ಇಂದಿನ ಕಥಾನಾಯಕರು ದಾಸಶ್ರೇಷ್ಠ ಶ್ರೀ ಪುರಂದರದಾಸರು

varthajala
0

ಹರಿ ದಾಸ ಪರಂಪರೆಯಲ್ಲಿ ೧೩ಶತಮಾನದ ಕೊನೆಯಲ್ಲಿದ್ದ ಶ್ರೀನರಹರಿತೀರ್ಥರು ದಾಸ ಕೂಟದ ಮೂಲಪುರುಷರು. ಆನಂತರ ಶ್ರೀಪಾದರಾಜರು, ಶ್ರೀವ್ಯಾಸರಾಯರು, ಶ್ರೀಪುರಂದರದಾಸರು, ಶ್ರೀಕನಕದಾಸರು, ಶ್ರೀವಿಜಯದಾಸರು, ಶ್ರೀಗೋಪಾಸದಾಸರು, ಶ್ರೀಜಗನ್ನಾಥದಾಸರು ಮೊದಲಾದ ದಾಸಶ್ರೇಷ್ಠರು ಕನ್ನಡನಾಡಿನಲ್ಲಿ ಉದಯಿಸಿ ಜನಸಾಮಾನ್ಯರಲ್ಲಿ ನೀತಿ, ಸದಾಚಾರಗಳನ್ನು ಬೆಳೆಸಿದರು. ಸುಲಭವೂ, ಸರಳವೂ ಆದ ಕೀರ್ತನೆಗಳ ಮೂಲಕ ಭಕ್ತಿ ಹಾಗೂ ಪರಮಾತ್ಮನ ವಿಷಯಗಳನ್ನು ಪ್ರಸಾರಮಾಡಿದರು. ಅಲ್ಲದೇ ತಾವೇ ಸ್ವತಃ ಜನ ಸಾಮಾನ್ಯರ ಮನೆ- ಮನೆಗೆ ಹೋಗಿ ಸರಳ ಕನ್ನಡದಲ್ಲಿ ದೇವರ ನಾಮಗಳನ್ನು ಹಾಡಿ, ಸಂಗೀತ ಹಾಗೂ ಸಾಹಿತ್ಯದ ಮೂಲಕ ಜನಸಾಮಾನ್ಯರ ಮನಸೂರೆಗೊಂಡು, ಅವರ ಉದ್ಧಾರಕಾರ್ಯದಲ್ಲಿ ತೊಡಗಿದರು.

ಈ ದಾಸವರೇಣ್ಯರಲ್ಲಿ ಮೊಟ್ಟಮೊದಲಿಗರೆಂದರೆ ಶ್ರೀಪುರಂದರದಾಸರು. ಪುರಂದರದಾಸರು ಕ್ರಿ.ಶ. ೧೪೮೪ರಲ್ಲಿ ಪುರಂದರಗಡದಲ್ಲಿ ಜನಿಸಿದರು. ಚಿನಿವಾರವೃತ್ತಿಯನ್ನು ಮಾಡುತ್ತಿದ್ದ ವರದಪ್ಪನಾಯಕನ ಮಗನಾಗಿ ಜನಿಸಿದ ಪುರಂದರದಾಸರ ಮೂಲ ಹೆಸರು ಶ್ರೀನಿವಾಸನಾಯಕನೆಂದು. ಶ್ರೀನಿವಾಸನ ದಯದಿಂದ ಜನಿಸಿದ ಶ್ರೀನಿವಾಸನಾಯಕರ ಸ್ವಭಾವ ಅತಿ ಜಿಪುಣತನ. ಶ್ರೀನಿವಾಸನಾಯಕನು ಪುರಂದರದಾಸನಾದದ್ದು ಶ್ರೀನಿವಾಸನಿಂದಲೇ. ಇದಕ್ಕೆ ಕಾರಣಕರ್ತರೆಂದರೆ ನಾಯಕರ ಪತ್ನಿ ಸರಸ್ವತಿಬಾಯಿ.

ಶ್ರೀನಿವಾಸನಾಯಕರ ಗುರುಗಳು ಶ್ರೀ ವ್ಯಾಸರಾಯರು. ಗುರುಗಳಿಂದ ಪುರಂದರ ವಿಠಲ ಎನ್ನುವ ಅಂಕಿತವನ್ನು ಪಡೆದ ದಾಸವೃತ್ತಿಯನ್ನು ಹೊಂದಿದ ದಾಸರು ತಮ್ಮ ಸರ್ವಸ್ವನ್ನು ದಾನ ಮಾಡಿ ಹರಿದಾಸರಾದರು. ಸಂಸಾರ ಬಂಧನದಿಂದ ಹೊರಬಂದು ಬೀದಿ ಬೀದಿಗಳಲ್ಲಿ ಹರಿ ಭಜನೆ ಮಾಡುತ್ತಾ ಸಾಗಿದರು. ಮಕ್ಕಳಿಂದ ವೃದ್ಧವರೆಗೂ ಅವರ ಮನಸ್ಸನ್ನು ಸೂರೆಗೊಂಡ ದಾಸರು ಭಕ್ತಿಯ ಪ್ರವಾಹದಲ್ಲಿ ಅವರನ್ನು ಮುಳುಗಿಸುವುದರ ಮೂಲಕ ಅವರಿಗೆ ಭಗವಂತನ ಸಾನಿಧ್ಯವನ್ನು ಸೇರುವ ದಾರಿಯನ್ನು ತೋರಿಸಿಕೊಟ್ಟರು. ಪುರಂದರವಿಠಲ ಎನ್ನುವ ಅಂಕಿತದೊಡನೆ ದಾಸರು ಸುಮಾರು ೪,೭೫,೦೦೦ ಪದ, ಪದ್ಯ, ಸುಳಾದಿಗಳನ್ನು ರಚಿಸಿದ್ದಾರೆ.

ದಾಸರೆಂದರೆ ಪುರಂದರದಾಸರಯ್ಯ.

ಲೌಕಿಕ ಐಶ್ವರ್ಯ, ಭೋಗಗಳ ನಿಸ್ಸಾರತೆಯನ್ನು ದಾಸರು ತಮ್ಮ ಅನೇಕ ಹಾಡುಗಳಲ್ಲಿ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ. ‘ದಾಸರೆಂದರೆ ಪುರಂದರದಾಸರಯ್ಯ‘ ಎಂದು ತಮ್ಮ ಗುರುಗಳಿಂದಲೇ ಪ್ರಶಂಸೆಯನ್ನು ಪಡೆದ ದಾಸರು ‘ಲೊಳಲೊಟ್ಟೆ ಎಲ್ಲಾ ಲೊಳಲೊಟ್ಟೆ, ಆನೆ, ಕುದುರೆ, ಒಂಟೆ ಎಲ್ಲಾ ಲೊಳಲೊಟ್ಟೆ‘ಎಂದೂ, ‘ನೆಚ್ಚದಿರು ಸಂಸಾರ ಸ್ಥಿರವಲ್ಲವೀ ದೇಹ‘ ಎಂದು ಸಾರಿದ್ದಾರೆ. ಜಗತ್ತು ನಶ್ವರವಾಗುವದರ ಜೊತೆಗೆ ಚಿಂತೆಯ ಬೀಡೂ ಆಗಿದೆ.ಅನುಗಾಲವೂ ಚಿಂತೆ ಜೀವಕ್ಕೆ, ಸತಿಯು ಇದ್ದರೆ ಚಿಂತೆ, ಸತಿಯು ಇಲ್ಲದಿರೆ ಚಿಂತೆ, ಈ ಚಿಂತೆಗಳಿಂದ ಕೂಡಿದ ಇಂತಹ ಜಗತ್ತಿನಲ್ಲಿ ಮನುಷ್ಯರು ಇಂದ್ರಿಯಗಳ ಸೆಳೆತಕ್ಕೆ ಸಿಕ್ಕು ಪರಮಾತ್ಮನನ್ನು ಮರೆಯುತ್ತಾರೆ. ಈ ಸಂಸಾರ ಚಕ್ರದಿಂದ ಬಿಡುಗಡೆ ಹೊಂದುವ ಪ್ರಯತ್ನವನ್ನು ಮಾತ್ರ ಮಾಡುವುದಿಲ್ಲ. ಕ್ಷಣಭಂಗುರವಾದ ದೇಹವನ್ನು ನಂಬಿ, ಅದರ ಅಲಂಕಾರ, ಭೋಗ ಮತ್ತು ಯೋಗ ಕ್ಷೇಮದಲ್ಲಿಯೇ ತನ್ನ ಅಮೂಲ್ಯವಾದ ಆಯುಷ್ಯವನ್ನು ಕಳೆಯುತ್ತಾನೆ. ಅದರ ಬದಲು ಮಾನವನು ತನ್ನ ದೇಹವನ್ನು ಮುಕ್ತಿಯ ಸಾಧನವನ್ನಾಗಿ ಮಾಡಿಕೊಳ್ಳಬೇಕು. ‘ಮಾನವ ಜನ್ಮ ದೊಡ್ಡ ದು | ಇದನು ಹಾನಿ ಮಾಡಲು ಬೇಡಿ ಹುಚ್ಚಪ್ಪಗಳಿರಾ‘ ‘ದಾಳಿ ಬರುವ ಮುನ್ನಾ ಧರ್ಮ ಗಳಿಸಿರೋ||‘ ಎಂದು ಉಪದೇಶಿಸಿದ್ದಾರೆ. ಹಾಗಾದರೆ ಧರ್ಮವನ್ನು ಗಳಿಸುವುದು ಹೇಗೆ? ವ್ಯಕ್ತಿಯ ಉದ್ಧಾರ ಹೇಗೆ? ಎನ್ನುವ ಪ್ರಶ್ನೆ ಬಂದರೆ, ಇದಕ್ಕಾಗಿ ಪರಮಾತ್ಮನನ್ನು ನಂಬಿ, ಎಲ್ಲವನ್ನೂ ಅವನಿಗೆ ಅರ್ಪಿಸಬೇಕು. ಆತನನ್ನು ನಂಬಿ ಕೆಟ್ಟವರಿಲ್ಲ ಎಂದು ನಂಬಿರುವ ದಾಸರು ‘ನಂಬಿ ಕೆಟ್ಟವರಿಲ್ಲವೋ ರಂಗಯ್ಯನ ನಂಬದೇ ಕೆಟ್ಟರೆ ಕೆಡಲಿ |‘ ಎಂದು ಹಾಡಿರುವ ದಾಸರು ಈ ನಂಬಿಕೆ ಅಥವಾ ಭಕ್ತಿಯ ಸಾಧನಗಳಲ್ಲಿ ಅತ್ಯಂತ ಮಹತ್ವದ್ದು ಭಗವಂತನ ನಾಮಸ್ಮರಣೆ. ಅದನ್ನು ನಿರಂತರವಾಗಿ ಮಾಡುತ್ತಿರಬೇಕೆಂದು ಈ ಪದ್ಯದಲ್ಲಿ ಹೀಗೆ ತಿಳಿಸುತ್ತಿದ್ದಾರೆ ‘ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೇ‘ ಎಂದ ದಾಸರು ಪುನಃ ತಮ್ಮ ಒಂದು ಹಾಡಿನಲ್ಲಿ ‘ನಾರಾಯಣ ನಿನ್ನ ನಾಮದ ಸ್ಮರಣೆಯ ಸಾರಾಮೃತವೆನ್ನ ನಾಲಿಗೆಗೆ ಬರಲಿ |‘ ಎಂದಿದ್ದಾರೆ. ಹಾಗೂ ‘ನೀನ್ಯಾಕೋ ನಿನ್ನ ಹಂಗ್ಯಾಕೋ, ನಿನ್ನ ನಾಮದ ಬಲ ಒಂದಿದ್ದರೆ ಸಾಕೋ |‘ ಎಂದು ಭಗವಂತನ ನಾಮದ ಶ್ರೇಷ್ಠತೆಯನ್ನು ಪ್ರತಿಪಾದಿಸಿದ್ದಾರೆ.

ಇಂತಹ ಹರಿನಾಮ ಸುಧೆಯು ಮನಸ್ಸಿನಲ್ಲಿ ಸದಾ ನೆಲೆಸಿರಬೇಕಾದರೆ ಮನಸ್ಸು ನಿರ್ಮಲ ವಾಗಿರಬೇಕಾದ್ದು ಅತೀ ಅವಶ್ಯ. ಆದಕಾರಣ ದಾಸರು ಕಾಮ, ಕ್ರೋಧಾದಿ ಷಡ್ರಿಪುಗಳನ್ನು ಜಯಿಸುವ ಅವಶ್ಯಕತೆಯನ್ನು ಒತ್ತಿ ಹೇಳಿದ್ದಾರೆ. "ಕಾಗದ ಬಂದಿದೆ" ಎಂಬ ಕೀರ್ತನೆಯಲ್ಲಿ ಕಮಲನಾಭನ ಭಕ್ತರಿಗೆಲ್ಲ ಕಾಗದ ಬಂದಂತೆ ಕಲ್ಪಿಸಿ ಎಲ್ಲರನ್ನೂ ಎಚ್ಚರಿಸಿದ್ದಾರೆ. ದಾಸರ ಅಭಿಪ್ರಾಯದ ಪ್ರಕಾರ ವೈರಾಗ್ಯವೆಂದರೆ ಮನೆ-ಮಾರು ಬಿಟ್ಟು, ಹೆಂಡತಿ-ಮಕ್ಕಳನ್ನು ತ್ಯಜಿಸಿ ಅಡವಿಗೆ ಹೋಗುವುದಲ್ಲ. ಭಕ್ತನು ಗೃಹಸ್ಥನಾಗಿದ್ದುಕೊಂಡೇ ಮುಕ್ತಿಯ ಮಾರ್ಗವನ್ನು ಹೊಂದಬೇಕು ಎಂದು ತಿಳಿಸಿ ಹೇಳಿದ್ದಾರೆ. ಪ್ರಪಂಚದಲ್ಲಿ ಇದ್ದೂ ಇಲ್ಲದಂತೆ ನಿರ್ಲಿಪ್ತನಾಗಿ ಜೀವಿಸಬೇಕೆಂದು ಉಪದೇಶಿಸುವ ದಾಸರು ಜನತೆಗೆ ಕೇವಲ ನಿವೃತ್ತಿ ಮಾರ್ಗವನ್ನು ಬೋಧಿಸದೇ ಪ್ರವೃತ್ತಿ ಮಾರ್ಗವನ್ನೂ ಬೋಧಿಸಿದ್ದಾರೆ. ಸರ್ವವ್ಯಾಪಿ ಹಾಗೂ ಸರ್ವರಕ್ಷಕನಾದ ಪರಮಾತ್ಮನಲ್ಲಿ ಧೃಡನಂಬಿಕೆ ಇಟ್ಟು ಸಂಸಾರದಲ್ಲಿ ಬರುವ ನಷ್ಟಗಳನ್ನು ಅನುಭವಿಸಬೇಕು. ಎಂತಹ ಕಷ್ಟಕಾಲದಲ್ಲಿಯೂ ಅಧೈರ್ಯ ಹೊಂದದೇ "ಬಂದದ್ದೆಲ್ಲ ಬರಲಿ ಗೋವಿಂದನ ದಯೆ ಒಂದಿರಲಿ" ಎಂದು ಜೀವನದಲ್ಲಿ ಮುಂದೆ ಸಾಗಬೇಕು. ಈ ಸಂಸಾರವೆಂಬ ಮಹಾಸಾಗರದಲ್ಲಿ ದೊಡ್ಡ ಅಲೆಗಳು ಬಂದಾಗ ‘ಈಸಬೇಕು ಇದ್ದು ಜೈಸಬೇಕು‘ ಎಂದಿದ್ದಾರೆ. ಮತ್ತೊಂದೆಡೆ ‘ಕಲ್ಲಾಗಿ ಇರಬೇಕು ಕಠಿಣ ಭವ ತೊರೆಯೊಳಗೆ, ಬಿಲ್ಲಾಗಿ ಇರಬೇಕು ಬಲ್ಲವರೊಳಗೆ |‘ ಎಂದು ಕಾವ್ಯಮಯವಾಗಿ ಜನತೆಗೆ ದಿವ್ಯ ಸಂದೇಶ ನೀಡಿದ್ದಾರೆ.

ಡಾಂಭಿಕ ಭಕ್ತಿಯನ್ನು ಕಟುವಾಗಿ ಟೀಕಿಸುವ ದಾಸರು ಡಾಂಭಿಕರ ಆತ್ಮವಂಚನೆಯನ್ನು ಕಂಡು ನಗುತ್ತಾ, ಅದನ್ನು ವಿಡಂಬಡಿಸುತ್ತಾ ‘ನಗೆಯು ಬರುತಿದೆ ಎನಗೆ ನಗೆಯು ಬರುತಿದೆ |‘ ಎಂದು ಹಾಡಿ, ಧರ್ಮದ ಬಾಹ್ಯ ಆಚರಣೆಗಿಂತ ಅಂತಃಕರಣ ಶುದ್ಧಿ ಮತ್ತು ಸದಾಚಾರಗಳು ತುಂಬಿರಬೇಕೆಂದು ಸ್ಪಷ್ಟಪಡಿಸಿದ್ದಾರೆ.

ತಮ್ಮ ಕೀರ್ತನೆಗಳಲ್ಲಿ ಮಧ್ವಮತದ ಸಿದ್ಧಾಂತಗಳನ್ನು ಸುಂದರವಾಗಿ ಪ್ರತಿಪಾದಿಸಿರುವ ದಾಸರು ವಿಶಾಲವಾದ ಮಾನವ ಧರ್ಮವನ್ನು ಸುಂದರವಾಗಿ ಬೋಧಿಸಿದ್ದಾರೆ. ಅತ್ಯುಚ್ಚವಾದ ಪ್ರೀತಿತತ್ವದ, ಅಹಿಂಸಾಧರ್ಮದ ಬೋಧೆಯನ್ನು ಜನಸಾಮಾನ್ಯರಿಗೆ ತಿಳಿಯುವ ರೀತಿಯಲ್ಲಿ ‘ಧರ್ಮವೇ ಜಯವೆಂಬ ದಿವ್ಯಮಂತ್ರ‘ ಎನ್ನುವ ಪದದಲ್ಲಿ ತಿಳಿಸಿದ್ದಾರೆ. ಅಲ್ಲದೇ ‘ವಿಷವಿಕ್ಕಿದವಗೆ ಷಡ್ರಸವನೀಯಲುಬೇಕು | ದ್ವೇಷ ಮಾಡಿದವನ ಪೋಷಿಸಲುಬೇಕು | ಮೋಸ ಮಾಡಿದವನ ಹೆಸರು ಮಗನಿಗಿಡಬೇಕು | ಹುಸಿಯಾಡಿ ಕೆಡಿಸುವವನ ಹಾಡಿ ಹರಸಲುಬೇಕು ||‘ ಎಂದು ಹಾಡಿರುವ ದಾಸರು ದ್ವೇಷಕ್ಕೆ ಪ್ರತಿಯಾಗಿ ಪ್ರೀತಿ, ವಿಷಕ್ಕೆ ಪ್ರತಿಯಾಗಿ ಅಮೃತ ಇವುಗಳನ್ನು ನೀಡುವುದೇ ಉದಾತ್ತವಾದ ಮಾನವ ಧರ್ಮ ಎಂದು ಜನತೆಗೆ ದಿವ್ಯಸಂದೇಶವನ್ನು ನೀಡಿದ್ದಾರೆ.

ಮಾನವ ಜನ್ಮ ದೊಡ್ಡದು, ಇದನು ಹಾನಿ ಮಾಡಲು ಬೇಡಿ, ಹುಚ್ಚಪ್ಪಗಳಿರಾ ||‘ ಎಂದು ಆರಂಭಿಸಿ ಮಾನವ ಜನ್ಮದ ಸಾಫಲ್ಯತೆಯನ್ನು ಪಡೆಯಲು ಈ ನರಜನ್ಮದಿಂದ ಮಾತ್ರ ಸಾಧ್ಯ. ಈ ನರಜನ್ಮದಲ್ಲಿ ಮಾತ್ರ ಸಾಧನೆ ಮಾಡುವುದರ ಮೂಲಕ ಭಗವಂತನ ಸಾನಿಧ್ಯವನ್ನು ಹೊಂದಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಧರ್ಮ ಜ್ಯೋತಿಯ ಸಂಕೇತ, ಧರ್ಮ ಬೆಳಕಿನ ಸಂಕೇತ, ಧರ್ಮ ಜ್ಞಾನದ ಸಂಕೇತ, ಧರ್ಮ ಉನ್ನತಿಯ ಸಂಕೇತ ಎಂಬುದನ್ನು ಸೂಚ್ಯವಾಗಿ ದಾಸರು ಮನದಟ್ಟು ಮಾಡಿಕೊಟ್ಟಿದ್ದಾರಲ್ಲದೇ ನಮ್ಮ ಸಾಮಾಜಿಕ ಜೀವನದಲ್ಲಿಯ ಲೋಪದೋಷಗಳನ್ನು ಎತ್ತಿ ತೋರಿಸಿ, ಅವುಗಳನ್ನು ಪರಿಹರಿಸುವ ಮಾರ್ಗವನ್ನು ಕೂಡಾ ಸೂಚಿಸಿದ್ದಾರೆ. ನಮ್ಮ ಮನಸ್ಸಿನಲ್ಲಿಯ ಕಲ್ಮಷಗಳನ್ನು ಹೋಗಲಾಡಿಸಿ, ಶ್ರೀಹರಿಯ ಪಾದವನ್ನು ಸೇರಬಯಸುವ ಪ್ರತಿಯೊಬ್ಬ ವ್ಯಕ್ತಿ ಪರಮಾತ್ಮನ ನಾಮಾಮೃತವನ್ನು ಸವಿಯಬೇಕೆಂದು ಮಾರ್ಮಿಕವಾಗಿ ತಿಳಿಸಿಕೊಟ್ಟಿದ್ದಾರೆ.

ಮನುಷ್ಯನು ಕಾಮ, ಕ್ರೋಧ, ಮದ, ಮತ್ಸರ, ಮೋಹ, ಲೋಭ ಎನ್ನುವ ವೈರಿಗಳನ್ನು ಮೊದಲು ನಿಗ್ರಹಿಸಬೇಕು. ಇದಕ್ಕಾಗಿ ಹಗಲಿರುಳು ಭಗವಂತನ ಧ್ಯಾನವನ್ನು ಮಾಡಬೇಕು. ದೇವರನ್ನು ಕುರಿತು ಚಿಂತಿಸಬೇಕು. ಎನ್ನುವ ದಾಸರು ‘ಸಂಸಾರದಲ್ಲಿ ಈಸಬೇಕು, ಇದ್ದು ಜೈಸಬೇಕು‘ ಎಂದು ನುಡಿದಿದ್ದಾರೆ. ಇದರರ್ಥವೇನೆಂದರೆ ಮರಣವು ನಮ್ಮ ಸಮಸ್ಯೆಗಳಿಗೆ ಉತ್ತರವಲ್ಲ, ಅದನ್ನು ಪರಿಹರಿಸಬೇಕಾದರೆ ಸಂಸಾರಸಾಗರದ ಸಿಹಿ-ಕಹಿಗಳನ್ನು ಉಂಡು, ಅವುಗಳನ್ನು ನಿಗ್ರಹಿಸಿಕೊಳ್ಳಬೇಕೆಂದು ನುಡಿದಿದ್ದಾರೆ. ಏಕೆಂದರೆ ಸುಖದ ಸಂತಾನಗಳಾದ ಅಹಂಕಾರ, ವ್ಯಸನ, ಪ್ರತಿಷ್ಠೆಗಳನ್ನು ಮೊದಲು ಬಿಡಬೇಕು. ಏಕೆಂದರೆ ದುಃಖವೇ ಸುಖಕ್ಕೆ ಕಾರಣ. ದುಃಖವನ್ನು ಅನುಭವಿಸಿದವರಿಗೆ ಸುಖದ ಬೆಲೆ ಅರಿವಾಗುವುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಅದರಂತೆ ಶ್ರೀಹರಿಯು ಒಡ್ಡಿದ ಅನೇಕ ಪರೀಕ್ಷೆಗಳಿಗೆ ತಮ್ಮನ್ನು ಒಡ್ಡಿಕೊಂಡು, ಅದರಲ್ಲಿ ಗೆದ್ದು ಬಂದಿದ್ದಾರೆ. ಅದನ್ನೇ ಕೀರ್ತನೆಯಲ್ಲಿ ‘ರೊಕ್ಕ ಎರಡಕ್ಕೂ ಕಾರಣ ಕೇಳಕ್ಕಾ||‘ ಎಂದು ನುಡಿದಿದ್ದಾರೆ.

ಹೀಗೆ ಶ್ರೀಹರಿಯನ್ನು ಕೊಂಡಾಡುತ್ತಾ, ಆತನನ್ನು ಸಾಕ್ಷಾತ್ಕರಿಸಿಕೊಂಡು, ಅವನ ದಿವ್ಯಪಾದವನ್ನು ಸೇರಿದ ಪುರಂದರದಾಸರು ನಿಜಕ್ಕೂ ದಾಸಶ್ರೇಷ್ಠರೇ ಸರಿ!

ಇಂತಹ ಅನೇಕ ರೀತಿಯ ಪದ-ಪದ್ಯ-ಸುಳಾದಿಗಳನ್ನು ರಚಿಸಿರುವ ದಾಸರು ನಾರದರ ಅವತಾರವೆಂದು ಹೇಳುತ್ತಾರೆ. ಇಂತಹ ದಾಸಶ್ರೇಷ್ಠರು ಭಗವಂತನ ಒಲುಮೆಗೆ ಪಾತ್ರರಾಗಿ ರಕ್ತಾಕ್ಷಿನಾಮ ಸಂವತ್ಸರದ ಪುಷ್ಯ ಬಹುಳ ಅಮಾವಾಸ್ಯೆ ದಿವಸ ಪರಮಾತ್ಮನ ಪಾದಾರವಿಂದವನ್ನು ಸೇರಿದರು.

ಸಮಸ್ತ ಭಗವದ್ಭಕ್ತರಿಗೆ ಶ್ರೀ ಪುರಂದರ ದಾಸರ ಆರಾಧನಾ ಮಹೋತ್ಸವದ ಶುಭಾಶಯಗಳು.

ಹರಿ ಭಜನೆ ಮಾಡೋ ನಿರಂತರ 

ಪ್ರೀತೋಸ್ತು ಕೃಷ್ಣ ಪ್ರಭುಃ

ಫಣೀಂದ್ರ ಕೆ

Post a Comment

0Comments

Post a Comment (0)