KOODLI GURURAJ : ಕೂಡ್ಲಿ ಗುರುರಾಜ ಅವರ ಭಾರತೀಯ ಸಂಸ್ಕೃತ ಪತ್ರಿಕೋದ್ಯಮ ಕುರಿತು ಕನ್ನಡದಲ್ಲಿ ಪ್ರಕಟ

varthajala
0

 ಆತ್ಮೀಯ ಸ್ನೇಹಿತರೇ,

ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಮತ್ತೊಂದು ಪುಸ್ತಕವನ್ನು ತಮ್ಮ ಕೈಗಿಡಲು ಸಂತಸವಾಗುತ್ತಿದೆ. ಈ ಪುಸ್ತಕದ ಹೆಸರು ಸುಧರ್ಮಾ- ಐದು ದಶಕ ಕಂಡ ಜಗತ್ತಿನ ಏಕೈಕ ಸಂಸ್ಕೃತ ದಿನಪತ್ರಿಕೆ. ಬೆಂಗಳೂರಿನ ಜಯತೀರ್ಥ ಪಬ್ಲಿಕೇಷನ್ಸ್ ಈ ಪುಸ್ತಕ ಪ್ರಕಟಿಸಿದೆ.
ಪಾರಂಪರಿಕ ನಗರಿ ಮೈಸೂರಿನ ಹೆಮ್ಮೆಯ ಸಂಗತಿಗಳಲ್ಲಿ ಸುಧರ್ಮಾ ಕೂಡ ಒಂದು. ಭಾರತೀಯ ಸಂಸ್ಕೃ ತ ಪತ್ರಿಕೋದ್ಯಮದಲ್ಲಿ ಸುಧರ್ಮಾ ಒಂದು ಕ್ರಾಂತಿಕಾರಕ ಹೆಜ್ಜೆ. ಪ್ರಚಲಿತ ವಿದ್ಯಮಾನಗಳ ಮಾಹಿತಿಯನ್ನು ಸಂಸ್ಕೃತ ಭಾಷೆಯಲ್ಲೂ ಪರಿಣಾಮಕಾರಿಯಾಗಿ ಬರೆದು ಓದುಗರೊಂದಿಗೆ ಸಂವಹನ ನಡೆಸಬಹುದು ಎಂದು ತೋರಿಸಿ ಕೊಡುವುದೇ ಈ ಪತ್ರಿಕೆಯ ಸಂಸ್ಥಾಪಕರಾದ ಪಂಡಿತ ಕಳಲೆ ನಡಾದೂರ್ ವರದರಾಜ ಅಯ್ಯಂಗಾರ್ ಅವರ ಉದ್ದೇಶವಾಗಿತ್ತು. ಅದರಲ್ಲಿ ಅವರು ಸಫಲರಾದರು. ವರದರಾಜ ಅಯ್ಯಂಗಾರ್ ಬದುಕಿದ್ದರೆ ಅವರಿಗೆ 101 ವರ್ಷವಾಗಿರುತ್ತಿತ್ತು.
ಈ ಪುಸ್ತಕ ಒಂದು ರೀತಿ Making of Sudharma ಇದ್ದಂತೆ. ಸುಧರ್ಮಾ ಹುಟ್ಟು, ಬೆಳವಣಿಗೆ ಏಳು- ಬೀಳುಗಳು, ಸಂಸ್ಕೃತ ಭಾಷೆಯ ಪ್ರಚಾರದಲ್ಲಿ ಸುಧರ್ಮಾ ಪಾತ್ರ ಎಲ್ಲವನ್ನೂ ಈ ಕೃತಿಯಲ್ಲಿ ದಾಖಲಿಸಿದ್ದೇನೆ. ಭಾರತೀಯ ಸಂಸ್ಕೃತ ಪತ್ರಿಕೋದ್ಯಮದ ಹುಟ್ಟು, ಬೆಳವಣಿಗೆಯನ್ನು ಚಿತ್ರಿಸಿದ್ದೇನೆ. ಸುಧರ್ಮಾ ಹಾಗೂ ಭಾರತೀಯ ಸಂಸ್ಕೃತ ಪತ್ರಿಕೋದ್ಯಮ ಕುರಿತು ಕನ್ನಡದಲ್ಲಿ ಪ್ರಕಟವಾದ ಮೊದಲ ಕೃತಿ ಇದು. ಶಾಲಾ-ಕಾಲೇಜಿನಲ್ಲಿ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ನಾನು ವ್ಯಾಸಂಗ ಮಾಡಿದ್ದೇ ಈ ಕೃತಿ ಬರೆಯಲು ಮೂಲ ಪ್ರೇರಣೆ.
ಪಂಡಿತ ವರದರಾಜ ಅಯ್ಯಂಗಾರ್ ಅವರು ಹೆಣ್ಣುಮಕ್ಕಳಿಗೆ ಶಿಕ್ಷಣ ನೀಡಬೇಕೆಂದು ಬಲವಾಗಿ ಪ್ರತಿಪಾದಿಸಿದವರು. ಅದಕ್ಕಾಗಿ ಶ್ರಮಿಸಿದವರು. ಹೆಣ್ಣುಮಕ್ಕಳಿಗಾಗಿಯೇ ಶ್ರೀಕಾಂತ ಬಾಲಿಕಾ ಶಾಲೆಯನ್ನು ಆರಂಭಿಸಿದವರು. ಮೈಸೂರಿನಲ್ಲಿ ಇಂದಿಗೂ ಈ ಶಾಲೆ-ಕಾಲೇಜು ನಡೆಯುತ್ತಿದೆ. ಸುಮಾರು 450 ಹೆಣ್ಣುಮಕ್ಕಳು ಇಲ್ಲಿ ಓದುತ್ತಿದ್ದಾರೆ.
ಈ ಕೃತಿಗೆ ಮುನ್ನುಡಿ ಬರೆದು ಕೊಟ್ಟು ಶುಭ ಹಾರೈಸಿದ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ, ಪುಸ್ತಕ ಕುರಿತು ಬರೆದ ಹಿರಿಯ ಪತ್ರಕರ್ತ, ಆತ್ಮೀಯರಾದ ಕಂ.ಕ. ಮೂರ್ತಿ, ಸಂಸ್ಕೃತ ವಿದ್ವಾಂಸರಾದ ಡಾ. ಟಿ. ವಿ. ಸತ್ಯನಾರಾಯಣ ಅವರಿಗೆ ಕೃತಜ್ಞನಾಗಿದ್ದೇನೆ. ಪುಸ್ತಕಕ್ಕೆ ಕವರ್ ಪೇಜ್ ರಚಿಸಿಕೊಟ್ಟ ಸನ್ಮಿತ್ರ ಕಿರಣ್ ಮಾಡಾಳು ಅವರಿಗೆ ತುಂಬಾ ಥ್ಯಾಂಕ್ಸ್.
ಮುನ್ನುಡಿಯಲ್ಲಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ ಅವರು ಹೀಗೆ ಬರೆದಿದ್ದಾರೆ- ಡಾ. ಕೂಡ್ಲಿ ಗುರುರಾಜ ಅವರು ಭಾರತೀಯ ಸಂಸ್ಕೃತ ಪತ್ರಿಕೆಗಳ ಇತಿಹಾಸದ ಹಿನ್ನೆಲೆಯಲ್ಲಿ ಈ ಕೃತಿಯನ್ನು ರಚಿಸಿದ್ದಾರೆ. ಭಾರತೀಯ ಸಂಸ್ಕೃತ ಪತ್ರಿಕೆಗಳ ಇತಿಹಾಸವನ್ನೇ ನಮ್ಮ ಮುಂದೆ ತೆರೆಸಿದ್ದಾರೆಂದರೆ ಅತಿಶಯೋಕ್ತಿ ಇಲ್ಲ. ಕೂಡ್ಲಿ ಗುರುರಾಜ ಅವರು ಸುಧರ್ಮಾ ದಿನ ಪತ್ರಿಕೆಯ ಏಳು- ಬೀಳುಗಳನ್ನು ಬಲು ಮಾರ್ಮಿಕವಾಗಿಯೇ ಈ ಪುಸ್ತಕದಲ್ಲಿ ಚಿತ್ರಿಸಿದ್ದಾರೆ.
ಅತ್ಯಂತ ಸರಳವಾಗಿ, ಮನೋಜ್ಞವಾಗಿ, ಕುತೂಹಲದ ಶೈಲಿಯಲ್ಲಿ ಈ ಪುಸ್ತಕವನ್ನು ರಚಿಸಿದ್ದಾರೆ. ಇದಕ್ಕಾಗಿ ಕರ್ನಾಟಕದ ಸಮಸ್ತ ಸಂಸ್ಕೃತ ಪರಿವಾರದ ಪರವಾಗಿ ನಾನು ಅವರನ್ನು ಅಭಿನಂದಿಸುತ್ತೇನೆ.
ಪುಸ್ತಕ ಕುರಿತು ಕಂ.ಕ. ಮೂರ್ತಿ ಅವರ ಅನಿಸಿಕೆ ಹೀಗಿದೆ-
ಪತ್ರಿಕಾ ಧರ್ಮವನ್ನು ತಪಸ್ಸಿನಂತೆ ಅನುಸರಿಸಿಕೊಂಡು ಬಂದ ಸುಧರ್ಮಾ ಕಥನ ಮಾರ್ಗದರ್ಶಿಯಾಗಿದೆ ಎನ್ನುವುದು ಕೃತಿಯನ್ನು ಓದಿದ ಯಾರಿಗಾದರೂ ಮನವರಿಕೆ ಆಗುತ್ತದೆ.
ಅಚ್ಚು ಮೋಳೆ ಜೋಡಣೆಯಿಂದ ಆರಂಭವಾದ ಸುಧರ್ಮಾ ಅತ್ಯಾಧುನಿಕ ತಾಂತ್ರಿಕತೆಯವರೆಗಿನ ಹಾದಿಯಲ್ಲಿ ನಡೆದು ಬಂದ ಕಥೆ ರೋಚಕ. ಇದು ಮಾಧ್ಯಮ ಲೋಕದ ಅರ್ಧ ಶತಮಾನದ ಕಥೆಯೂ ಹೌದು. ಇದನ್ನು ಹಿರಿಯ ಪತ್ರಕರ್ತ ಡಾ. ಕೂಡ್ಲಿ ಗುರುರಾಜ ಅವರು ಸಮರ್ಥವಾಗಿ ಕೃತಿಯಲ್ಲಿ ನಿರೂಪಿಸಿದ್ದಾರೆ.
ದಯವಿಟ್ಟು ಪುಸ್ತಕ ಓದಿ. ಅಭಿಪ್ರಾಯ ತಿಳಿಸಿ.
ನಮಸ್ಕಾರ.
ಪುಟಗಳ ಸಂಖ್ಯೆ 90
ಪುಸ್ತಕದ ಬೆಲೆ 80 ರೂಪಾಯಿಗಳು. (ಅಂಚೆ ವೆಚ್ಚ ಪ್ರತ್ಯೇಕ 50 ರೂಪಾಯಿಗಳು)
ಪುಸ್ತಕಕ್ಕಾಗಿ ಗೂಗಲ್ ಪೇ 93433 81815
May be an image of 1 person and text


Post a Comment

0Comments

Post a Comment (0)