ಶ್ರೀ ರಾಮ ನವಮಿ ಮಹತ್ವ

varthajala
0

 ಶೋಭನ ನಾಮ ಸಂವತ್ಸರ, ವಸಂತ ಋತು, ಚೈತ್ರಮಾಸ ಚೈತ್ರಾ ಮಾಸದ ನವಮಿಯ ದಿನದಂದು ಕೌಸಲ್ಯಾ ಸುಪ್ರಜಾ, ಮರ್ಯಾದಾ ಪುರುಷೋತ್ತಮ, ಏಕಪತ್ನೀವ್ರತಸ್ಥ, ಅಯೋಧ್ಯೆಯ ಚಕ್ರವರ್ತಿ ಶ್ರೀರಾಮಚಂದ್ರನ ವರ್ಧಂತಿ. ಶ್ರೀ ರಾಮಚಂದ್ರ ಎನ್ನುವುದು ಶ್ರೀರಾಮನ ಪೂರ್ಣ ಹೆಸರು.

 ಶ್ರೀ ರಾಮನು ಸೂರ್ಯ ವಂಶದವನು. ರಾಮನೇ ಸ್ವತಃ ತಾನು ಮನುಷ್ಯ ಮಾತ್ರನೆಂದು ಹೇಳಿದರೂ, ಒಮ್ಮೆ ಕೂಡ ತಾನು ದೈವಾಂಶವುಳ್ಳವನೆಂದು ಹೇಳದಿದ್ದರೂ ನಾವು ಅವನನ್ನು ಆದರ್ಶವ್ಯಕ್ತಿಯೆಂದೂ ವಿಷ್ಣುವಿನ ಏಳನೆಯ ಅವತಾರವೆಂದೂ ಪರಿಗಣಿಸುತ್ತೇವೆ.   ಪ್ರಾಚೀನ ಭಾರತದ ಮೇರು ಕೃತಿ ವಾಲ್ಮೀಕಿ ವಿರಚಿತ ರಾಮಾಯಣದ ಕಥಾನಾಯಕನನ್ನು ಸ್ಮರಿಸಿಕೊಳ್ಳುವ   ದಿನವೇ ಶ್ರೀರಾಮನವಮಿ. ಆತನ ಜನ್ಮದಿನಕ್ಕೆ ಹಬ್ಬದ ಮಹತ್ವ. ಈ ದಿನ ಸೂರ್ಯನನ್ನು ರಾಮನ ಪೂರ್ವಿಕರೆಂದು ನಂಬಲಾಗಿದೆ. ಶಕ್ತಿಯ ಸಂಕೇತವಾಗಿರುವ ಸೂರ್ಯನ ಪ್ರಾರ್ಥನೆಯೊಂದಿಗೆ ರಾಮ ನವಮಿ ಆರಂಭವಾಗುತ್ತದೆ. 
ಸೂರ್ಯನಿಂದ ಶಕ್ತಿಯನ್ನು ಬೇಡುವ ಭಕ್ತರು ತಮ್ಮ ದಿನವನ್ನುಆರಂಭಿಸುತ್ತಾರೆ.ಶ್ರೀರಾಮ ನವಮಿಯಂದು ದೇಹ, ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸುವುದು ಪ್ರಮುಖ ಉದ್ದೇಶವಾಗಿದೆ. ಇದರಿಂದ ಭಕ್ತರು ದಿನಪೂರ್ತಿ ಉಪವಾಸವಿದ್ದು, ಸೂರ್ಯ ಮುಳುಗಿದ ಬಳಿಕ ಸಿಹಿ ಹಾಗೂ ಹಣ್ಣುಗಳನ್ನು ತಿಂದು ತಮ್ಮ ಉಪವಾಸ ಅಂತ್ಯಗೊಳಿಸುತ್ತಾರೆ. ಇದರಿಂದ ಅವರ ದೇಹಕ್ಕೆ ಉಪವಾಸದ ಲಾಭವಾಗುತ್ತದೆ ಮತ್ತು ದೇಹಕ್ಕೆ ಅಗತ್ಯ ಪೋಷಕಾಂಶಗಳು ಲಭ್ಯವಾಗುತ್ತದೆ. ಸರಾಯು ನದಿಯಲ್ಲಿ ಪವಿತ್ರ ಸ್ನಾನ ಮಾಡುವುದರಿಂದ ದೇಹ, ಮನಸ್ಸು ಮತ್ತು ಆತ್ಮವು ನಕಾರಾತ್ಮಕತೆಯಿಂದ ಮುಕ್ತವಾಗುತ್ತದೆ ಎನ್ನುವ ಭಾವನೆ ಅಯೋಧ್ಯೆಯ ಜನರಲ್ಲಿದೆ. ಶ್ರೀರಾಮನವಮಿಯಂದು ಹೆಚ್ಚಿನ ಜನರು ದೇಶದೆಲ್ಲೆಡೆ ಪವಿತ್ರ ಸ್ನಾನವನ್ನು ಮಾಡುತ್ತಾರೆ. 
ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸಿ ಜೀವನದ ಸರಿಯಾದ ಮಾರ್ಗದಲ್ಲಿ ನಡೆಯುವುದೇ ಇದರ ಉದ್ದೇಶ. ಈ ದಿನದಂದು ದೇವರು ಭೂ ಮೇಲೆ ಬಂದು ಮಾನವನ ದೇಹ ಹಾಗೂ ಆತ್ಮದ ನಕಾರಾತ್ಮಕತೆಯನ್ನು ತೆಗೆದುಹಾಕುತ್ತಾರೆ ಎಂದು ನಂಬಲಾಗಿದೆ. 
ಬ್ರಹ್ಮಚಾರಿಗಳು ಹಾಗೂ ಆಂಜನೇಯನ ಭಕ್ತರು ಬೀದಿ ಬೀದಿಗಳಲ್ಲಿ ಪೆಂಡಾಲ್‌ ಹಾಕಿ, ಶ್ರೀರಾಮನ ಪ್ರತಿಷ್ಠಾಪಿಸಿ, ಪೂಜಿಸಿ, ಬಿಸಿಲಲ್ಲಿ ಬಸವಳಿದವರಿಗೆ ಪಾನಕ, ಕೋಸಂಬರಿ, ನೀರು ಮಜ್ಜಿಗೆ ಹಂಚುತ್ತಾರೆ. ಅಯೋಧ್ಯೆ ಶ್ರೀರಾಮ ಜನ್ಮ ಕ್ಷೇತ್ರ ಹೀಗಾಗಿ ಉತ್ತರ ಪ್ರದೇಶದ ಹಾಗೂ ಉಜ್ಜಯಿನಿಯಲ್ಲಿ ಸಂಭ್ರಮ ತುಸು ಹೆಚ್ಚು. ಸರಯೂ ನದಿ ಇಂದು ಭಕ್ತರ ಪಾಪಗಳನ್ನು ತೊಳೆಯುವ ಕಾರ್ಯದಲ್ಲಿ ತೊಡಗಿದ್ದಾಳೆ.ಇನ್ನು ದಕ್ಷಿಣ ಭಾರತದಲ್ಲಿ ರಾಮನ ಬಗ್ಗೆ ಹೆಚ್ಚು ಪ್ರಚಾರ ಕೊಟ್ಟವನು ನಮ್ಮೂರಿನ ಹನುಮ ದೇವರು. 
ದಕ್ಷಿಣದಲ್ಲಿ ತಮಿಳುನಾಡು ಕೇರಳ ಬಿಟ್ಟರೆ ಎಲ್ಲಾ ಸಣ್ಣ ಪುಟ್ಟ ಊರು ಕೇರಿಗಳಲಲ್ಲಿ ರಾಮನಾಮ ಗುನುಗುವಂತೆ ಮಾಡಿದ ಕೀರ್ತಿ ವಾನರ ಶ್ರೇಷ್ಠ ಹಂಪೆಯ ಹನುಮನಿಗೆ ಸಲ್ಲುತ್ತದೆ.ಭಾರತವಲ್ಲದೆ ವಿದೇಶಗಳಲ್ಲೂ ರಾಮ ನವಮಿಯನ್ನು ಆಚರಿಸಲಾಗುತ್ತದೆ. ಥಾಯ್ಲೆಂಡ್, ಟಿಬೆಟ್, ಬರ್ಮಾ, ಶ್ರೀಲಂಕಾ, ಕಾಂಬೋಡಿಯಾ, ಫಿಲಿಪ್ಪೀನ್ಸ್, ಜಪಾನ್, ಚೀನಾ, ಮಂಗೋಲಿಯಾ ಸೇರಿದಂತೆ ಇನ್ನು ಹಲವು ರಾಷ್ಟ್ರಗಳಲ್ಲಿ ರಾಮ ಕತೆಗಳು ಬೇರೆ ಬೇರೆ ರೂಪಗಳಲ್ಲಿ ಹಬ್ಬಿದೆ. 
ಭಾರತದ ಕಡು ಬೇಸಿಗೆಯಲ್ಲಿ ಬರುವ ಶ್ರೀರಾಮನವಮಿ ಹಬ್ಬ ಅನೇಕ ನೆನಪುಗಳನ್ನು ಮರುಕಳಿಸುವಂತೆ ಮಾಡುತ್ತವೆ ಶಾಲಾ ಪರೀಕ್ಷೆಗಳು ಮುಗಿದು ಬಾಲಕರಿಗೆ ಮರಕೋತಿ ಆಡುವ ಸಮಯ. ಬಾಲಕಿಯರಿಗೆ ಚೌಕಾಭಾರ, ಘಟಗೋಣಿಮಣೆ, ಕುಂಟಾಬಿಲ್ಲೆ ಆಡುವ ಬೇಸಿಗೆ ರಜಾ ಮಜಾ. ಶ್ರೀರಾಮನವಮಿಗೆ ನಾನಾ ಬಗೆಯ ಪೇಯಗಳು. ಕಲ್ಲಂಗಡಿ, ಕರಬೂಜಾ, ನಿಂಬೆ ಹಣ್ಣಿನ ರಸ ಸೇವನೆಗೆ ಸಕಾಲ. ನೀರಿನ ಅಂಶ ಹೆಚ್ಚಾಗಿರುವ ಹಣ್ಣುಗಳು ಬೇಸಿಗೆಯಲ್ಲೇ ಫಲಕೊಡುವುದು ದೈವಿಕ ವರವೇ ಸರಿ! ಹಣ್ಣುಗಳ ಜತೆಗೆ ತಂಪು ಪದಾರ್ಥ ಹೆಸರುಬೇಳೆ ಕೋಸಂಬರಿಗೂ ಶ್ರೀರಾಮನವಮಿಗೂ ಬಿಡಿಸಲಾರದ ನಂಟು. ನಾಲಕ್ಕು ಸೌತೇಕಾಯಿ ಹೋಳು, ಎರಡು ಲೋಟ ನೀರು ಮಜ್ಜಿಗೆಯನ್ನು ಪಡೆದವನೇ ಭಾಗ್ಯವಂತ.ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಶ್ರೀರಾಮಚಂದ್ರನ ದೇವಾಲಯಗಳು ಕಾಣಿಸುತ್ತವೆ. ಎಲ್ಲ ದೇವಳಗಳಲ್ಲಿ ಈ ದಿನ ಹಬ್ಬವೋ ಹಬ್ಬ. ಶ್ರೀರಾಮನವಮಿಯ ಸರಿಯಾದ ಆಚರಣೆಯೆಂದರೆ ನಕಾರಾತ್ಮಕತೆಯನ್ನು ತೆಗೆದುಹಾಕಿ ಧನಾತ್ಮಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಎಂಬುದು  ಸಾರ್ವಕಾಲಿಕ ಸತ್ಯ. ಬನ್ನಿ ಒಟ್ಟಿನಲ್ಲಿ ಸುಡು ಬಿಸಿಲಿನಲ್ಲಿ ಆಸ್ತಿಕರಾದರೂ ಸರಿಯೇ,  ನಾಸ್ತಿಕರಾದರೂ ಸರಿಯೇ, ಕಷ್ಟವಾದರೂ ಸರಿಯೇ,  ಸುಖವಿದ್ದರೂ ಸರಿಯೇ,  ಯಾವ ಧರ್ಮದವರು ಆದರೂ ಸರಿಯೇ ಎಲ್ಲವನ್ನೂ ಮರೆತು ಈ ದಿನದಂದು ಒಂದು ಕ್ಷಣವಾದರೂ  ಶ್ರೀರಾಮನ ನಾಮ ಎಂಬ ರಸವನ್ನು ಪಾನಕ ಕೋಸಂಬರಿ ಸೇವಿಸುವ ಮೂಲಕ ಸ್ಮರಿಸೋಣ.

ವಿಜಯ್‌ಕುಮಾರ್ ಎಚ್. ಕೆ.
ಟೈಪ್ -6-327 ಅರ್ ಟಿ ಪಿ ಸ್ ಕಾಲೋನಿ
ಶಕ್ತಿನಗರ -584170
ರಾಯಚೂರು
7899775512

Post a Comment

0Comments

Post a Comment (0)