ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು, ಯುವಜನತೆ ಉದ್ಯಮಿಗಳಾಗಲು ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಕರೆ

varthajala
0

ಬೆಂಗಳೂರು, ಜುಲೈ 15, (ಕರ್ನಾಟಕ ವಾರ್ತೆ): ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು ಯುವಜನತೆ ನಬಾರ್ಡ್‍ನ ವಿವಿಧ ಯೋಜನೆಗಳನ್ನು ಸದುಪಯೋಗಪಡಿಸಿಕೊಂಡು ಉದ್ಯಮಿಗಳಾಗಿ ರೂಪುಗೊಳ್ಳಬೇಕು ಎಂದು ಸರ್ಕಾರದ ಮುಖ್ಯ ಕಾರ್ಯದರ್ಶಿ ಶ್ರೀಮತಿ ಡಾ.ಶಾಲಿನಿ ರಜನೀಶ್ ಅವರು ಕರೆ ನೀಡಿದರು.

ಇಂದು ಬೆಂಗಳೂರಿನ ನಬಾರ್ಡ್ ಪ್ರಾದೇಶಿಕ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ (ನಬಾರ್ಡ್) ನ 44ನೇ ಸಂಸ್ಥಾಪನಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ನಬಾರ್ಡ್‍ನಲ್ಲಿ ದೊರೆಯುವಂತಹ ವಿಶೇಷ ಯೋಜನೆಗಳನ್ನು  ಜನರು ಉಪಯೋಗಿಸಿಕೊಂಡು ಯಶೋಗಾಥೆಗಳಾಗಿ ಹೊರಹೊಮ್ಮಬೇಕು. ಗ್ರಾಮೀಣ ಪ್ರದೇಶದ ರೈತರು, ಮಹಿಳೆಯರು ಅಬಿವೃದ್ಧಿ ಹೊಂದಿದಾಗ ಅವರಲ್ಲಿ ಸ್ಪ್ಫೂರ್ತಿ, ಆಶಾಭಾವನೆ ಮೂಡುತ್ತದೆ ಎಂದರು
ಕೃಷಿ, ತೋಟಗಾರಿಕೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ಉತ್ಪಾದಿಸುವುದರಿಂದ ಗ್ರಾಮೀಣ ಪ್ರದೇಶದಲ್ಲಿ ಅಭಿವೃದ್ಧಿಯಾಗಲು ಸಾಧ್ಯವಾಗಲಿದೆ. ವರ್ಷದ 365 ದಿನಗಳು ಸಹ ಕೆಲಸ ಮಾಡುವ ಮೂಲಕ ಆದಾಯ ಗಳಿಸುವ ಯೋಜನೆಗಳನ್ನು ರೈತರು, ಯುವ ಜನತೆ ಅಳವಡಿಸಿಕೊಳ್ಳಬೇಕು. ಪ್ರತಿಯೊಂದು ಜಿಲ್ಲೆ, ರಾಜ್ಯದಲ್ಲೂ ಯಾವ ಅಂಶಗಳನ್ನು ಅಭಿವೃದ್ಧಿ ಪಡಿಲು ಸಾಧ್ಯವಿದೆ ಎಂಬುದನ್ನು ಪರಿಗಣಿಸಿ ಮೌಲ್ಯಾಧಾರಿತ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ.  ಇದರಿಂದ ಎರಡು ವರ್ಷದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ಕಾಣಬಹುದು ಎಂದು ಹೇಳಿದರು.
ರಾಜ್ಯದಲ್ಲಿ ಮಾವು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತಿದೆ. ಮಾವನ್ನು ವಿವಿಧ ಬಗೆಯ ಜ್ಯೂಸ್, ಪಲ್ಪಿ, ಸೇರಿದಂತೆ ಹಲವು ಪಾನೀಯಗಳನ್ನು ತಯಾರಿಸುವ ಮೂಲಕ ಜನರು ಆದಾಯ ಗಳಿಸಬಹುದು. ಉತ್ಪಾದಿಸಿದ ಮಾವನ್ನು ಸಂಸ್ಕರಿಸಲು ಸಂಸ್ಕರಣಾ ಘಟಕಗಳನ್ನು ಸ್ಥಾಪಿಸುವ ಮೂಲಕ ಇವರು ಸ್ವಯಂ ಉದ್ಯೋಗಿಗಳಾಗಿ ರೂಪುಗೊಳ್ಳಬೇಕಿದೆ. ಮಾವು ಜಾಗತಿಕವಾಗಿ ಮಾರ್ಕೆಂಟಿಂಗ್ ಮಾಡುವ ಮೂಲಕ ಇಡೀ ವರ್ಷ ಆದಾಯಗಳಿಸಬಹುದಾಗಿದೆ. ರೈತರು, ಮಹಿಳೆಯರು ತಯಾರಿಸಿದ ಉತ್ಪನ್ನಗಳಿಗೆ ಮೌಲ್ಯಾಧಾರಿತ ಮಾರುಕಟ್ಟೆ ಕಲ್ಪಿಸುವುದರಿಂದ ರಾಜ್ಯದ ಏಳಿಗೆ ಸಾಧ್ಯವಾಗಲಿದೆ ಎಂದು ತಿಳಿಸಿದರು.
ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಗೃಹಲಕ್ಷ್ಮಿ ಯೋಜನೆಯಡಿ ಕುಟುಂಬದ ಯಜಮಾನಿಗೆ ವರ್ಷಕ್ಕೆ ರೂ.24,000 ಸಂದಾಯವಾಗಲಿದೆ. ಶಕ್ತಿಯೋಜನೆಯ ಮೂಲಕ ರಾಜ್ಯಾದ್ಯಂತ ಮಹಿಳೆಯರು ಉಚಿತವಾಗಿ ಪ್ರಯಾಣಿಸಬಹುದಾಗಿದೆ. ಈ ಯೋಜನೆಗಳನ್ನು ಮಹಿಳೆಯರು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವ ಮೂಲಕ ಅಭಿವೃದ್ಧಿಯಾಗಬೇಕು. ತಯಾರಿಸಿದ ಉತ್ಪನ್ನಗಳಿಂದ ಮಾರಾಟ ಮಾಡಲು ಬಸ್ ಸೇವೆ ಸಹಕಾರಿಯಾಗಲಿದೆ. ಇದರಿಂದ ಮಹಿಳೆಯರ ಚಲನಶೀಲತೆ ಸಾಮಥ್ರ್ಯದ ಜೊತೆಗೆ ವ್ಯವಹಾರ ಜ್ಞಾನವೂ ಸಹ ಬೆಳೆಯಲಿದೆ. ಇದರಿಂದ ಹೆಚ್ಚಿನ ಆದಾಯ ಗಳಿಸಲು ಸಹ ಸಾಧ್ಯವಾಗಲಿದೆ. ಮೌಲ್ಯವರ್ಧಿತ ಉತ್ಪನನ್ನಗಳನ್ನು  ಮಾರಾಟ ಮಾಡಿ ಮಹಿಳೆಯರು ಸಬಲೀಕರಣಗೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ರೈತರ, ಮಹಿಳೆಯರ ಪ್ರತಿಯೊಬ್ಬರ ವಾರ್ಷಿಕ ಆದಾಯ 3 ಲಕ್ಷದಿಂದ 6 ಲಕ್ಷ ಇರಬೇಕು. ಆದಾಯವನ್ನು ಹೆಚ್ಚಿಸಿಕೊಳ್ಳಲು ಹಲವು ತರಬೇತಿ ಸಂಸ್ಥೆಗಳ ಮೂಲಕ ತರಬೇತಿ ಪಡೆಯುವುದುರ ಜೊತೆಗೆ  ಹೊಸ ತಂತ್ರಜ್ಞಾನವನ್ನು ಬಳಸುವುದು ಮುಖ್ಯ. ಕೃಷಿ ಸಂಸ್ಕರಣೆ ಘಟಕಗಳ ಬಗ್ಗೆ ಜಾಗೃತಿ ಮೂಡಿಸಿದರೆ ಆರ್ಥಿಕವಾಗಿ ಅಭಿವೃದ್ಧಿಯಾಗಲು ಸಾಧ್ಯ ಅಲ್ಲದೆ ನಬಾರ್ಡ್ ಹಾಗೂ ಇತರ ಸಂಸ್ಥೆಗಳ ನೂರಾರು ಯೋಜನೆಗಳು ಇವರಿಗೆ ಸಹಕಾರಿಯಾಗಲಿದೆ ಎಂದರು.
ನಬಾರ್ಡ್ ಜನರಲ್ ಮ್ಯಾನೇಜರ್ ಅಶುತೋಷ್ ಕುಮಾರ್ ಮಾತನಾಡಿ, ಗ್ರಾಮೀಣ ಭಾಗದ ಆಶಾಕಿರಣವಾಗಿರುವ ನಬಾರ್ಡ್, ಕಳೆದ 44 ವರ್ಷಗಳಿಂದ ನಿಸ್ವಾರ್ಥ ಸೇವೆ ನೀಡುತ್ತಾ ಬಂದಿದೆ. ಇದರಿಂದ ಗ್ರಾಮೀಣ ಜನರ ಆರ್ಥಿಕ ಮಟ್ಟ ಸುಧಾರಣೆಗೊಂಡು ಹಲವರು ಉದ್ಯಮಶೀಲರಾಗಿದ್ದಾರೆ ಎಂದರು.
ನಬಾರ್ಡ್ ಕರ್ನಾಟಕ ಪ್ರಾದೇಶಿಕ ಕಚೇರಿಯ ಮುಖ್ಯ ಪ್ರಧಾನ ವ್ಯವಸ್ಥಾಪಕರಾದ ಡಾ. ಸುರೇಂದ್ರ ಬಾಬು ಮಾತನಾಡಿ, 2024-25 ರ ಹಣಕಾಸು ವರ್ಷದಲ್ಲಿ ಕರ್ನಾಟಕ ಪ್ರಾದೇಶಿಕ ಕಚೇರಿಯ ನಬಾರ್ಡ್ ಗಣನೀಯ ಸಾಧನೆ ಮಾಡಿದೆ. ಒಟ್ಟು ವ್ಯವಹಾರ ಕಾರ್ಯಾಚರಣೆಗಳಲ್ಲಿ ರಾಜ್ಯ 27,846 ಕೋಟಿ ರೂ.ಗಳ ಸಾರ್ವಕಾಲಿಕ ಗರಿಷ್ಠ ಮಟ್ಟ ತಲುಪಿದೆ. ಇದರಲ್ಲಿ ಬ್ಯಾಂಕ್‍ಗಳು ಮತ್ತು ಸಹಕಾರಿ ಸಂಸ್ಥೆಗಳಿಗೆ 21,442 ಕೋಟಿ ರೂ.  ಪುನರ್ಧನ  ನೆರವು, ರಾಜ್ಯ ಸರ್ಕಾರಕ್ಕೆ ರೂ. 4,974 ಕೋಟಿ ರೂ. ಮೂಲಸೌಕರ್ಯ ಹಣಕಾಸು ಮತ್ತು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‍ಗಳಿಗೆ ರೂ. 1,431 ಕೋಟಿ ನೇರ ಪುನರ್ ಧನ ಸೇರಿದೆ ಎಂದರು.

2025-26 ಹಣಕಾಸು ವರ್ಷದಲ್ಲಿ ಎಸ್‍ಎಲ್‍ಬಿಯ 4.38 ಲಕ್ಷ ಕೋಟಿ ವಾರ್ಷಿಕ ಸಾಲ ಯೋಜನೆಗೆ ನಿಕಟ ಹೊಂದಿಕೆಯಾಗುವ ಕರ್ನಾಟಕ ಸಾಲ ಸಂಭಾವ್ಯತೆಯನ್ನು 4.46 ಲಕ್ಷ ಕೋಟಿ ರೂ.ಗಳು ಎಂದು ನಬಾರ್ಡ್ ನಿರೀಕ್ಷಿಸುವುದಾಗಿ ತಿಳಿಸಿದರು.

ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಧಿ (ಆರ್‍ಐಡಿಎಫ್) ಮತ್ತು ನಬಾರ್ಡ್‍ನ ಮೂಲಸೌಕರ್ಯ ಅಭಿವೃದ್ಧಿ ನೆರವು (ಎನ್‍ಐಡಿಎ) ಮೂಲಕ ಗ್ರಾಮೀಣ ಮೂಲಸೌಕರ್ಯಗಳಾದ ರಸ್ತೆ, ನೀರಾವರಿ, ಸೇತುವೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಪುನಶ್ಚೇತನ, ಆರೋಗ್ಯ ಗ್ರಾಮೀಣ ಮಾರುಕಟ್ಟೆ ಇತ್ಯಾದಿಗಳಿಗೆ ನೆರವು ನೀಡಿದೆ. 2024-25 ರಲ್ಲಿ ಆರ್‍ಐಡಿಎಫ್ ಅಡಿಯಲ್ಲಿ 2408 ಕೋಟಿ ರೂ ಹಾಗೂ ಎನ್‍ಐಡಿಎ ಅಡಿಯಲ್ಲಿ 2516 ಕೋಟಿ ರೂ ಮಂಜೂರು ಮಾಡಲಾಗಿದೆ. ಅಲ್ಲದೇ ಡಿಜಿಟಲ್ ಪಾವತಿಯಿಂದ ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಸುಧಾರಣೆ ಕಂಡು ಬಂದಿದೆ.
ಕಲ್ಯಾಣ ಕರ್ನಾಟಕದ 7 ಜಿಲ್ಲೆಗಳಲ್ಲಿ  ಸಹ ಕೃಷಿ ಮಾರುಕಟ್ಟೆ ಕುರಿತಂತೆ ತರಬೇತಿ ನೀಡಲಾಗಿದೆ. ಗ್ರಾಮೀಣ ಬುಡಕಟ್ಟು ಪ್ರದೇಶದ ಜನರಿಗೆ ಸಹ ತಮ್ಮ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವಲ್ಲಿ ನಬಾರ್ಡ್ ಸಹಕಾರ ನೀಡಿದೆ ಎಂದರು.
ಭಾರತೀಯ ರಿಸರ್ವ್ ಬ್ಯಾಂಕ್‍ನ ಪ್ರಾದೇಶಿಕ ನಿರ್ದೇಶಕಿ ಶ್ರೀಮತಿ ಸೊನಾಲಿ ಸೇನ್ ಗುಪ್ತಾ ಅವರು ಮಾತನಾಡಿ, ಇಂದಿನ ಸಮಗ್ರ ಹಣಕಾಸು ಸಹಕಾರಿ ಬ್ಯಾಂಕಿಂಗ್ ಸುಧಾರಣೆಗಾಗಿ ನಬಾರ್ಡ್ ಶ್ರಮಿಸಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದಲ್ಲಿ ಪರಿಣಾಮಕಾರಿ ಸಾಲ ವಿತರಣೆಗೆ ಉತ್ತಮ ಕಾರ್ಯವಿಧಾನ ರೂಪಿಸಿದೆ ಅಲ್ಲದೇ, ಜನಧನ್ ಖಾತೆ, ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ, ಯುಪಿಐ ಬಳಕೆಯಿಂದ ಜನರ ವ್ಯಾಪಾರ ವಹಿವಾಟು ಯಾವುದೇ ಅಡೆತಡೆಗಳಿಲ್ಲದೆ ಸಾಗಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ  ಮುನ್ನ ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಮಹಿಳೆಯರು ತಯಾರಿಸಿದ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ಡಾ.ಶಾಲಿನಿ ರಜನೀಶ್ ಅವರು ವೀಕ್ಷಿಸಿದರು.
ಕಾರ್ಯಕ್ರಮದಲ್ಲಿ ನಬಾರ್ಡ್ ಸಾಧನೆಯ ಕಿರುಚಿತ್ರವನ್ನು ಹಾಗೂ ಕರ್ನಾಟಕದಲ್ಲಿ ನಬಾರ್ಡ್ ಮೂಲಕ ಎಫ್‍ಪಿಒ ಗಳ ಅಭಿವೃದ್ಧಿ ಕುರಿತ ಯಶೋಗಾಥೆಗಳ ಕಿರುಹೊತ್ತಿಗೆಯನ್ನು ಗಣ್ಯರು ಬಿಡುಗಡೆ ಮಾಡಿದರು.
ಸಾಧನೆ ಮಾಡಿದ ರೈತ ಉತ್ಪಾದಕ ಸಂಸ್ಥೆಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್‍ನ ಕಾರ್ಯನಿರ್ವಾಹಕ ನಿರ್ದೇಶಕರಾದ ಭವೇಂದ್ರ ಕುಮಾರ್ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

Post a Comment

0Comments

Post a Comment (0)