ಮಕ್ಕಳ ಹಕ್ಕುಗಳನ್ನು ಗುರುತಿಸುವುದು, ಗೌರವಿಸುವುದು ಹಾಗೂ ರಕ್ಷಿಸುವುದು ನಮ್ಮ ವರ್ತಮಾನ ಹಾಗೂ ಭವಿಷ್ಯತ್ತನ್ನು ಕಾಪಾಡಿಕೊಂಡಂತೆ. ಇದನ್ನು ಸೇವೆ ಎಂದು ಪರಿಗಣಿಸಬೇಕಿಲ್ಲ. ಬದಲಿಗೆ ಪ್ರತಿಯೊಬ್ಬರೂ ಮಾಡಲೇ ಬೇಕಾದ ಅನಿವಾರ್ಯ ಕರ್ತವ್ಯ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ಕೆ.ಟಿ ಹೇಳಿದರು.
ಮುಂದುವರೆದು ದಿನದಿಂದ ದಿನಕ್ಕೆ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿವೆ. ಅಪ್ರಾಪ್ತ ಹೆಣ್ಣುಮಕ್ಕಳು ಗರ್ಭಧಾರಣೆ ಪ್ರಕರಣಗಳು, ಬಾಲ್ಯ ವಿವಾಹ ಹಾಗೂ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಮನೆ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಅಸುರಕ್ಷಿತತೆ ಕಾಡುತ್ತಿದೆ. ಚಿಂದಿ ಆಯುವ ಮಕ್ಕಳು, ಅಪೌಷ್ಟಿಕತೆಯಿಂದ ನರಳುತ್ತಿರುವ ಮಕ್ಕಳು, ಭಿಕ್ಷೆಯಲ್ಲಿ ತೊಡಗಿದ ಮಕ್ಕಳು, ಶಾಲೆಬಿಟ್ಟ ಮಕ್ಕಳು, ವಿಕಲಚೇತನ ಮಕ್ಕಳು, ಓದುವ ವಯಸ್ಸಿನಲ್ಲಿ ದುಡಿಯುತ್ತಿರುವ ಮಕ್ಕಳು ಹೀಗೆ ಮಕ್ಕಳು ಹಲವು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಇಂತಹ ಸಂದರ್ಭದಲ್ಲಿ ಸರ್ಕಾರ, ಸರ್ಕಾರೇತರ ಸಂಘಸಂಸ್ಥೆಗಳು ಹಾಗೂ ಸಮಾಜ ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕಿದೆ. ಕುಟುಂಬಗಳಲ್ಲಿ ಹಾಗೂ ಶೈಕ್ಷಣಿಕ ಸಂಸ್ಥೆಗಳಲ್ಲಿ ಮಕ್ಕಳಿಗೆ ಸುರಕ್ಷಿತ ವಾತಾವರಣವನ್ನು ಕಲ್ಪಿಸಿದರೆ ಮಾತ್ರ ಮಕ್ಕಳ ಹಕ್ಕುಗಳ ಉಲ್ಲಂಘನೆಯನ್ನು ಸಮರ್ಥವಾಗಿ ತಡೆಗಟ್ಟಬಹುದು ಎಂದರು.
ಸದರಿ ಕಾರ್ಯಕ್ರಮದಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಡಾ.ತಿಪ್ಪೇಸ್ವಾಮಿ ಕೆ.ಟಿ ರವರಿಗೆ ಸೇವಾ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಹಾಗೆಯೆ ಸಮುದಾಯ ಅಭಿವೃದ್ಧಿಕ್ಷೇತ್ರದ ಸಾಧನೆಗಾಗಿ ಶ್ರೀ ಸಾಯಿ ವೆಂಕಟಚಲಂ, ರಸ್ತೆ ಸುರಕ್ಷತೆಗಾಗಿ ಶ್ರೀ ಪ್ರಕಾಶ್, ನಟನೆಗಾಗಿ ಶ್ರೀ ಪ್ರಕಾಶ್ ಬೆಳವಡಿ ಹಾಗೂ ಸಮುದಾಯ ಅಭಿವೃದ್ಧಿಗಾಗಿ ಶ್ರೀಗಂಧ ಪೌಂಢೇಶನ್ ಸಂಸ್ಥೆಗೆ ವಿವಿಧ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮವನ್ನು ಕುರಿತು ಮಾತನಾಡಿದ ರೋಟರಿ ಸ್ಪಂದನದ ಅಧ್ಯಕ್ಷರಾದ ಶ್ರೀ ಕಿಶೋರ್ ರವರು ಸೇವಾ ಚಟುವಟಿಕೆಯಲ್ಲಿ ತೊಡಗಿ ಉನ್ನತ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸುವುದು ಕೇವಲ ಅವರಿಗೆ ಕೊಡುವ ಗೌರವವಲ್ಲ ಬದಲಿಗೆ ಸಮಾಜದಲ್ಲಿ ಇತರರಿಗೂ ಪ್ರೇರಣೆ ನೀಡುವುದಾಗಿದೆ. ಈ ಹಿನ್ನೆಲೆಯಲ್ಲಿ ಪ್ರತೀ ವರ್ಷ ರೋಟರಿ ಸ್ಪಂದನ ವತಿಯಿಂದ ಇಂತಹ ಪ್ರಶಸ್ತಿಗಳನ್ನು ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ರೋಟರಿ ಸ್ಪಂದನದ ಅಧ್ಯಕ್ಷರಾದ ಶ್ರೀ ಕಿಶೋರ್ ರವರು, ಕಾರ್ಯದರ್ಶಿಗಳಾದ ಶ್ರೀ ವಿನಯ್ ಸಾಲಿಯಾನ, ಹಾಗೂ ನಿರ್ದೇಶಕರಾದ ಶ್ರೀ ಯೋಗೇಶ್ ಲಕ್ಕಣ್ಣ, ಶ್ರೀ ಗುರುನಾಗೇಶ್ ಸೇರಿದಂತೆ ಹಲವಾರು ರೊಟೇರಿಯನ್ ರವರು ಭಾಗವಹಿಸಿದ್ದರು.