗಿಸಿ ಕಣ್ಮನ ಸೆಳೆಯುವ ಮೆರುಗಿನ ಪ್ರತಿಭೆ. ಅದ್ಭುತ ಭಂಗಿಗಳನ್ನು ನಿರಾಯಾಸವಾಗಿ, ಕಡೆದಿಟ್ಟ ಶಿಲ್ಪದಂತೆ ಸುಮನೋಹರವಾಗಿ  ಭಂಗಿಗಳನ್ನು ರಚಿಸಿ ಕಲಾರಸಿಕರನ್ನು ಬೆರಗುಗೊಳಿಸುವ ಕಲಾವಂತೆ. ಇದ್ಯಾವುದೂ ಅತಿಶಯೋಕ್ತಿಯಲ್ಲ ಬಣ್ಣನೆಯಲ್ಲ. ಈ ಕಲಾವಿದೆಯ ವಿಶಿಷ್ಟ ಕಲಾವಂತಿಕೆಯನ್ನು ಕಣ್ಣಾರೆ ಕಂಡವರಿಗೆ ಮನವರಿಕೆಯಾಗುವ ಸತ್ಯ. ಎಲ್ಲಕ್ಕಿಂತ ಮೆಚ್ಚಾದುದು ಶಾಸ್ತ್ರೀಯತೆಗೇ  ಅಂಟಿದ ಮಡಿವಂತಿಕೆಯಿಲ್ಲದ ಮುಕ್ತ ಮುನ್ನಡೆಗೆ ಖುಷಿಯಾಯಿತು. ಮಕ್ಕಳಿಗೆ ಭರತನಾಟ್ಯದ ಶಾಸ್ತ್ರೀಯ ನೃತ್ಯದ ಪರಿಚಯವೂ ಉಂಟು ಎಂಬುದನ್ನು ಮನದಟ್ಟು ಮಾಡಿ, ಸಮಕಾಲೀನ ನೃತ್ಯ ಪ್ರಯೋಗ- ಪರಿಕಲ್ಪನೆಗಳಿಗೆ ಮುಂದಾಗಿದ್ದು ಅಮೃತಾರ ವೈಶಿಷ್ಟ್ಯ- ಅಸ್ಮಿತೆ. ಇತ್ತೀಚೆಗೆ ಮಲ್ಲತ್ತಳ್ಳಿಯ ಕಲಾಗ್ರಾಮ ವೇದಿಕೆಯ ಮೇಲೆ ಮೂರುಗಂಟೆಗಳ ಕಾಲ ಮ್ಯಾಜಿಕ್ ಸೃಷ್ಟಿಸಿದ ವಿಶೇಷ ನೃತ್ಯ ಕಲಾವಿದೆ. ಸಂಸ್ಥೆಯ ಈ ವರ್ಷದ  ‘‘ಕಲಾಂಗನ್’ ನೃತ್ಯವಾರ್ಷಿಕ ಉತ್ಸವ ಕಾರ್ಯಕ್ರಮದಲ್ಲಿ ತಮ್ಮ 80 ವಿದ್ಯಾರ್ಥಿಗಳನ್ನೂ ತಮ್ಮಂತೆಯೇ ತಯಾರು ಮಾಡಿರುವ ಚೈತನ್ಯಶಾಲಿ ಉತ್ತಮ ಗುರು. ಅವರ ಮಾರ್ಗದರ್ಶನದಲ್ಲಿ ರೂಹು ತಳೆದ ಎಲ್ಲ ಕಲಾಕುಸುಮಗಳೂ ಸಂತಸದ ನಲಿವಿನ ಸಂಭ್ರಮದಲ್ಲಿ ಪ್ರಪ್ಹುಲ್ಲತೆಯಿಂದ ನಳನಳಿಸಿದವು. ಬಗೆ ಬಗೆಯ ನೃತ್ಯಗಳು ವಿಸ್ಮಯದಿಂದ ಕಣ್ಣರಳಿಸುವಂತೆ ಮಾಡಿದವು.  



ಮೂಲತಃ ಅಮೃತಾ ಶಾಸ್ತ್ರೀಯ ನೃತ್ಯ ಭರತನಾಟ್ಯದ ಗುರುವಾದರೂ ತಮ್ಮಲ್ಲಿನ ಅದಮ್ಯ ಚೇತನವನ್ನು ವರ್ಣರಂಜಿತವಾಗಿ ವಿವಿಧ ಮನಾಕರ್ಷಕ ನೃತ್ಯಶೈಲಿಗಳ ಮೂಲಕ ನೆರೆದ ಪ್ರಕ್ಷಕರನ್ನು ರಂಜಿಸಿದರು. ಅವರ ನುರಿತ ಗರಡಿಯಲ್ಲಿ ಶಿಕ್ಷಣ ಪಡೆದ ಮಕ್ಕಳೂ ಕೂಡ ಯಾರಿಗೂ ಕಡಿಮೆ ಇಲ್ಲದಂತೆ ಗುರುವನ್ನು ಅನುಕರಿಸಿ ವೇದಿಕೆಯ ತುಂಬ ತಮ್ಮ ಚೈತನ್ಯಧಾರೆ ಹರಿಸಿದರು.  ಭರತನಾಟ್ಯದ ಶಾಸ್ತ್ರೀಯ ನೃತ್ಯಾರ್ಪಣೆಯಿಂದ ಹಿಡಿದು, ಲವಲವಿಕೆಯ ಆಂಗಿಕಾಭಿನಯದ ಸೆಳೆಮಿಂಚಿನ ನೃತ್ಯಲಹರಿ, ಜಾನಪದ ಗೀತೆ- ಮಟ್ಟುಗಳಿಗೆ ಹೆಜ್ಜೆ ಹಾಕಿ ಆನಂದದಿಂದ ನರ್ತಿಸಿದರು. ಜೊತೆಗೆ ಚಲನಚಿತ್ರ ಗೀತೆಗಳಿಗೆ ಭಾವಾಭಿವ್ಯಕ್ತಿಯ ಅನುರಣನದಲ್ಲಿ ಕುಣಿದು ಕುಪ್ಪಳಿಸಿದ್ದಲ್ಲದೆ, ರೆಟ್ರೋ ಹಳೆಯ ಕಾಲದ ಚಲನಚಿತ್ರಗಳ ಸೊಗಡಿನ ಹಾಡುಗಳಿಂದ ಹಿಡಿದು ನವ್ಯ- ಸಮಕಾಲೀನ ನೃತ್ಯಗಳವರೆಗೆ ನವರಸ  ಝೇಂಕಾರ ಮೂಡಿಸಿದರು. ಅಂತ್ಯಾಕ್ಷರಿಯ ಆಟದಲ್ಲಿ ನೃತ್ಯ ಮಂಜರಿ, ನಾಟಕೀಯ ಆಯಾಮದ ಸಂಭಾಷಣೆಗಳಿಂದ ಕೂಡಿದ  ನವನವೀನ ಮಾದರಿಯ ಹೊಸ ಪರಿಕಲ್ಪನೆಯ  ನೃತ್ಯಗಳನ್ನು ಪ್ರಸ್ತುತಪಡಿಸಿ ರಂಜಿಸಿದರು. ಪ್ರತಿಭೆಗೆ ಎಲ್ಲೆ  ಎಂಬುದಿಲ್ಲ ಎಂದು ಸಾಕ್ಷೀಕರಿಸಿದರು.


 ನ್ರುತ್ಯಾಂಕುರದ ಉದಯೋನ್ಮುಖ ಪ್ರತಿಭೆಗಳು.  ಮೂರು ಗಂಟೆಗಳ ಕಾಲ ವೇದಿಕೆಯ ಮೇಲೆ ವಿದ್ಯುತ್ ಪ್ರವಾಹ. ಕಣ್ಮಿಂಚು ಕಣ್ಮಾಯದಲ್ಲಿ ಸಂಚಲನ ಸೃಷ್ಟಿಸಿದ ಆಕರ್ಷಕ ವೇಷಭೂಷಣಗಳ ಪುಟಾಣಿ ಕಲಾವಿದರನ್ನು ನೋಡುವುದೇ ಒಂದು ವಿಸ್ಮಯದ ಅನುಭೂತಿ. ಹಿರಿಯರಿಗಿಂತ ಪುಟ್ಟಮಕ್ಕಳ ನೃತ್ಯನೈಪುಣ್ಯ ಯಾವುದಕ್ಕೂ ಕಡಿಮೆ ಇರಲಿಲ್ಲ. ಲೆಕ್ಕವಿಲ್ಲದಷ್ಟು ನೃತ್ಯದ ಕೃತಿಗಳು ಒಂದರ ಹಿಂದೆ ಒಂದು ಅವ್ಯಾಹತವಾಗಿ , ಬಿಡುವಿಲ್ಲದಂತೆ ತುಂಬು ಪ್ರವಾಹದಂತೆ ಹರಿದದ್ದು ಒಂದು ವೈಶಿಷ್ಟ್ಯವಾದರೆ, ಮತ್ತೊಂದು ಎಲ್ಲ ನೃತ್ಯ ವೈವಿಧ್ಯದಲ್ಲೂ ಗುರುವಾದ ಅಮೃತಾ, ಕಲಾವಿದೆಯಾಗಿ ಮಕ್ಕಳ ಮಧ್ಯೆ ಮಕ್ಕಳಾಗಿ ವಿವಿಧ ವೇಷಗಳಲ್ಲಿ ಕಂಗೊಳಿಸಿ ವೈವಿಧ್ಯ ಪಾತ್ರವನ್ನು ನಿರ್ವಹಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಷ್ಪಾಂಜಲಿ, ಗಣೇಶ ಸ್ತುತಿ, ಶಿವಸ್ತುತಿ - ಶ್ಲೋಕಗಳು, ವಿಶೇಷ ನಟರಾಜ ನೃತ್ಯರೂಪಕ ಮುಂತಾದ ಸಾಂಪ್ರದಾಯಕ ಕೃತಿಗಳ ಪ್ರದರ್ಶನದಿಂದ ಹಿಡಿದು, ಕೃಷ್ಣನ ಲೀಲಾ ವಿನೋದಗಳಿಗೆ ಕನ್ನಡಿ ಹಿಡಿದು, ಮಕ್ಕಳು ತಂತಮ್ಮ ನಾಟ್ಯ ಪ್ರತಿಭೆಯನ್ನು ಪ್ರದರ್ಶಿಸಿದ್ದು ಗುಣಮಟ್ಟದಲ್ಲೂ ಉತ್ತಮತ್ವವನ್ನು ಬಿಂಬಿಸಿದವು. ನ್ರುತ್ಯಾಕಾಂಕ್ಷಿಗಳು, ಕಲಿಯುತ್ತಿರುವವರು ಎಂಬ ವಿನಾಯಿತಿ ನಿರೀಕ್ಷಿಸದ ಆತ್ಮವಿಶ್ವಾಸದೊಡನೆ ಖಚಿತ ಹೆಜ್ಜೆಗಳನ್ನು ಹಾಕಿ ಸೊಗಸಾದ ಆಂಗಿಕಾಭಿನಯ ತೋರಿದ್ದು ಮಕ್ಕಳ ವಿಶೇಷ. 

Post a Comment

0Comments

Post a Comment (0)