ಬಜೆಟ್‌ನಲ್ಲಿ ಆರೋಗ್ಯ, ಶಿಕ್ಷಣಕ್ಕೆ ಆದ್ಯತೆ ನೀಡಲು ಪೃಥ್ವಿ ರೆಡ್ಡಿ ಒತ್ತಾಯ

varthajala
0

ಮುಂದಿನ ವಾರ ಮಂಡನೆಯಾಗಲಿರುವ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಆರೋಗ್ಯ ಹಾಗೂ ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು ಎಂದು ಆಮ್‌ ಆದ್ಮಿ ಪಾರ್ಟಿಯ ರಾಜ್ಯಾಧ್ಯಕ್ಷರಾದ ಪೃಥ್ವಿ ರೆಡ್ಡಿ ಆಗ್ರಹಿಸಿದರು.



ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಪೃಥ್ವಿ ರೆಡ್ಡಿ, “ಹಿಂದಿನ ಬಜೆಟ್‌ಗಳನ್ನು ಗಮನಿಸಿದರೆ ಭ್ರಷ್ಟಾಚಾರಕ್ಕೆ ಅನುಕೂಲವಾಗುವಂತಹ ಯೋಜನೆಗಳಿಗೆ ಆದ್ಯತೆ ನೀಡಿರುವುದು ಕಂಡುಬರುತ್ತದೆ. ಈ ವರ್ಷವಾದರೂ ಆರೋಗ್ಯ, ಶಿಕ್ಷಣ ಕ್ಷೇತ್ರಕ್ಕೆ ಆದ್ಯತೆ ನೀಡಬೇಕು. ಆರೋಗ್ಯ ವಲಯದ ಸುಧಾರಣೆಗೆ ಕರ್ನಾಟಕವು ತಲಾ 1,328 ರೂ. ವೆಚ್ಚ ಮಾಡಿದರೆ, ದೆಹಲಿಯು ತಲಾ 2,568 ರೂ. ವೆಚ್ಚ ಮಾಡುತ್ತಿದೆ. ಕರ್ನಾಟಕ ಸರ್ಕಾರವು ಆರೋಗ್ಯ ವೆಚ್ಚವನ್ನು ಪ್ರತಿವರ್ಷ 30% ಹೆಚ್ಚಿಸಿದರೆ, ಮುಂದಿನ ಮೂರು ವರ್ಷಗಳಲ್ಲಿ ದೆಹಲಿ ಮಾದರಿಯನ್ನು ತಲುಪಬಹುದು. ಜೊತೆಗೆ, ಆರೋಗ್ಯ ಇಲಾಖೆಯಲ್ಲಾಗುವ ವ್ಯಾಪಕ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಪಾರದರ್ಶಕತೆಗೆ ಆದ್ಯತೆ ನೀಡಬೇಕು” ಎಂದು ಹೇಳಿದರು.

“ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರವು ತೀವ್ರ ನಿರ್ಲಕ್ಷಕ್ಕೆ ಒಳಗಾಗಿದೆ. ಕರ್ನಾಟಕ ಸರ್ಕಾರವು ಬಜೆಟ್‌ನಲ್ಲಿ ಕೇವಲ 13% ಮೊತ್ತವನ್ನು ಶಿಕ್ಷಣಕ್ಕೆ ಮೀಸಲಿಟ್ಟು, ಅದನ್ನು ಕಾಟಾಚಾರಕ್ಕೆಂಬಂತೆ ಖರ್ಚು ಮಾಡುತ್ತಿದೆ. ಬರೋಬ್ಬರಿ 24% ಹಣವನ್ನು ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ದೆಹಲಿ ಸರ್ಕಾರವನ್ನು ಕರ್ನಾಟಕ ಅನುಸರಿಸಬೇಕು. ಅಲ್ಲಿನ ಸರ್ಕಾರಿ ಶಾಲೆ ವಿಶ್ವದರ್ಜೆಯ ಸೌಲಭ್ಯಗಳನ್ನು ಹೊಂದಿದೆ. ದೆಹಲಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳನ್ನು ಭಾರತದ ಅತ್ಯುತ್ತಮ ಕಾಲೇಜುಗಳು ಕರೆದು ಪ್ರವೇಶ ನೀಡುತ್ತಿವೆ. ಕರ್ನಾಟಕ ಸರ್ಕಾರವು ಶಿಕ್ಷಣಕ್ಕೆ ಮೀಸಲಿಡುತ್ತಿರುವ ಹಣವನ್ನು ಪ್ರತಿವರ್ಷ ಶೇ. 20ರಷ್ಟಾದರೂ ಹೆಚ್ಚಿಸುತ್ತಾ ಸಾಗಬೇಕು” ಎಂದು ಪೃಥ್ವಿ ರೆಡ್ಡಿ ಆಗ್ರಹಿಸಿದರು.

ಕೃಷಿ ಸುಧಾರಣೆಗೆ ಸಂಬಂಧಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ಮೂರು ರೈತವಿರೋಧಿ ಕೃಷಿ ಕಾಯಿದೆಗಳನ್ನು ರಾಜ್ಯ ಸರ್ಕಾರ ರದ್ದುಪಡಿಸಬೇಕು. ಶೇ. 100ರಷ್ಟು ಕೃಷಿ ಭೂಮಿಯನ್ನು ಬೆಳೆ ವಿಮೆಯಡಿ ತರಬೇಕು. ವೈಜ್ಞಾನಿಕ ಎಂಎಸ್‌ಪಿ ಬಗ್ಗೆ ಗಮನ ಹರಿಸುವುದರ ಜೊತೆಗೆ ಮಧ್ಯಮ ಹಾಗೂ ಸಣ್ಣ ಪ್ರಮಾಣದ ರೈತರಿಗೆ ಬಡ್ಡಿರಹಿತ ಸಾಲ ನೀಡಬೇಕು. ಕೃಷಿ ಭೂಮಿಗಳ ಕ್ಲಸ್ಟರ್‌ ಆಧಾರಿತ ಅಭಿವೃದ್ಧಿಯನ್ನು ಶೀಘ್ರವೇ ಜಾರಿಗೆ ತರಬೇಕು. ತಾಲೂಕು ಮಟ್ಟದಲ್ಲಿ ಕೋಲ್ಡ್‌ ಸ್ಟೋರೇಜ್‌ ವ್ಯವಸ್ಥೆಯನ್ನು ಕಲ್ಪಿಸಬೇಕು. ಟೊಮ್ಯಾಟೋ, ಈರುಳ್ಳಿ, ಆಲೂಗೆಡ್ಡೆಯಂತಹ ಪ್ರಮುಖ ತರಕಾರಿಗಳು ಸ್ಥಿರ ಬೆಲೆಯಲ್ಲಿ ಗ್ರಾಹಕರಿಗೆ ಸಿಗುವಂತೆ ಮಾಡಬೇಕು” ಎಂದು ಒತ್ತಾಯಿಸಿದರು.

“ಪರಿಸರಸ್ನೇಹಿ ವಿದ್ಯುತ್‌ಚಾಲಿತ ವಾಹನಗಳನ್ನು ಪ್ರೋತ್ಸಾಹಿಸಲು ಅಲ್ಪಾವಧಿ ಸಬ್ಸಿಡಿ, ರಸ್ತೆ ತೆರಿಗೆ ಮನ್ನಾ, ಚಾರ್ಜಿಂಗ್‌ ಸ್ಟೇಷನ್‌ಗಳ ಸ್ಥಾಪನೆ ಮುಂತಾದ ಕ್ರಮಗಳನ್ನು ಬಜೆಟ್‌ನಲ್ಲಿ ಘೋಷಿಸಬೇಕು. ರಾಜ್ಯದ ಪೂರ್ವ-ಪಶ್ಚಿಮ ಸಂಚಾರ ಕಾರಿಡಾರ್‌ ಅಭಿವೃದ್ಧಿಯಾಗಬೇಕು. ಸಾರ್ವಜನಿಕ ಸಾರಿಗೆ ಬಸ್‌ಗಳನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬೇಕು. ಲಾಕ್‌ಡೌನ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಸಣ್ಣ ಉದ್ಯಮಗಳ ಪುನಶ್ಚೇತನಕ್ಕೆ ವಿಶೇಷ ಪ್ಯಾಕೇಜ್‌ ಘೋಷಿಸಬೇಕು. ಅನಾಥ ಹಿರಿಯ ನಾಗರಿಕರಿಗೆ ಉಚಿತ ವಸತಿ ಹಾಗೂ ಎಲ್ಲ ಹಿರಿಯ ನಾಗರಿಕರಿಗೆ ಉಚಿತ ವೈದ್ಯಕೀಯ ನೆರವು ಸಿಗುವಂತಾಗಬೇಕು” ಎಂದು ಪೃಥ್ವಿ ರೆಡ್ಡಿ ಅಭಿಪ್ರಾಯಪಟ್ಟರು.

“ಮಹಿಳಾ ಸಬಲೀಕರಣಕ್ಕೆ ಮೀಸಲಿಡುತ್ತಿರುವ ಮೊತ್ತದ ಪ್ರಮಾಣವು ವರ್ಷದಿಂದ ವರ್ಷಕ್ಕೆ ಕುಸಿಯುತ್ತಿರುವುದು ಬೇಸರದ ಸಂಗತಿ. ದೆಹಲಿ ಮಾದರಿಯಲ್ಲಿ ಹೆಚ್ಚು ಹಣವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೀಡಬೇಕಾದ ಅವಶ್ಯಕತೆಯಿದೆ. ಮಹಿಳೆಯರಿಗೆ ಬಸ್‌ಗಳಲ್ಲಿ ಉಚಿತ ಪ್ರಯಾಣ ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಸಿಸಿಟಿವಿ ಅಳವಡಿಕೆಗೆ ಅನುದಾನ ಮೀಸಲಿಡಬೇಕು. ಪೆಟ್ರೋಲ್‌, ಡೀಸೆಲ್‌, ಗ್ಯಾಸ್‌ ಮೇಲಿನ ತೆರಿಗೆಯನ್ನು ಕಡಿಮೆ ಮಾಡಬೇಕು. ಸೌರ ವಿದ್ಯುತ್‌ ಉತ್ಪಾದನೆ ಹಾಗೂ ತ್ಯಾಜ್ಯದಿಂದ ವಿದ್ಯುತ್‌ ಉತ್ಪಾದಿಸುವ ತಂತ್ರಜ್ಞಾನವನ್ನು ಅಳವಡಿಸುತ್ತ ಗಮನ ಹರಿಸಬೇಕು. ದೆಹಲಿ ಮಾದರಿಯ ಬಿಸಿನೆಸ್‌ ಬ್ಲಾಸ್ಟರ್ಸ್‌ ಕಾರ್ಯಕ್ರಮವನ್ನು ಕರ್ನಾಟಕದಲ್ಲೂ ಜಾರಿಗೆ ತಂದು, ಸ್ಟಾರ್ಟ್‌ಅಪ್‌ಗಳನ್ನು ಪ್ರೋತ್ಸಾಹಿಸಬೇಕು” ಎಂದು ಪೃಥ್ವಿ ರೆಡ್ಡಿ ಹೇಳಿದರು.

Post a Comment

0Comments

Post a Comment (0)