ಕನ್ನಡದ ಮಾರ್ಕೆಟ್ ನ ಕಬ್ಜಾ ಮಾಡ್ಕೊತಿದ್ದಾವಾ ಪರಭಾಷೆ ಸಿನಿಮಾಗಳು? ಮಲಯಾಳಂ ಸಿನಿಮಾಗಳು (Malayalam Cinema) ಗಳಿಸ್ತಿವೆ ಕೋಟಿ ಕೋಟಿ ಹಣ? ಈ ವರ್ಷ ಕನ್ನಡದ ಒಂದೇ ಒಂದು ಸಿನಿಮಾ (Cinema) ಹಿಟ್ ಲಿಸ್ಟ್ ಸೇರಿಲ್ಲ. ಆ ಕುರಿತ ಆ ಸ್ಪೆಷಲ್ ರಿಪೋರ್ಟ್ ಇಲ್ಲಿದೆ .
ಕನ್ನಡ ನೆಲದಲ್ಲಿ ಕನ್ನಡಿಗನೇ ಸಾರ್ವಭೌಮ. ಈ ಮಾತು ಸಿನಿಮಾ ವಿಚಾರದಲ್ಲಿ ಸುಳ್ಳಾಗ್ತಿದೆ. ಕನ್ನಡಿಗರು ಕನ್ನಡ ಸಿನಿಮಾಗಳತ್ತ ಬೆನ್ನು ಮಾಡಿ ಕೂತಿದ್ದಾರೆ. ಅದರಲ್ಲೂ ಥಿಯೇಟರಿಗೆ ಬರಲು ಜಪ್ಪಯ್ಯ ಅಂದ್ರೂ ಒಪ್ಪುತ್ತಿಲ್ಲ ಕನ್ನಡ ಸಿನಿರಸಿಕರು.
ಪರಿಣಾಮ ಈ ವರ್ಷ ಶುರುವಾಗಿ ನಾಲ್ಕು ತಿಂಗಳಾದ್ರೂ ಒಂದೇ ಒಂದು ಕನ್ನಡ ಸಿನಿಮಾ ಹಿಟ್ ಲಿಸ್ಟ್ ಸೇರಿಲ್ಲ. ಬಾಕ್ಸಾಫೀಸ್ ನಲ್ಲಿ ಝಣ ಝಣ ಕಾಂಚಾಣ ಎಣಿಸಿಲ್ಲ.
ಹೌದು, 2025 ಸ್ಯಾಂಡಲ್ ವುಡ್ ಪಾಲಿಗೆ ದುಸ್ವಪ್ನವಾಗಿದೆ. ಎಷ್ಟು ಒಳ್ಳೆಯ ಸಿನಿಮಾ ಕೊಟ್ರೂ ಜನ ಬರ್ತಿಲ್ಲ. ಇನ್ನೆಂಥ ಸಿನಿಮಾ ಕೊಡಬೇಕು ಗುರು ಅಂತ ಸಿನಿಮಾ ಮಂದಿ ತಲೆ ಕೆರೆದುಕೊಳ್ಳುವಂತೆ ಮಾಡಿದೆ.
ಜನವರಿಯಿಂದ ಏಪ್ರಿಲ್ ಕೊನೆಯ ತನಕ ಕನ್ನಡದ 80 ಸಿನಿಮಾಗಳು ರಿಲೀಸ್ ಆಗಿವೆ. ಅದರಲ್ಲಿ ಛೂಮಂತರ್, ಯುದ್ಧಕಾಂಡ, ಫಾರೆಸ್ಟ್ ನಂತಹ ಸಿನಿಮಾಗಳು ಪಾಸಿಟಿವ್ ರಿಪೋರ್ಟ್ ಪಡ್ಕೊಂಡಿವೆ. ಪರ್ವಾಗಿಲ್ಲ ಒಮ್ಮೆ ನೋಡಬಹುದು ಎಂಬ ಟಾಕ್ ಪಡ್ಕೊಂಡಿವೆ.. ಆದ್ರೆ ರಿಸಲ್ಟ್ ಮಾತ್ರ ಶೂನ್ಯ.
ಅತ್ಯಧಿಕ ಗಳಿಕೆಯೇ 6 ಕೋಟಿಯಾ?
ಕನ್ನಡದ ಸಿನಿಮಾವೊಂದು ಈ ವರ್ಷ ಹೈಯೆಸ್ಟ್ ಗಳಿಕೆ ಕಂಡಿದೆ ಅಂದ್ರೆ? ಅದು ಶರಣ್ ನಟನೆಯ ಛೂಮಂತರ್ ಸಿನಿಮಾ. ಈ ಸಿನಿಮಾ 5 ರಿಂದ 6 ಕೋಟಿ ಗಳಿಸಿದೆ ಎನ್ನಲಾಗ್ತಿದೆ. ಇದುವೆ ಈ ವರ್ಷದ ಹೈಯೆಸ್ಟ್ ಗಳಿಕೆ ಇಲ್ಲಿತನಕ ಅಂದ್ರೆ? ಅದು ನಿಜಕ್ಕೂ ದುರಂತವೇ ಸರಿ.
ಕನ್ನಡ ಸಿನಿಮಾಗಳ ಕಡೆ ಮಾತ್ರ ಯಾಕೆ ನಿರಾಸಕ್ತಿ?
ಇದು ಕನ್ನಡ ನೆಲದಲ್ಲಿ ಕನ್ನಡ ಸಿನಿಮಾಗಳಿಗೆ ಮಾತ್ರ ನಿರಾಸಕ್ತಿ. ಆದ್ರೆ ಇದೇ ಕನ್ನಡ ಮಣ್ಣಲ್ಲಿ ಪರಭಾಷೆಯ ಸಿನಿಮಾಗಳು ಕೋಟಿ ಕೋಟಿಯನ್ನ ಲೂಟಿ ಮಾಡ್ತಾ ಇವೆ.. ಅದಕ್ಕೆ ಬೆಸ್ಟ್ ಎಕ್ಸಾಂಪಲ್ ಅಂದ್ರೆ? ಮೋಹನ್ ಲಾಲ್ ನಟನೆಯ ಎಂಪುರಾನ್ ಸಿನಿಮಾ.. ಈ ಸಿನಿಮಾ ಬಗ್ಗೆ ಅಂತಹ ಪಾಸಿಟಿವ್ ಟಾಕ್ ಏನು ಕೇಳಿ ಬರಲಿಲ್ಲ.. ನೋಡಿದವರೆಲ್ಲಾ ಬಯ್ಕೊಂಡೇ ಆಚೆ ಬಂದ್ರು.. ಆದ್ರೂ ಸಹ ಈ ಸಿನಿಮಾ ಕರ್ನಾಟಕದಲ್ಲಿಯೇ 15 ಕೋಟಿ ಹಣ ಗಳಿಸಿದೆ.. ಹಂಗಂತ ಕೇವಲ ಮಲಯಾಳಿಗಳು ಮಾತ್ರ ಈ ಸಿನಿಮಾವನ್ನ ನೋಡಿಲ್ಲ.. ಕನ್ನಡಿಗರು ಸಹ ಮುಗಿಬಿದ್ದು ನೋಡಿದ್ದಾರೆ.
ಹೌಸ್ಫುಲ್ ಪ್ರದರ್ಶನ ಕಾಣ್ತಿದೆ ಪರಭಾಷೆ ಸಿನಿಮಾ
ಅಷ್ಟೇ ಅಲ್ಲದೆ ರಿಸೆಂಟಾಗಿ ಬಿಡುಗಡೆಯಾದ ತುಡರುಮ್ ಎಂಬ ಸಿನಿಮಾ ಬೆಂಗಳೂರು, ಮಂಗಳೂರು, ಮೈಸೂರು ಸೇರಿದಂತೆ ರಾಜ್ಯದ ಹಲವು ಪ್ರಮುಖ ನಗರಗಳಲ್ಲಿ ಬಿಡುಗಡೆಯಾದ 9 ದಿನಗಳಾದ್ರೂ ಸಹ ಹೌಸ್ ಫುಲ್ ಪ್ರದರ್ಶನ ಕಾಣ್ತಿದೆ.
ಬೆಂಗಳೂರಿನಲ್ಲಿಯೇ ತುಡರುಮ್ ಮಲಯಾಳಂ ವರ್ಷನ್ 300 ಪ್ಲಸ್ ಶೋ ಪ್ರದರ್ಶನ ಕಾಣ್ತಿದೆ. ಅಷ್ಟೂ ಶೋಸ್ ಫಾಸ್ಟ್ ಫಿಲ್ಲಿಂಗ್ ಆಗ್ತಿವೆ ಅಂದ್ರೆ? ಕರ್ನಾಟಕ ನೆಲದಲ್ಲಿ ಪರಭಾಷೆ ಸಿನಿಮಾಗಳ ಅಬ್ಬರ ಹೇಗಿದೆ ಎಂಬುದಕ್ಕೆ ಸಾಕ್ಷಿ.
ಕನ್ನಡ ಸಿನಿಮಾಗೆ ಮಾತ್ರ ನೀರಸ ಪ್ರತಿಕ್ರಿಯೆ
ಹಾಗೆ ಅಜಿತ್ ನಟನೆಯ ಗುಡ್ ಬ್ಯಾಡ್ ಅಗ್ಲಿ, ವೆಂಕಟೇಶ್ ನಟನೆಯ ಸಂಕ್ರಾತಿಕಿ ವಸ್ತುನ್ನಾಮ್, ನಾನಿ ನಟನೆಯ ಹಿಟ್3 ಸಿನಿಮಾಗಳು ಸಹ ಕರ್ನಾಟಕದಲ್ಲಿ ಒಳ್ಳೆಯ ಗಳಿಕೆಯನ್ನ ಕಾಣ್ತಿವೆ.. ಆದ್ರೆ ಕನ್ನಡ ಸಿನಿಮಾಗಳು ಮಾತ್ರ ಯಾವುದೇ ಪೈಪೋಟಿಯನ್ನ ಕೊಡಲಾಗದೆ ನೀರಸ ಪ್ರತಿಕ್ರಿಯೆಯನ್ನ ಪಡ್ಕೊಳ್ತಿವೆ.
ಕರ್ನಾಟಕದ ಎಷ್ಟೋ ಸಿನಿಮಾ ಮಂದಿರಗಳು ಹಾಕಲು ಒಳ್ಳೆಯ ಕನ್ನಡ ಸಿನಿಮಾಗಳಿಲ್ಲದೆ. ಅನಿವಾರ್ಯವಾಗಿ ಪರಭಾಷೆ ಸಿನಿಮಾಗಳಿಗೆ ಮಣೆ ಹಾಕುವ ನಿರ್ಧಾರಕ್ಕೆ ಬಂದಿವೆ.. ಇಷ್ಟೆಲ್ಲಾ ಆದ್ರೂ ಸಹ ಕರ್ನಾಟಕ ಚಲನ ಚಿತ್ರ ವಾಣಿಜ್ಯ ಮಂಡಳಿಯಾಗಲಿ, ಕಲಾವಿದರ ಸಂಘವಾಗಲಿ, ನಿರ್ಮಾಪಕರ ಸಂಘವಾಗಲಿ ಮುಂದೇನು ಮಾಡಬೇಕು ಎಂಬ ಚಿಂತನೆ ನಡೆಸಿದಂತೆ ಇಲ್ಲ.
ಕನ್ನಡ ಸಿನಿಮಾಗಳ ಈ ಸ್ಥಿತಿಗೆ ಈ ಗತಿಗೆ ಪ್ಯಾನ್ ಇಂಡಿಯಾ ಎಂಬ ಟ್ರೆಂಡ್ ನ ಹಿಂದೆ ಬಿದ್ದಿದ್ದೇ ಕಾರಣ. ಸ್ಟಾರ್ ನಟರು ಮೂರು ವರ್ಷಕ್ಕೆ ಒಂದು ಸಿನಿಮಾ ಮಾಡ್ಕಂಡು ಕಾಲಹರಣ ಮಾಡ್ತಿರೋದೆ ಕಾರಣ ಎಂಬುದು ಸಿನಿರಂಗದಲ್ಲಿಯೇ ಕೇಳಿ ಬರ್ತಿರೋ ಅಪಸ್ವರ. ಸದ್ಯಕ್ಕಂತೂ ಕನ್ನಡ ಚಿತ್ರರಂಗಕ್ಕೆ ಯಾವುದೇ ಆಶಕಿರಣ ಕಾಣಿಸ್ತಾ ಇಲ್ಲ. ಸದ್ಯದ ಪರಿಸ್ಥಿತಿ ಕಂಡು ದೊಡ್ಡ ದೊಡ್ಡವರೇ ಹೆದರುವಂತಹ ಪರಿಸ್ತಿತಿ ಇದೆ. ಹಾಗೆ ಕನ್ನಡ ಸಿನಿಮಾಗಳು ಅಂದ್ರೆ ಸ್ಯಾಟ್ ಲೈಟ್ ರೈಟ್ಸ್ ಸೇಲಾಗ್ತಿಲ್ಲ. ಒಟಿಟಿಗೆ ಕೇಳೋರೆ ಇಲ್ಲ.
ಹಿಂಗಾದ್ರೆ ಹೆಂಗೆ ಗುರು? ಇದಕ್ಕೆ ಶಾಸ್ವತ ಪರಿಹಾರ ಕಂಡು ಹಿಡಿಯೋ ನಿಟ್ಟಿನಲ್ಲಿ ಚಿತ್ರರಂಗ ಒಮ್ಮತದಿಂದ ಕಾರ್ಯಕ್ರಮವನ್ನ ರೂಪಿಸಬೇಕಿದೆ.