ಫಾರ್ಮುಲಾ 2 ಚಾಂಪಿಯನ್‌ಶಿಪ್‌ನ ಮೊನಾಕೊ ಸ್ಪ್ರಿಂಟ್ ರೇಸ್‌ನಲ್ಲಿ ಭಾರತದ ರೇಸಿಂಗ್ ಚಾಲಕ ಕುಶ್ ಮೈನಿ ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ಇದರೊಂದಿಗೆ ಮೊನಾಕೊದಲ್ಲಿ F2 ರೇಸ್ ಗೆದ್ದ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಬೆಂಗಳೂರಿನ ಕುಶ್ ಮೈನಿಯ ಈ ಗೆಲುವು ಭಾರತದ ಫಾರ್ಮುಲಾ 1 ಕನಸುಗಳಿಗೆ ಹೊಸ ಚೈತನ್ಯ ತುಂಬಿದೆ. DAMS ಲ್ಯೂಕಸ್ ಆಯಿಲ್ ತಂಡದ ಪರ ಆಡುತ್ತಿರುವ 24 ವರ್ಷದ ಕುಶ್ ಮೈನಿ, ಶನಿವಾರ ನಡೆದ ಸ್ಪ್ರಿಂಟ್ ರೇಸ್‌ನಲ್ಲಿ ಪೋಲ್ ಪೊಸಿಷನ್‌ನಿಂದ ಆರಂಭಿಸಿ, ರೇಸ್ ಮುಗಿಯುವವರೆಗೂ ತಮ್ಮ ಪ್ರಾಬಲ್ಯ ಮೆರೆದರು. ಈ ಅದ್ಭುತ ಗೆಲುವು ಪ್ರಪಂಚದ ಅತ್ಯಂತ ಕಠಿಣವಾದ ಮೊನಾಕೊ ಟ್ರ್ಯಾಕ್‌ನಲ್ಲಿ ಬಂದದ್ದು ಗಮನಾರ್ಹ.
ಈ ಗೆಲುವಿನ ಬಗ್ಗೆ ಕುಶ್ ಮೈನಿ ಮಾತನಾಡಿ, “P1 ಮತ್ತು ಮೊನಾಕೊದಲ್ಲಿ ಗೆದ್ದ ಮೊದಲ ಭಾರತೀಯ ನಾನು. ಇದು ದೊಡ್ಡ ಗೌರವ, ನಿಜಕ್ಕೂ ಕನಸು ನನಸಾದಂತೆ. DAMS ತಂಡಕ್ಕೆ ಮತ್ತು ನನಗೆ ಬೆಂಬಲ ನೀಡಿದ ಎಲ್ಲರಿಗೂ ಧನ್ಯವಾದಗಳು” ಎಂದರು.
ಭಾರತದ ರಾಷ್ಟ್ರಗೀತೆ ಮೊಳಗಿದಾಗ ಮೈನಿ ಹೆಮ್ಮೆಯಿಂದ ಹಾಡಿದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕುಶ್ ಮೈನಿಯ ಈ ಸಾಧನೆಗೆ ವಿವಿಧ ವಲಯಗಳಿಂದ ಪ್ರಶಂಸೆ ವ್ಯಕ್ತವಾಗಿದೆ