ಬೆಂಗಳೂರು, ಜುಲೈ 09, (ಕರ್ನಾಟಕ ವಾರ್ತೆ) : ಹೇಮಾವತಿ ಜಲಾಶಯದ ಜಲಾನಯನ ಪ್ರದೇಶದಲ್ಲಿ ವಾಡಿಕೆಯಂತೆ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನ ಪ್ರಮಾಣವು ಗಣನೀಯವಾಗಿ ಏರಿಕೆಯಾಗಿದ್ದು, ಆ ಪ್ರದೇಶದ ಸುತ್ತಮುತ್ತಲಿರುವ ಸಾರ್ವಜನಿಕರು ಅಗತ್ಯ ಮುಂಜಾಗ್ರತಾ ಕ್ರಮ ವಹಿಸಲು ಸೂಚಿಸಲಾಗಿದೆ.
ಹೇಮಾವತಿ ಜಲಾಶಯದಲ್ಲಿ 2025ರ ಜೂನ್ 24 ರಂದು ನೀರಿನ ಸಂಗ್ರಹಣಾ ಸಾಮಥ್ರ್ಯವು 31.180 ಟಿ.ಎಂ.ಸಿ. ಗಳಷ್ಟಿದ್ದು, ಜಲಾಶಯಕ್ಕೆ ಬರುವ ನೀರಿನ ಒಳಹರಿವಿನ ಏರಿಕೆಯಿಂದ, ಜಲಾಶಯವು ತುಂಬುವ ಸಂಭವವಿರುವುದರಿಂದ ಹೆಚ್ಚುವರಿ ನೀರನ್ನು ಹೇಮಾವತಿ ನದಿಗೆ ಹರಿಸಬೇಕಾಗಿರುತ್ತದೆ.
ಈ ಹಿನ್ನಲೆಯಲ್ಲಿ 2025-26 ನೇ ಸಾಲಿಗೆ ಹೇಮಾವತಿ ಜಲಾಶಯದಿಂದ ನದಿ ಮತ್ತು ಯೋಜನಾ ವ್ಯಾಪ್ತಿಯಲ್ಲಿ ಬರುವ ಹಾಸನ ಜಿಲ್ಲೆ ಮತ್ತು ಮಂಡ್ಯ ಜಿಲ್ಲೆಯ ಎಲ್ಲಾ ನಾಲೆಗಳಲ್ಲಿ ಜನ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಕೆರೆ ಕಟ್ಟೆಗಳನ್ನು ತುಂಬಿಸಲು 2025ರ ಜೂನ್ 26 ರಿಂದ ನೀರನ್ನು ಹರಿಸಲಾಗುವುದು.
ಈ ಸಂದರ್ಭದಲ್ಲಿ ಯೋಜನಾ ವ್ಯಾಪ್ತಿಯಲ್ಲಿನ ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ನೀರು ಪೆÇೀಲಾಗದಂತೆ ಎಲ್ಲಾ ತುರ್ತು ಕ್ರಮಗಳನ್ನು ತೆಗೆದುಕೊಂಡು, ಯೋಜನಾ ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ಹಾಗೂ ರೈತರಿಗೆ ಸೂಕ್ತ ತಿಳುವಳಿಕೆ ನೀಡಿ, ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಕಟ್ಟುನಿಟ್ಟಾಗಿ ಸೂಚಿಸಲಾಗಿದೆ. ಈ ಬಗ್ಗೆ ಯೋಜನಾ ವ್ಯಾಪ್ತಿಯಲ್ಲಿನ ಎಲ್ಲಾ ಸಾರ್ವಜನಿಕರು ಮತ್ತು ಅಚ್ಚುಕಟ್ಟುದಾರರು ಸುಗಮ ನೀರು ನಿರ್ವಹಣೆ ನಡೆಸುವ ನಿಟ್ಟಿನಲ್ಲಿ ಇಲಾಖಾ ಅಧಿಕಾರಿಗಳೊಂದಿಗೆ ಸಹಕರಿಸಬೇಕೆಂದು ಹೇಮಾವತಿ ನಾಲಾ ವೃತ್ತದ ಸೂಪರಿಂಟೆಂಡಿಂಗ್ ಇಂಜಿನಿಯರ್ (ಪ್ರಭಾರ) ಆರ್.ಡಿ. ಗಂಗಾಧರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.