ಪರ್ಪಲ್ ಕ್ಯಾಪ್ ಬಗ್ಗೆ RCB ಮಾಜಿ ಆಟಗಾರ ಅಸಮಾಧಾನ

varthajala
0

 




ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿನ 'ಪರ್ಪಲ್ ಕ್ಯಾಪ್' ಪ್ರಶಸ್ತಿಗೆ ಟೀಂ ಇಂಡಿಯಾ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮಾಜಿ ಆಟಗಾರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪಪ್ರಲ್ ಕ್ಯಾಪ್ ಅನ್ನು ನಿರ್ದಿಷ್ಟ ಐಪಿಎಲ್ ಆವೃತ್ತಿಯಲ್ಲಿ ಅತ್ಯಂತ ಯಶಸ್ವಿ ಬೌಲರ್‌ಗೆ ಅಂದರೆ ಅತಿಹೆಚ್ಚು ವಿಕೆಟ್ ಪಡೆದವರಿಗೆ ನೀಡಲಾಗುತ್ತದೆ. ಆದರೆ, ಇದು ಸಾಮಾನ್ಯವಾಗಿ ಜಸ್ಪ್ರೀತ್ ಬುಮ್ರಾ ಅಥವಾ ಸುನಿಲ್ ನರೈನ್ ಅವರಂತಹ ಬೌಲರ್‌ಗಳು ನೀಡಿದ ಉತ್ತಮ ಕೊಡುಗೆಗಳನ್ನು ಪ್ರತಿಬಿಂಬಿಸುವುದಿಲ್ಲ ಎಂದು ಮೊಹಮ್ಮದ್ ಕೈಫ್ ಹೇಳಿದ್ದಾರೆ.

ಸದ್ಯದ ವ್ಯವಸ್ಥೆಯು ದೋಷಪೂರಿತವಾಗಿದೆ. ಮುಖ್ಯವಾಗಿ ಜಸ್ಪ್ರೀತ್ ಬುಮ್ರಾ ಅವರು ರನ್‌ಗಳನ್ನು ನಿರ್ಬಂಧಿಸುವ ಸಾಮರ್ಥ್ಯಕ್ಕೆ ಹೆಸರುವಾಸಿಯಾದ ನುರಿತ ಬೌಲರ್. ಬುಮ್ರಾ ಅವರಂತಹ ಬೌಲರ್‌ಗಳ ವಿರುದ್ಧ ಬ್ಯಾಟರ್‌ಗಳು ಎಚ್ಚರಿಕೆಯಿಂದ ಆಡುತ್ತಾರೆ. ಇದು ಅವರ ವಿಕೆಟ್ ತೆಗೆದುಕೊಳ್ಳುವ ಅವಕಾಶಗಳನ್ನು ಮಿತಿಗೊಳಿಸುತ್ತದೆ. ಇದರ ಹೊರತಾಗಿಯೂ, ಬುಮ್ರಾ ಅವರ ಎಕಾನಾಮಿ ರೇಟ್ ಉತ್ತಮವಾಗಿರುತ್ತದೆ. ಆಟದ ಮೇಲೆ ಬೌಲರ್‌ನ ಒಟ್ಟಾರೆ ಪ್ರಭಾವವನ್ನು ಲೆಕ್ಕಿಸದೆ, ಕೇವಲ ವಿಕೆಟ್‌ಗಳನ್ನು ಆಧರಿಸಿ ಪರ್ಪಲ್ ಕ್ಯಾಪ್ ಅನ್ನು ನೀಡಬೇಕೇ ಎಂದು ಕೈಫ್ ಪ್ರಶ್ನಿಸಿದ್ದಾರೆ.

ಅತಿ ಹೆಚ್ಚು ವಿಕೆಟ್ ಪಡೆದವರಿಗೆ ಪರ್ಪಲ್ ಕ್ಯಾಪ್ ನೀಡಲಾಗುತ್ತದೆ. ಆದರೆ, ಅದು ಹೇಗೆ?. ಈ ನಿಯಮದಿಂದ ನನಗೆ ಸಂತೋಷವಾಗಿಲ್ಲ. ಏಕೆಂದರೆ, ಜಸ್ಪ್ರೀತ್ ಬುಮ್ರಾ, ಸುನಿಲ್ ನರೈನ್ ಅಥವಾ ರಶೀದ್ ಖಾನ್ ಅವರಂತಹ ಆಟಗಾರರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಇತಿಹಾಸದಲ್ಲಿ ಇನ್ನೂ ಪರ್ಪಲ್ ಕ್ಯಾಪ್ ಗೆದ್ದಿಲ್ಲ. ಏಕೆಂದರೆ, ಬುಮ್ರಾ ಬೌಲಿಂಗ್ ಮಾಡುವಾಗ ಆಟಗಾರರು ಎಚ್ಚರಿಕೆಯಿಂದ ಬ್ಯಾಟ್ ಮಾಡುತ್ತಾರೆ' ಎಂದು ಮೊಹಮ್ಮದ್ ಕೈಫ್ 'ಎಕ್ಸ್' ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಹೇಳಿದ್ದಾರೆ.

ಆರೆಂಜ್ ಕ್ಯಾಪ್ ವಿಚಾರದಲ್ಲಿಯೂ ಕೈಫ್ ಅವರ ಹೇಳಿಕೆಯನ್ನು ಪರಿಗಣಿಸಬಹುದು. ಐಪಿಎಲ್ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರಿಗೆ ಆರೆಂಜ್ ಕ್ಯಾಪ್ ನೀಡಲಾಗುತ್ತದೆ. ಸಾಮಾನ್ಯವಾಗಿ, ಅಗ್ರ ಕ್ರಮಾಂಕದ ಬ್ಯಾಟರ್‌ಗಳು ಅದ್ಭುತ ಸ್ಟ್ರೈಕ್ ರೇಟ್‌ಗಳಲ್ಲಿ ರನ್ ಮಾಡದಿದ್ದರೂ ಪ್ರತಿಷ್ಠಿತ ಪ್ರಶಸ್ತಿಯನ್ನು ಅವರಿಗೆ ನೀಡಲಾಗುತ್ತದೆ. ಆದರೆ, ಪಂದ್ಯದ ಗತಿಯನ್ನು ಬದಲಿಸುವ ಪರಿಣಾಮಕಾರಿ ಬ್ಯಾಟರ್‌ಗಳು ಯಾವುದೇ ಮನ್ನಣೆ ಪಡೆಯುವುದಿಲ್ಲ.

ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಗೆದ್ದ ತಂಡಗಳ ಬೌಲರ್‌ಗಳೇ ಪರ್ಪಲ್ ಕ್ಯಾಪ್ ಪಡೆದ ಉದಾಹರಣೆಗಳು ಕೇವಲ ಮೂರಿವೆ. ಭುವನೇಶ್ವರ್ ಕುಮಾರ್ (SRH) ಅವರು 2016ರಲ್ಲಿ ಪರ್ಪಲ್ ಕ್ಯಾಪ್ ಮತ್ತು IPL ಟ್ರೋಫಿ ಎರಡನ್ನೂ ಗೆಲ್ಲುವ ತಂಡದ ಭಾಗವಾಗಿದ್ದರು. ಇದಕ್ಕೂ ಮೊದಲು ಸೊಹೇಲ್ ತನ್ವಿರ್ (RR) ಮತ್ತು RP ಸಿಂಗ್ (DCG) ಮೊದಲ ಎರಡು ವರ್ಷಗಳಲ್ಲಿ ಪರ್ಪಲ್ ಕ್ಯಾಪ್ ಪಡೆದಿದ್ದರು. ಉಳಿದ 14 ಬಾರಿ ಪರ್ಪಲ್ ಕ್ಯಾಪ್ ಪಡೆದವರು ಟ್ರೋಫಿ ಗೆದ್ದ ತಂಡದ ಭಾಗವಾಗಿಲ್ಲ.

ಸದ್ಯ ನಡೆಯುತ್ತಿರುವ ಐಪಿಎಲ್ 2025ರಲ್ಲಿ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿರುವ 10 ಪಂದ್ಯಗಳಲ್ಲಿ 18 ವಿಕೆಟ್‌ಗಳನ್ನು ಗಳಿಸುವ ಮೂಲಕ ಜೋಶ್ ಹೇಜಲ್‌ವುಡ್ ಪರ್ಪಲ್ ಕ್ಯಾಪ್ ಹೋಲ್ಡರ್ ಆಗಿದ್ದಾರೆ. ಆಸ್ಟ್ರೇಲಿಯಾದ ವೇಗಿ 36.5 ಓವರ್‌ಗಳನ್ನು ಬೌಲ್ ಮಾಡಿದ್ದು, 8.44 ಎಕಾನಮಿಯೊಂದಿಗೆ 311 ರನ್‌ಗಳನ್ನು ಬಿಟ್ಟುಕೊಟ್ಟಿದ್ದಾರೆ.

ಆದಾಗ್ಯೂ, ಗುಜರಾತ್ ಟೈಟಾನ್ಸ್‌ನ ಪ್ರಸಿದ್ಧ್ ಕೃಷ್ಣ ಅವರು ಒಂಬತ್ತು ಪಂದ್ಯಗಳಲ್ಲಿ 17 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಮುಂಬೈ ಇಂಡಿಯನ್ಸ್‌ನ ಜಸ್ಪ್ರೀತ್ ಬುಮ್ರಾ ಏಳು ಪಂದ್ಯಗಳಲ್ಲಿ 11 ವಿಕೆಟ್‌ಗಳೊಂದಿಗೆ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿದ್ದಾರೆ. ಅವರ ಕಡಿಮೆ ವಿಕೆಟ್ ಗಳಿಕೆಯ ಹೊರತಾಗಿಯೂ, ಬುಮ್ರಾ ಅವರ ಎಕಾನಮಿ ರೇಟ್ 6.96 ಆಗಿದೆ.

Tags

Post a Comment

0Comments

Post a Comment (0)