38 ವರ್ಷದ ಮಹಿಳೆಯ ಮೂತ್ರಪಿಂಡ ಸಮಸ್ಯೆಗೆ ಪರಿಹಾರ ಒದಗಿಸಿದ ಬೆಂಗಳೂರಿನ NU ಆಸ್ಪತ್ರೆ ತಜ್ಞ ವೈದ್ಯರು:

varthajala
0

 ಕಳೆದ ಕೆಲವು ತಿಂಗಳುಗಳಿಂದ, ತನ್ನ ಮೂತ್ರಪಿಂಡದ ಸಮಸ್ಯೆಯ ಕಾರಣ ಸಾಕಷ್ಟು ತೊಂದರೆ ಅನುಭವಿಸಿದ್ದ 38 ವರ್ಷದ ವಿವಾಹಿತ ಮಹಿಳೆಯ ಯಶಸ್ವಿ ಶಸ್ತ್ರ ಚಿಕಿತ್ಸೆ ಮಾಡಿ ಮುಗಿಸಿದ್ದಾರೆ ಬೆಂಗಳೂರಿನ ಪ್ರತಿಷ್ಠಿತ NU ಆಸ್ಪತ್ರೆಯ ವೈದ್ಯರು.  ಆ ಮಹಿಳೆ ಈ ಹಿಂದೆ ಹಲವು ಪರಿಣಿತರಲ್ಲಿ ಈ ಸಮಸ್ಯೆಯನ್ನು ತೋಡಿಕೊಂಡರೂ ಪ್ರಯೋಜನವಾಗಿರಲಿಲ್ಲ. ಕೆಲವು ತಿಂಗಳ ಹಿಂದೆ ಸಾಮಾನ್ಯ ಆರೋಗ್ಯ ತಪಾಸಣೆಗೆ ಹೋದ ಸಂದರ್ಭದಲ್ಲಿ ಮಹಿಳೆಗೆ ತನ್ನ ಎಡ ಮೂತ್ರಪಿಂಡ ಕಳಪೆಯಾಗಿ ಕಾರ್ಯನಿರ್ವಹಿಸುತ್ತಿರುವುದು ಪತ್ತೆಯಾಗಿತ್ತು. ಆದರೆ ಈ ಸಮಸ್ಯೆಯನ್ನು ಪರೀಕ್ಷಿಸಿದ್ದ ಬೇರೆ ವೈದ್ಯರು ಇದು ಜನ್ಮಜಾತ ಸಮಸ್ಯೆ ಎಂದು ಪರಿಗಣಿಸಿ ಎಡ ಮೂತ್ರಪಿಂಡವನ್ನು ತೆಗೆದುಹಾಕಲು ಸಲಹೆ ನೀಡಿದ್ದರು. ಇನ್ನೊಬ್ಬ ಮೂತ್ರಶಾಸ್ತ್ರಜ್ಞರು ಮೂತ್ರಪಿಂಡ ಸರಿಯಾಗಿ ಕಾರ್ಯನಿರ್ವಹಿಸದ ಕಾರಣ ಅದನ್ನು ಮರೆತುಬಿಡಲು ಸಲಹೆ ನೀಡಿದ್ದರು. ಇದನ್ನು ಕೇಳಿದ ರೋಗಿ ಮಹಿಳೆ ಹಾಗೂ ಆಕೆಯ ಪತಿ ತೀವ್ರ ಸಂಕಟಕ್ಕೆ ಒಳಗಾಗಿದ್ದರು. ದಂಪತಿಗಳು ಅಂತಿಮವಾಗಿ ಬೆಂಗಳೂರಿನ ಪದ್ಮನಾಭನಗರದ NU ಆಸ್ಪತ್ರೆಗೆ ಭೇಟಿ ನೀಡಿದ ಪರಿಣಾಮಕಾರಿಯಾಗಿ ಚಿಕಿತ್ಸೆ ಪಡೆದುಕೊಂಡು ಶಾಶ್ವತ ಪರಿಹಾರ ಕಂಡುಕೊಂಡಿದ್ದಾರೆ.


NU ಆಸ್ಪತ್ರೆಯ ತಜ್ಞ ವೈದ್ಯರು ಎಲ್ಲ ರೀತಿಯ ಪರೀಕ್ಷೆ ನಡೆಸಿ, ಎಡ ಮೂತ್ರಪಿಂಡ ಕೇವಲ 7% ಕಾರ್ಯಾಚರಣೆ ನಡೆಸುತ್ತಿದೆ ಎಂದು ವರದಿಯಲ್ಲಿ ಕಂಡುಕೊಂಡರು. ಆರು ವರ್ಷಗಳ ಹಿಂದೆ ಮಹಿಳೆ ಅಲ್ಟ್ರಾಸೌಂಡ್ ಮಾಡಿಸಿದ್ದಾಗಲೂ ಯಾವುದೇ ಸಮಸ್ಯೆ ಇರಲಿಲ್ಲ. ಈ ಅಂಶವನ್ನು ಮನಗಂಡು ಹೆಚ್ಚಿನ ವೈದ್ಯಕೀಯ ತನಿಖೆ ನಡೆಸಿದ NU ಆಸ್ಪತ್ರೆಯ ವೈದ್ಯರು, ಬೇರೆ ವೈದ್ಯರು ಸೂಚಿಸಿದಂತೆ ಈ ಸಮಸ್ಯೆ ಹುಟ್ಟಿನಿಂದ ಬಂದಿದ್ದಲ್ಲ ಅನ್ನುವ ತೀರ್ಮಾನಕ್ಕೆ ಬಂದರು. NU ಆಸ್ಪತ್ರೆಯ ಮೂತ್ರಶಾಸ್ತ್ರಜ್ಞ ಡಾ. ವಿನೋದ್ ಕುಮಾರ್ ಹಾಗೂ ತಂಡ ಈ ನಿಟ್ಟಿನಲ್ಲಿ ಕೂಲಂಕೂಷವಾಗಿ ತನಿಖೆ ನಡೆಸಿ ನಿರ್ಣಯಕ್ಕೆ ಬಂದರು. ಎಡ ಮೂತ್ರನಾಳ (ಮೂತ್ರಪಿಂಡವನ್ನು ಮೂತ್ರಕೋಶಕ್ಕೆ ಸಂಪರ್ಕಿಸುವ ಪೈಪ್) ವಾಸ್ತವವಾಗಿ ದೊಡ್ಡ ಗರ್ಭಾಶಯದಿಂದ ಸಂಕುಚಿತಗೊಂಡಿದ್ದು, ಇದು ಎಡಭಾಗದ ಮೂತ್ರಪಿಂಡದ ದುರ್ಬಲ ಕಾರ್ಯನಿರ್ವಹಣೆಗೆ ಕಾರಣವಾಗಿದೆ ಎಂದು ಪತ್ತೆ ಹಚ್ಚಿದರು.
ಬಳಿಕ ಸ್ತ್ರೀರೋಗ ಶಾಸ್ತ್ರದ ತಜ್ಞರೊಂದಿಗೆ ಸಮಾಲೋಚನೆ ನಡೆಸಿ, ರೋಗಿಗೆ ಗರ್ಭಾಶಯದ ಅಡೆನೊಮೈಯೋಸಿಸ್ (ಗರ್ಭಾಶಯದ ಕ್ಯಾನ್ಸರ್ ಅಲ್ಲದ ಬೆಳವಣಿಗೆ) ಇರುವುದು ಗಮನಿಸಿದರು. ಹೀಗಾದಾಗ ಮುಟ್ಟಿನ ಸಮಯದಲ್ಲಿ ಅತಿಯಾದ ರಕ್ತಸ್ರಾವ ಮತ್ತು ನೋವನ್ನು ಉಂಟುಮಾಡುತ್ತದೆ. ಸ್ತ್ರೀರೋಗತಜ್ಞರಿಂದಲೂ ಮಹಿಳೆಯ ಗರ್ಭಾಶಯ ತೆಗೆಯುವ ಸಲಹೆ ನೀಡಲಾಗಿತ್ತು. ಆದರೆ ಮೂತ್ರಪಿಂಡದ ಚಿತ್ರಗಳನ್ನು ಅಧ್ಯಯನ ಮಾಡಿದ ನಂತರ ಮತ್ತು ರೋಗಿಯು ವಯಸ್ಸು ಕಡಿಮೆ ಇರುವುದರಿಂದ ಗರ್ಭಾಶಯ ತೆಗೆದುಹಾಕುವ ಬದಲು ಎಡ ಮೂತ್ರನಾಳವನ್ನು ದುರಸ್ತಿ ಮಾಡುವ ಮೂಲಕ ಮೂತ್ರಪಿಂಡವನ್ನು ಉಳಿಸಲು ನಿರ್ಧರಿಸಲಾಯಿತು. ಎರಡೂ ಶಸ್ತ್ರಚಿಕಿತ್ಸೆಗಳನ್ನು ಒಂದೇ ಸಮಯದಲ್ಲಿ ಯೋಜಿಸಲಾಯಿತು. ಮೂತ್ರಶಾಸ್ತ್ರಜ್ಞರು ಮತ್ತು ಸ್ತ್ರೀರೋಗತಜ್ಞರನ್ನು ಒಳಗೊಂಡ ಎರಡು ತಂಡಗಳು ರೋಗಿಯ ಎಡ ಮೂತ್ರನಾಳವನ್ನು ಸರಿಪಡಿಸುವುದರ ಜೊತೆಗೆ ಗರ್ಭಾಶಯವನ್ನು ಯಶಸ್ವಿಯಾಗಿ ತೆಗೆದುಹಾಕಲಾಯಿತು. ದೊಡ್ಡ ಗರ್ಭಾಶಯವನ್ನು ಯೋನಿಯ ಮೂಲಕ ತೆಗೆದುಹಾಕಲಾಯಿತು, ಕ್ರಮೇಣ ರೋಗಿ ಮಹಿಳೆ ಚೇತರಿಸಿಕೊಂಡರು. ಅತ್ಯಾಧುನಿಕ ಕೀ ಹೋಲ್ ಸರ್ಜರಿ ಮುಖಾಂತರ ಶಸ್ತ್ರಚಿಕಿತ್ಸೆ ನಡೆಸಿದ ಕಾರಣ ಚೇತರಿಸಿಕೊಳ್ಳಲು ಹೆಚ್ಚಿನ ಸಮಯ ಅಗತ್ಯ ಇಲ್ಲ ಎಂದು NU ಆಸ್ಪತ್ರೆಯ ವೈದ್ಯರು ಅಭಿಪ್ರಾಯಪಟ್ಟರು.
ಶಸ್ತ್ರಚಿಕಿತ್ಸೆ ನಡೆದು ಒಂದು ತಿಂಗಳ ನಿರಂತರ ಆರೈಕೆಯ ನಂತರ ಮಹಿಳೆ ಹಿಂದಿಗಿಂತಲೂ ಆರೋಗ್ಯವಾಗಿದ್ದಾರೆ.  ಒಂದೇ ಸಮಯದಲ್ಲಿ ರೋಗಿಯ ಎರಡು ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಿದ್ದರಿಂದ ಕೃತಜ್ಞಳಾಗಿದ್ದಾರೆ. NU ಆಸ್ಪತ್ರೆಗಳ ಮೂತ್ರಶಾಸ್ತ್ರಜ್ಞ ಮತ್ತು ಸ್ತ್ರೀರೋಗತಜ್ಞರ ನಡುವಿನ ಅತ್ಯುತ್ತಮ ಹೊಂದಾಣಿಕೆಯ ಕಾರ್ಯಾಚರಣೆ ರೋಗಿಯ ಸಮಸ್ಯೆಗೆ ಸುಲಭವಾಗಿ ಪರಿಹಾರವಾಗಲು ಸಾಧ್ಯವಾಯಿತು ಎಂದು ಡಾ ವಿನೋದ್ ಹೇಳಿದರು.

Post a Comment

0Comments

Post a Comment (0)