ವಿಶ್ವ ವನ್ಯಜೀವಿ ದಿನ: ಪ್ರಾಣಿ - ಸಸ್ಯಗಳ ರಕ್ಷಣೆಗಾಗಿ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ಜನ ಜಾಗೃತಿ ಜಾಥ

varthajala
0

ಬೆಂಗಳೂರು - ಉಕ್ರೇನ್ ನಲ್ಲಿ ಅತ್ಯಂತ ಅಮೂಲ್ಯವಾದ ಅಪಾರ ಸಸ್ಯ ಮತ್ತು ಪ್ರಾಣಿ ಸಂಪತ್ತು ಇದ್ದು, ಇವುಗಳ ರಕ್ಷಣೆಯ ಉದ್ದೇಶದಿಂದಲಾದರೂ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ಅಡ್ವೆಂಚರ್ ಅಂಡ್ ವೈಲ್ಡ್ ಲೈಫ್ ಸಂಘಟನೆ ನಗರದ ಎಂ.ಜಿ. ರಸ್ತೆ, ಬೆಂಗಳೂರು ಪ್ರೆಸ್ ಕ್ಲಬ್ ಆವರಣದಲ್ಲಿ ಜನ ಜಾಗೃತಿ ಜಾಥ ನಡೆಸಿತು.

ಉಕ್ರೇನ್ ಜನರ ಪರಿಸ್ಥಿತಿ ಏನಾದರೂ ಇರಲಿ, ಅಲ್ಲಿ ಪ್ರಾಣಿ, ಸಸ್ಯ ಸಂಕುಲ ರಕ್ಷಣೆ ಅಗತ್ಯವಾಗಿದ್ದು, ಯುದ್ಧ ನಡೆದರೆ ಇದರಿಂದ ಜಗತ್ತಿನ ಪರಿಸರದ ಮೇಲೆ ಭಾರೀ ಪ್ರತಿಕೂಲ ಪರಿಣಾಮ ಬೀರುತ್ತದೆ. ಮತ್ತೆ ಪರಿಸರ ವ್ಯವಸ್ಥೆಯನ್ನು ಪುನರ್ ಸ್ಥಾಪಿಸಲು ನೂರಾರು ವರ್ಷಗಳ ಅಗತ್ಯವಿದೆ. ಹೀಗಾಗಿ ಪ್ರಾಣಿ ಪಕ್ಷಗಳ ದೃಷ್ಟಿಯಿಂದಲಾದರೂ ಯುದ್ಧ ಸಮಾಪ್ತಿಗೊಳಿಸುವಂತೆ ಪ್ರತಿಭಟನಾಕಾರರು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಆಗ್ರಹಿಸಿದರು.

ಉಕ್ರೇನ್ ನಲ್ಲಿ 45,000 ಕ್ಕೂ ಹೆಚ್ಚು ಪ್ರಾಣಿ ಪ್ರಬೇಧಗಳಿದ್ದು, ಸುಮಾರು 108 ಸಸ್ತನಿ ಪ್ರಬೇಧಗಳನ್ನು ಈ ರಾಷ್ಟ್ರ ಒಳಗೊಂಡಿದೆ. 400 ಜಾತಿಯ ಪಕ್ಷಿಗಳು, 21 ಜಾತಿಯ ಸರಿಸೃಪಗಳು, 200 ವಿವಿಧ ಜಾತಿಯ ಜಲಚರಗಳು, 17 ಬಗೆಯ ಉಭಚರಗಳು, ಕೀಟಗಳನ್ನು ಒಳಗೊಂಡಂತೆ 35,000 ಅಕಶೇರುಗಳ ಸಂಪತ್ತು ಇಲ್ಲಿವೆ. 





ಇಲ್ಲಿನ ಕಾರ್ಪಾಥಿಯನ್ ಮತ್ತು ಕ್ರೈಮಿಯಾ ಪ್ರದೇಶಗಳು ಸ್ಥಳೀಯ ಪ್ರಾಣಿ ಸಸ್ಯ ಜಾತಿಗಳ ಆವಾಸ ಸ್ಥಾನವಾಗಿದೆ. ಇಲ್ಲಿ ಐರೋಪ್ ನಲ್ಲಿನ ಅಪರೂಪದ ಅಳಿಲು, ಬೈಸನ್, ಶಾಗ್, ವಿವಿಧ ಬಗೆಯ ಪಕ್ಷಿಗಳು ಕಾಣ ಸಿಗುತ್ತವೆ. ಬ್ಲ್ಯಾಕ್, ಹ್ಯಾಸಲ್ ಗ್ರೌಸ್, ಗುಲ್, ಗೂಬೆ, ಬಾತುಕೋಳಿ, ಕೊಕ್ಕರೆ, ಕಾಡು ಹೆಬ್ಬಾತುಗಳು, ನೂರಾರು ಜಾತಿಯ ವಲಸೆ ಹಕ್ಕಿಗಳ ಆವಾಸ ಸ್ಥಾನ ಇದಾಗಿದೆ. ಉಕ್ರೇನ್ ರೆಡ್ ಬುಕ್ ನಲ್ಲಿ 385 ಅಳಿವಿನ ಅಂಚಿನಲ್ಲಿರುವ ಪ್ರಬೇಧಗಳಿವೆ ಎಂದು ಸಾಹಸ ಮತ್ತು ವನ್ಯಜೀವಿ ತಜ್ಞ ಡಾ. ಸಿಂಹ ಶಾಸ್ತ್ರಿ ಹೇಳಿದ್ದಾರೆ.

ಉಕ್ರೇನ್ ಹಲವಾರು ಪ್ರಕೃತಿ ಪರಂಪರೆಯ ಮೀಸಲು ಪ್ರದೇಶಗಳನ್ನು ಒಳಗೊಂಡಿದ್ದು, ಜೈವಿಕ ಪರಂಪರೆಯ ರಕ್ಷಣೆಯಲ್ಲಿ ಮಂಚೂಣಿಯಲ್ಲಿದೆ. ಅಲ್ಲಿನ ಅಸ್ಕೇನಿಯಾ – ನೋವಾ 1875 ರಲ್ಲಿ ಮೊದಲ ಬಾರಿಗೆ ನಿರ್ಮಾಣವಾದ ಖಾಸಗಿ ವನ್ಯ ಜೀವಿ ಆಶ್ರಯತಾಣವಾಗಿದೆ. ಅಲ್ಲಿನ ಕಪ್ಪು ಸಮುದ್ರದ ನಿಸರ್ಗಧಾಮದಲ್ಲಿ ಹಲವಾರು ಜಲ ಪಕ್ಷಿಗಳನ್ನು ರಕ್ಷಿಸಲಾಗುತ್ತಿದೆ. ಇದು ಮೆಡಿಟೇರಿಯನ್ ಸಮುದ್ರದ ಮೆರವು. ವಿಶ್ವ ವನ್ಯ ಜೀವಿ ದಿನದ ಹಿನ್ನೆಲೆಯಲ್ಲಿ ಯುದ್ಧವನ್ನು ನಿಲ್ಲಿಸಿ, ಉಕ್ರೇನ್ ನಲ್ಲಿರುವ ಅಮೂಲ್ಯ ಪ್ರಾಣಿ, ಪಕ್ಷಿಗಳ ಸಂತತಿಯನ್ನು ರಕ್ಷಿಸುವಂತೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಡಾ. ಸಿಂಹ ಶಾಸ್ತ್ರಿ ಒತ್ತಾಯಿಸಿದ್ದಾರೆ. 

-ಡಾ. ಸಿಂಹ ಶಾಸ್ತ್ರಿ mob: 9986630555


Post a Comment

0Comments

Post a Comment (0)